ಪುಟ:Kalyaand-asvaami.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರ ಸುಳ್ಯದಲ್ಲಿ ಕ್ಷೋಭೆಯ ಕಿಡಿ ೮೭

ರಾಮಗೌಡನ ಮುಖ ಹೆಮ್ಮೆಯಿಂದ ರಂಗೇರಿತು. ಕಣ್ಣುಗಳು ಮಿಂಚಿದವು. ಮುಂದೆ ಆಡಬೇಕಾಗಿದ್ದ ಮಾತಿಗೆ ಎಂತಹ ಪೀಠಿಕೆಯಾಗಿತ್ತು ಆ ಪ್ರಶ್ಂಸೆ! ಆದರೂ ಆ ಪ್ರಸ್ತಾಪವನ್ನು ಹೇಗೆ ಮಾಡಬೇಕೆಂಬುದು ಗೌಡನಿಗೆ ತಿಳಿಯದೆ ಹೋಯಿತು. ಆ ತೊಂದರೆಯನ್ನು ನಿವಾರಿಸುವಂತೆ ಪುಟ್ಟಬಸವನೇ ನುಡಿದ: "ಈಗೇನೋ ನವೆಲ್ಲಾ ಸೈನ್ಯಗಳಿಲ್ಲದ ಸರದಾರರು. ನಾಳೆ ಜನರು ಜಮೆಯಾದಾಗ ಯಾರು ಯಾರು ಎಲ್ಲೆಲ್ಲಿಗೆ ಹೋಗಬೇಕು ಅನ್ನೋದು ನಿಶ್ಚಯವಾಗಲಿ." ಅದೇ ಸಂದರ್ಭವೆಂದು ರಾಮಗೌಡ ಮುಂದುವರಿದ: "ಕೊಡಗಿನ ಏರ್ಪಾಟನ್ನು ಬೇರೆ ಸರದಾರರಿಗೆ ಬಿಟ್ಟು ನೀವುನಾಲ್ಕು ಜನರೂ ಸುಳ್ಯಕ್ಕೆ ಬರೋದು ಸಾಧ್ಯವಾದೀತೇನು?" "ಯಾಕೆ ಸಾಧ್ಯವಾಗದು?" ಎಂದ ನಂಜಯ್ಯ. "ಅರಸರ ಕಡೆಯವರೇ ಬಂದಿದಾರೆ ಎಂದರೆ ಜನರಿಗೆ ಹೆಚ್ಚು ವಿಶ್ವಾಸ ಉಂಟಾಗ್ತದೆ. ಕನ್ನಡ ಜಿಲ್ಲೆಯನ್ನು ಜಯಿಸೋದು ಬಹಳ ಸುಲಭ. ಅದನ್ನು ಮೂಗಿಸ್ಕೊಂಡು ನಾವೆಲ್ಲಾ ಕೊಡಗಿಗೆ ಬಂದು ಮಡಿಕೇರಿಯ ಕೋಟೆ ಹಿಡೀಬಹುದು. ಅಷ್ಹು ಹೊತ್ತಿಗೆ ಇಲ್ಲಿಯೂ ಸಾಕಷ್ಟು ಕೆಲಸ ಆಗಿರ್ತದೆ." ಪುಟ್ಟಬಸವ ಹೂಂಗುಟ್ಟಿ ನುಡಿದ: "ಸರಿ." ಈಜುಗಾರ ನೀರಿಗೆ ಧುಮುಕುವುದಕ್ಕೆ ಮುಂಚೆ ಮೈಯಾಡಿಸುವಂತೆ ಭುಜಗಳನ್ನು ಕುಲುಕಿ ರಾಮಗೌಡನೆಂದು: "ನೀವು ರಾಜರ ಸಂಬಂಧಿಕರೂಂತ ಜಾಹೀರು ಮಾಡ್ಬೇಕು." ಪುಟ್ಟಬಸವ ಸೆಟೆದು ಕುಳಿತ. "ನಿಮ್ಮ ಮಾತು ಅರ್ಥವಾಗಲಿಲ್ಲ!" ನಿಮಗೂ ಅರ್ಥವಾಗಲಿಲ್ಲವೆ-ಎನ್ನುವ ಯಾಚನೆಯ ದೃಷ್ಟಿಯಿಂದ ರಾಮಗೌಡ, ನಂಜಯ್ಯನನ್ನೂ ಕುಡಿಯ ಸೋದರರನ್ನೂ ನೋಡಿದ. ಎಲ್ಲ ಮುಖಗಳ ಮೇಲೂ ಪ್ರಶ್ನಾರ್ಥಕ ಚಿಹ್ನೆವನ್ನೇ ಕಂಡು, ವ್ಯಾಕುಲಗೊಂಡು, ಗೌಡ ವಿವರಿಸಿದ.