ಪುಟ:Kanakadasa darshana Vol 1 Pages 561-1028.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೯೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ನೆಲೆ ೭೯೫ ಬಾಣಾಸುರನನ್ನು ಮೊದಲುಗೊಂಡು ಶಿವನ ಸೈನ್ಯವೆಲ್ಲ ಹಂತಹಂತವಾಗಿ ತತ್ತರಿಸುತ್ತ ಹತಬಲವಾಗುತ್ತ ಹೋಗುವದು. ಕೃಷ್ಣನ ಪರಿವಾರವೆಲ್ಲ ಹಂತ ಹಂತವಾಗಿ ವಿಜಯವನ್ನು ಸಂಪಾದಿಸುವದು, ವಾಗ್ಯುದ್ದದಲ್ಲಿ ಶಿವನ ವಿಡಂಬನೆಯನ್ನೇ ಮುಂದುಮಾಡಿ ಶ್ರೀಹರಿಯ ನಿಂದಾಸ್ತುತಿ ಗೈಯುವದು, ಕೊನೆಗೆ ಸ್ವತಃ ಶಿವನೇ “ಕೇಶವನೆಡೆಗೆನ್ನೆಡೆಗೆ ಆವನೋರ್ವನು ದ್ವೇಷ ಬುದ್ದಿಯ ಮಾಡಿದರೆ ದೋಷಸಂಭವಿಸುವದು” (೪೦-೮೬) ಎಂದು ತನ್ನ ಭಕ್ತನಾದ ಬಾಣಾಸುರನಿಗೆ ಎಚ್ಚರಿಕೆ ಕೊಡುವದು, “ಹರನೊಳು ವಿಶ್ವಾಸವನ್ನು ಬಿಡದಿರು, ಚಕ್ರಧರನೊಳು ಭಕ್ತಿಯ ರಚಿಸು” ಎಂದು ಮಂತ್ರಿ ಕುಂಭಾಂಡ ಬಾಣನಿಗೆ ವಿವೇಕ ಹೇಳುವದು-ಇವೆಲ್ಲ ಕನಕದಾಸರ ಮತೀಯ ಭಾವನೆಗೆ ನಿದರ್ಶನಗಳು. ಹೀಗೆ ಬಾಣಾಸುರನೇ ಅಪರಾಧಿ ಎನ್ನುವಂತೆ, ನಡೆದೆಲ್ಲ ಅನಾಹುತಗಳಿಗೆ ಆತನನ್ನೇ ಜವಾಬ್ದಾರನನ್ನಾಗಿ ಮಾಡುವ ಮೂಲಕ, ಅಂದಿನ ಏರುಪೇರುಗಳಿಗೆ ಜವಾಬ್ದಾರಿಯನ್ನಾಗಿಮಾಡಿ ವಿವೇಕ ಹೇಳಿದಂತಿದೆ. ಆದರೆ ಬಾಣಾಸುರನ ಶಿವಪೂಜೆಯ ಸಂದರ್ಭದಲ್ಲಿ ವೀರಶೈವ ಧಾರ್ಮಿಕ ವಿಧಿ-ವಿಧಾನಗಳನ್ನು ಚಿತ್ರಿಸುವಲ್ಲಿ ಕನಕದಾಸರು ಪ್ರಕಟಿಸಿದ ಶ್ರದ್ದೆ ಅಸಾಧಾರಣ ಮತ್ತು ಆಶ್ಚರ್ಯಕರ. “ಶಿರದೆಡೆಯೊಳಗಿರ್ದ ಶಿವಲಿಂಗ ದೇವರ ಪರಮವಸ್ತವ ಬಿಚ್ಚಿ ತಗೆದುವರರತ್ಕಾಂಚಿತ ವೃಷಭ ಮುದ್ರೆಯನಿಟ್ಟುಕರಕಂಜದೊಳಗೆ ಸಾರ್ಚಿದನು” (೨೧-೨೨), “ಏಣಾಂಕಧರ ತನ್ನ ಭಕ್ತ ಕೀರ್ತಿಸುವ ಸುಜನವಾಕ್ಯಂಗಳ ಕೇಳು ಪ್ರಾಣಲಿಂಗದೊಳು ತಾನಾಗಿ ಮೈದೋರಿ ಬಾಣಾಸುರನ ಕಣ್ಮನಕೆ” ಎಂಬಲ್ಲಿಯ ಪೂಜಾ ಸಂದರ್ಭದ ಪ್ರಕ್ರಿಯೆ ಮತ್ತು ಪರಿಭಾಷೆ ಅತ್ಯಂತ ಗಮನಾರ್ಹ. ಹೀಗೆ ರಾಮಧಾನ್ಯ ಚರಿತೆ, ನಳ ಚರಿತೆ ಹಾಗೂ ಮೋಹನ ತರಂಗಿಣಿಯಲ್ಲಿ ಸಾಂದ್ರವಾಗಿ ಕಾಣಿಸಿಕೊಳ್ಳುವ ಕನಕದಾಸರ ಸಾಮಾಜಿಕತೆಯ ಆಸಕ್ತಿ ಅವರದೇ ಇನ್ನೊಂದು ಕೃತಿ 'ಹರಿಭಕ್ತಿಸಾರ'ದಲ್ಲಿ ಪ್ರಕಟಗೊಳ್ಳುವದಿಲ್ಲ. ಆ ಕಾವ್ಯದ ಉದ್ದೇಶವೂ ಅದಲ್ಲ. ತಲೆಬರಹವೇ ಸೂಚಿಸುವಂತೆ ಸಾಧಕನೊಬ್ಬನ ಭಕ್ತಿಯ ಆವೇಶ, ಉತ್ಕಟತೆ, ಆರ್ತತೆ, ಆತ್ಮನಿರೀಕ್ಷೆ, ಆತ್ಮನಿವೇದನೆ ಇತ್ಯಾದಿಗಳನ್ನು ಒಳಗೊಂಡ ಈ ಚಿಕ್ಕ ಕೃತಿ ಕನಕದಾಸರ ಬದುಕಿನ-ಉದ್ದೇಶದ ಮತ್ತೊಂದು ಮಗ್ಗುಲನ್ನು ಅನಾವರಣಗೊಳಿಸುವಂತಹದು ; ಭಕ್ತಿಯ ಸ್ವರೂಪ ಅದರ ಅಲೌಕಿಕ ಪರಿಣಾಮವನ್ನು ಕಟ್ಟಿಕೊಡುವಂತಹದು. ಒಟ್ಟಿನಲ್ಲಿ ಈ ಕೃತಿ ದಾಸಕೂಟದ ಧೋರಣೆಗಳಲ್ಲಿ ಒಂದಾದ ಹರಿಭಕ್ತಿಯ ಪ್ರಸಾರಕ್ಕೆ ಬದ್ಧವಾದದ್ದು; ಭಕ್ತಿ ಅದರ ಮೂಲ ಪ್ರೇರಣೆ. ಆದ್ದರಿಂದ ಸಾಮಾಜಿಕತೆಯ ನೆಲೆಯಿಂದ ಮಹತ್ವದ್ದೆನಿಸುವದಿಲ್ಲ. ಸಾಮಾಜಿಕತೆಯ ದೃಷ್ಟಿಯಿಂದ ಕನಕದಾಸರ ಕೀರ್ತನೆಗಳ ಪಾತ್ರ ಕಡಿಮೆಯೂ ಅಲ್ಲ ಕಡೆಗಣಿಸುವಂತಹದೂ ಅಲ್ಲ. ಆದರೆ ಕೀರ್ತನೆಗಳಲ್ಲಿಯ ಸಾಮಾಜಿಕ ಪ್ರಜ್ಞೆ ಹಾಗೂ ಅದರ ನೆಲೆಗಳು ಪ್ರಕಟಗೊಳ್ಳುವ ರೀತಿ ಮತ್ತು ವಿನ್ಯಾಸ ಮಾತ್ರ ಕಾವ್ಯಗಳಿಗಿಂತ ಬೇರೆಯಾದದ್ದು. ಮುಖ್ಯವಾಗಿ ಕೀರ್ತನೆಗಳ ಸ್ವರೂಪವೇ ಕಾವ್ಯಗಳಿಗಿಂತ ಬೇರೆಯಾದದ್ದು. ಹಾಗೆ ನೋಡಿದರೆ ಅವುಗಳಲ್ಲಿ ಕಾವ್ಯಾಂಶ ಎಷ್ಟೇ ಇರಲಿ, ವಚನಗಳಂತೆ ಕೀರ್ತನೆಗಳೂ ಕೂಡ ಕಾವ್ಯವೆಂದು ಗಣಿಸಲ್ಪಡುವದಿಲ್ಲ. ಸಾಮಾಜಿಕ ಅಥವಾ ವೈಯಕ್ತಿಕ ಅನುಭವಗಳ ಅಭಿವ್ಯಕ್ತಿಗೆ ಪೌರಾಣಿಕ ವಿಷಯ-ಸಾಮಗ್ರಿಗಳನ್ನು ಪ್ರತಿಮೆ, ರೂಪಕ, ಉಪಮೆ, ದೃಷ್ಟಾಂತ, ಅರ್ಥಾಂತರನ್ಯಾಸಗಳ ರೂಪದಲ್ಲಿ ವ್ಯಂಜಕ ಸಾಮಗ್ರಿಯನ್ನಾಗಿ ಬಳಸಿಕೊಳ್ಳ ಬಹುದು ; ಆದರೆ ಒಂದು ಇಡೀ ಪೌರಾಣಿಕ ಕಥಾವಸ್ತುವನ್ನೇ ಸಾಮಾಜಿಕತೆಯ ರೂಪಕವನ್ನಾಗಿ ಬಳಸಿಕೊಳ್ಳುವದು ಕಷ್ಟ ; ಇಂಥ ತಂತ್ರ ಕೀರ್ತನೆ ಸ್ವರೂಪಕ್ಕೆ, ಗಾತ್ರಕ್ಕೆ ಒಗ್ಗುವಂತಹದೂ ಅಲ್ಲ ಕೀರ್ತನೆಗಳು ತಮ್ಮ ಸಾಮಾಜಿಕ ಅನುಭವ ಚಿಂತನೆಗಳನ್ನು, ಎಷ್ಟೇ ಕಲಾತ್ಮಕವೆಂದರೂ ತಮ್ಮ ಅಭಿದಾವ್ಯಾಪಾರದ ಮೂಲಕವಾಗಿಯೇ ನೇರವಾಗಿ, ವಾಚ್ಯವಾಗಿ ಪ್ರಕಟಿಸಬಲ್ಲವು. ಜನಸಾಮಾನ್ಯರನ್ನು ತಲುಪಬೇಕಾದದ್ದರಿಂದ ಅದು ಅವಶ್ಯವೂ ಆಗಿತ್ತು, ಭಾವನಿಷ್ಠವಾದ ಕೀರ್ತನೆಗಳು ವಸ್ತುನಿಷ್ಠ ಕಾವ್ಯಗಳಂತೆ ತನ್ನ ಅನುಭವಗಳನ್ನು ವಿಭಾವಾನುಭಾವಗಳ ಮೂಲಕ ರಸರೂಪದಲ್ಲಿ ಆಸ್ವಾದನೆಗೆ ತಂದುಕೊಡುವಂಥವುಗಳೂ ಅಲ್ಲ. ಆದರೆ ಕೀರ್ತನೆಗಳಿಗಿರುವ ಎಲ್ಲ ಮಿತಿಗಳು ವಚನಸಾಹಿತ್ಯಕ್ಕೆ ಇದ್ದರೂ, ಸಾಮಾಜಿಕ ವಿಪ್ಲವದಲ್ಲಿ ತಮ್ಮನ್ನು ಪ್ರತ್ಯಕ್ಷವಾಗಿ ತೊಡಗಿಸಿಕೊಂಡಿದ್ದ ಆ ವಚನಕಾರರಿಗೆ ಇದ್ದ ಭಾವಾತ್ಮಕ ಮತ್ತು ವೈಚಾರಿಕ ನೆಲೆಗಟ್ಟು ದಾಸರಿಗೆ ಇರಲಿಲ್ಲ. ಅಲ್ಲದೆ ಸಮಾಜದ ಹಲವು ಸ್ತರದಿಂದ ಹರಿದು ಬಂದ ಭಾಷೆ ಮೂಲ ಭಾಷಾಪ್ರವಾಹಕ್ಕೆ ಅದಮ್ಯ ಶಕ್ತಿಯನ್ನು ಪೂರೈಸಿದ ಕಾರಣ ಶರಣರ ಅಭಿವ್ಯಕ್ತಿಗೆ ಎಂಥ ಮಿತಿಗಳನ್ನೂ ಅತಿಕ್ರಮಿಸುವ ದಮ್ಮು ಪ್ರಾಪ್ತವಾಗಿತ್ತು ; ಹಿಂದೆಂದೂ ಇಲ್ಲದ, ತಾವೇ ಸಂಪಾದಿಸಿಕೊಂಡ, ಅಭಿವ್ಯಕ್ತಿಯ ಸ್ವಾತಂತ್ರ್ಯವೂ ಇತ್ತು. ಇಂಥ ಎಲ್ಲ ಅವಕಾಶಗಳಿಂದಲೂ ವಂಚಿತವಾಗಿದ್ದ ಕೀರ್ತನೆಗಳಿಗೆ ಕನಕದಾಸರ ಆಗಮನದಿಂದ ಹೆಚ್ಚಿನ ಇಂಬುದೊರೆತಂತಾಯಿತು. ದಾಸರ ಭಾಷೆಗೆ, ಅಭಿವ್ಯಕ್ತಿಗೆ ಅದರ ಧಾರಣಶಕ್ತಿಗೆ ಒಂದು ಮಿತಿ ಇದ್ದಂತೆ