ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕೇ ದಿನಗಳಲ್ಲಿ ಹಿಂತಿರುಗಿ ಬರುವೆವೆಂದು ಹೇಳಿ ಪುಟ್ಟಬಸವನೂ ಆತನ ಸ್ನೇಹಿತರೂ ಹೊರಟುಹೋದ ಮಾರನೆಯ ದಿನಪೇ ಇಬ್ಬರು ಆ ಹಳ್ಳಿಗೆ ಬಂದರು. ತಮ್ಮ ಮನೆಯ ಕಡೆಗೇ ಬರುತಿದ್ದ ಅವರನ್ನು ಕಂಡು ಗಿರಿಜವ್ವ ದಿಗಿಲುಗೊಂಡಳು. ಆಕೆಯ ಗಂಡ ಎಚ್ಚರಿಸಿ ಹೋಗಿದ್ದ, ಕುಂಪಣಿ ಸರಕಾರದ ಗೂಢಚಾರರು ಬಂದರೂ ಬರಬಹುದೆಂದು.

ಆ ವ್ಯಕ್ತಿಗಳು ತೀರ ಹತ್ತಿರಕ್ಕೆ ಬಂದಾಗ ಒಬ್ಬನನ್ನು ಗಿರಿಜವ್ವ ಗುರುತಿಸಿದಳು. ಮಾಚಯ್ಯ, ಪುಟ್ಟಬಸವ ಜತೆ ಹಿಂದೊಮ್ಮೆ ಆತ ಆ ಊರಿಗೆ ಬಂದುದಿತ್ತು. ಆ ಇನ್ನೊಬ್ಬ-

ಅದೆಷ್ಟು ದಿನಗಳಿಂದ ನಡೆದು ಬಂದಿದ್ದರೊ? ಇಬ್ಬರ ಪಾದಗಳೂ ಊದಿಕೊಂಡಿದ್ದುವು. ಜಗಲಿಯ ಮೇಲೆ ಕುಳಿತು, ಉತ್ತರೀಯದಿಂದ ಎದೆಗೆ ಗಾಳಿಹಾಕಿಕೊಳ್ಳತೊಡಗಿದ ಅವರೆದುರು, ಗಿರಿಜವ್ವ ನೀರಿನ ತಂಬಿಗೆ ಇಟ್ಟಳು; ತಟ್ಟೆಯಲ್ಲಿ ಬೆಲ್ಲವಿಟ್ಟಳು.

ತನ್ನ ಗಂಡ ಎಲ್ಲಿ - ಎಂದು ಅವರು ಕೇಳಿದರೆ, ತಾನೇನು ಉತ್ತರ ಕೊಡಬೇಕು, ಎಂಬುವೇ ಗಿರಿಚೆಗೆ ಬಗೆಹರಿಯದೆ ಹೋಯಿತು. ಮನಸಿನೊಳಗಿನ ಆತಂಕವನ್ನು ಮುಚ್ಚಿಕೊಳ್ಳಲೆತ್ನಿಸುತ್ತಾ ಆಕೆ ಕೇಳಿದಳು:

ಯಾವೂರಿಂದ ಬಂದಿರಿ?" "ನನ್ನ ಗುರುತು ಸಿಗಲಿಲ್ವೆ ಅಕ್ಕಾ?" ಎಂದು ಕೇಳಿದ ಮಾಚಯ್ಯ.

ಮುಗುಳುನಗಲೆತ್ನಿಸುತ್ತಾ ಗಿರಿಜವ್ವನೆಂದಳು:


ತಾನು ಕೇಳಬೇಕೆಂದಿದ್ದ ಪ್ರಶ್ನೆಗೆ ಉತ್ತರ ತಾನಾಗಿಯೇ ಸಿಗುವುದೇನೋ ಎಂದು, ಮನೆಯೊಳಗೂ ಸುತ್ತುಮುತ್ತಲೂ ದೃಷ್ಟಿ ಹಾಯಿಸುತ್ತ, ಮಾಚಯ್ಯ ಹೇಳಿದ:

"ಅಣ್ಣನವರು ನನ್ನನ್ನು ಸುಳ್ಯಕ್ಕೆ ಕಳಿಸಿದ್ರು." [ತನ್ನ ಗಂಡ ದೂತರನ್ನು ಆ ಊರಿಗೆ ಕಳುಹಿದ್ದ ವಿಷಯ ಗಿರಿಜವ್ವನಿಗೆ ಗೊತ್ತಿತ್ತು, ಈತ ತಮ್ಮವನೇ ಹಾಗಾದರೆ.]