ಪುಟ:Kanakadasa darshana Vol 1 Pages 561-1028.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೯೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ನೆಲೆ ೭೯೧ ಬಳಸಿಕೊಳ್ಳುತ್ತಾರೆ. ಆ ಮೂಲಕ ಯಾವ ಮೂಲಗಳಲ್ಲಿಯೂ ಇರಲಾರದ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಾರೆ. ಹೀಗೆ ಪೌರಾಣಿಕವಸ್ತುವೊಂದಕ್ಕೆ ಸಾಮಾಜಿಕ ಉದ್ದೇಶಕ್ಕಾಗಿ ಮರುಹುಟ್ಟು ಕೊಡುವ ಅತ್ಯಂತ ಆಧುನಿಕ ಮತ್ತು ಪ್ರಗತಿಪರ ಧೋರಣೆಯನ್ನು ಬಹುಶಃ ಮೊದಲ ಬಾರಿಗೆ ಕನಕದಾಸರಲ್ಲಿ ಗುರುತಿಸುತ್ತೇವೆ. ಒಟ್ಟಿನಲ್ಲಿ ಮೂಲದ ರಮ್ಯತೆ ಹಾಗೂ ಮೌಲ್ಯಗಳ ಮೂಲಕ ಭಾವುಕವರ್ಗವನ್ನು, ವರ್ಗ ಪ್ರಜ್ಞೆಯನ್ನು ಪ್ರಚ್ಛನ್ನಗೊಳಿಸಿಕೊಡುವ ಮೂಲಕ ಬುದ್ದಿಜೀವಿಗಳನ್ನು ಏಕಕಾಲಕ್ಕೆ ಸ್ಪಂದಿಸುವಂತೆ ಮಾಡುವ ಈ ಕಾವ್ಯ ಹರಿದಾಸರ ಕೈಯಲ್ಲಿಯ ಪಾಳೆಯಗಾರನ ಅಸ್ತದಂತೆ ಕ್ರಿಯಾಶೀಲವಾಗಿದೆ. ಮೋಹನ ತರಂಗಿಣಿಯಲ್ಲಿಯಂತೂ ಕನಕದಾಸರ ಸಾಮಾಜಿಕ ಪ್ರಜ್ಞೆ ಮೊದಲಿನ ಎರಡೂ ಕಾವ್ಯಗಳಿಗಿಂತಲೂ ಹೆಚ್ಚು ತನ್ನ ಆಳ-ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತದೆ. ೪೨ ಸಂಧಿಗಳಷ್ಟು ವಿಸ್ತಾರವಾದ ಈ ಸಾಂಗತ್ಯ ಕೃತಿ ಮೇಳುನೋಟಕ್ಕೆ ಭೋಗಮೂಲವಾದ ಶೃಂಗಾರ ಕಾವ್ಯ : ಹರಿಹರದಲ್ಲಿ ಅಭೇದವನ್ನು ಗುರುತಿಸಿಕೊಡುವದು ಅದರ ಪ್ರಮುಖ ಧೋರಣೆ. ಆದರೆ ಅವೆಲ್ಲವನ್ನು ಮೀರಿ ತನ್ನ ಸಮಕಾಲೀನ ಸಮಾಜದ ಎಲ್ಲ ನೆಲೆಗಳ ಅಂತಃಸ್ವರೂಪವನ್ನು ಪ್ರಕಟಿಸಬೇಕೆನ್ನುವ ಅದರ ಉತ್ಸಾಹ, ಅಂದಿನ ಸಾಂಸ್ಕೃತಿಕ ಸಮಸ್ಯೆಗಳನ್ನು ಶೋಧಿಸಿಕೊಡುವ ಅದರ ಪ್ರಯತ್ನ ವೈಚಾರಿಕ ಮಟ್ಟಕ್ಕೆ ನಿಲ್ಲದೆ ಕಳಕಳಿಯ ಆಳಕ್ಕೆ ಇಳಿಯುವಂತಹದು, ಇಲ್ಲಿಯ ಕವಿಯ ಸಾಮಾಜಿಕ ಪ್ರಜ್ಞೆ ಕವಿಯ ವೈಯಕ್ತಿಕ ಸ್ತರದ ಅಂದರೆ ತನ್ನ ಸಮಾಜದಿಂದ ತನಗೆ ಮಾತ್ರ ಒದಗಬಹುದಾದ ವ್ಯಕ್ತಿಗತ ಅನುಭವಗಳ ಅಂಚನ್ನು ಮೀರಿನಿಲ್ಲುವಂತಹದು. ಅಂದರೆ ಒಂದು ನಾಡಿನ ಸಮಗ್ರ ಸಂಸ್ಕೃತಿಯ ವಿಶಾಲ ವಿಸ್ತಾರಕ್ಕೆ ಹರಡಿಕೊಳ್ಳುವಂತಹದು. ಹೀಗಾಗಿ ಕನಕದಾಸರ ಮೋಹನತರಂಗಿಣಿ ಒಂದು ಶ್ರೀಮಂತ ಪರಂಪರೆಯನ್ನು ಸಮಕಾಲೀನ ಬದುಕಿನ ರೀತಿ-ನೀತಿ, ಶ್ರದ್ಧೆಸಂಪ್ರದಾಯ, ನಂಬಿಕೆ-ಆಚರಣೆ, ಉಡಿಗೆ-ತೊಡಿಗೆ, ಸ್ವಭಾವ-ಪ್ರವೃತ್ತಿಯನ್ನು, ಒಟ್ಟು ಒಂದು ಸಂಸ್ಕೃತಿಯ ಅನಂತಪದರುಗಳ ಸಮಸ್ತ ಪಾರ್ಶ್ವಗಳ ಮನೋಹರವಾದ ಜೀವಂತ ಚಿತ್ರಣಗಳನ್ನು ಅದರ ಧಾರ್ಮಿಕ-ಶೈಕ್ಷಣಿಕ-ಆರ್ಥಿಕ, ರಾಜಕೀಯ ನೆಲೆಯಲ್ಲಿ ಒದಗಿಸಿಕೊಡುತ್ತದೆ. ಸೂಳೆಗೇರಿ, ಬೇಟೆಯ ವರ್ಣನೆಯನ್ನು ಮೊದಲುಗೊಂಡ ಇಂಥ ಸಾಮಾಜಿಕ ಜೀವನದ ವಿವರಗಳು ನಮ್ಮ ಪ್ರಾಚೀನ ಕಾವ್ಯಪರಂಪರೆಯಲ್ಲಿ ಮಾಮೂಲಿ ಎನಿಸುವಷ್ಟು ಹಳೆಯದು; ಆದರೆ ಕನಕದಾಸರ ವಿಶಿಷ್ಟ ಪರಿಭಾವನೆಯಿಂದಾಗಿ ಕೇವಲ ಒಂದು ಕಾವ್ಯಪರಂಪರೆಯ ಅನುಕರಣೆಯಾಗುವದಿಲ್ಲ ; ಕವಿಯೊಬ್ಬನ ವರ್ಣನಾ ನೈಪುಣ್ಯದ ಪ್ರದರ್ಶನವಾಗಿ, ಚಾಪಲ್ಯವಾಗಿ, ಚಟವಾಗಿ ಕಾಣಿಸಿಕೊಳ್ಳುವುದಿಲ್ಲ; ಬದಲಾಗಿ ತಮ್ಮ ಸಮಕಾಲೀನ ಸಂಸ್ಕೃತಿಯ ವರ್ತಮಾನ ಹಾಗೂ ಭವಿಷ್ಯವನ್ನು ಕುರಿತ ಕವಿಯ ಚಿಂತನೆಗಳ ಸತ್ಪಲವಾಗಿ ಕಾಣಿಸಿಕೊಳ್ಳುತ್ತದೆ. “ಕೇಳುವ ಕೆಲವು ವಿದ್ಯಾರ್ಥಿಗಳಿಗೆ ವಸ್ತ್ರ ಕೂಮಿವೀಳೆಯವಿತ್ತು ಮುದದಿ ಅಳುಗೊಳಿಸಿ ಪ್ರತಿದಿವಸದಿ ತರ್ವಾಯ ಹೇಳುವ ವಿಬುಧರೊಪಿದರು.”೭ “ಸಣ್ಣವರಂಗಳನೋದಿಸುತಿರ್ಪ ಕಪೆಯ ಕೋಲಣ್ಣಗಳ ಚೌಪದಿಗವಿತೆ” (III-೪೧) ಎಂಬ ವಿವರಣೆ ಒಂದು ಸಂಸ್ಕೃತಿಯ ಶೈಕ್ಷಣಿಕ ಮೌಲ್ಯಗಳ ಮೇಲೆ ಎಂಥ ಪರಿಣಾಮಕಾರಿಯಾದ ಬೆಳಕು ಚೆಲ್ಲುತ್ತಿದೆ ಎನ್ನುವುದನ್ನು ಗಮನಿಸಬೇಕು. ಮಹಿಳಾ ಸಂಸ್ಕೃತಿಯ ಚಿತ್ರವಂತೂ ಕನಕದಾಸರ ಪ್ರಗತಿಪರ ದೃಷ್ಟಿಗೆ ಬಹುದೊಡ್ಡ ನಿದರ್ಶನ. “ಕರ್ಮಕಾಂಡವ ತಿರಸ್ಕರಿಸಿ ತತ್ವಾರ್ಥದ ಮರ್ಮವನರಿದ ಪ್ರಾಜ್ಞೆಯರು ಧರ್ಮಾರ್ಥ ಕಾಮಮೋಕ್ಷಂಗಳ ಪಡೆದರು ಭರ್ಮಾಂಬರನ ಭಕ್ತಿಯಲಿ” (III-೩೯) ಇಷ್ಟರಮಟ್ಟಿಗೆ ಮಹಿಳೆಯರ ಧಾರ್ಮಿಕ-ಶೈಕ್ಷಣಿಕ ಸ್ವಾತಂತ್ರ್ಯವನ್ನು ಎತ್ತಿ ಹೇಳುವ ಮೂಲಕ ಒಂದು ಜನಾಂಗದ ಸಂಸ್ಕೃತಿಯ ಅಸಾಧಾರಣ ಔನ್ನತ್ಯವನ್ನು ಎತ್ತಿ ಹೇಳಿದ ಕಾವ್ಯ ಬ್ರಾಹ್ಮಣ ಸಾಹಿತ್ಯದ ಚರಿತ್ರೆಯಲ್ಲಿ ಮತ್ತೊಂದಿಲ್ಲ. ಅದರೊಂದಿಗೆ ಮಹಿಳೆಯರ ನಯ-ವಿನಯ-ಸೌಜನ್ಯಮಯವಾದ ರೀತಿ-ನಡಾವಳಿಕೆಯ ಕೌಟುಂಬಿಕ ಚಿತ್ರವೂ ಅಷ್ಟೇ ಅನನ್ಯ ಮತ್ತು ಆತ್ಮೀಯ. ಸುದೀರ್ಘ ಕಾಲದನಂತರ ಬಂದ ಪ್ರದ್ಯುಮ್ಮನನ್ನು ಗುರುತಿಸಲಾಗದ ಕೃಷ್ಣನ ಅರಮನೆಯಗಾರ್ತಿಯರು ಪರಪುರುಷರನ್ನು ನೋಡಬಾರದೆಂದು ಒಳಹೋಗುವದು (XIII-೨೦), ಕೃಷ್ಣನೊಡನೆ ಬರುತ್ತಿದ್ದ ಬಲರಾಮನ ನುಡಿ ಕೇಳಿ ಹೆಂಗಳೆಯರೆಲ್ಲ ಭಯಭಕ್ತಿಯಿಂದ ಎದ್ದು ಒಳಗೆ ನಡೆಯುವುದು (XIII-೨೮) ಇತ್ಯಾದಿಗಳು ಅಂದಿನ ಮಹಿಳಾ ಸಂಸ್ಕೃತಿಯ ಮೌಲ್ಯಗಳ ಮಾದರಿಗೆ ಒಂದೆರಡು ಉದಾಹರಣೆಗಳು. ಧಾರ್ಮಿಕ ಆಚರಣೆ, ಸಂಪ್ರದಾಯ, ನಂಬಿಕೆಗಳ ನಿರೂಪಣೆಯಲ್ಲೂ ಈ ಕವಿಗೆ ಅಂಥದೇ ಶ್ರದ್ದೆ, ಹೆರಿಗೆಯ ಸಂದರ್ಭದಲ್ಲಿ ಮಗುವನ್ನು ಮರದಲ್ಲಿಟ್ಟು ೭. ಮೋಹನ ತರಂಗಿಣಿ : ಸಂ-ಆರ್.ಸಿ. ಹಿರೇಮಠ, ಪ್ರ: ಕ.ವಿ.ವಿ. ಧಾರವಾಡ: (೧೯೭೩), -೭೩. ಮುಂದಿನ ಎಲ್ಲ ಉದಾಹರಣೆಗಳನ್ನು ಇದೇ ಕೃತಿಯಿಂದ ಎತ್ತಿಕೊಳ್ಳಲಾಗಿದೆ.