ಪುಟ:Kanakadasa darshana Vol 1 Pages 561-1028.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರ್೫ ಸಿ. ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೫೯೭ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ - ಡಾ. ಡಿ. ಕೆ. ರಾಜೇಂದ್ರ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ಹೆಚ್ಚು ವೈಶಿಷ್ಟ್ಯದಿಂದ ಕೂಡಿದುದು. ಅದರಲ್ಲಿಯೂ ದಾಸಸಾಹಿತ್ಯದಲ್ಲಿಯಂತೂ ಇನ್ನೂ ಹೆಚ್ಚಿನ ರೀತಿಯದು. ಅವರ ವರ್ಣಮಯ ಬದುಕು, ಅದಕ್ಕನುಗುಣವಾದ ಸಾಹಿತ್ಯ ಸೃಷ್ಟಿ, ಕನ್ನಡ ಸಾಹಿತ್ಯದಲ್ಲಿ ಅವರಿಗೊಂದು ವಿಶೇಷಸ್ಥಾನವನ್ನು ದೊರಕಿಸಿ ಕೊಡುವಷ್ಟು ವಿಶಿಷ್ಟವಾದುದಾಗಿದೆ. ಕನಕದಾಸರು ಕವಿ ಅಷ್ಟೇ ಅಲ್ಲ, ಕಲಿಯೂ ಹೌದು. ಕವಿ ಕಲಿಯಾಗಿ ಕೀರ್ತಿಗಳಿಸಿದ ಪಂಪನಿಗಿಂತ ಒಂದು ಕೈ ಮಿಗಿಲೆಂಬಂತೆ-ಸಂಸಾರಿಯಾಗಿ, ಸಂತನಾಗಿ, ದೊಡ್ಡ ಭಕ್ತನಾಗಿ, ಕೀರ್ತನಕಾರನಾಗಿ, ಎಲ್ಲಕ್ಕಿಂತ ಮಿಗಿಲಾಗಿ ಮಹಾರಸಿಕತೆಯನ್ನು ತೋರುವ ಕವಿಯಾಗಿ ಮೆರೆಯುವಂತೆಯೆ ಕೀರ್ತನೆಗಳ ಮೂಲಕ ದೊಡ್ಡ ಸಮಾಜ ಸುಧಾರಕನಾಗಿ ಹಾಗೂ ಆಧ್ಯಾತ್ಮಿಕ ಶಿಖರದ ತುತ್ತತುದಿಯನ್ನೇರಿದ ಸಿದ್ಧಪುರುಷನಾಗಿ ವಿಶೇಷ ಗಮನ ಸೆಳೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಕಂಡ ಹಲವೆಂಟು ಏರಿಳಿತಗಳು, ಕಷ್ಟ ಸುಖಗಳು ಅವರನ್ನು ಆಧ್ಯಾತ್ಮಿಕತೆಯ ಕಡೆಗೆ ಹೊರಳಿಸಲು ಕಾರಣವಾದರೂ, ಕೇವಲ ಧ್ಯಾನಸ್ಥಿತಿಯಲ್ಲಷ್ಟೇ ಮೈಮರೆಯದೆ ವೈಚಾರಿಕತೆಯ ತುತ್ತತುದಿಗೂ ಅವರನ್ನು ಕೊಂಡೊಯ್ದು ಅದರ ವಾಸ್ತವಿಕತೆಯನ್ನು ಬಯಲು ಮಾಡುವುದರ ಮೂಲಕ ಹಲವರ ಕಣ್ಣು ತೆರೆಸಲು ಕಾರಣವಾದಂತೆ ಆದದ್ದು ಕನಕದಾಸರ ವ್ಯಕ್ತಿತ್ವದ ಒಂದು ವೈಶಿಷ್ಟ್ಯವೆಂದೇ ಹೇಳಬಹುದು. ಕನಕದಾಸರು ಅಂದು ದಾಸಪಂಥದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಹೋರಾಟ ನಡೆಸಿದಂತೆ, ಇಂದು ಅವರಿಂದ ರಚಿತವಾದ ಸಾಹಿತ್ಯ ಅಂತಹುದೇ ಸಮಸ್ಯೆಯನ್ನು ಎದುರಿಸುವಂತಾಗಿದೆ. ಅವರ ಸಾಹಿತ್ಯ ಶಕ್ತಿಯನ್ನು ಸಮಸ್ಥಿತಿಯಲ್ಲಿ ತೂಗಿನೋಡುವ ಕಾರ್ಯ ಸಾರ್ವತ್ರಿಕವಾಗಿ ನಡೆದಿಲ್ಲ ಎಂದೇ ಹೇಳಬಹುದು. ಉಳಿದ ಕೀರ್ತನಕಾರರಿಗಿಂತ ಒಂದು ವಿಶಿಷ್ಟಸ್ಥಾನವನ್ನು ಗಳಿಸಿಕೊಂಡು ಸಾಹಿತ್ಯ ಸೃಷ್ಟಿಯನ್ನು ಮಾಡಿದ ಅವರ ಪ್ರತಿಭೆಯ ಅಪೂರ್ವತೆಯನ್ನು ನಿರ್ಧರಿಸುವ ಕೆಲಸ ಇನ್ನೂ ಆಗಬೇಕಾಗಿದೆ. ಕನಕದಾಸರ ವೈಯಕ್ತಿಕ ಬದುಕು ಎಷ್ಟು ವೈಶಿಷ್ಟ್ಯಗಳ ಸಂಗಮವಾಗಿ ಹೊರ ಚಿಮ್ಮಿರುವುದು ಗಮನಿಸಬೇಕಾದ ಅಂಶ. ತನ್ನದಲ್ಲದ ಒಂದು ಕ್ಷೇತ್ರವನ್ನು ಪ್ರವೇಶಿಸಿ, ದೈವಪ್ರೇರಣೆಯಿಂದ ಹರಿದಾಸರ ಸಂಸರ್ಗವನ್ನು ಪಡೆದು ಹಲವು ಸಾಧನೆಗಳನ್ನು ಮಾಡಿದ ಕನಕದಾಸರ ಶಕ್ತಿಪ್ರತಿಭೆ, ಕಾವ್ಯಕುಸುಮವಾಗಿ ಅರಳಿದ್ದು, ಆಧ್ಯಾತ್ಮಿಕ ಜ್ಯೋತಿಯಾಗಿ ಬೆಳಗಿದ್ದು, ವೈಚಾರಿಕತೆಯ ಕ್ರಾಂತಿಯಾಗಿ ಕಂಗೊಳಿಸಿದ್ದು -ಇವೆಲ್ಲ ಪವಾಡಸದೃಶವಾಗಿ ತೋರುತ್ತವೆ. ಪ್ರಥಮತಃ ಕನಕದಾಸರು ಕವಿ ಹೃದಯವುಳ್ಳವರು. ದಾಸಪಂಥದಲ್ಲಿ ಕವಿಗಳೆನಿಸಿ ವಿಶಿಷ್ಟಸ್ಥಾನವನ್ನು ಪಡೆದವರು. ಕೀರ್ತನೆ ಮತ್ತು ಕಾವ್ಯ ಎರಡರಲ್ಲಿಯೂ ಜೀವಂತಿಕೆಯನ್ನು ಮೆರೆದವರು. ಅವರು ಒಳ್ಳೆಯ ಕೀರ್ತನಕಾರರಾಗಿ ತಮ್ಮ ಪ್ರತಿಭೆಯನ್ನು ಭಕ್ತಿಯ ಪರಾಕಾಷ್ಠತೆಯನ್ನು, ಸಾಮಾಜಿಕ ಕಾಳಜಿಯನ್ನು ತೋರಿರುವಂತೆಯೇ ಕವಿಗಳಾಗಿ ಕಾವ್ಯತ್ವದ ಸತ್ವವನ್ನು ಮೆರೆದಿದ್ದಾರೆ. ಉಳಿದ ಕೀರ್ತನಕಾರರ ಕೀರ್ತನೆಗಳಲ್ಲಿ ಕಾವ್ಯಗುಣ ಇದ್ದರೂ, ಸಾಮಾಜಿಕ ಕಾಳಜಿ ಹಾಗೂ ಭಕ್ತಿಯ ಆವೇಶ ಇದ್ದರೂ, ಕಾವ್ಯಗುಣ ಅವರಲ್ಲಿ ಸಂಚಾರಿಯಾದದ್ದೇ ಹೊರತು, ಕನಕದಾಸರಲ್ಲಿಯಂತೆ ಸ್ಥಾಯಿಯಾದುದಲ್ಲ. ಕನಕದಾಸರು ದಾಸಪಂಥವನ್ನು ಸೇರಿದ್ದು ಒಂದು ಆಕಸ್ಮಿಕ ಘಟನೆ ಎನ್ನಬಹುದು. ಅವರ ಜೀವನದಲ್ಲಾದ ಒಂದು ಮಹತ್ತರವಾದ ಘಟನೆ ಅದಕ್ಕೆ ಕಾರಣವೆನ್ನಬಹುದು. ಒಂದು ಪಕ್ಷ ಅವರು ದಾಸಕೂಟವನ್ನು ಸೇರದೆ ಇದ್ದಿದ್ದರೆ, ಅವರಿಂದ ಕೀರ್ತನೆಗಳ ರಚನೆಯಾಗುತ್ತಿರಲಿಲ್ಲ ಅಷ್ಟೆ, ಆದರೆ ಅವರ ಹೃದಯದಲ್ಲಿ ತುಡಿಯುತ್ತಿದ್ದ ಕವಿಪ್ರಜ್ಞೆಗೆ ಯಾವ ಅಡ್ಡಿಯೂ ಬರುತ್ತಿರಲಿಲ್ಲ. ನಿರಾತಂಕವಾಗಿ ಆ ಕಾವ್ಯಧಾರೆ ಹರಿಯುತ್ತಿತ್ತು. ಆ ದೃಷ್ಟಿಯಿಂದ ನೋಡುವಾಗ ಕನಕದಾಸರು ಹುಟ್ಟು ಕವಿಪ್ರತಿಭೆಯುಳ್ಳ ಕವಿ. ಕನಕದಾಸರಲ್ಲಿ ಭಕ್ತಿ ಮತ್ತು ಕಾವ್ಯಶಕ್ತಿ ಎರಡೂ ಮೇಲುಗೈಯಾಗಿ ಬೆಸೆದುಕೊಂಡು ಬಂದಿವೆ. ಕೀರ್ತನೆಗಳಲ್ಲಿ ಹಾಗೂ 'ಹರಿಭಕ್ತಿಸಾರ'ದಲ್ಲಿ ಅವರ ಭಕ್ತಿಯ ಪರಾಕಾಷ್ಠತೆಯನ್ನು ಕಾಣಬಹುದಾದರೆ, ಅವರ `ಮೋಹನ ತರಂಗಿಣಿ' 'ನಳಚರಿತ್ರೆ' ಹಾಗೂ 'ರಾಮಧಾನ್ಯ ಚರಿತೆ' ಇವುಗಳಲ್ಲಿ ಕಾವ್ಯಗುಣ ದಟ್ಟಿಸಿ