ಪುಟ:Kalyaand-asvaami.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಐತಿಹಾಸಿಕ ಕಾದಂಬರಿಯ [ನಾಟಕದ ಇಲ್ಲವೆ ಕಥೆಯ]ಸೃಷ್ಟಿ, ಸಾಮಾಜಿಕ ವಸ್ತುವಿನ ಚಿತ್ರಣಕ್ಕಿಂತ ಹೆಚ್ಚು ಕಷ್ಟದ್ದು. ಯಾಕೆಂದರೆ, ಇಂದಿನ ಕಲ್ಪನೆಯ ಚಿತ್ರಕ್ಕೆ ಸ್ಫೂರ್ತಿ ನೀಡಲು ಅಸಂಖ್ಯ ಮಾದರಿಗಳಿರುತ್ತವೆ ಕಣ್ಣ ಮುಂದೆ. ನಿನ್ನೆಯ ಚಿತ್ರಣಕ್ಕೆ ಅಂತಹ ಮಾದರಿಗಳಿಲ್ಲ. ಈ ತೊಂದರೆಯನ್ನು ತಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳುವವರೂ ಉಂಟು. ಅಂತಹ ಲೇಖಕರು ಇತಿಹಾಸದ ಹಣೆಪಟ್ಟಿ ಕಟ್ಟಿ ಜನರಿಗೆ ನೀಡುವುದು, ವೈಯಕ್ತಿಕ ಕಲ್ಪನೆಯ ಸುರಸಸೃಷ್ಟಿಯನ್ನು. ಆ ಕೃತಿಗಳನ್ನೋದಿ,ಅದೇ ತಮ್ಮ ಗತ ಜೀವನವೆಂದು,ನಿಜವಾದ ಇತಿಹಾಸವೆಂದು,ನಂಬಬೇಕು ಓದುಗರು! ಸಾಮಾಜಿಕ ಚಿತ್ರಣವನ್ನಾದರೋ ಎದುರಿಗಿರುವ ಮೂಲದೊಡನೆ ಹೋಲಿಸಿನೋಡಬಹುದು. ಆದರೆ, ಐತಿಹಾಸಿಕ ಚಿತ್ರಣದ ತುಲನೆಗೆ ಎಲ್ಲಿದೆ ತಕ್ಕಡಿ? ಲೇಖಕ ಯಾವಾಗಲೂ ಸತ್ಯನಿಷ್ಠನೂ ಪ್ರಾಮಾಣಿಕನೂ ಆಗಬೇಕೆನ್ನುವುದು ಈ ಕಾರಣಕ್ಕಾಗಿಯೇ. ಅಂತಹ ಮೌಲ್ಯಗಳು ಬರೆಹಗಾರನ ಬದುಕಿನಲ್ಲಿದ್ದರೆ ಆತನಿಂದ ಅನ್ಯಾಯವಾಗುವ ಸಂದರ್ಭಗಳು ಕಡಿಮೆ. ತಮ್ಮ ಹಿಂದಿನವರ ಬದುಕನ್ನು ತಿಳಿಯಲು ಜನರು ಕುತೂಹಲ ತೋರುವುದು ಸ್ವಾಭಾವಿಕ.ಆ ನೀರಡಿಕೆಯ ಶಮನಕ್ಕೆ ಬೇಕಾದುದು ಕೋಕಾಕೋಲಾ ಅಲ್ಲ, ಶುದ್ಧೋದಕ. ಗತಕಾಲದ ಯಾವುದೋ ಒಂದು ಸಂಭವವನ್ನು ವಸ್ತುವಾಗಿ ಆರಿಸಿ ಕೃತಿ ರಚಿಸಲು ಹೊರಡುವ ಬರೆಹಗಾರನಿಗೆ ಸಂಶೋಧನೆಯ ದೃಷ್ಟಿ ಇರಬೇಕು. ಆ ಕಾಲ ಯಾವುದು? ಹೇಗಿತ್ತು ಆಗಿನ ಜನ ಜೀವನ? ಬೆಳಕು ಬೀರಬಲ್ಲ ಅವಶೇಷಗಳಿವೆಯೆ? ಆ ಸಮಯದ ಜಾನಪದ ಸಾಹಿತ್ಯವಿದೆಯೆ? ತಾಳೆಯ ಗರಿಗಳಲ್ಲಿ ಏನಾದರೂ ಅಡಗಿದೆಯೆ? ಆ ಕತೆ ಹೇಳುವ ಕಲ್ಲುಗಳಿವೆಯೆ?....ಹಾಗೆ ಆತ ಶ್ರಮವಹಿಸಿ ತಿಳಿಯಬೇಕಾದ ಸಂಗತಿಗಳು ಒಂದಲ್ಲ, ಎರಡಲ್ಲ. ಅಷ್ಟೊಂದು ಸಂಗ್ರಹದ ಬಳಿಕ ದೊರೆತ ವಿಷಯಗಳಲ್ಲಿ ವಿರೋಧಾಭಾಸ ಕಂಡು ಬರಬಹುದು. ಆಗ, ಈ ದಿನದ ಬದುಕನ್ನೂ ನಾಳೆಯನ್ನೂ ಗಮನದಲ್ಲಿಟ್ಟು ನಿನ್ನೆಯನ್ನು ತಿಳಿಯಲು ಆತ ಯತ್ನಿಸಬೇಕು. ಅಪೂರ್ಣವಾಗಿದ್ದ ಕಡೆ ತರ್ಕಬದ್ಧ ರೀತಿಯಲ್ಲಿ ಚಿತ್ರವನ್ನು ಪೂರ್ಣಗೊಳಿಸಬೇಕು....