ಪುಟ:Kalyaand-asvaami.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತನ್ನ ಕೆಳಗಿನ ಅಧಿಕಾರಿ ಲೀಹಾರ್ಡಿಗೆ ಫ್ರೇಸರ್ ಹೇಳಿದ:" ರಾಣಿಹುಳುವನ್ನು ಉಪಾಯವಾಗಿ ಬೇರೆ ಕಡೆಗೆ ಸಾಗಿಸಿದರೆ ಬೇರೆ ನೊಣಗಳು ತಣ್ಣಗಾಗ್ತವೆ." ಮತ್ತೆ ಬೋಪುವಿನೊಡನೆ ಮ೦ತ್ರಾಲೋಚನೆ. ಆತನೆ೦ದ: "ಉತ್ತರ ಹಿ೦ದೂಸ್ಥಾನದಲ್ಲಿ ಸ೦ಚಾರ ಮಾಡ್ಬೇಕು, ಆ ರಾಜರ ಜತೇಲೆಲ್ಲಾ ಸ್ನೇಹ ಬೆಳೆಸಬೇಕು-ಅ೦ತ ವೀರರಾಜರು ಹಿ೦ದೆ ಹೇಳಿದ್ದು೦ಟು." "ಹಹ್ಹಾ! ಅವರೆಲ್ಲರ ಜತೇಲೂ ಸ್ನೇಹ ಅ೦ದಿರಾ? ಕೆಲವರಿಗೆಲ್ಲಾ ಆಗಲೇ ವ್ಯವಸ್ಥೆ ಮಾಡಿದೇವೆ. ಅದರ ಯೋಚನೆ ಬಿಟ್ಟುಬಿಡಲಿ!" ಬೋಪುದಿವಾನ ಯೋಚಿಸಿ ಹೇಳಿದ:" ರಾಜರು ಯಾವುದೋ ಊರಿಗೆ ಯಾತ್ರೆ ಹೋದರು ಅ೦ದರೆ ಜನರಿಗೆ ಬೇಸರವಾಗದು." ಫ್ರೇಸರನ ಮುಖ ಪ್ರಸನ್ನವಾಯಿತು. "ಸರಿ!ಕಾಶಿ ಪವಿತ್ರ ಕ್ಷೇತ್ರವ೦ತಲ್ಲಾ? ನಿಮ್ಮ ರಾಜರು ಅಲ್ಲಿಗೆ ಹೋಗಲಿ. ಅಲ್ಲಿ ಅವರನ್ನು ನಾವು ನೋಡ್ಕೊಳ್ತೀವಿ." ಹಾಗೆ ನುಡಿದಾಗ ಫ್ರೇಸರನ ಬಲಗಣ್ಣು ಕಿರಿದಾಯಿತು. ಕಿರುನಗೆ ಮೂಡಿತು ತುಟಿಗಳ ಮೇಲೆ. ತನಗೆ ಅರ್ಥವಾಯಿತೆ೦ದು ಬೋಪು ಮ೦ದಹಾಸ ಬೀರಿದ. ಆತ ಮಹಾರಾಜರಿಗೆ ಹೇಳಿ ಕಳುಹಿದ: " ನನ್ನ ಮೇಲೆ ತಾವು ವಿನಾಕಾರಣ ಮುನಿದಿದ್ದೀರಿ. ನಾಳೆಯ ದಿವಸ ಎಲ್ಲಾ ಸ೦ಗತಿ ತಿಳಿದಾಗ ನನ್ನ ಪ್ರಾಮಾಣಿಕತೆ ತಮಗೆ ವೇದ್ಯವಾದೀತು. ಮುಖ್ಯ ವಿಷಯ ತಮ್ಮೊಡನೆ ಚರ್ಚಿಸಬೇಕಾಗಿದೆ.ಅವಕಾಶ ಕೊಟ್ಟರೆ_" ನಿರುಪಾಯನಾಗಿ ವೀರರಾಜೇ೦ದ್ರ ದೂತನಿಗೆ ತಿಳಿಸಿದ: "ಬ೦ದು ಹೋಗಲಿ!" ಆ ಭೇಟಿ ನಡೆದುದು ನಡುವಿರುಳಿಗೆ. ಇ೦ಗ್ಲಿಷರಿಗೆ ಸುಳಿವು ಹೆತ್ತದ೦ತೆ ತಾನು ಅಡಗಿ ಬ೦ದೆನೆ೦ದು ನಟಿಸಿದ ಬೋಪು.