ಪುಟ:Kanakadasa darshana Vol 1 Pages 561-1028.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಮುಂಡಿಗೆಗಳು ೫೮೭ ಕನಕದಾಸರ ಮುಂಡಿಗೆಗಳು ವೈ.ಸಿ. ಭಾನುಮತಿ ಬುದ್ಧಿಶಕ್ತಿಯ ಪ್ರದರ್ಶನ ಮಾನವನ ಮೂಲಪ್ರವೃತ್ತಿಗಳಲ್ಲೊಂದು. ಆತ ಹೆಚ್ಚು ಹೆಚ್ಚು ನಿಶಿತಮತಿಯಾದಂತೆಲ್ಲ ಈ ಬಗೆಯ ಅಭಿವ್ಯಕ್ತಿಗೆ ಬೇರೆ ಬೇರೆ ಮಾಧ್ಯಮಗಳನ್ನು ಕಂಡುಕೊಂಡ. ಜನಪದ ಒಗಟುಗಳು ಸೃಷ್ಟಿಯಾದದ್ದು ಇಂಥ ಒಂದು ಹಿನ್ನೆಲೆಯಲ್ಲಿದೆ. ಮುಂದೆ ಒಗಟುಗಳು ಬುದ್ಧಿಯ ಕಸರತ್ತಾಗಿ, ಸವಾಲಾಗಿ, ಎದುರಾಳಿಯ ಬುದ್ಧಿಶಕ್ತಿಯನ್ನು ಪರೀಕ್ಷಿಸುವ ಒರೆಗಲ್ಲಾಗಿ ಸ್ಪಷ್ಟರೂಪ ಪಡೆದವು. ದೈನಂದಿನ ರಂಜನೆಯಲ್ಲಿ ಸ್ಥಾನಗಳಿಸಿಕೊಂಡವು. ಒಗಟು ಅಥವಾ ಒಗಟಿನಂಥ ಸಮಸ್ಯಾತ್ಮಕ ಹೇಳಿಕೆಗಳು ಪ್ರಪಂಚದ ಎಲ್ಲ ಭಾಷೆಗಳಲ್ಲಿಯೂ ಕಂಡುಬರುತ್ತವೆ. ಗ್ರೀಕ್ ಪುರಾಣಗಳಲ್ಲಿ ಪ್ರಸಿದ್ಧವಾಗಿದ್ದ 'ಸ್ಪಿಂಕ್ಸ್' ಮನುಷ್ಯನ ತಲೆ ಸಿಂಹದ ದೇಹದಂಥ ವಿಚಿತ್ರಬಗೆಯ ರೂಪದೊಂದಿಗೆ ತನ್ನ ಸಮಸ್ಯಾತ್ಮಕ ಪ್ರಶ್ನೆಗಳಿಂದ ಜನರನ್ನು ಬೆದರಿಸುತ್ತಿತ್ತು. ಮಾನವನ ಬಾಲ್ಯ, ಯೌವನ, ಮುಪ್ಪು ಈ ಸ್ಥಿತ್ಯಂತರಗಳನ್ನು ಕುರಿತು ಸ್ಪಿಂಕ್ಸ್ ಒಡ್ಡಿದ ಸಮಸ್ಯೆಯೊಂದು ಪ್ರಚಲಿತವಿದೆ. ಈಡಿಪಸ್ ಸ್ಪಿಂಕ್ಸ್ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಜಯಶೀಲನಾದಾಗ ಅದು ಆತ್ಮಾರ್ಪಣ ಮಾಡಿಕೊಂಡಿತೆಂದು ಕತೆ. ಅದೇನೆ ಇರಲಿ ಸ್ಪಿಂಕ್ಸ್ ಇಂಥ ಒಗಟಿಗೆ ಪ್ರತೀಕ. ಭಾರತೀಯ ಸಂದರ್ಭಕ್ಕೆ ಬಂದಾಗ ವೇದಗಳಲ್ಲಿ ಕ್ವಚಿತ್ತಾಗಿಯಾದರೂ ಈ ತೆರನ ರಚನೆಗಳನ್ನು ಕಾಣಬಹುದು. ಋಗೈದದ ಚತ್ವಾರಿ ಶೃಂಗಾಸ್ತಯೋಸ್ಯ ಪಾದಾ ದ್ವೇಶೀರ್ಷೆ ಸಪ್ತ ಹಸ್ತಾಸೋ ಅಸ್ಯ ಶ್ರೀಧಾ ಬದ್ದೋ ವೃಷಭೋರೋರ ವೀತಿ ಮಹೋದೇವೋ ಮರ್ತ್ಯಮರ್ತ್ಯಾ೦ ಆನಿವೇಶ* ಎಂಬ ಶ್ಲೋಕವೊಂದು ಈ ನಿಟ್ಟಿನಲ್ಲಿ ಉತ್ತಮ ನಿದರ್ಶನ. ವೇದಗಳಲ್ಲಿ ಕಂಡು ಬರುವ ಇಂಥ ಸಮಸ್ಯೆಗಳಿಗೆ ಯಾಸ್ತ್ರ ಮತ್ತು ದುರ್ಗಾಚಾರ್ಯರು 'ಪ್ರವಸ್ಥಿತ' ಎಂದು ಹೆಸರಿಸಿದ್ದಾರೆ. ಇದಕ್ಕೆ ಸಂವಾದಿಯಾಗಿ ಬೌದ್ದರಲ್ಲಿ 'ಸಂಧಾಭಾಷಾ' ಎಂಬ ಮಾತು ರೂಢಿಯಲ್ಲಿದೆ. ಮಹಾಭಾರತದ 'ವ್ಯಾಸಗ್ರಂಥಿ' 'ಯಕ್ಷಪ್ರಶ್ನೆಗಳು, ಬೇತಾಳ ಪಂಚವಿಂಶತಿಯಲ್ಲಿ ಬರುವ ಬೇತಾಳನ ಪ್ರಶ್ನೆಗಳು ಕೂಡ ಇದೇ ಸಾಲಿಗೆ ಸೇರುತ್ತವೆ. ಜನಪದ ಸಾಹಿತ್ಯದಲ್ಲಿ ನಿಶ್ಚಿತರೂಪ ಪಡೆದಿದ್ದ ಒಗಟುಗಳ ತಾಂತ್ರಿಕತೆಗೆ ಮಾರುಹೋದ ಶಿಷ್ಟಕವಿಗಳು ತಮ್ಮ ಕಾವ್ಯಗಳಲ್ಲಿ ಅವುಗಳ ರೂಪಕತೆಯನ್ನು ವಿನ್ಯಾಸವನ್ನು ಬಳಸಿಕೊಂಡರು. ಚಿತ್ರಕಾವ್ಯಗಳಲ್ಲಿ ಶ್ಲೇಷೆ, ಚಮತ್ಕಾರ, ಗೂಢರೂಪದ ನಿರೂಪಣೆಗೆ ಆದ್ಯತೆ. ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಂತಿ ಹಂಪರ ಸಮಸ್ಯೆ ಈ ದಿಸೆಯಲ್ಲಿ ಪ್ರಾಚೀನವಾದುದು. ಆ ಬಳಿಕದಲ್ಲಿ ಅಲ್ಲಮಪ್ರಭುಗಳ ಬೆಡಗಿನ ವಚನಗಳು, ದಾಸರ ಕೀರ್ತನೆಗಳು, ಸತ್ಯೇಂದ್ರಚೋಳನ ಸಾಂಗತ್ಯ, ಮರುಳೇಶ ಸಾಂಗತ್ಯ, ಕಲ್ಲೆಲಿಂಗೇಶ್ವರ ಚಾರಿತ್ರ ಇವೇ ಮೊದಲಾದ ಕಾವ್ಯಗಳಲ್ಲಿ ಒಗಟುಗಳ ಪದ್ಯರೂಪ ಎಡೆ ಪಡೆದಿವೆ. ಕಾವ್ಯ ಕೃತಿಗಳಲ್ಲಿ ಮರ ಗಿಡ ಬಳ್ಳಿಗಳನ್ನು ವರ್ಣಿಸುವಾಗ ಒಗಟುಗಳ ವಿನ್ಯಾಸವನ್ನು ಬಳಸಿಕೊಂಡಿದ್ದರೆ, ಅಲ್ಲಮಪ್ರಭು ಮತ್ತು ಹರಿದಾಸರಲ್ಲಿ ಅಧ್ಯಾತ್ಮ ನಿರೂಪಣೆಗೆ ಈ ತೆರನ ಗೂಢರೂಪದ ರಚನೆಗಳು ಸಾಧನವಾಗಿರುವುದನ್ನು ಗಮನಿಸಬೇಕು. ಹೀಗೆ ರಹಸ್ಯವಾಗಿ ಹೇಳುವಂಥ ಕ್ರಮಕ್ಕೆ ಒಗಟು, ಒಡಪು, ಬೆಡಗು, ಪ್ರಹೇಳಿಕೆ, ಮುಂಡಿಗೆ, ಭಾರೂಡ ಮೊದಲಾದ ನಾನಾ ಹೆಸರುಗಳಿವೆ. ಅಲ್ಲಮ ಪ್ರಭುಗಳು ತಮ್ಮ ವಚನಗಳನ್ನು ಬೆಡಗು ಎಂದು ವಿಶ್ಲೇಷಿಸಿದ್ದಾರೆ. ಹರಿದಾಸರ ಧೈಯೋದ್ದೇಶಗಳು ಅಲ್ಲಮರಿಗಿಂತ ಭಿನ್ನವಾಗಿಲ್ಲದಿದ್ದರೂ ಬೆಡಗಿಗೆ ಪರ್ಯಾಯವಾಗಿ ಇಲ್ಲಿ 'ಮುಂಡಿಗೆ' ರೂಪವನ್ನು ಬಳಸಲಾಗಿದೆ. ದಾಸಸಾಹಿತ್ಯದಲ್ಲಿ ಕನಕದಾಸ, ಪುರಂದರ ದಾಸ, ಪ್ರಸನ್ನ ವೆಂಕಟದಾಸ ಮತ್ತು ಭಾಗಣ್ಣದಾಸ ಇವರೇ ಮೊದಲಾದವರು ತಮ್ಮ ಕೃತಿಗಳಲ್ಲಿ ಆನುಷಂಗಿಕವಾಗಿ ಮುಂಡಿಗೆಗಳನ್ನು ತಂದಿದ್ದಾರೆ, ಇವುಗಳಲ್ಲಿ ಕನಕದಾಸರ ಮುಂಡಿಗೆಗಳಿಗೆ ವಿಶಿಷ್ಟಸ್ಥಾನವಿದೆ. ಎರಡು ತಲೆ ಏಳು ಕೈಗಳು ಮೂರೆಳೆಯಿಂದ ಕಟ್ಟಿದ ಎತ್ತು ಗುಟುರು ಹಾಕುತ್ತಿದೆ ಅನಂತ ಮಹಿಮೆಯ ದೇವನು ಮರ್ತ್ಯಕ್ಕೆ ಇಳಿದಿದ್ದಾನೆ

  • ಡಾ. ಕೆ. ಕೃಷ್ಣಮೂರ್ತಿಯವರ ಅನುವಾದ ಹೀಗಿದೆ : ನಾಲ್ಕು ಕೊಂಬುಗಳು ಮೂರು ಕಾಲುಗಳು