ಪುಟ:Kanakadasa darshana Vol 1 Pages 561-1028.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೫೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಪೌರಾಣಿಕ ಪ್ರಜ್ಞೆ ೮೫೧ ಪ್ರಜ್ಞೆಯಿಂದ ಹೊರತಾಗಿಲ್ಲ. ಆದರೆ ಉಳಿದ ಕೃತಿಗಳಿಗಿಂತ ಮೋಹನ ತರಂಗಿಣಿ ಕೃತಿಯ ಪೌರಾಣಿಕ ಆವರಣ ವಿಸ್ತ್ರತವಾದುದು. ಸಮಸ್ತ ಬ್ರಹ್ಮಾಂಡವೇ ಇಲ್ಲಿನ ಕಾವ್ಯಕ್ಷೇತ್ರವಾಗಿದೆ. ಹರಿಹರ ಬ್ರಹ್ಮಾದಿಗಳು, ದೇವದಾನವರು, ಮತ್ತು ಇಲ್ಲಿನ ಪಾತ್ರವರ್ಗ, ದೇವ ದೈತ್ಯ ಮತ್ತು ಮರ್ತ್ಯ ಲೋಕಗಳಲ್ಲಿ ಕ್ರಿಯೆ ಜರುಗುತ್ತವೆ. ಭಾರತ, ಭಾಗವತ, ಹರಿವಂಶ, ವಿಷ್ಣುಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ಇದರ ಕಥೆಯ ಬಿಳುಲುಗಳು ಚಾಚಿಕೊಂಡಿವೆ. ಇದನ್ನೊಂದು ಮಹಾಕಾವ್ಯವನ್ನಾಗಿ ಮಾಡುವ ಮಹದಾಸೆ ಕನಕದಾಸರಿಗೆ ಇದ್ದಂತೆ ತೋರುತ್ತದೆ. ಉನ್ನತ ಪೌರಾಣಿಕ ಕಲ್ಪನೆಯ ವಸ್ತುವನ್ನು ಆರಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಕೃತಿ ಯಾವುದೇ ಆಗಲಿ, ವಸ್ತು ಯಾವುದೇ ಆಗಲಿ ಯಾವ ಪಾತ್ರವೇ ಆಗಲಿ ಅಲ್ಲಿ ಕನಕತನ ಒಂದುಂಟು. ದೇವರ ಆರಾಧಕರಾದರೂ, ಕನಕರು ದಾನವರನ್ನಾಗಲಿ, ಮಾನವರನ್ನಾಗಲಿ ಎಲ್ಲಿಯು ಕಳಪೆಗೈಯದೆ ಇರುವುದು ಗಮನಾರ್ಹವಾದುದು. ಸಾಮಾನ್ಯವಾಗಿ ಸಂಸ್ಕೃತ ಮಹಾಕಾವ್ಯಗಳಲ್ಲಿ ರಾಕ್ಷಸರನ್ನು ನೀಚರಂತೆಯೂ, ದೇವತೆಗಳನ್ನು ಉದಾತ್ತರಂತೆಯೂ ಚಿತ್ರಿಸಿ ದೇವತೆಗಳ ವ್ಯಕ್ತಿತ್ವವನ್ನ ವೈಭವೀಕರಿಸುವುದು ಕಂಡುಬರುತ್ತದೆ. ಆದರೆ ದಾನವರಲ್ಲಿನ ಉದಾತ್ತತೆಯನ್ನು ಪ್ರಕಾಶಗೊಳಿಸಿ ಪಾತ್ರಗಳಲ್ಲಿನ ಘನತೆಯನ್ನು ಹೆಚ್ಚಿಸಿದ್ದು ಕನಕರ ವೈಶಿಷ್ಟ್ಯ. ಇದಕ್ಕೆ ಅನೇಕ ನಿದರ್ಶನಗಳು ಮೋಹನ ತರಂಗಿಣಿಯಲ್ಲಿ ದೊರೆಯುತ್ತವೆ. ಶಂಬರಾಸುರ ತನಗೆ ಪ್ರದ್ಯುಮ್ಮನಿಂದ ಮರಣವಿದೆ ಎಂಬ ಭಯದಿಂದ ಆ ಶಿಶುವನ್ನು ಅಪಹರಿಸಿದರೂ ಸಹ ಅದನ್ನು ಕೊಲ್ಲಲಾರ. ಆ ಹಸುಗೂಸಿನ ಬಗ್ಗೆ ಅವನಿಗಿರುವ ಅಂತಃಕರಣ, ಮಾನವೀಯತೆ ಮತ್ತು ಉದಾರತೆಗಳು ಅನುಪಮವಾದುವುಗಳು. ತಾನೆ ಆ ಮಗುವಿಗೆ ಸಕಲ ಶಸ್ತ್ರಾಸ್ತ್ರ ವಿದ್ಯೆಗಳನ್ನು ಕಲಿಸುತ್ತಾನೆ. ಎಲ್ಲವನ್ನು ಕಲಿತ ಪ್ರದ್ಯುಮ್ಮ ಶಂಬರನನ್ನು ಕೊಂದು ಬರುತ್ತಾನೆ. ಇಲ್ಲಿ ದಾನವತ್ವ ದೇವತ್ವವನ್ನು ಮೀರಿನಿಂತಿರುವುದನ್ನು ನೋಡುತ್ತೇವೆ. ಕವಿಯ ಆರಾಧ್ಯ ದೈವವಾದ ಶ್ರೀಕೃಷ್ಣನೇ ಕೃತಿಯ ನಾಯಕ ಬಾಣಾಸುರ ಪ್ರತಿನಾಯಕ. ಆದರೆ ಬಾಣಾಸುರನಲ್ಲಿ ಖಳನ ಯಾವೊಂದು ಅಂಶವೂ ಕಂಡು ಬರುವುದಿಲ್ಲ. ಶಿವನೇ ಇವನ ಭಕ್ತಿಗೆ ಮೆಚ್ಚಿ ಬಂದು ಬಾಗಿಲು ಕಾದ. ಕಾವ್ಯದುದ್ದಕ್ಕೂ ಹರಿಭಕ್ತಿಯ ಪಾರಮ್ಯ ಕಂಡುಬಂದರೂ ಸಹ ಅಷ್ಟೇ ಪ್ರಾಧಾನ್ಯತೆಯನ್ನು ಹರಪೂಜೆಗೂ ಕೊಟ್ಟಿರುವುದರಲ್ಲಿ ಕನಕರ ಭಾಗವತ ದೃಷ್ಟಿ ಎದ್ದು ಕಾಣುತ್ತದೆ. ಕೃಷ್ಣ ಕಥಾನಾಯಕನಾದರೂ ಆತನನ್ನು ಕರ್ನಾಟಕ ಸಾಮ್ರಾಜ್ಯದ ರಮಾರಮಣನೆನಿಸಿದ ಶ್ರೀಕೃಷ್ಣದೇವರಾಯನೊಂದಿಗೆ ಅಭೇದ್ಯವಾಗಿ ಹೋಲಿಸಿರುವುದು ಕಂಡುಬರುತ್ತದೆ. ಇಲ್ಲಿ ಕನಕರು ಪಂಪ ಪೊನ್ನ ರನ್ನರ ಮಾರ್ಗದಲ್ಲಿಯೇ ನಡೆದಿದ್ದಾರೆ. ಶ್ರೀಕೃಷ್ಣಚರಿತೆ ಎಂದು ಕರೆದಿರುವ ಈ ಕೃತಿಯಲ್ಲಿ ಚಿತ್ರಿತವಾಗಿರುವ ದ್ವಾರಕೆ ವಿಜಯನಗರದ ಪ್ರತಿಕೃತಿಯಾಗಿದೆ. ಕನಕರು ವಿಜಯನಗರದಲ್ಲಿ ಕಣ್ಣಾರೆ ಕಂಡ ಜೀವನವನ್ನು ಇಲ್ಲಿ ಎರಕ ಹೊಯ್ದಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಸಾಲು ಮರಗಳು, ತುಂಬಿತುಳುಕುವ ಕೆರೆ ಬಾವಿಗಳೂ, ಹರಿಯುವ ನದಿಗಳು, ಬೆಳೆದು ನಿಂತ ತೋಟಗಳು, ಕಬ್ಬಿನ ಗದ್ದೆಗಳು, ಬೆಲ್ಲವನ್ನು ತಯಾರಿಸುವ ಆಲೆಯ ಮನೆಗಳು, ಅತಿಥಿಗಳಿಂದ ತುಂಬಿರುವ ಧರ್ಮ ಛತ್ರಗಳು, ಅಗ್ರಹಾರಗಳು, ವೀರಮಾನ್ಯ ಪುರಗಳು ಅಂದಿನ ಕರ್ಣಾಟಕದ ಚಿತ್ರವನ್ನು ಕಣ್ಣಿಗೆ ಕಟ್ಟುತ್ತವೆ. ದಾರಿಯ ಪಕ್ಕದ ಮರದ ನೆರಳಿನಲ್ಲಿ ಬೆಲ್ಲದ ಪಾನಕವನ್ನೂ, ಕೆನೆಮೊಸರುಗಳಿಂದ ಕೂಡಿದ ಬುತ್ತಿಯನ್ನೂ ಅಲ್ಲಲ್ಲಿ ಇಟ್ಟುಕೊಂಡು ಪಯಣಿಗರನ್ನು ಕರೆದು ಪ್ರೀತಿಯಿಂದ ಉಣಬಡಿಸುವ ಚಿತ್ರ ಕರ್ಣಾಟಕದಲ್ಲಲ್ಲದೆ ಮತ್ತೆಲ್ಲಿ ಕಾಣಬೇಕು. ವಿಜಯನಗರದ ಕೋಟೆಕೊತ್ತಲಗಳು, ಅಂಗಡಿ ಸಾಲುಗಳು ಅಲ್ಲಿ ಚಿತ್ರಿತವಾಗಿವೆ. ಶ್ರೀಗಂಧ, ಬಿಳಿಯ ವಿಳೇದೆಲೆ, ಹೂವು, ಕರ್ಪೂರ, ಕಸ್ತೂರಿ, ಜವಾಜಿ, ಪುನುಗು, ಬಗೆಬಗೆಯ ಪರಿಮಳ ತೈಲ, ಹಣ್ಣು ಹಂಪಲುಗಳನ್ನು ಮಾರುವ ವಿವಿಧ ಅಂಗಡಿ ಸಾಲುಗಳು, ಧನ ಧಾನ್ಯಗಳ ಅಂಗಡಿ ಬೀದಿಗಳೂ, ಕಂಚುಗಾರ, ಕೈದುಗಾರ ಸಂಚುಗಾರ ಮೊದಲಾದ ವೃತ್ತಿಗನುಗುಣವಾದ ಪ್ರತ್ಯೇಕ ಕೇರಿಗಳು ವಿಜಯನಗರದ ಇತಿಹಾಸವನ್ನು ಬಿಂಬಿಸುತ್ತವೆ. ಬಟ್ಟೆ ಅಂಗಡಿಗಳು, ಹಣಹೊನ್ನ ಕುಪ್ಪೆಯ ಮುಂದಿಟ್ಟುಕೊಂಡವರು ಅಲ್ಲಿ ಕಂಡು ಬರುತ್ತಾರೆ. ಇವು ಪೌರಾಣಿಕತೆಯಿಂದ ಪೃಥಕ್ಕರಿಸಿದಾಗ ಅಂದಿನ ನಗರದ ನಾಗರಿಕತೆ ಸಂಸ್ಕೃತಿ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಬಿಂಬಿಸುತ್ತವೆ : ಭೋಜಿಪ ಕರ್ಪೂರ ಕಸ್ತೂರಿ ಜೀಣಗ ಜವಾಜಿ ಪುಣುಗು ಬಹು ತೈಲ ಸೋಜಿಗವಡೆದ ಸುಗಂಧದಂಗಡಿಗಳೂ ರಾಜಿಸುತಿರ್ದುವಿಕ್ಕೆಲದಿ ಚಪ್ಪನ್ನ ದೇಶದ ನಾಣೆಯಂಗಳ ನೋಟ ತಪ್ಪದ ಚಪಲ ಸೆಟ್ಟಿಗಳು | ಒಪ್ಪವಡೆದು ಕುಳಿತಿರ್ದರು ಹಣ ಹೊನ್ನ ಕುಪ್ಪೆಯ ಮುಂದಿಟ್ಟುಕೊಂಡು || ಇದೂ ಅಲ್ಲದೆ : ಕಳೆವೆತ್ತ ವಾರನಾರಿಯರ ಕನ್ನಿಕೆಯರ ಮೊಳೆಮೋಲೆಗಳ ನೊಡಿನಗುತ