ಪುಟ:Kanakadasa darshana Vol 1 Pages 561-1028.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬೩ ಕನಕದಾಸರ ಕೀರ್ತನೆಗಳ ಶಬ್ದಶಿಲ್ಪ ಕೆ. ವಿ. ನಾರಾಯಣ ಕನಕದಾಸರು ರಚಿಸಿದ ಸಾಹಿತ್ಯದ ಭಾಷಿಕ ಸ್ವರೂಪವನ್ನು ಚರ್ಚಿಸುವುದಕ್ಕೆ ಮುನ್ನ ಕೆಲವು ಹಿನ್ನೆಲೆಯ ವಿವರಗಳನ್ನು ಗಮನಿಸುವುದು ಅವಶ್ಯ. ಮಧ್ಯಕಾಲೀನ ಸಾಹಿತ್ಯವೆಂದು ನಾವೀಗ ಗುರುತಿಸುತ್ತಿರುವ ಕೃತಿ ಸಮೂಹದ ಲಕ್ಷಣಗಳನ್ನು ಒಂದೇ ನೆಲೆಯಲ್ಲಿ ಇರಿಸಿ ವಿವರಿಸುವುದು ಕಷ್ಟ. ಆದರೂ ಕನಕದಾಸರ ಕೃತಿಗಳ ಭಾಷಿಕ ಲಕ್ಷಣಗಳ ವಿವರಣೆಗೆ ಅನುವಾಗುವಷ್ಟು ಕೆಲವು ಸಾಮಾನ್ಯ ವಿವರಗಳನ್ನು ಗುರುತಿಸಿಕೊಳ್ಳುವುದು ಸಾಧ್ಯ. ಮಧ್ಯಕಾಲೀನ ಕಾವ್ಯಬಂಧಗಳು ಬಹುಮಟ್ಟಿಗೆ ವಿವೃತ, ಆದಿ ಅಂತ್ಯಗಳಿದ್ದರೂ ನಡುವಣ ವಿಸ್ತಾರ ಮಾತ್ರ ಅನಿಯತ. ಅನಿಯತ ಎಂದಾಗ ನಿರ್ದಿಷ್ಟ ವಿನ್ಯಾಸಕ್ಕೆ ಬದ್ಧವಾಗದೆ ನಡೆದ ಚಲನೆ ಎಂಬುದಷ್ಟೇ ಅರ್ಥ. ಈ ಲಕ್ಷಣದ ನೇರ ಪರಿಣಾಮವೆಂದರೆ ಕೃತಿಯನ್ನು ಹಿಗ್ಗಿಸುವುದು ಹಾಗೂ ಸಂಗ್ರಹಿಸುವುದು ಸಾಧ್ಯವಾದದ್ದು ; ಜೊತೆಗೆ ಇಡಿಯಾಗಿ ಕೃತಿಯನ್ನೆ ಮತ್ತೊಂದು ಛಂದೋರೂಪದಲ್ಲಿ ವಿನ್ಯಾಸಗೊಳಿಸಲೂ ಸಾಧ್ಯವಾದದ್ದು. ಇದು ಪ್ರೋತೃ ಪರಂಪರೆಗೆ ಬದ್ದವಾದ ಎಲ್ಲ ಕಾವ್ಯಗಳ ಸಾಮಾನ್ಯ ನೆಲೆಗಟ್ಟು, ಭಾರತೀಯ ಶ್ರವ್ಯಕಲೆಯಾದ ಸಂಗೀತದ ಸ್ವರೂಪವನ್ನು ಗಮನಿಸಿದರೆ ಮಧ್ಯಕಾಲೀನ ಕಾವ್ಯಬಂಧಗಳ ವಿವೃತತೆಯನ್ನು ಗ್ರಹಿಸಲು ಸೂಕ್ತ ಮಾದರಿ ದೊರೆಯುತ್ತದೆ. ಈ ಬಗೆಯ ಕಾವ್ಯಬಂಧಗಳಲ್ಲಿ ಭಾಷೆ ಸಾಮಾನ್ಯವಾಗಿ ವಿವರಣೆಗೆ ನಿರೂಪಣೆಗೆ ಅಭಿಮುಖವಾಗಿರುತ್ತದೆ ; ಜೊತೆಗೆ ಹೆಚ್ಚು ಪಾರದರ್ಶಕವಾಗುತ್ತದೆ ; ಎಂದರೆ ಹೇಳಬೇಕಾದುದರ ಕಡೆಗೆ ಗಮನ ಸೆಳೆದು ಹೇಳುತ್ತಿರುವ ಬಗೆಯ ಕಡೆಗೆ ಹೆಚ್ಚು ಗಮನ ಹರಿಯದಂತೆ ರೂಪಗೊಳ್ಳುತ್ತದೆ. ಭಾಷೆ ಸ್ವಾಭಿಮುಖವಾಗುವುದು, ತನ್ನೆಡೆಗೆ ಗಮನ ಸೆಳೆಯುವಂತೆ ಅಲಂಕೃತಗೊಳ್ಳುವುದು ಸಾಧ್ಯವಿದ್ದಷ್ಟೂ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಕದಾಸರ ಕೃತಿಗಳ ಭಾಷೆಯ ಸ್ವರೂಪವನ್ನು