ಪುಟ:Kanakadasa darshana Vol 1 Pages 561-1028.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ೮೨೧ ಕನಕಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ಡಾ. ಸಂಧ್ಯಾ ರೆಡ್ಡಿ ಕನಕದಾಸರನ್ನು ಪುರಂದರದಾಸರೊಂದಿಗೇ ಕೀರ್ತನಕಾರರೆಂದು ಗುರುತಿಸಿದರೂ ಸಹ ಅವರೊಬ್ಬ ಗಮನಾರ್ಹ ಕವಿ ಎಂಬುದನ್ನು ಮರೆಯಬಾರದು. ಕೀರ್ತನೆಗಳನ್ನುಳಿದು ಅವರು ರಚಿಸಿದ ಕೃತಿಗಳ ಸಂಖ್ಯೆ ಐದು, ಇದರಲ್ಲಿ ಸಾಂಗತ್ಯದಲ್ಲಿ ರಚಿತವಾಗಿರುವ ಮೋಹನ ತರಂಗಿಣಿ ಹಾಗೂ ಭಾಮಿನೀ ಷಟ್ನದಿಯಲ್ಲಿ ರಚಿತವಾಗಿರುವ ನಳ ಚರಿತ್ರೆ ಪೌರಾಣಿಕ ಕಥಾವಸ್ತುವನ್ನೊಳಗೊಂಡ ಕಾವ್ಯಗಳು. “ಹರಿನಾಮ ಸಂಕೀರ್ತನೆ, ಭಕ್ತಪರಮಾತ್ಮರ ಸಂಬಂಧ, ಸಾಧಕನ ಆತ್ಮಶೋಧನೆ, ಆರ್ತತೆ, ನಿರಾಶೆ, ಕಳವಳ, ಉದ್ವಿಗ್ನತೆ, ಸಂಶಯ, ಛಲ, ಆತ್ಮ ಸಮರ್ಪಣೆ, ಸಂಸಾರನಿರಸನ, ವೈರಾಗ್ಯ ವ್ಯಾಕುಲ ಇವೇ ಮೊದಲಾದ ಮಾನಸಿಕ ವ್ಯಾಪಾರಗಳು ಆತ್ಮಾನುಸಂಧಾನದ ರೀತಿ ನೀತಿಗಳು ಹರಿಭಕ್ತಿಸಾರದ ಸಾಮಗ್ರಿ, ಶ್ರೀರಾಮಚಂದ್ರನ ಚರಿತ್ರೆ, ರಾಗಿ ಭತ್ತಗಳ ಜಗಳ ಹಾಗೂ ಅದು ಪರಿಹಾರಗೊಂಡ ರೀತಿಯ ನಿರೂಪಣೆ, ರಾಮಧಾನ್ಯ ಚರಿತ್ರೆಯ ವಸ್ತು, ಸಂಸಾರವೊಂದಿಗರಾಗಿ ಕಾರಣಾಂತರಗಳಿಂದ ಹರಿದಾಸರಾಗಿ ಪರಿವರ್ತನೆ ಹೊಂದಿದ ಕನಕದಾಸರು ಜೀವನಾನುಭವ ಹಾಗೂ ಸಾಮಾಜಿಕ ಪ್ರಜ್ಞೆಗಳನ್ನು ತಮ್ಮ ಕೃತಿಗಳಲ್ಲಿ ಅರ್ಥಪೂರ್ಣವಾಗಿ ಬಳಸಿಕೊಂಡಿದ್ದಾರೆ. ದಾಸರಾದ ನಂತರ ಅವರು ನಿತ್ಯಜೀವನದ ಘಟನೆಗಳ ಬಗ್ಗೆ ಯಾವ ಧೋರಣೆ ತಳೆದರು ಎಂಬುದನ್ನು ತಿಳಿಯುವ ದೃಷ್ಟಿಯಿಂದಲೂ ಇವರ ಕೃತಿಗಳ ಅಧ್ಯಯನ ಮುಖ್ಯವಾಗುತ್ತದೆ. ಕನಕದಾಸರು ಮೋಹನ ತರಂಗಿಣಿಯಂಥ ಶೃಂಗಾರಪರವಾದ ಕಾವ್ಯವನ್ನು ನಳಚರಿತ್ರೆಯಂಥ ಆದರ್ಶ ಪ್ರೇಮದ ಕಾವ್ಯವನ್ನು ರಚಿಸಿದ್ದಾರೆ ಎಂಬುದೂ ಸಹ ಗಮನಾರ್ಹ ಸಂಗತಿ. ಆದ್ದರಿಂದಲೇ ಅವರ ಹೆಣ್ಣಿನ ಪರಿಕಲ್ಪನೆ ಹೇಗಿರಬಹುದು ಎಂಬುದು ಕುತೂಹಲಕಾರಿಯಾದ ಅಧ್ಯಯನವಾಗುತ್ತದೆ. ಮೋಹನ ತರಂಗಿಣಿಯಲ್ಲಿ ಹೆಸರಿಗೆ ತಕ್ಕಂತೆ ಶೃಂಗಾರರಸಭರಿತವಾದ ಸಂದರ್ಭಗಳು ಬಹಳವಾಗಿವೆ. ಶ್ರೀಕೃಷ್ಣ ಹಾಗೂ ರುಕ್ಕಿಣಿಯರ ವಿವಾಹೋತ್ತರ ಪ್ರಣಯ ಶೃಂಗಾರ, ಪ್ರದ್ಯುಮ್ಮ-ರತಿ, ಅನಿರುದ್ದ-ಉಷಾ ಇವರ ಪ್ರಣಯ ಜೀವನ, ಕಾಮನನ್ನು ಕಳೆದುಕೊಂಡ ರತಿಯ ವಿಲಾಪ ಇವು ಈ ಕಾವ್ಯದ ಮುಖ್ಯ ಸಂದರ್ಭಗಳಾದರೂ ಪುರವರ್ಣನೆ ಸೂಳೆಗೇರಿಯ ವರ್ಣನೆ, ಜಲಕ್ರೀಡಾ ವರ್ಣನೆ ಮುಂತಾದ ಅಷ್ಟಾದಶ ವರ್ಣನೆಗಳ ಸಂದರ್ಭದಲ್ಲೆಲ್ಲ ಹೆಣ್ಣಿನ ಪ್ರಸ್ತಾಪವೇ ಮುಖ್ಯವಾಗಿರುವುದರರಿಂದ ಕನಕದಾಸರ ಹೆಣ್ಣಿನ ಪರಿಕಲ್ಪನೆಯನ್ನು ತಿಳಿಯಲು ಇವೂ ಮುಖ್ಯ ಆಧಾರಗಳಾಗುತ್ತವೆ. ಮುಖ್ಯ ಪಾತ್ರಗಳಾದ ರುಕ್ಕಿಣಿ, ರತಿ, ಉಷೆ ಹಾಗೂ ಅವಳ ಗೆಳತಿ ಚಿತ್ರಲೇಖೆಯರಂತೆ ಬೇಡಿತಿಯರು ಪುರಸ್ತ್ರೀಯರು ಹಾಗೂ ಪರಿಚಾರಿಕೆಯರೂ ಸಹ ಅಧ್ಯಯನದಲ್ಲಿ ಮುಖ್ಯವಾಗುತ್ತಾರೆ. ಏಕೆಂದರೆ ಶೃಂಗಾರರಸ ಓತಪ್ರೋತವಾಗಿ ಹರಿಯುವ ಈ ಕಾವ್ಯದಲ್ಲಿ ಕನಕದಾಸರು ತಮ್ಮ ವರ್ಣನೆಗಳನ್ನು ಪ್ರಮುಖ ಸ್ತ್ರೀ ಪಾತ್ರಗಳಿಗಷ್ಟೆ ಮೀಸಲಾಗಿಟ್ಟಿಲ್ಲ. ಅಷ್ಟೇ ಅಲ್ಲ, ಮೋಹನ ತರಂಗಿಣಿ ಕವಿಯು ಒಬ್ಬ ಚೆಲುವೆಯಾದ ಹೆಣ್ಣಿಗೆ ನಿರೂಪಿಸುತ್ತಿರುವ ಧಾಟಿಯಲ್ಲಿ ರಚಿತವಾಗಿದ್ದು ಪ್ರತಿಸಂಧಿಯ ಆರಂಭದಲ್ಲಿ ಕವಿಯು ಈ ಹೆಣ್ಣಿನೊಂದಿಗೆ ಮಾತಾಡುವ ಸಂಭಾಷಣಾ ರೂಪದ ಎರಡು ಪದ್ಯಗಳಿವೆ. ಈ ಹೆಣ್ಣನ್ನು ಕವಿ ವಿಧವಿಧವಾಗಿ ಸಂಬೋಧಿಸುವ ರೀತಿಯಲ್ಲಿ ಆತನ ಶೃಂಗಾರಪ್ರಿಯತೆ ಮತ್ತು ಸರಸ ಮನೋಭಾವ ವ್ಯಕ್ತವಾಗುತ್ತದೆ. 'ನನ್ನ ಎದೆಯೆಂಬ ಹೂವಿಗೆ ತುಂಬಿಯಂತಿರುವ ಕೂದಲುಳ್ಳ ಚೆಲುವೆಯೇ ಕೇಳು, 'ಮದನಾಗಮದ ಶ್ರೀಕಾರಗಳಂತಿರ್ಪ ಸುದತಿ...' 'ಜಾಣೆಯರನ್ನು ಕಂಡುಮನಸೋಲದಂತೆ ನನ್ನ ಚಿತ್ತವನ್ನು ಒತ್ತೆಗೊಂಡ ರಮಣೀಮಣಿಯೆ ಇಗೋ ಸಕ್ಕರೆಯಂಥ ನುಡಿಗಳನ್ನು ಕೇಳು”-ಹೀಗೆ ಈ ಕಾವ್ಯದ ಆರಂಭದಿಂದಲೇ ಕನಕ ಹೆಣ್ಣಿನ ವಿಧವಿಧವಾದ ವರ್ಣನೆಗೆ ತೊಡಗುತ್ತಾನೆ. ಮೋಹನ ತರಂಗಿಣಿಯಲ್ಲಿ ಕಥೆ ನೆಪಮಾತ್ರಕ್ಕೆ, ಹೆಣ್ಣಿನ ಸೌಂದರ್ಯ ವರ್ಣನೆಯೇ ಪ್ರಮುಖ ಉದ್ದೇಶ ಎಂದು ಹೇಳಬಹುದಾದಷ್ಟು ಹೆಣ್ಣಿನ ವರ್ಣನೆ ಇಲ್ಲಿ ತುಂಬಿದೆ. ಸಾಂಪ್ರದಾಯಿಕವಾದ ವರ್ಣನೆ ನೂರಕ್ಕೆ ತೊಂಬತ್ತರಷ್ಟಿದ್ದರೂ ಈ ಚೌಕಟ್ಟಿನಲ್ಲಿಯೇ, ಕೆಲವು ಕಡೆ ಆತ ತೋರುವ ವೈಶಿಷ್ಟ ಉಲ್ಲೇಖನೀಯ. ಈ ಮಾತಿಗೆ ಉದಾಹರಣೆಯಾಗಿ ಸೌರಾಷ್ಟ್ರ ವರ್ಣನೆಯ ಕೆಲವು ಪದ್ಯಗಳನ್ನು ನೋಡೋಣ. ಸೀರೆಯ ನಿರಿಗೆಗೆ ಗಂಟು ಕಟ್ಟುತ್ತಾರೆ. ಕೈಗೆ ಕಂಕಣಗಳನ್ನು ಕಟ್ಟುತ್ತಾರೆ.