ಪುಟ:Kanakadasa darshana Vol 1 Pages 561-1028.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೧೬ ಕನಕ ಸಾಹಿತ್ಯ ದರ್ಶನ-೧ ಕಾರಣವಿರಬಹುದು. ಏನೇ ಇರಲಿ, ಕಡೆಯದಾಗಿ ಇಷ್ಟು ಹೇಳಬಹುದು : ಒಂದೆಡೆ ಪುರಂದರ ದಾಸರನ್ನು ಕನಕದಾಸರು “ದಾಸರೆಂದರೆ ಪುರಂದರದಾಸರಯ್ಯಾ” ಎಂದು ಕೊಂಡಾಡಿದ್ದಾರೆ. ಇದು ಒಂದರ್ಥದಲ್ಲಿ ದಿಟ. ಇಂದು ನಾವು ಇನ್ನೊಂದರ್ಥದಲ್ಲಿ ಕನಕದಾಸರನ್ನು “ದಾಸರೆಂದರೆ ಕನಕದಾಸರಯ್ಯಾ !” ಎಂದು ಹೊಗಳಿದರೆ ತಪ್ಪಲ್ಲ. ಕನಕದಾಸರ ಸಂದೇಶ ಡಾ. ಶ್ರೀಕಂಠ ಕೂಡಿಗೆ ವೈಯಕ್ತಿಕ ಜೀವನದ ಹತಾಶೆ ಹಲವು ಸಂತರನ್ನು ಜ್ಞಾನದ ಅನ್ವೇಷಕರನ್ನಾಗಿ ಮಾಡಿದ್ದು ಕುತೂಹಲಕರವಾದ ಸಂಗತಿ. ಗೌತಮ ಬುದ್ಧನಿಂದ ಹಿಡಿದು ಪುರಂದರದಾಸ, ಕನಕದಾಸ ಮುಂತಾದವರವರೆಗೆ ಇಂಥ ಪರಂಪರೆಯೋಂದು ಚಾಚಿಕೊಂಡಿದೆ. ಅಂತರಂಗದ ಆಧ್ಯಾತ್ಮಿಕ ಸೆಳೆತ ಮತ್ತು ಲೌಕಿಕದ ಸಾಮಾಜಿಕ ಅನಿಷ್ಟಗಳು ಇವರ ಮನಸ್ಸನ್ನು ಕೋಭೆಗೊಳಿಸಿದಂತೆ ಕಾಣಿಸುತ್ತದೆ. ಕೆಲವು ಸಂತರು ಇಂಥ ತಲ್ಲಣಗಳನ್ನು ಪಾರಮಾರ್ಥಿಕತೆಗಷ್ಟೇ ಸೀಮಿತಗೊಳಿಸಿಕೊಂಡು ಮಾತನಾಡತೊಡಗಿದರೆ ಇನ್ನು ಕೆಲವರು ಅದನ್ನು ಸಮಾಜಾಭಿಮುಖವಾಗಿ ಹರಿಯಬಿಟ್ಟಿರುವುದು ವಿಶೇಷ. ವೈಯಕ್ತಿಕವೆನ್ನಿಸ ಬಹುದಾದ ಅಂತರಂಗದ ಬಿಕ್ಕಟ್ಟು ಮತ್ತು ಸಾಮಾಜಿಕ ಸ್ಪಂದನ ಸಂವೇದನೆಯ ಎರಡು ಕವಲುಗಳಿಗೆ ಕಾರಣವಾಗಿದೆ. ಜೊತೆಗೆ ಆಯಾಕಾಲದ ಧಾರ್ಮಿಕರಾಜಕೀಯ ಸ್ಥಿತಿಗತಿಗಳೂ ಅವರ ಚಿಂತನೆಯ ಸ್ವರೂಪವನ್ನು ನಿರ್ದೇಶಿಸಿವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಕನಕದಾಸರ ಕೃತಿಗಳಲ್ಲಿನ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸಂವೇದನೆಯ ಸ್ವರೂಪ ಸ್ಪಷ್ಟಪಡುತ್ತದೆ. ದೇಹಬಲ ಮತ್ತು ದೈವಬಲಗಳ ವಿರುದ್ದ ಸೆಳೆತಗಳಲ್ಲಿ ಅಂತಿಮವಾಗಿ ಕನಕದಾಸರು ಆಯ್ಕೆಮಾಡಿದ್ದು ಎರಡನೆಯದನ್ನೆ. ರಣರಂಗದಲ್ಲಿ ಜರ್ಜರಿತನಾಗಿ ಬಿದ್ದು ಕಾಳಗದ ಸೋಲಿನ ಅವಸ್ಥೆಯಲ್ಲಿ ಬದುಕುಳಿದದ್ದು ದೈವಬಲದ ಸಹಾಯದಿಂದಲೇ ಎಂಬ ನಂಬಿಕೆ. ಜೊತೆಗೆ ಕನಸ್ಸಿನಲ್ಲಿ ಕಾಣಿಸಿಕೊಂಡು 'ನನ್ನ ದಾಸನಾಗು' ಎಂದು ಕರೆಯುತ್ತಿದ್ದ ತಿರುಪತಿ ತಿಮ್ಮಪ್ಪನ ಆಕರ್ಷಣೆ. ಇದು ವ್ಯಕ್ತಿಯ ಜೀವನದಲ್ಲಿನ ಆಕಸ್ಮಿಕವಾದರೂ ಅಸಂಭವವಲ್ಲವೆನ್ನುವಂತೆ ಆತ್ಮಚರಿತಾತ್ಮಕ. ಈ ಬಗೆಯ ಮಾನಸಿಕ ಸ್ಥಿತಿಯ ಬಗ್ಗೆ ಕನಕದಾಸರಿಗೆ ಸಹಜವಾಗಿಯೇ ಸಾರ್ಥಕ ಭಾವವಿದೆ.