ಪುಟ:Kalyaand-asvaami.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇತಿಹಾಸ ಮತ್ತು ಸೃಷ್ಟಿಸಾಹಿತ್ಯ

'ಕಲ್ಯಾಣಸ್ವಾಮಿ' ಕಾದಂಬರಿಯನ್ನು ಓದುಗರ ಮುಂದಿಡುತ್ತ, ಪೀಠಿಕೆಯಾಗಿ ಒಂದೆರಡು ಮಾತು ಹೇಳುವುದು ಗತ್ಯವೆನಿಸಿದೆ. ಔಪಚಾರಿಕವಾದ ಮುನ್ನುಡಿಯ ಬದಲು, 'ಇತಿಹಾಸ ಮತ್ತು ಸೃಷ್ಟಿಸಾಹಿತ್ಯ' ಎಂಬ ತಲೆಕಟ್ಟಿನ ಕೆಳಗೆ ಆ ಮಾತುಗಳನ್ನು ಬರೆಯ ಹೊರಟಿದ್ದೇನೆ.ಇದಕ್ಕೆ ಕಾರಣ, ನನ್ನ ಈ ಕೃತಿಯ ಕಥಾವಸ್ತು ವಿನ ಸ್ವರೂಪ.

ಬಳಕೆಯಲ್ಲಿರುವ ವಿಶೇಷಣವನ್ನೆ ಇಲ್ಲಿಯೂ ಪ್ರಯೋಗಿಸುವುದಾದರೆ, 'ಕಲ್ಯಾಣಸ್ವಾಮಿ'ಯೊಂದು ಐತಿಹಾಸಿಕ ಕಾದಂಬರಿ.

ಇತಿಹಾಸವೆನ್ನುವುದು ರಾಜರಾಣಿಯರ ಕಥೆ, ಎಂಬ ಸಾಮಾನ್ಯ ಕಲ್ಪನೆಯೊಂದುಂಟು. ಒಬ್ಬ ರಾಜ ಇನ್ನೊಬ್ಬ ರಾಜನ ಮೇಲೆ ಸಾರಿದ ಯುದ್ಧ, ಒಬ್ಬನನ್ನು ಪದಚ್ಯುತನಾಗಿ ಮಾಡಲು ಮತ್ತೊಬ್ಬ ನಡೆಸಿದ ಯತ್ನ, ಕುಟಿಲ ಕಾರಸ್ಥಾನಗಳು, 'ವಿಶಿಷ್ಟ'ರೆನಿಸಿದ ಆ ವ್ಯಕ್ತಿಗಳ ಸುಖ ದುಃಖ - ಬರಿಯ ಈ ವಿವರ ಇತಿಹಾಸವೆನಿಸದು. ಕಾಲ ಕಾಲಕ್ಕೂ ಬದಲಾಗುತ್ತ ಬಂದ ಬದುಕು, ಆಗಿನ ಕಾಲಧರ್ಮ, ಅದರಿಂದ ಪ್ರಭಾವಿತರಾದ ಜನರ ರೀತಿನೀತಿಗಳು, ಆ ಸಾಮಾಜಿಕ ವ್ಯವಸ್ಥೆಯ ಪ್ರಮುಖ ಶಕ್ತಿಗಳು, - ಇವು ಇತಿಹಾಸವನ್ನು ರೂಪಿಸುವ ಮುಖ್ಯ ಅಂಶಗಳು. ಸಾಮ್ರಾಜ್ಯಗಳು ಎದ್ದವು, ಬಿದ್ದವು. ಆ ಉತ್ಕರ್ಷ ಅಧಃಪತನಗಳಿಗೆ ಯಾವನೋ ಒಬ್ಬ ರಾಜ, ಯಾವಳೋ ಒಬ್ಬಳು ರಾಣಿ, ಕಾರಣರೆನ್ನುವುದು ಸರಿಯಾಗದು. ಆ ಸೃಷ್ಟಿಯ-ಲಯದ ಹಿಂದೆ, ಆಯಾ ಜನಾಂಗಗಳ ಕಥೆ ಇದೆ. ಆ ಘಟನೆಗಳ ಹಿಂದೆ, ಜನ ಜೀವನದ-ಸಂಸ್ಕೃತಿಯ-ಸಾಹಿತ್ಯದ ಪ್ರೇರಕ ಶಕ್ತಿಗಳಿವೆ.

ಮಾನವ ಸಮಾಜದ ಬೆಳವಣಿಗೆಯ ಅಧ್ಯಯನವೇ, ಚರಿತ್ರೆಯ ಮಹಾಸಂಭವಗಳನ್ನು ಅರ್ಥಮಾಡಿಕೊಳ್ಳಲು ಬುನಾದಿ. ಒಂದು ಸಾಮಾಜಿಕ ವ್ಯವಸ್ಥೆ ಇನ್ನೊಂದು ಸಾಮಾಜಿಕ ವ್ಯವಸ್ಥೆಗೆ ಹಾದಿ ಮಾಡಿಕೊಟ್ಟ ಸೂತ್ರವೇ, ಲೋಕದ ವಿವಿಧ ರಾಷ್ಟ್ರಗಳ ಇತಿಹಾಸಗಳನ್ನು ಕ್ರಮಬದ್ಧವಾಗಿ ಕೋದಿರುವ ದಾರ.

ಭಾರತದ ಗತಕಾಲವನ್ನೇ ತೆಗೆದುಕೊಳ್ಳೋಣ. ವೇದಕಾಲದಿಂದ