ಪುಟ:Kanakadasa darshana Vol 1 Pages 561-1028.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೯೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ನೆಲೆ ೭೯೭ ದಾಸರ ಅಭಿವ್ಯಕ್ತಿಯ ವಿಷಯಕ್ಕೂ, ಅವರ ಆಶಯ ಧೋರಣೆಗಳಿಗೂ ಇದ್ದ ಮಿತಿಯನ್ನು ಮರೆಯುವಂತಿಲ್ಲ. ತಮ್ಮವರಲ್ಲದವರನ್ನು, ತಮ್ಮದಲ್ಲದ್ದನ್ನು ಕುರಿತು ಅಂದಿನ ದಾಸಕೂಟದವರಾಗಲಿ, ವ್ಯಾಸಕೂಟದವರಾಗಲಿ ತಲೆಕೆಡಿಸಿಕೊಳ್ಳಲು ಹೋದವರೇ ಅಲ್ಲ. ಅನ್ಯರೊಂದಿಗೆ ವ್ಯಾವಹಾರಿಕ ಸಂಪರ್ಕ ಇಟ್ಟುಕೊಂಡಂತೆ ಅನ್ಯರ ಬಗೆಗಿನ ಅವರ ಕಳಕಳಿಯೂ ವ್ಯಾವಹಾರಿಕವಾಗಿತ್ತು. ಹಾಗಾಗಿ ಅವರ ಕೀರ್ತನೆಗಳಲ್ಲಿ ಸಾಮಾಜಿಕ ವಲಯವಿಸ್ತಾರಗೊಳ್ಳುವ ಸಂದರ್ಭವೇ ಒದಗಿ ಬರಲಿಲ್ಲ. ಇಂಥ ಪ್ರಸಂಗದಲ್ಲಿ ಕನಕದಾಸರ ಪ್ರಜ್ಞೆ ವಿಶಾಲ ಅನುಭವದ ಬಿಸಿಯಿಂದಾಗಿ ಉಕ್ಕಿ ಹೊರಚೆಲ್ಲಿತು ; ವಿಸ್ತಾರಗೊಂಡು ಕ್ರಿಯಾಶೀಲವಾಯಿತು. ಕನಕದಾಸರ ಕೀರ್ತನೆಗಳು ಅವರ ಬದುಕಿನ ವೈಯಕ್ತಿಕ ಅಂಶಗಳನ್ನು ಮೊದಲುಗೊಂಡು ಒಟ್ಟು ಸಮಾಜದ ಇತರ ಎಲ್ಲ ಸ್ತರಗಳ ಪಾರ್ಶ್ವಗಳೆಲ್ಲದರ ಶೋಧನೆಗೆ ತೊಡಗುವ ಮತ್ತು ಸಂಸ್ಕರಿಸುವ ಮಹತ್ವಾಕಾಂಕ್ಷೆಯನ್ನು ಪ್ರದರ್ಶಿಸುತ್ತವೆ. ತಮ್ಮ ಇತರ ಕಾವ್ಯಗಳಲ್ಲಿ ಸಾಮಾಜಿಕ ವಾಸ್ತವ ಅನುಭವಗಳ ನಿವೇದಕರಾಗಿ ಕಂಡರೆ, ಕೀರ್ತನೆಗಳ ಸಂದರ್ಭದಲ್ಲಿ ಸಮಾಜ ವಿಡಂಬಕರಾಗಿ ಕಾಣಿಸಿಕೊಳ್ಳುತ್ತಾರೆ. ಅಂದರೆ ಕಾವ್ಯದಲ್ಲಿ ಬರುವ ಸಾಮಾಜಿಕ ಪ್ರಜ್ಞೆ ಸಾಮಾನ್ಯವಾಗಿ ಒಂದು ಸಮಾಜದ ಗುಣ ದೋಷಗಳೆರಡರಿಂದಲೂ ಕೂಡಿಕೊಂಡು ವಿಮರ್ಶೆಯಾಗಿ ಪರಿಣಮಿಸುತ್ತದೆ. ಕೀರ್ತನೆಗಳಲ್ಲಿ ಸಾಮಾಜಿಕ ದೋಷಗಳೇ ಮುಂದಾಗಿ ಟೀಕೆಯ, ವಿಡಂಬನೆಯ, ಉಪದೇಶದ ರೂಪದಲ್ಲಿ ನಿಲ್ಲುತ್ತದೆ, ವಿಮರ್ಶೆಯಾಗುವದಿಲ್ಲ. ಒಟ್ಟಿನಲ್ಲಿ ಕನಕದಾಸರ ಕೀರ್ತನೆಗಳಲ್ಲಿ ತಮ್ಮ ವೈಯಕ್ತಿಕ ಗುಣದೋಷಗಳೊಂದಿಗೆ ಸಮಾಜದ ಮೇಲು-ಕೀಳು, ಬಡವಬಲ್ಲಿದ, ಉಚ್ಚ-ನೀಚ ಇತ್ಯಾದಿಯಾಗಿ ಎಲ್ಲ ವರ್ಗಗಳ, ಮತಗಳ ತಳಬುಡವನ್ನೆಲ್ಲ ಸೋಸಿ ನೋಡಿದ್ದಾರೆ. ಮೇಲುವರ್ಗದವರ ಮತಾಂಧತೆ, ಅಹಂಕಾರ, ಪ್ರತಿಷ್ಟೆ, ಡಾಂಭಿಕತೆಯಂಥ ಪ್ರವೃತ್ತಿಗಳು, ಕೆಳವರ್ಗದವರ ಅಜ್ಞಾನ, ಅಂಧಶ್ರದ್ದೆ, ಮೌಡ್ಯಗಳಂಥ ಅನಿಷ್ಟಗಳು ಅವರ ಕೀರ್ತನೆಯ ವಿಷಯಗಳಾಗುತ್ತವೆ. ಆದರೆ ಒಂದು ಸ್ಥಗಿತ ವ್ಯವಸ್ಥೆಯ ಹದ್ದುಬಂದಿಯಲ್ಲಿ ನಿಂತುಕೊಂಡೇ ಆ ಅಲ್ಲ ವಿಷಯಗಳಿಗೆ ಸ್ಪಂದಿಸುತ್ತಾರೆ. ವರ್ಣಾಶ್ರಮವನ್ನು, ಪುನರ್ಜನ್ಮ ಹಾಗೂ ಕರ್ಮವಾದವನ್ನು ಒಪ್ಪಿಕೊಳ್ಳುವ ಕನಕದಾಸರೂ ವರ್ಗಾತೀತ, ಜಾತ್ಯತೀತ ಸಮಾಜವನ್ನು ಆಶಿಸಿದವರಲ್ಲ. ಒಬ್ಬ ಕವಿಯಾಗಿಯೂ ಸ್ಥಗಿತ ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುವವರಲ್ಲ. ಅವರ ದೃಷ್ಟಿಯಲ್ಲಿ ಸಮಾಜವೆಂದ ಮೇಲೆ ಬಗೆಬಗೆಯ ಸ್ತರಗಳು, ವರ್ಗಗಳು ಅನಿವಾರ್ಯ; ಆದರೆ ಅವೆಲ್ಲ ಪರಸ್ಪರ ಆಕ್ರಮಣಕ್ಕೆ ತೊಡಗದೆ, ಒಂದನ್ನೊಂದು ದೂಷಿಸದೆ-ಶೋಷಿಸದೆ, ಪರಸ್ಪರ ಅನ್ನೋನ್ಯವಾಗಿ ಸೌಹಾರ್ದತೆಯಿಂದ ಬದುಕಬೇಕು; ಆ ಮೂಲಕ ಒಟ್ಟು ಸಮಾಜದಲ್ಲಿ ಭಾವೈಕ್ಯತೆ ಮೂಡಬೇಕು ಎಂಬುದು ಅವರ ಉದಾರ-ಸಾತ್ವಿಕ ಆಶಯವಾಗಿತ್ತು. ಅಂದಿನ ಸಮಾಜದ ಎಲ್ಲ ಸ್ತರಗಳಲ್ಲಿ ಅನಿಷ್ಟಗಳಿದ್ದರೂ ಮುರಿದು ಕಟ್ಟುವ, ಹರಿದು ಹೊಸೆಯುವ ಸಂದರ್ಭ ಅವರಿಗೆ ಅನಿವಾರ್ಯವೆನಿಸಲಿಲ್ಲ. ಬಹಳವಾದರೆ ಒಟ್ಟು ಸಮಾಜವನ್ನೇ ವೈಷ್ಣವ ಮುದ ಆವರಣಕ್ಕೆ ಒಳಪಡಿಸುವದು. ಬೆಂದ ಸಮಾಜವನ್ನು ಹರಿಭಕ್ತಿಯ ಜೋಗುಳಹಾಡಿ ಜೊಂಪು ತರಿಸಿ ಸಮಾಧಾನಪಡಿಸುವದಾಗಿತ್ತು. ತಮ್ಮ ವೈಯಕ್ತಿಕ ಇತಿಮಿತಿಗಳ ಹಿನ್ನೆಲೆಯಲ್ಲಿ ಅವರಿಗೆ ಇದುವೇ ವಿವೇಕ ಸಮ್ಮತವಾದ ಮಾರ್ಗವೂ ಆಗಿತ್ತು. ಇದರ ಪ್ರತಿಫಲವಾಗಿ ಬಹಳಷ್ಟು ಸಲ ಕನಕದಾಸರ ಕೀರ್ತನೆಗಳಲ್ಲೂ ನೈತಿಕ ಪಜೆಗೆ ನಿದರ್ಶನವೆನ್ನುವಂತೆ-ಸುಳ್ಳುಹೇಳಬೇಡ, ಕಳವು ಮಾಡಬೇಡ, ಪರಧನಪರಸ್ತ್ರೀಯರಿಗೆ ಆಸೆಪಡಬೇಡ, ಹೆಚ್ಚಿನದನ್ನು ಬಯಸಬೇಡ, ಪಡೆದದ್ದೆಲ್ಲ ಪೂರ್ವಜನ್ಮದ ಕರ್ಮಫಲ, ಹರಿಯನ್ನು ಆರಾಧಿಸುವ, ಮೋಕ್ಷವನ್ನು ಬಯಸು ಇತ್ಯಾದಿ ಮಾಮೂಲಿ ಎನ್ನುವಂಥ ಉಪದೇಶಗಳೂ ಕೇಳಿಬರುತ್ತವೆ. ಆದರೆ ಇಂಥ ಮಾತುಗಳು ಕೇವಲ ಉಪದೇಶದ ಮಟ್ಟಕ್ಕೆ ನಿಲ್ಲದೆ ಕಳಕಳಿಯಾಗಿ ನಿಲ್ಲುತ್ತದೆ. ಇಂಥ ಸಾಮಾನ್ಯ ನೀತಿ-ಬೋಧೆಯನ್ನು ಮೀರಿ, ದಾಸಸಾಹಿತ್ಯದಲ್ಲಿಯೇ ಅಪರೂಪವೆನ್ನುವಂಥ ಸಾಮಾಜಿಕ ಸಮಸ್ಯೆಗಳನ್ನು ಕುರಿತ ತೀವ್ರ ಸಂವೇದನೆಗಳು, ಚಿಂತನೆಗಳೂ ಚುರುಕಾಗಿ ಸಿಡಿದುಬರುತ್ತವೆ. ಅದರಲ್ಲೂ ಕುಲದ ಪ್ರಶ್ನೆ ಬಂದಾಗಲೆಲ್ಲ ಕನಕದಾಸರು ನೊಂದಜೀವಿಯಾಗಿ, ಒಬ್ಬ ದಾರ್ಶನಿಕರಾಗಿ, ಕಳಕಳಿಯ ಪ್ರಜ್ಞಾವಂತರಾಗಿ ನಮ್ಮೆದುರು ನಿಲ್ಲುತ್ತಾರೆ. “ಕುಲಕುಲ ಕುಲವೆಂದು ಕುಲವೆನ್ನುತಿಹರು ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ” ಎಂದು ಕೇಳಿ “ಆತ್ಮ ಯಾವಕುಲ ಜೀವ ಯಾವಕುಲ, ತತೇಂದ್ರಿಯ ಕುಲಪೇಳಿರಯ್ಯ” ಎಂಬ ತರ್ಕಬದ್ದ ಪ್ರಶ್ನೆಗಳಿಂದ ಮೂಲಕ್ಕೆ ಕೈಹಾಕಿ ಜಾತೀಯತೆಯ ಆಹ್ವಾನಗಳನ್ನು ಎದುರಿಸುತ್ತಾರೆ. “ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ” ಎಂದು ನಿರುದ್ವಿಗ್ನರಾಗಿಯೇ ಪ್ರಶ್ನಿಸುತ್ತ “ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ” ಎಂದು ಉಚ್ಚಕುಲದವರು ತಮ್ಮನ್ನು ತಾವೇ ಮುಟ್ಟಿಕೊಂಡು ನೋಡುವಂತೆ ಮಾಡುತ್ತಾರೆ. ಹೀಗೆ ಹೇಳುವಾಗ ದಾಸರು ಶರಣರನ್ನು ನೆನಪಿಗೆ ತರುತ್ತಾರೆ.