ಪುಟ:Kanakadasa darshana Vol 1 Pages 561-1028.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಪೌರಾಣಿಕ ಪ್ರಜ್ಞೆ ೮ರ್೪ ಕನಕದಾಸರಲ್ಲಿ ಪೌರಾಣಿಕ ಪ್ರಜ್ಞೆ ಮಳಲಿ ವಸಂತಕುಮಾರ್ ಕನಕರು ನೆಲದೊಡಲ ಚೇತನ; ಅಪ್ಪಟ ಶೂದ್ರ ಸತ್ಯ ಅವರಲ್ಲಿ ವಿಜೃಂಭಣೆಗೊಂಡಿದೆ. ಅವರು ಯೋಗಿ ಮಾತ್ರವಲ್ಲ ಕ್ರಾಂತಿಕಾರಿ ಕೂಡ. ಕ್ರಾಂತಿಯೋಗಿ ಎಂಬ ಮಾತು ಕನಕರಿಗೆ ಅನ್ವರ್ಥ, ವ್ಯಾಸರೂ, ಪುರಂದರದಾಸರೂ ಅವರನ್ನು ಮೆಚ್ಚಿ ಹಾಡಿ ಹೊಗಳಿದ್ದಾರೆ, ಶೂದ್ರನೊಬ್ಬ ಮಹಾಯೋಗಿಯಾಗಿ ಉತ್ತಮ ವರ್ಗಕ್ಕೆ ಸೇರಿದ ಸಂತರಿಂದ ಪ್ರಶಂಸೆಗೆ ಒಳಗಾಗುವ ಒಂದು ಐತಿಹಾಸಿಕ ದಾಖಲೆ ಇಲ್ಲಿ ಕಾಣಸಿಗುತ್ತದೆ. ಪುರಾಣದಲ್ಲಿ ವಿಶ್ವಾಮಿತ್ರರ ವಿಚಾರವನ್ನು ಬಿಟ್ಟರೆ ಬೇರೆ ಇಂತಹ ಪ್ರಸಂಗ ಕಂಡುಬರುವುದು ಬಹಳ ಅಪರೂಪ. ತಪಸ್ಸು ಮತ್ತು ಜ್ಞಾನ ಹಿಂದೆ ಉತ್ತಮರು ಎನಿಸಿಕೊಂಡವರ ಸ್ವತ್ತಾಗಿತ್ತು ತಪಸ್ವಿಗಳ ವಿರುದ್ಧವಾದ ಆಂದೋಳನ ರಾಕ್ಷಸರಲ್ಲಿ ಕಂಡುಬಂತು. ಆದರೆ ದೊರೆತ ಫಲ ಉದ್ದೇಶಿತವಾಗಲಿಲ್ಲ. ತಪಸ್ವಿಗಳು ಆರಾಧನೆಗೂ ರಾಕ್ಷಸರು ನಿಂದನೆಗೂ ಗುರಿಯಾದರು. ತಪಸ್ಸಿನ ವರ್ಜನೆಯಾಗಲಿ, ಅದರ ವಿರುದ್ಧವಾದ ಪ್ರತಿಭಟನೆಯಾಗಲಿ ಅಜ್ಞಾನದ ಪ್ರತೀಕ. ತಪಸ್ಸನ್ನು ವಶಪಡಿಸಿಕೊಳ್ಳುವ ಕ್ರಿಯೆ ಜ್ಞಾನದ ದ್ಯೋತಕ. ಭೌತಿಕಬಲ ಸಂಪನ್ನರಾದ ಕನಕರು ಅದರ ಮತಿಯನ್ನು ಅರಿತಿದ್ದರು. ಹೀಗಾಗಿ ಅದನ್ನು ವರ್ಜಿಸಿ ಬೌದ್ದಿಕ ಬಲವನ್ನು ಅವಲಂಬಿಸಿದರು. ಉತ್ತಮರ ಸ್ವತ್ತಾಗಿದ್ದ ತಪಸ್ಸನ್ನು ತಮ್ಮದಾಗಿಸಿಕೊಂಡು ಋಷಿತ್ವಕ್ಕೇರಿದರು. ನಿಜವಾದ ಬಂಡಾಯ ಋಷಿಗಳ ನಿಂದನೆಯಲ್ಲ. ಋಷಿತ್ವದ ಸಂಪಾದನೆ ಎಂಬುದನ್ನು ಸ್ವತಃ ಸಾಧಿಸಿ ತೋರಿಸಿದರು. ರಣರಂಗದಲ್ಲಿ ಹೋರಾಡಿ ಯಾವುದನ್ನು ರಜೋಗುಣ ಸಾಧಿಸಲಾರದೆ ಹೋಯಿತೊ (ಕನಕ ದಳದಲಿ ಕಲೆತನೆಂದರೆ ಫೌಜು ಕನಕುಮನಕಾಗುವುದು) ಅದನ್ನು ಸಗುಣ ಗೆದ್ದುಕೊಂಡಿತು. 'ತಾಮಸ ಗುಣನಾಶ ಸಾತ್ತಿಕೋಲ್ಲಾಸ' ಎಂಬ ರಾಮಾನುಜಾ ಚಾರ್ಯರನ್ನು ಕುರಿತ ತಮ್ಮ ಸ್ತುತಿ ತಮಗೂ ಅನ್ವಯವಾಯಿತು. ಕುಲಾಂಧರ ಮಧ್ಯೆ ಇದ್ದಾಗಲೂ ಆತ್ಮ ಯಾವ ಕುಲ ? ಜೀವ ಯಾವ ಕುಲ ? ಎಂಬ ಜಿಜ್ಞಾಸೆಯಿಂದಲೇ ಕುಲವನ್ನು ಮೆಟ್ಟಿನಿಂತ ಈ ವ್ಯಕ್ತಿಯ ತಾತ್ವಿಕ ದರ್ಶನೋತ್ಪನ್ನ ತರ್ಕ ಅನುಪಮವಾದುದು ; ಲೌಕಿಕದಿಂದ ಅಧ್ಯಾತ್ಮದತ್ತ ಸಾಗಿದುದು ಗಮನಾರ್ಹವಾದುದು. ಅಧ್ಯಾತ್ಮದ ಕಡೆ ಸಾಗುವವನಿಗೆ ಪುರಾಣ ಪ್ರಜ್ಞೆಯ ಗಟ್ಟಿಯಾದ ಬೆನ್ನೆಲುಬಿರುತ್ತದೆ. ಭಾರತೀಯರಲ್ಲಿ ಅಧ್ಯಾತ್ಮ ಬಹಳ ಮಟ್ಟಿಗೆ ಪುರಾಣಪ್ರೇರಿತವಾದುದು. ಕನಕದಾಸರ ಆಧ್ಯಾತ್ಮ ಸಿದ್ದಿಗೆ ಅವರಿದ್ದ ಕಾಲಧರ್ಮಗಳೂ ಕಾರಣವಾಗುತ್ತವೆ. ಉಚ್ಚ ನೀಚವೆಂಬ ಪರಿಕಲನೆ ಮೂಡಿ ಬರುವುದು ಸಹ ಪರಿಸರದಿಂದ, ಹದಿನಾರನೆಯ ಶತಮಾನದ ಕನ್ನಡನಾಡು ಭಕ್ತಿಯ ಬೀಡು. ಆಗಿನ ಚಕ್ರವರ್ತಿ ಶ್ರೀಕೃಷ್ಣದೇವರಾಯ ಸ್ವತಃ ಭಕ್ತ, ವ್ಯಾಸಪೀಠವಂತೂ ಭಕ್ತಾಗ್ರೇಸರ ಕೇಂದ್ರಸ್ಥಾನವಾಗಿ ಭಗವತ್ ಕೀರ್ತನೆಗಳಿಂದ ಆವೃತವಾಗಿತ್ತು. ಹರಿದಾಸರು ಕೀರ್ತನೆಗಳಿಂದ ಭಗವತ್ ಮಹಿಮೆಯನ್ನು ಹಾಡಿ ಹೊಗಳುತ್ತಿದ್ದರು. ಹೀಗಾಗಿ ಅವರ ರಚನೆಗಳು ಪ್ರಧಾನವಾಗಿ ಪೌರಾಣಿಕ ಪ್ರತಿಮೆ, ಉಪಮೆ ಮತ್ತು ಸಾಮತಿಗಳಿಂದ ಕೂಡಿರುತ್ತಿದ್ದವು. ದಾಸರ ಅಂತರಂಗ ಮತ್ತು ಬಹಿರಂಗ ಜೀವನವನ್ನೆಲ್ಲ ಪೌರಾಣಿಕ ವಿಷಯಗಳು ಆವರಿಸಿದ್ದವು. ಅವರ ಜೀವನ ಧೋರಣೆಗಳಿಗೂ ಸಹಾ ಪುರಾಣವೇ ಮಾಧ್ಯಮವಾಯಿತು. ಆದರೆ ಕನಕರು ಪುರಾಣವನ್ನು ಕೇವಲ ಪುರಾಣಕ್ಕಾಗಿ ತರಲಿಲ್ಲ. ಕಥೆಯ ಪುನರಾವರ್ತನೆ ಕನಕರ ಉದ್ದೇಶವಲ್ಲ. ಜೀವನದ ವಾಸ್ತವಿಕತೆಯ ಚಿತ್ರಕ್ಕೆ ಪುರಾಣದ ಚೌಕಟ್ಟು ಹಾಕಿದ್ದಾರೆ. ಸಮಕಾಲೀನ ಬದುಕು ಪುರಾಣ ಪ್ರಜ್ಞೆಯಲ್ಲಿ ಅಭಿವ್ಯಕ್ತಿಯನ್ನು ಪಡೆದಿದೆ. ಮೋಹನ ತರಂಗಿಣಿಯಂತಹ ಶೃಂಗಾರ ಕಾವ್ಯದಲ್ಲೂ ವಿಜಯನಗರದ ಇತಿಹಾಸ ಇಣುಕು ಹಾಕಿದೆ. ರಾಮಧಾನ್ಯ ಚರಿತ್ರೆಯಲ್ಲಿ ರಾಮ, ಗೌತಮ, ಹನುಮ ಮೊದಲಾದ ಪುರಾಣ ಪುರುಷರೇ ಪಾತ್ರಧಾರಿಗಳಾದರೂ ಸಹ ಅಲ್ಲಿ ಒತ್ತು ಬಿದ್ದಿರುವುದು ಬಡವರ ಆಹಾರವಾದ ರಾಗಿಗೆ, ಶ್ರೀಮಂತಿಕೆಯ ವಿರುದ್ಧವಾದ ಬಂಡಾಯ ಧ್ವನಿ ಇಲ್ಲಿ ಪುರಾಣಾಂತರ್ಗತವಾಗಿ ಮೊಳಗಿದೆ. ಭಗವತ್ ಕೀರ್ತನೆಗಳಲ್ಲೂ ಸಹ ಕುಲ ಕುಲ ಕುಲವೆಂದು ಹೊಡೆದಾಡಿದಿರಿ ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ? ಬಲ್ಲಿರಾ? ಎಂಬ ಸುಧಾರಣಾ ಭಾವ ವ್ಯಕ್ತವಾಗಿದೆ. ನಳಚರಿತ್ರೆಯಲ್ಲಿ ಇಂದ್ರ ಅಗ್ನಿ ವರುಣ, ಯಮ ಮೊದಲಾದ ದೇವತೆಗಳು ಪಾತ್ರಗಳಾಗಿ ಬಂದರೂ ಸಹ ಕೃತಿ ಮಾನವ ಪ್ರೇಮದ ಅಮರತ್ವವನ್ನು ಸಾರುತ್ತದೆ. ಕನಕದಾಸರ ಯಾವುದೇ ಕೃತಿ ಪೌರಾಣಿಕ