ಪುಟ:Kanakadasa darshana Vol 1 Pages 561-1028.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೩೬ ಕನಕ ಸಾಹಿತ್ಯ ದರ್ಶನ-೧ ವ್ಯಾಸರಾಯರು, ಪುರಂದರದಾಸರು ಮತ್ತು ಕನಕದಾಸರು ೯೩೭ ಅಧಿಕಾನಂದ ಕಾರಣ, ಮುಕ್ತಿಗೆ ತಾನೇ ಫಲರೂಪ ಸಿರಿಕೃಷ್ಣನ ಪಾದಸೇವೆ, ಇದರ ತೂಕಕ್ಕೆ ಸಾಕೇ ಕೈವಲ್ಯ ?” ಎಂದು ವಿವರಿಸಿ, ಭಕ್ತಿಯ ಶ್ರೇಷ್ಠತೆಯನ್ನು ಸೂಚಿಸಿ, ದಾಸಪರಂಪರೆಗೆ ಸಮರ್ಥವಾದ ಬುನಾದಿಯನ್ನು ಒದಗಿಸಿಕೊಟ್ಟರು. ಒಂದು ಅರ್ಥದಲ್ಲಿ, ವ್ಯಾಸರಾಯರು ಪಾಂಡಿತ್ಯ-ಭಕ್ತಿಗಳ ನಡುವಣ ಸಮನ್ವಯಕ್ಕಾಗಿ ಶ್ರಮಿಸಿದವರು. ಅವರ ಶಿಷ್ಯವರ್ಗದಲ್ಲಿ ವಿಜಯೀಂದ್ರ ತೀರ್ಥರು, ಗೋವಿಂದ ಒಡೆಯರು, ನಾರಾಯಣ ಯತಿಗಳು ಮೊದಲಾದ ಪ್ರಕಾಂಡ ಪಂಡಿತರಿದ್ದರು ; ಪುರಂದರದಾಸರು, ಕನಕದಾಸರು, ವೈಕುಂಠದಾಸರು ಮೊದಲಾದ ಹರಿದಾಸರೂ ಇದ್ದರು. 'ವ್ಯಾಸಕೂಟ' 'ದಾಸಕೂಟ'ಗಳೆನ್ನ ಬಹುದಾದ ಈ ಎರಡೂ ಗುಂಪುಗಳು ಪರಸ್ಪರ ಕಲೆತು ಜ್ಞಾನ ಮತ್ತು ಭಕ್ತಿಗಳ ಅರ್ಥಮಹತ್ವಗಳನ್ನು ವಿನಿಮಯ ಮಾಡಿಕೊಂಡು ಪೂರ್ಣಪ್ರಜ್ಞ ರಾಗಲು ಅನುವು ಮಾಡಿಕೊಟ್ಟವರು ವ್ಯಾಸರಾಯರು. ಹೀಗಾಗಿ ಅವರ ಪ್ರಭಾವ ಪಂಡಿತಮೇಲೆ ಆದಷ್ಟೇ ತೀವ್ರವಾಗಿ, ಸಾಮಾನ್ಯರ ಪ್ರತಿನಿಧಿಗಳಾಗಿದ್ದ ದಾಸರ ಮೇಲೂ ಆಯಿತು. ಮುಖ್ಯವಾಗಿ ಪುರಂದರದಾಸ, ಕನಕದಾಸರ ಮೇಲೆ ವ್ಯಾಸರಾಯರು ಬೀರಿದ ಪ್ರಭಾವ ಹರಿದಾಸ ಸಾಹಿತ್ಯದ ಇತಿಹಾಸದಲ್ಲಿ ದಾಖಲಿಸಲೇಬೇಕಾದ ಸಂಗತಿ. ಪುರಂದರದಾಸರನ್ನು ಕುರಿತಾದ ಒಂದು ಪ್ರಸಿದ್ದ ಕೀರ್ತನೆಯಲ್ಲಿ 'ದಾಸರೆಂದರೆ ಪುರಂದರ ದಾಸರಯಾ ಎಂದು ನಿರ್ಮಾತೃರ್ಯದಿಂದ, ಮುಕ್ತ ಮನಸ್ಸಿನಿಂದ ವ್ಯಾಸರಾಯರು ಹೊಗಳಿರುವುದು ಭಕ್ತಿಪಂಥಕ್ಕೆ ಅವರು ನೀಡಿದ ಮನ್ನಣೆಗೆ ಸಾಕ್ಷಿ. ಅವರ ಪ್ರಕಾರ ಪುರಂದರ ದಾಸರು ನಿಜವಾದ ದಾಸರು ; ಏಕೆಂದರೆ ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯ ಮಾತುಮಾತಿಗೆ ಬಿಡದೆ ವರ್ಣಿಸುತಲಿ ಗೀತನರ್ತನದಿ ಶ್ರೀಕೃಷ್ಣನ್ನ ಪೂಜಿಸುವ ಪೂತಾತ್ಮದಾಸ ಪುರಂದರದಾಸರಯ್ಯಾ' || ಹೀಗೆಂದು ಪುರಂದರದಾಸರ ಬಗೆಗಿನ ತಮ್ಮ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳುವುದರ ಜೊತೆಗೆ, ನಿಜವಾದ ಹರಿದಾಸರಿಗೆ ಇರಲೇಬೇಕಾದ ಗುಣಗಳ ಪಟ್ಟಿಯನ್ನೂ ಕೊಡುತ್ತಾರೆ ವ್ಯಾಸರಾಯರು. ನೀತಿಪ್ರಜ್ಞೆ ತೀವಭಕ್ತಿ, ಗೀತ ನರ್ತನಗಳ ಮೂಲಕ ಭಗವಂತನ ಆರಾಧನೆ-ಇವೆಲ್ಲಕ್ಕೂ ಆಧಾರವಾಗಿರುವ ಆತ್ಮಪಾವಿತ್ರ್ಯತೆ ಇತ್ಯಾದಿ ಹರಿದಾಸರಾದವರಿಗೆ ಅಗತ್ಯವಾಗಿರಬೇಕಾದ ಗುಣಗಳನ್ನು ಕುರಿತು ಉಳಿದ ಹರಿದಾಸರ ಗಮನವನ್ನು ಸೆಳೆಯುವುದೂ ಈ ಪ್ರಶಂಸೆಯ ಹಿಂದಿರುವ ಮತ್ತೊಂದು ಉದ್ದೇಶ, ಭಕ್ತಿಯ ಸೋಗು ಹಾಕಿ, ಜನಗಳನ್ನು ವಂಚಿಸುವಾತ ಹರಿದಾಸನಲ್ಲವೆಂದು ಅವರು ಪದೇಪದೇ ಸಾರುತ್ತಾರೆ-'ಗೂಟನಾಮವನಿಟ್ಟು, ಕೋವಿದನು ತಾನೆನುತ ಬೂಟಿಕೆಯ' ಮಾಡುವವವನೂ, 'ಅಂಬುಜೋದ್ಭವಪಿತನ ಆಗಮಗಳನರಿಯದೇ ತಂಬೂರಿ ಮೀಟಿದವನೂ', 'ಮಾಯಾ ಸಂಸಾರದಲ್ಲಿ ಮಮತೆ ಹೆಚ್ಚಾಗಿಟ್ಟು ಗಾಯನವ' ಮಾಡುವವನೂ ಹರಿದಾಸನಾಗಲು ಸಾಧ್ಯವೇ ಇಲ್ಲವೆಂದು ವ್ಯಾಸರಾಯರು ನಿಖರವಾಗಿ ಹೇಳುತ್ತಾರೆ ; ಮಾತ್ರವಲ್ಲ, ಅಂಥ ಆಷಾಢಭೂತಿಗಳನ್ನು ಸಷವಾಗಿ ಗುರುತಿಸಲು ಅನುಕೂಲವಾಗುವಂತೆ ಆದರ್ಶ ಹರಿದಾಸರಾದ ಪುರಂದರದಾಸರ ರಚನೆಗಳನ್ನು ಭಾರತೀಯ ದರ್ಶನದ ಕೆನೆಯಂತಿರುವ ಉಪನಿಷತ್ತುಗಳಿಗೆ ಸಮೀಕರಿಸಿ “ಪುರಂದರೋಪನಿಷತ್' ಎಂದು ಕರೆದವರೂ ವ್ಯಾಸರಾಯರೇ, ಪುರಂದರದಾಸರಷ್ಟೇ ವ್ಯಾಸರಾಯರಿಗೆ ಪ್ರಿಯರಾದ ಇನ್ನೊಬ್ಬ ಶಿಷ್ಯರು ಕನಕದಾಸರು, ಕನಕ ಪುರಂದರರಿಬ್ಬರೂ ದಾಸಸಾಹಿತ್ಯದ ಅಶ್ವಿನೀ ದೇವತೆಗಳು ಎಂಬ ಮಾತು ಅರ್ಥಪೂರ್ಣ. ಕನಕರು ಕೇವಲ ದಾಸರಲ್ಲ ; ಕವಿಗಳೂ ಕೂಡ. ಸಮಾಜದ ಕೆಳವರ್ಗದಿಂದ ಬಂದ ಕನಕದಾಸರು ವ್ಯಾಸರಾಯರ ಪರಮಶಿಷ್ಯರಾದರು ; ಪುರಂದರದಾಸರ ಆತ್ಮೀಯ ಮಿತ್ರರಾದರು ; ದಾಸಶ್ರೇಷ್ಠರೆನ್ನಿಸಿಕೊಂಡರು. ಇದು ಕನಕದಾಸರ ವ್ಯಕ್ತಿತ್ವದ ಆಯಾಮಗಳನ್ನು ಸೂಚಿಸುವುದಲ್ಲದೆ ದಾಸಕೂಟದ ವಿಶಾಲ ಮನೋಧರ್ಮದ ದ್ಯೋತಕವೂ ಆಗಿದೆ. 'ಕನಕದಾಸನ ಮೇಲೆ ದಯ ಮಾಡಲು ವ್ಯಾಸ ಮುನಿ ಮಠದ ಜನರೆಲ್ಲ ದೂರಿಕೊಂಬುವರೋ ? ಎಂದು ಪ್ರಾರಂಭವಾಗುವ ಪುರಂದರದಾಸರ ಕೀರ್ತನೆಯಲ್ಲಿ ವ್ಯಾಸರಾಯರು ಕನಕಣ್ಣನ ಬಗೆಗೆ ಇರಿಸಿದ್ದ ವಾತ್ಸಲ್ಯ, ಕನಕದಾಸರ ಮಹಿಮೆಯನ್ನರಿಯದ ಮಠದ ಜನರ ಸಣ್ಣತನ-ಇತ್ಯಾದಿಗಳ ಪ್ರಸ್ತಾಪ ಬರುತ್ತದೆ. ಕನಕದಾಸರನ್ನು ಕುರಿತಾದ ಪ್ರಸಿದ್ಧ ಸಂಗತಿ 'ಬಾಳೆಹಣ್ಣಿನ ಪ್ರಸಂಗವೂ ಈ ಕೀರ್ತನೆಯಲ್ಲಿ ಬರುತ್ತದೆ. ವ್ಯಾಸತೀರ್ಥರ ಕೈಮುಷ್ಠಿಯಲ್ಲಿದ್ದ ವಸ್ತುವನ್ನು ದೇವರ ಮೂರ್ತಿಯೆಂದು ಕನಕದಾಸರೊಬ್ಬರೇ ಗುರುತಿಸಲು ಸಾಧ್ಯವಾದ ಘಟನೆಯ ಉಲ್ಲೇಖವೂ ಇಲ್ಲಿದೆ. ಒಟ್ಟಿನಲ್ಲಿ ಕನಕನ ಮಹಿಮೆಯೇ ವಸ್ತುವಾಗಿರುವ ಈ ಕೀರ್ತನೆಯಲ್ಲಿ ಗುರು ವ್ಯಾಸರಾಯರ 'ಶಿಷ್ಯಾನುಸಂಧಾನ'ದ ಚಿತ್ರವೂ ಮುಖ್ಯವಾಗುತ್ತದೆ.