ಪುಟ:Kalyaand-asvaami.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಗನಿನ್ನು ಬಹಳ ದಿನ ಅಲ್ಲಿರುವುದಿಲ್ಲವೆಂದು ತಾಯಿಯಾಗಲೇ ಮನಗಂಡಿದ್ದಳು. ಗಿರಿಜವ್ವನಿಗೆ ಅನಿಸಿತ್ತು-ಆಕೆಯ ಗಂಡ ಬೇಗನೆ ಅಲ್ಲಿಂದ ಹೊರಡಬಹುದೆಂದು, ಆ ಯೋಚನೆಯಿಂದ ಇಬ್ಬರಿಗೂ ಸಂಕಟವೆನಿಸಿತ್ತು, ಎರಡು ಹೃದಯಗಳೂ ತೀವ್ರಗತಿಯಿಂದ ಹೊಡೆದುಕೊಂಡಿದ್ದುವು.

ಕುಡಿಯರಿಬ್ಬರೂ ನಿಶ್ಚಲರಾಗಿ ಕುಳಿತಿದ್ದರು. ಕರ್ತುನ ದೃಷ್ಟಿಯೇನೊ ಅಲ್ಲಿನ ಆವರಣವನ್ನು ಹಾದು, ಮರಗಳ ಕೆಳಗಿನ ನೆಳಲು ಬೆಳಕುಗಳತ್ತ ಹರಿದಿತ್ತು, ಅದು, ಯಾವುದನ್ನೊ ಧ್ಯಾನಿಸುತ್ತ ಆಸಕ್ತವಾಗಿದ್ದ ನೋಟವೇ. ಸಂಜೆಗೆ ಮುಂಚೆ ಕಾಂತಿಹೀನವಾಗಿದ್ದ ಚೆಟ್ಟಿಯ ಕಣಗಳಂತೂ ಈಗ ಲವಲವಿಕೆಯಿಂದ ಮಿನುಗುತಿದ್ದುವು.

ಪುಟ್ಟಬಸವ ಮೌನವಾಗಿದ್ದುದನ್ನು ಗಮನಿಸಿ ನಂಜಯ್ಯ ನುಡಿದ:

"ಆಗಬೇಕಾದ್ದು ಏನು ಎಂತಲೆ? ಹುಂ! ನೀವೇ ಹೇಳಿ, ಏನಿದ್ದೀತು? ... ಯಾಕೆ? ಸುಮ್ಮನಿದೀರಲ್ಲ... ಅಂತ ಬಾಯಿಬಿಚ್ಚಿ ಹೇಳದೆಯೇ ನಮಗೆಲ್ಲಾ ಗೊತ್ತಿದೆ, ಅಲ್ಲ? ನನಗೆ ನಿಮಗೆ ಪ್ರತಿಯೊಬ್ಬರಿಗೆ: ಮನೆಗೆ ಮಾರಿ ಹೋದ್ಮೇಲೆ ಏನು ಮಾಡ್ಬೇಕು? ಹೇಳಿ!"

ಕರಿಯಪ್ಪನೆಂದ:

"ಆ ಮಾರಿಯನ್ನು ಹಿಡಿದು ಕಟ್ಟಿ ಊರಿನ ಹೊರಗೆ ಸಿಗಿದು ತೂಗ ಹಾಕ್ಬೇಕು !”

ಸೋಮಯ್ಯನೂ ಹೇಳಿದ:

"ದ್ರೋಹಿಗಳನ್ನು ಹಿಡಿದು ಕುದಿಯೋ ಎಣ್ಣೇಲಿ ಅದ್ಬೇಕು." ಆ ಮಾತುಗಳೆಲ್ಲ ಉತ್ತವೆಂಬಂತೆ ನಂಜಯ್ಯನೆಂದ: "ನಾನು ಹೇಳ್ವಿಲೈ ಆಗಲೆ? ಆಗಬೇಕಾದ್ದೇನೂಂತ ಪ್ರತಿಯೊಬ್ಬರಿಗೂ ಗೊತ್ತಿದೆ. ಎಳೇ ಮಕ್ಕಳೂ ಈ ಪ್ರಶ್ನೆಗೆ ಉತ್ತರ ಕೊಡೋದು ಖಂಡಿತ!”

ಆನಂತರ, ಮಾತಿನ ಅಗತ್ಯವೇ ಇನ್ನಿಲ್ಲವೆಂದು ನೆಲೆಸಿದ ಮೌನವನ್ನು ಮುಕ್ತಾಯಗೊಳಿಸುತ್ತ ಪುಟ್ಟಬಸವ, ಮೊದಲಿನಂತೆಯೇ ಮತ್ತೆ ಬಲು ನಿಧಾನವಾದ ಸ್ವರದಲ್ಲಿ ನುಡಿದ:

“ ನಮ್ಮ ತಯಾರಿ ಪೂರ್ತಿಯಾಗೋಕೆ ಇನ್ನೂ ಸ್ವಲ್ಪ ಸಮಯಬೇಕು. ಒಮ್ಮೆ ಊರು ಬಿಟ್ಮೇಲೆ ಜಯಗಳಿಸಿಯೇ ನಮ್ಮ ವೀರರು ಹಿಂತಿರುಗ್ಬೇಕು. ಹೇಳಿ, ಹೊರಬೀಳೋದು ಯಾವಾಗ ಅನುಕೂಲ?"