ಪುಟ:Kalyaand-asvaami.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕತ್ತಲು ಕವಿದ ಕೊಡಗು


ಜಗಲಿಯ ಗೋಡೆಯಾಚೆಗೆ ಮರೆಯಲ್ಲಿ ಗಂಗವ್ವ ಗಿರಿಜೆಯರು ಕುಳಿತರು.

ತಣ್ಣನೆ ಗಾಳಿ ಬೀಸಿತು. ಮರದೆಲೆಗಳಿಂದ ಕಚಕಚನೆ ಸದ್ಧು ಹೊರಟಿತು.

ನಂಜಯ್ಯ ನಿಟ್ಟುಸಿರುಬಿಟ್ಟು ,ನೆಲವನ್ನೆ ನೋಡುತ್ತಲಿದ್ದು ,ಬಳಿಕ ತಲೆ ಎತ್ತಿ ಆರಂಭಿಸಿದ:

"ಕೊಡಗಿನ ಕರ್ಮಕಥೆ ಕೇಳಿ ನಿಮಗೆ ಸಂಕಟವಾದೀತು. ನಾವೀಗ ಗುಲಾಮರು ಗೊತ್ತೈತಾ?ಮಾರಿ ಬೀದೀಲಿ ಹೋಗ್ತಿತ್ತು.ಅದನ್ನು ನಾವು ಮನೆಗೆ ಕರೆದ್ವಿ ..."

                  *   *   *  *  *   *   *  *  *   *   *  *  *   *   *  *  *   *   *  *  *   *   *  *  *  

ಬೀದಿಯಲ್ಲಿ ಸಾಗುತಿತ್ತು ಮಾರಿ. ಕಲ್ಲೆಸೆದು 'ಶೂ' ಎಂದಿದ್ಧರೆ, ಹಾಗೆಯೇ ಅದು ಮುಂದಕ್ಕೆ ಹೋಗುವುದು ಸಾಧ್ಯವಿತ್ತು.ಆದರೆ ಕೊಡಗಿನ ಅರಸರು ಅದನ್ನು ಮನೆಗೆ - ಅರಮನೆಗೆ - ಕರೆದರು.

ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ, ಇಬ್ಬರನ್ನೂ ಶಕ್ತಿ ಗುಂದಿಸಿ,ಮಧ್ಯೆ ತಮ್ಮ ಬಾವುಟವನ್ನು ಭದ್ರವಾಗಿ ನೆಡುತಿದ್ದ ಸಮರ್ಥರು ಇಂಗ್ಲಿಷರು.

ಕೊಡಗಿನ ಅರಸರು ವೀರರಾಜೇಂದ್ರನೊಮ್ಮೆ ತನಗೋಸ್ಕರ ಒಂದು ಕುದುರೆಯನ್ನು ಕೊಳ್ಳಲೆಂದು ದೂತನನ್ನು ತಲಚೇರಿಗೆ ಕಳುಹಿದ. ಮುತ್ತು ಭಟ್ಟ ಕುದುರೆಯನ್ನು ಕೊಳ್ಳುವ ಯತ್ನದಲ್ಲಿದ್ದಾಗ, ಅಲ್ಲಿದ್ದ ಇಂಗ್ಲಿಷರಿಗೆ ಆ ವಿಷಯ ತಿಳಿಯಿತು. ಮುತ್ತು ಭಟ್ಟನನ್ನು ತಮ್ಮ ಅಧಿಕಾರಿಯ ಕಡೆಗೆ ನವುರು ಮಾತುಗಳ ನೆರವಿನಿಂದಲೆ ಅವರು ಕರೆದೊಯ್ಧರು.

ಆ ಅಧಿಕಾರಿ ರಾಬರ್ಟ್ ಟೇಯ್ ಲರ್. ಆತನೆಂದಃ

"ನಿಮ್ಮ ರಾಜರು ಕುಶಲವೊ?"

"ದೇವರ ಕೃಪೆಯಿಂದ ಕುಶಲ."

"ಕುದುರೆ ತಾನೆ ನಿಮ್ಮ ರಾಜರಿಗೆ ಬೇಕಾದ್ದು?"

"ಹೌದು."

"ಒಳ್ಳೇ ಅರಬ್ಬೀ ಕುದುರೆ ನಾವು ಉಚಿತವಾಗಿ ಕೊಡುತ್ತೇವೆ."