ಪುಟ:Kalyaand-asvaami.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನೆರೆದವರಲ್ಲಿ ಹಿರಿಯವನಾದ ಸೋಮಯ್ಯ ಹೇಳಿದ.

"ನಮಗೆ ಇಲ್ಲಿಗೆ ಒಂದು ಸುದ್ದಿಯೂ ಬರ್ಲಿಲ್ಲ. ಇಂಥ ದೂರ ಪ್ರದೇಶಕ್ಕೆಲ್ಲ ಮೂರು ವರ್ಷಕ್ಕೊಮ್ಮೆ ಕಂದಾಯ ವಸೂಲಿಗೆ ಬರೋದು ಉಂಟು ನೋಡಿ. ಇಲ್ಲದಿದ್ದರೆ ವಸೂಲಿಯವರು ಬಂದಾಗಲಾದರೂ ನಮಗೆ ಗೊತ್ತಾಗ್ತಿತ್ತು."

ಆ ಮಾತಿನ ಬಿಸಿ ಆರುವುದಕ್ಕೆ ಮುಂಚೆಯೆ ನಂಜುಯ್ಯನೆಂದ:

"ಇನ್ನು ಕಂದಾಯ ಮಾತ್ರ ಅಲ್ಲ; ನಾವು ಬೆಳೆಸಿದ್ದನ್ನೆಲ್ಲ ಕಸಕೊಂಡು ಹೋಗ್ತಾರೆ!"

"ಅದು ನೋಡ್ಕೊಳ್ಳಾನ," ಎಂದ ಊರವನು ಯಾರೋ.

"ಕೆಂಪು ಮೋರೆಯೋನು ಇನ್ನು ಕುದುರೆ ಮೇಲೆ ಕೂತು ಬರ್ತಾನೆ. ಕೈಲಿ ಚಾಟ ಹಿಡಿದು, ನಮ್ಮ ಬೆನ್ನಿಗೆ ಬಾರಿಸಿ, 'ಬದ್ಮಾಷ!' ಅನ್ತಾನೆ. ನಾವು ಇದಿರಾಡಿದರೆ ತುಪಾಕಿಯಿಂದ ಸುಟ್ಟು ಹಾಕ್ತಾನೆ!"

"ಅವನು ವಾಪಸು ಹೋಗೋ ಆಸೆ ಇಟ್ಕೊಂಡು ಇಲ್ಲಿಗೆಲ್ಲಾ ಬರ್ತಾನಂತೊ?" ----ಹೂಂಕರಿಸುತ್ತ ಒಬ್ಬ ಆ ಮಾತನ್ನಾಡಿದ.

ನಂಜಯ್ಯನ ಸ್ವರ ಧೃಡಗೊಂಡಿತು:
"ವಾಪಾಸು ಹೋಗೋ ಆಸೆ ಇಟ್ಕೊಂಡು ಆರುಸಾವಿರ ಮೈಲಿ ದೂರದಿಂದಲೇ ಬಂದವನೇ ಆತ. ಅದನ್ನ ಮರೀಬ್ಯಾಡಿರಿ!"
ಪುಟ್ಟಬಸವನೆಂದ:
"ನಂಜಯ್ಯನವರೆ, ನಡೆದದ್ದು ಏನೂಂತ ನಮಮ್ ಊರಿನವರಿಗೆಲ್ಲ ತಿಳಿಸಿ; ಮಹಾರಾಜರ ಕೊನೆಯ ಸಂದೇಶವನ್ನೂ ಅವರಿಗೆ ಮುಟ್ಟಿಸಿ."
ಸೋಮಯ್ಯನ ಸ್ವರ ಕೇಳಿಸಿತು:
"ಹೌದು ಹೌದು. ಅದ್ಕಾಗಿಯೇ ನಾವು ಬಂದಿದ್ದೇವೆ. ಏನಾಯ್ತೂಂತ ಹೇಳಿ. ನಾವೇನು ಮಾಡಬೇಕೋ ಅಪ್ಪಣೆ ಕೊಡಿಸಿ."
ಒಂದು ನಿಮಿಷ ನಂಜಯ್ಯ ಮೌನವಾಗಿದ್ದ. ಬಳಿಕ ಅಲ್ಲಿದ್ದವರನ್ನೆಲಾ ದಿಟ್ಟಿಸಿ ನೋಡಿದ.
ಕಾಡಿನ ಅಂಚಿಗೆ ಅಂಟಿಕೊಂಡಿತ್ತು ಚಂದ್ರಬಿಂಬ. ಅದರ ಶೀತಲ ಕಿರಣಗಳು ಮೂಡಣಕ್ಕೆ ಇದಿರಾಗಿ ಕುಳಿತಿದ್ದ ಆ ನಾಲ್ವರ ಮೇಲೂ ಬಿದ್ದವು.