ಪುಟ:Kalyaand-asvaami.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಈವರೆಗಿನ ಎಲ್ಲ ಐತಿಹಾಸಿಕ ಘಟನೆಗಳಿಗೂ ಒಂದು ಅರ್ಥವಿದೆ. ಇದರಲ್ಲಿ ಯಾವುದೂ ಆಕಸ್ಮಿಕವಲ್ಲ. ಆ ಬದಲಾವಣೆಗಳನ್ನೆಲ್ಲ ಸೂಕ್ಷ್ಮವಾಗಿ ಅಭ್ಯಸಿಸಿದಾಗಲೇ ಇತಿಹಾಸದ ವಿವಿಧ ಘಟ್ಟಗಳು ಗೋಚರವಾಗುವುವು. ಆವರೆಗೂ ಅಸ್ಪಷ್ಟವೆಂದು ತೋರಿದ ಎಷ್ಟೋ ಅಂಶಗಳು ಸ್ಪಷ್ಟವಾಗುವುವು.

ನಮ್ಮ ಕಣ್ಣೆದುರಲ್ಲೇ ನಡೆಯುತ್ತಿರುವ ಹಲವಾರು ಘಟನೆಗಳ ಐತಿಹಾಸಿಕ ಸ್ವರೂಪ ಎಂತಹದೆಂದು ನಾವು ಹೇಳಬಲ್ಲೆವಾದರೆ, ಇಂದಿನ ಪರಿಸ್ಥಿತಿ ನಾಳೆ ಯಾವ ರೀತಿ ರೂಪುಗೊಳ್ಳುವುದೆಂದು ಸರಿಯಾಗಿ ತಿಳಿಯಬಲ್ಲೆವಾದರೆ, ಆದಿಯವರೆಗೆ ಚಾಚಿಕೊಂಡಿರುವ ಆ ನಿನ್ನೆಯನ್ನು ಅರ್ಥಮಾಡಿಕೊಳ್ಳುವುದು- ಶಾಸ್ತ್ರೀಯವಾಗಿ ಪೃಥಕ್ಕರಿಸುವುದು- ಕಷ್ಟವಾಗದು. ಅಂತಹ ಚಾರಿತ್ರಿಕ ನೋಟವಿರುವ ಮನುಷ್ಯ, ಬರಿಯ ಬುರುಗಿನಲ್ಲಿ ಓಡಾಡುವುದಿಲ್ಲ. ಪಾದಗಳ ಕೆಳಗಿರುವುದು ಉಸುಬಾಗಿ ಆತನಿಗೆ ತೋರುವುದಿಲ್ಲ. ಶತ ಶತಮಾನಗಳಿಂದ ಭದ್ರವಾಗಿರುವ, ಮುಂದೆಯೂ ಶತ ಶತಮಾನಗಳವರೆಗೆ ಭದ್ರವಾಗಿಯೆ ಉಳಿಯುವ, ನೆಲದ ಮೇಲೆ ದೃಢ ಹೆಜ್ಜೆಗಳನ್ನು ಆತ ಇಡುತ್ತಾನೆ.

ನಿನ್ನೆಯ ಅಂಶ ತಾನು, ನಾಳೆಯ ಬೀಜ ತನ್ನಲ್ಲಿದೆ, ಎಂಬ ತಿಳಿವಳಿಕೆಯಿಂದ ಮನುಷ್ಯನ ಬದುಕು ಅರ್ಥಪೂರ್ಣವಾಗುತ್ತದೆ.

ಬರಹಗಾರನಿಗೆ ಆ ಚಾರಿತ್ರಿಕ ದೃಷ್ಟಿ ಇತ್ತೆಂದರೆ, ಆತನ ಸಾಹಿತ್ಯ ಸೃಷ್ಟಿ ಬೆಲೆ ಬಾಳುತ್ತದೆ.

ಆ ದೃಷ್ಟಿ ಇರಬೇಕಾದುದು ಗತಕಾಲವನ್ನು ಚಿತ್ರಿಸುವಾಗ ಮಾತ್ರ ಅಲ್ಲ. ವರ್ತಮಾನಕಾಲದ ಸಾಮಾಜಿಕ ಚಿತ್ರಣಕ್ಕೂ ಇತಿಹಾಸಕ್ಕೆ ಸಂಬಂಧಿಸಿ, ನಿರ್ದಿಷ್ಟ ಸ್ಥಾನವಿದ್ದೇ ಇದೆ. ಇಂದಿನ ವಾಸ್ತವತೆಯಲ್ಲಿ ನಾಳೆಯ ಸಾಧ್ಯತೆಯನ್ನು ಗುರುತಿಸುವ ಕಥೆಯಲ್ಲೂ ಚರಿತ್ರೆಯ ದೃಷ್ಟಿ ಇದ್ದೇ ಇದೆ.

ಕಥೆ ಕಾದಂಬರಿ ನಾಟಕಗಳಿರುವುದು ಬರಿಯ ಮನೋರಂಜನೆಗೋಸ್ಕರ; ಸೃಷ್ಟಿ ಸಾಹಿತ್ಯಕ್ಕೂ ಬದುಕಿಗೂ ಸಂಬಂಧವಿಲ್ಲ- ಎಂದು ಭಾವಿಸುವ ಬರಹಗಾರ, ಮೇಲಿನ ನನ್ನ ಪ್ರತಿಪಾದನೆಯನ್ನು ಖಂಡಿತ ಒಪ್ಪಲಾರ. ಅಂತಹ ವ್ಯಕ್ತಿ ಚಿತ್ರಿಸುವುದು ಗಿಡ ಬಿಡುವ ಹೂಗಳನ್ನಲ್ಲ, ಬಣ್ಣದ ಕಾಗದದ ಕೃತ್ರಿಮ ಕುಚ್ಚುಗಳನ್ನು.