ಪುಟ:Kanakadasa darshana Vol 1 Pages 561-1028.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕನ ಸಾಮಾಜಿಕ ವಿಡಂಬನೆ ೮೦೧ ಕನಕನ ಸಾಮಾಜಿಕ ವಿಡಂಬನೆ ಟಿ. ಮಹಾಬಲ ಅಡಿಗ ಪರಂಪರಾಗತ ಮೂಢನಂಬಿಕೆಗಳನ್ನು ಸಮಾಜದಿಂದ ಕೀಳುವುದು ಕಷ್ಟದ ಕೆಲಸ, ಅಂಧಶ್ರದ್ದೆಯು, ಜನತೆಯಲ್ಲಿ ಅಜ್ಞಾನದಿಂದ, ಶಾಸ್ತ್ರಗಳನ್ನು ವಿಚಾರಿಸದೆ ಆಚರಿಸಬೇಕು ಎಂಬ ನಂಬಿಕೆಯಿಂದ, ಶಾಸ್ತ್ರದಲ್ಲಿ ಹೇಳಿದುದನ್ನು ಬೇರೊಂದಾಗಿ ಅರ್ಥಮಾಡಿಕೊಳ್ಳುವುದರಿಂದ ಇಲ್ಲವೆ ಸ್ವಾರ್ಥದಿಂದ ಶಾಸ್ತ್ರಾರ್ಥವನ್ನು ಯಥಾರ್ಥವಾಗಿ ವ್ಯಾಖ್ಯಾನಿಸದೆ ಇರುವುದರಿಂದ ಉಂಟಾಗುತ್ತದೆ. ಕಾಯಿಲೆಗಳು ಭೂತ ಪ್ರೇತಗಳ ಬಾಧೆಯಿಂದ ಉಂಟಾಗುವವು ಎನ್ನುವವರನ್ನು ಮೊದಲನೆಯ ವರ್ಗಕ್ಕೂ, ಬೈಬಲ್ಲಿನಲ್ಲಿ ಹೇಳುವುದಕ್ಕೆ ವಿರುದ್ಧವಾಗಿ ಹೇಳುವರೆಂದು ವಿಜ್ಞಾನಿಗಳನ್ನು ಶಿಕ್ಷಿಸಹೊರಟ ಜನತೆಯನ್ನು ಎರಡನೆಯ ವರ್ಗಕ್ಕೂ, ಪರಮ ವೈದಿಕರೆನಿಸಿಕೊಂಡು “ವಸುಧೈವ ಕುಟುಂಬಕಮ್” ಎನ್ನುವ ಶಾಸ್ತ್ರ ಓದಿ, 'ತತ್ವಮಸಿ'ಯ ಅರ್ಥ ತಿಳಿದು, 'ಸರ್ವ೦ ಖಲ್ವಿದು ಬ್ರಹ್ಮಂ' ಎಂದು ಪಠಿಸುತ್ತಾ, ಬುದ್ದಿಜೀವಿಯಾದ ಮಾನವಜನ್ಮ ದೊಡ್ಡದೆಂದೂ ದೇಹ ದೇಗುಲದಲ್ಲಿ ಪರಮಾತ್ಮ ನೆಲಸಿರುವುದರಿಂದ 'ಶಿವೋಹಂ' “ಅಹಂ ಬ್ರಹ್ಮಾಸ್ಮಿ' ಎಂದು ಪ್ರತಿಯೊಬ್ಬನಿಗೂ ತನ್ನನ್ನು ಪವಿತ್ರವಾಗಿಸಿಕೊಂಡು ದೇವಮಾನವನಾಗುವ ಅವಕಾಶ ಇರುವುದೆಂದೂ ತಿಳಿಯುತ್ತಾ, ಸಭೆಸಮಾರಂಭಗಳಲ್ಲಿ “ಸರ್ವೇಜನಾಃ ಸುಖಿನೋಭವಂತು” ಎಂದು ಘೋಷಿಸಿ, ನಿಜ ಜೀವನದಲ್ಲಿ ಬಾಹ್ಯ ಮಡಿವಂತಿಕೆಯಿಂದ, ಮಾನವನನ್ನು ಮನೆಬಾವಿ ಮುಟ್ಟಲು ಬಿಡದೆ, ಕೀಳುಜಾತಿಯೆಂದು ಪ್ರಾಣಿಗಳಿಗಿಂತಲೂ ಹೀನವಾಗಿ ಕಾಣುವ ಜನತೆಯನ್ನು ಮೂರನೆಯ ವರ್ಗಕ್ಕೂ ಸೇರಿಸಬಹುದು. ಅಜ್ಞಾನಿಗಳನ್ನು ತಿಳಿಯಹೇಳಿ ಸುಧಾರಿಸಬಹುದು. ಆದರೆ ತಿಳಿದೋ ತಿಳಿಯದೆಯೋ ಸ್ವಾರ್ಥದಿಂದಲೋ ಬಹಳ ಮುಂದುವರಿದ ಮೇಧಾವಿಗಳಂತೆ ನಟಿಸುತ್ತಾ ಅಂಧಶ್ರದ್ಧೆಯಿಂದ ಇರುವವರನ್ನು ತಿದ್ದುವುದು ಮಹಾಪ್ರಯಾಸದ ಕೆಲಸ. ಇಂಥ ಜನ, ಬಹುಮಂದಿ ಅಜ್ಞಾನಿಗಳಿರುವ ಯಾವುದೋ ಒಂದು ಕಾಲದಲ್ಲಿ ಹುಟ್ಟಿಕೊಂಡ ಒಂದು ಮತದ ಕಟ್ಟುಪಾಡಿನಿಂದ, ಈ ವಿಜ್ಞಾನಯುಗದ ಲೋಕಾನುಭವದಿಂದ ಮುಂದುವರಿಯುತ್ತಿರುವ ಸಮಾಜವನ್ನು ನಿಯಂತ್ರಿಸಲು ನೋಡುವುದಾದರೆ ಅದು ಸಮಾಜಕ್ಕೆ ತಗಲಿರುವ ಒಂದು ಮೌಡ್ಯದ ಜಾಡ್ಯವಾಗುತ್ತದೆ. ಅಂಥ ಮೌಡ್ಯದ ಕಳೆಯನ್ನು ಕಿತ್ತು ಮಾನವೀಯತೆಯನ್ನು ಬೆಳೆಸಲು ಶ್ರಮಿಸಿದ ಭಾರತದ ಬಹುಮಂದಿ ಸಮಾಜ ಸುಧಾರಕರಲ್ಲಿ ವಿಡಂಬನೆಯಿಂದ ತನ್ನ ಧೈಯವನ್ನು ಸಾಧಿಸಿ ಕೃತಕೃತ್ಯನಾದ ಕನ್ನಡ ನಾಡಿನ ಕನಕನ ಸ್ಥಾನ ವಿಶಿಷ್ಟವಾದುದು. ಭಾರತದಲ್ಲಿ ಆದಿಯಿಂದ ಈವರೆಗಿನ ಪ್ರಮುಖ ಸಮಾಜ ಸುಧಾರಕರ ಕಡೆಗೆ ಒಮ್ಮೆ ವಿಹಂಗಮ ದೃಷ್ಟಿ ಬೀರಿದರೆ, ಅದು ಕನಕನ ಸ್ಥಾನಮಾನಗಳನ್ನು ಊಹಿಸಲು ತುಂಬ ಸಹಾಯಕವಾಗುವುದು, ಆರ್ಯರು ತಮ್ಮ ವರ್ಣ ಪದ್ಧತಿಯಂತೆ, ಕೊನೆಯ ವರ್ಣದವರನ್ನು ಮಾತ್ರ ಹಿಂದುಳಿದವರು ಎಂದು ಭಾವಿಸದೆ, ಅವರ ಆಗಮನಕ್ಕೆ ಮೊದಲೇ ಇಲ್ಲಿ ಇದ್ದು, “ಭಾರತ ಪುರಾತನ ಸಂಸ್ಕೃತಿ ಉಳ್ಳ ದೇಶ” ಎಂದು ಹೇಳಿಸಲು ಕಾರಣರಾದ ಆದಿವಾಸಿಗಳು ಹಾಗೂ ದ್ರಾವಿಡರನೂ ಅನಾರ್ಯರು (ಅಜ್ಞಾನಿಗಳು) ಎಂದು ಭಾವಿಸಿ ಶೂದ್ರರೆಂದೇ ಪರಿಗಣಿಸಿಕೊಂಡು ಬಂದರು. ಇದರಿಂದ ಭಾರತದಲ್ಲಿ ಬಹಳ ಹಿಂದಿನಿಂದಲೇ ಬಹು ಸಂಖ್ಯೆಯ ಒಂದು ವರ್ಗ ಹಿಂದುಳಿಯುತ್ತಾ ಬಂದಿದೆ ಎಂದು ಸ್ಪಷ್ಟವಾಗುತ್ತದೆ. ಆರ್ಯರ ನಿಯಮದಂತೆ ಮೊದಲ ವರ್ಣದವರು ಹುಟ್ಟಿನಿಂದಲೇ ದೈವಾನುಗ್ರಹಕ್ಕೆ ಪಾತ್ರರಾದ ಭೂಸುರರೂ, ಕೊನೆಯ ವರ್ಣದವರು ದುರದೃಷ್ಟಶಾಲಿಗಳಾದ ಶೂದ್ರರೂ ಆಗಿದ್ದರು. ಹಿಂದುಳಿದವರ ಮಾನವೀಯತೆಗೆ ಬೆಲೆಯೇ ಇರುತ್ತಿರಲಿಲ್ಲ ಕೇಳುವುದು ಕೋಗಿಲೆಯ ಸ್ವರವಾದರೂ, ಕಾಗೆ ! ಇನ್ನೇನು ! ಎಂಬಷ್ಟು ಅವರ ಕಡೆಗೆ ಉಪೇಕ್ಷೆ. ರತ್ನವೊಂದು ಕೆಸರಲ್ಲಿದ್ದರೆ, ಅದನ್ನು ಹೆಕ್ಕುವ ಯೋಚನೆ ಮಾಡದೆ, ಕೊಳೆಯಿದೆ ಎಂಬ ಕಾರಣದಿಂದ ಮತ್ತೂ ತುಳಿದು ಅಡಗಿಸುವುದೇ ಆಗಿನ ಜನದ ಪ್ರವೃತ್ತಿಯಾಗಿತ್ತು. ಮೇಲು ವರ್ಣದವರ ಸೇವೆ ಮಾಡುವುದೇ ಕೀಳುವರ್ಣದವರಿಗೆ ಭಾಗ್ಯ, ಹಿಂದುಳಿದವರನ್ನು ದುಡಿಸಿ ಪ್ರಯೋಜನ ಹೊಂದುವುದೇ ಮುಂದುವರಿದವರ ಆಗಿನ ಧರ್ಮ, ಹುಲಿಸಿಂಹಗಳ ಮರಿಗಳಾದರೂ ಕುರಿ ಹಿಂಡಿನೊಡನೆ ಬೆಳೆಯುತ್ತಾ ಬಂದಿದ್ದರೆ ತಮ್ಮತನವನ್ನು ಮರೆತು ಅವು ಕುರಿಗಳಂತೆಯೇ ವರ್ತಿಸುವ ಹಾಗೆ ಮುಂದುವರಿದವರ ಪ್ರಭಾವದಿಂದ ಸಾವಿರಾರು ವರ್ಷಗಳಿಂದ ಹಿಂದುಳಿದವರು ತಮ್ಮ ಮನುಷ್ಯತ್ವವನ್ನು ಕೂಡಾ ಮರೆತು ಪಶುಜೀವನ ನಡೆಸುತ್ತಾ ಬಂದಿದ್ದಾರೆ.