ಪುಟ:Kalyaand-asvaami.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕಲ್ಯಾಣಸ್ವಾಮಿ

ಅರಸನ ಮದುವೆಯ ಕಾಲದಲ್ಲಿ ಆಂಗ್ಲರ ಪ್ರತಿನಿಧಿಗೆ ಆಮಂತ್ರಣ ಹೋಯಿತು. ಬಂದವನು ಒಬ್ಬ ಸೈನ್ಯಾಧಿಕಾರಿ. ಆತನ ಜತೆಯಲ್ಲಿ ಪುಟ್ಟದೊಂದು ಸೈನ್ಯವೇ ಬಂದಿತ್ತು, ಮದುವೆ ನೋಡಲೆಂದು! ಅವರು ಮದುವೆಯನ್ನೂ ನೋಡಿದರು, ಅನಂತರ ಪಟ್ಟಾಭಿಷೇಕ ಕಾಲದಲ್ಲೂ ಪ್ರೇಕ್ಷಕರಾದರು. ಅದು ಸಾಲದೆಂದು, ಕೊಡಗಿನ ಸ್ಥಿತಿಗತಿಗಳ ವೀಕ್ಷಣೆಯನ್ನೂ ಮಾಡಿದರು!
ಐರೋಪ್ಯರಿಗೆಂದೇ ವಿಶೇಷವಾಗಿ ನೇಮಿಸಿದ್ದ ಅಡುಗೆಯ ಭಟರು ರಾಜನ ಆಜ್ಞೆಯಂತೆ ನಿಮಿಷವೂ ಬಿಡುವಿಲ್ಲದೆ ದುಡಿದರು. ಇದು ತಮ್ಮ ಮನೆಯೆ ಎನ್ನುವಂತಾಯಿತು ಬಂದವರಿಗೆ.
ಟಿಪ್ಪುವಿನ ಮೇಲೆ ಇಂಗ್ಲಿಷರು ಯುದ್ಧ ಸಾರಿದಾಗ, ಕೊಡಗಿನ ಮೂಲಕ ಸಾಗಿದ ಆಂಗ್ಲ ಸೇನೆಗೆ ಹೇರಳವಾಗಿ ದವಸ ಧಾನ್ಯ ಒದಗಿಸಿದ, ಕೊಡಗಿನ ಅರಸ. ಅದಕ್ಕೆ ದೊರೊತ ಪ್ರತಿಫಲವೆಂದರೆ ಮೈತ್ರಿ ಒಪ್ಪಂದದ ಪುನರ್ವಿಮರ್ಶೆ. ಅದರ ಪ್ರಕಾರ, ಕಂಪೆನಿಯ ಸ್ನೇಹ ಮತ್ತು ರಕ್ಷಣೆಗಾಗಿ ವರ್ಷಂಪ್ರತಿ ಇಪ್ಪತ್ತ ನಾಲ್ಕು ಸಾವಿರ ರೂಪಾಯಿಗಳನ್ನು ಇಂಗ್ಲಿಷರಿಗೆ 'ಸ್ವಂತ ಇಚ್ಛೆಯಿಂದ' ಕೊಡಲು ವೀರರಾಜೇಂದ್ರ ಒಪ್ಪಬೇಕಾಯಿತು!
ಟಿಪ್ಪು ಬದುಕಿದ್ದಾಗಲೇ ಹಾಗೆ. ಆತ ಸೋತಮೇಲಂತೂ ಇಂಗ್ಲಿಷರನ್ನು ಹಿಡಿಯುವವರು ಯಾರಿದ್ದರು?
ಅವರ 'ಮೈತ್ರಿಯ ಅಪ್ಪುಗೆ' ಹೆಚ್ಚು ಹೆಚ್ಚು ಗಾಢವಾಯಿತು.
ಟಿಪ್ಪುವಿಗಿದಿರಾದ ಯುದ್ಧದಲ್ಲಿ ಇಂಗ್ಲಿಷರಿಗೆ ವೀರರಾಜೇಂದ್ರ ಸಹಾಯವಾಗಿ ನೀಡಿದ ಸಾಮಾನು ಸರಂಜಾಮಗಳ ಬೆಲೆ ನಾಲ್ಕು ಲಕ್ಷ ರೂಪಾಯಿ.
ಇಂಗ್ಲಿಷರು ಅರಸನಿಗೆಂದರು:
"ನಾವು ನಿಮಗೆ ಕೃತಜ್ಞರಾಗಿದ್ದೇವೆ."
"ಆ ಹಣವನ್ನು ನೀವು ನಮಗೆ ಕೊಡಬೇಕಾದುದೇ ಇಲ್ಲ," ಎಂದ ವೀರರಾಜೇಂದ್ರ.
"ಹಾಗಾದರೆ ನಾವು ನಿಮಗೆ ತುಂಬ ಕೃತಜ್ಞರಾಗಿದ್ದೇವೆ," ಎಂದರು ಆಂಗ್ಲರು.