ಪುಟ:Kanakadasa darshana Vol 1 Pages 561-1028.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦೦ ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೬೦೧ ಬಗ್ಗೆ ಅಜ್ಞಾನಿಗಳಾಗಿ ವರ್ತಿಸುವುದನ್ನು ಕಂಡಾಗ ಅವರು ಸಿಡಿದೇಳುತ್ತಾರೆ. ಮೇಲಿನಂತೆ ಪ್ರಶ್ನೆಗಳ ಮಳೆಗರೆಯುತ್ತಾರೆ. ಜಾತಿ ಮತಗಳ ತಿಕ್ಕಾಟವನ್ನು ಪ್ರಬಲವಾಗಿ ಮೇಲಿಂದ ಮೇಲೆ ಖಂಡಿಸುವುದನ್ನು ಕಂಡಾಗ, ಕನಕದಾಸರು ಅವರಿಂದ ಎಷ್ಟು ನೊಂದಿದ್ದಾರೆ ಎಂಬುದೂ ಸ್ಪಷ್ಟವಾಗುತ್ತದೆ. ಇಂತಹ ತುಳಿತಕ್ಕೆ ಒಳಗಾದರೂ ಲೆಕ್ಕಿಸದೆ, “ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಿ ಕೊಳ್ಳಬೇಡಿ ಹುಚ್ಚಪ್ಪಗಳಿರಾ” ಎಂದು ಅವರಿಗೆ ಎಚ್ಚರಿಕೆ ನೀಡಿ, “ಸತ್ಯವಂತರ ಮನುಜ ಸೇವೆಯು ರಂಗಯ್ಯ ಇನ್ನು | ಮನುಜ ಸೇವೆ ಮಾಡಿ ದಣಿದು ನೊಂದೆ ನಾನು” ಎಂದು ಹೇಳುವಲ್ಲಿ ಸಮಾಜ ಸುಧಾರಣೆಯಲ್ಲಿ ಕಂಡ ಕಹಿಯ ಅನುಭವದ ಪರಾಕಾಷ್ಠತೆ ವ್ಯಕ್ತವಾದರೂ “ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು | ಪದುಮನಾಭನ ಪಾದದೊಲುಮೆ ಎನಗಾಯಿತು ” ಎಂಬಲ್ಲಿ ತೃಪ್ತಿಗೊಂಡ ಅವರ ಬದುಕು ಸಾಫಲ್ಯವನ್ನೇ ಕಂಡಿದೆ. ಯಾವುದೇ ಪಂಥಕ್ಕೆ ಸಿಲುಕದ ಕನಕದಾಸರು, ಸಮಗ್ರ ಮಾನವ ಜೀವನದ ಏಳಿಗೆಗಾಗಿ ಹಾತೊರೆದವರು. ಅವರ ಅಂತಿಮ ಗುರಿ “ಪದುಮನಾಭನ ಪಾದದೊಲುಮೆಯೇ ಆದರೂ, ಕನಕದಾಸರು ಮೂಲಭೂತವಾಗಿ ಸಮಾಜ ಸುಧಾರಣೆಯತ್ತ ಗಮನ ಹರಿಸಿದವರು. ತಮ್ಮ ಉದಾತ್ತ ವ್ಯಕ್ತಿತ್ವದಿಂದ ಅಧಿಕಾರಯುತವಾಗಿ ಕರೆನೀಡಿದವರು. ಸಮಾಜದಲ್ಲಿ ಸಮಾನತೆಯನ್ನು ತರಲು ಹಾತೊರೆಯುತ್ತಿದ್ದ ಅವರ ಮನದ ಅಳಲು ಅವರ ಎಲ್ಲ ಕೃತಿಗಳಲ್ಲಿಯೂ ವ್ಯಕ್ತಗೊಂಡಿರುವುದನ್ನು ಕಾಣಬಹುದು. ಕನಕದಾಸರ ಕೀರ್ತನೆಗಳಲ್ಲಿ ಭಕ್ತಿಭಾವ, ಸಮಾಜ ಸುಧಾರಣೆ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೆ ಅಗತ್ಯವಾದ ಅಂಶಗಳು ಘನೀಭೂತವಾಗಿ ವ್ಯಕ್ತಗೊಂಡಿದ್ದರೆ; ಅವರ 'ಹರಿಭಕ್ತಿಸಾರ-ಭಕ್ತಿ, ಜ್ಞಾನ, ವೈರಾಗ್ಯಗಳನ್ನು ಪರಿಣಾಮಕಾರಿಯಾಗಿ ಸಾರುವ ವೈಶಿಷ್ಟ್ಯಪೂರ್ಣವಾದ ಕೃತಿ, 'ರಕ್ಷಿಸು ನಮ್ಮನನವರತ' ಎಂಬ ಮುಕ್ತಾಯದಿಂದ ಕೂಡಿದ ನೂರ ಹತ್ತು ಭಾಮಿನಿ ಷಟ್ಟದಿಗಳನ್ನುಳ್ಳ ಈ ಕಿರುಕೃತಿ ಅಪೂರ್ವ ರೀತಿಯದು. 'ಹರಿಭಕ್ತಿಸಾರ-ಹೆಸರೇ ಸೂಚಿಸುವಂತೆ ಭಕ್ತಿರಸ ತೊಟ್ಟಿಕ್ಕುವಂತಿದೆ. 'ಹರಿಭಕ್ತಿಸಾರದ ಚರಿತೆಯನ್ನು ಹರಿಭಕ್ತರಾಲಿಸುವಂತೆ ರಚಿಸುವೆ' ಎಂದು ಹೇಳುವಲ್ಲಿಯೇ ಅದರ ಉದ್ದೇಶ ಸ್ಪಷ್ಟವಾಗುತ್ತದೆಯಾದರೂ, ಕನಕದಾಸರು ಅಲ್ಲಿ ತಮ್ಮ ಅಂತರಂಗವನ್ನು ಬಿಚ್ಚಿ ಹೇಳಿರುವ ರೀತಿ ವಿಶಿಷ್ಟವಾದುದು. ಭಕ್ತ ಹೃದಯದ ಸಮರ್ಪಣ ಭಾವ ಹೃದಯಸ್ಪರ್ಶಿಯಾಗಿ ಒಂದೊಂದು ಪದ್ಯದಲ್ಲಿಯೂ ಗರಿಗೆದರಿದೆ : “ದೀನ ನಾನು ಸಮಸ್ತ ಲೋಕಕೆ ದಾನಿ ನೀನು, ವಿಚಾರಿಸಲು ಮತಿಹೀನ ನಾನು, ನೆರೆ ಸುಜ್ಞಾನ ಮೂರುತಿ ನೀನು, ನಿನ್ನ ಸಮಾನರುಂಟೇ ದೇವ, ರಕ್ಷಿಸು ನಮ್ಮನನವರತ” ಎಂಬಂಥ ಪದ್ಯಗಳಲ್ಲಿನ ದೈನ್ಯ-ಭಕ್ತ ಭಗವಂತನ ನಡುವಣ ಮಧುರ ಸಂಬಂಧದ ದ್ಯೋತಕವಾಗಿದೆ. ಮನಕರಗುವಂತೆ ಕರುಣಾಪೂರ್ಣವಾಗಿ ಕಿವಿಗೆ ಬೀಳುವ ಆ ನುಡಿಗಳಲ್ಲಿ ಕಾವ್ಯತ್ವ ಕೆಲಸ ಮಾಡಿರುವುದನ್ನು, ಅದರೊಂದಿಗೆ ಕನಕದಾಸರ ಸಹಜವಾದ ಕವಿ ಪ್ರತಿಭೆ ವ್ಯಕ್ತಗೊಂಡಿರುವುದನ್ನು ಗುರುತಿಸಬಹುದಾಗಿದೆ. “ಕೀರ್ತನೆಗಳು' ಹಾಗೂ 'ಹರಿಭಕ್ತಿಸಾರ' ಕನಕದಾಸರನ್ನು ದಾಸಪಂಥದಲ್ಲಿಯ ಭಕ್ತಿಸಾಗರದಲ್ಲಿ ಸ್ಥಾಯಿಯಾಗಿಸಿದರೆ, ಅವರ `ಮೋಹನ ತರಂಗಿಣಿ' 'ನಳಚರಿತ್ರೆ' ಹಾಗೂ 'ರಾಮಧಾನ್ಯ ಚರಿತೆ' ಈ ಮೂರು ಕೃತಿಗಳು ಕನಕದಾಸರನ್ನು ಕವಿಯಾಗಿಸಿ ಕನ್ನಡ ಕವಿಗಳ ಸಾಲಿನಲ್ಲಿ ನೆಲೆಯೂರಿಸಿವೆ. ಇವುಗಳಲ್ಲಿ 'ಮೋಹನ ತರಂಗಿಣಿ' ಹಾಗೂ 'ನಳಚರಿತೆ' ಒಂದು ಚೌಕಟ್ಟಿನಲ್ಲಿ ನಿಲ್ಲುವ ಕೃತಿಗಳಾದರೆ, 'ರಾಮಧಾನ್ಯ ಚರಿತೆ' ಇವುಗಳಿಂದ ಭಿನ್ನವಾಗಿ ನಿಲ್ಲುವ ಕೃತಿ. ಒಂದರ್ಥದಲ್ಲಿ 'ಮೋಹನ ತರಂಗಿಣಿ' ಹಾಗೂ 'ನಳಚರಿತ್ರೆ'-ಇವೆರಡೂ ಪ್ರೇಮಕಥೆಗಳು, ಶೃಂಗಾರ ಮೂಲವಾದ ಕಾವ್ಯಗಳು, ಭಕ್ತಪ್ರತಿಪಾದನೆಯ ಉದ್ದೇಶವಾಗಲೀ ಗುರಿಯಾಗಲಿ ಅದರ ಸುಳಿವಾಗಲಿ ಅಲ್ಲಿಲ್ಲ. ಭಕ್ತಿಭಾವವೇ ಮೈವೆತ್ತಂತೆ ಹೊರಬಂದಿರುವ 'ಹರಿಭಕ್ತಿಸಾರ' ಹಾಗೂ ಕೀರ್ತನೆಗಳ ಕರ್ತೃವಿನಿಂದಲೇ ಹೊರಬಂದಿರುವ ಈ ಕಾವ್ಯಗಳನ್ನು ಗಮನಿಸಿದಾಗ ಕವಿಯೊಬ್ಬನ ವಿಶಿಷ್ಟ ವ್ಯಕ್ತಿತ್ವದ ಅರಿವಾಗಿ ಆಶ್ಚರ್ಯಕ್ಕೂ ಕಾರಣವಾಗುತ್ತದೆ. “ನೆಚ್ಚದಿರು ಸಂಸಾರ ನೆಲೆಯಲ್ಲವೀಕಾಯ' ಎಂದು ಹೇಳಿದ ಕನಕದಾಸರೇ “ಮೋಹನ ತರಂಗಿಣಿ'ಯಲ್ಲಿ “ನುಣೋಲೆಯ ಸ್ಥಳದಲ್ಲಿ ಮೊಗವಿಟ್ಟು ಮುಂಡಾಡಿ ಸೊಗ ಮೈಯೊಳಳವಟ್ಟು ಸಾವುದಚ್ಚರಿಯೆ” ಎಂದು ಬಣ್ಣಿಸುತ್ತಾರೆ. ಕನಕದಾಸರಲ್ಲಿಯ ಶೃಂಗಾರಪ್ರಿಯತೆಯನ್ನು ಅವರ ಸಹಜ ಕವಿತ್ವವನ್ನು ತೋರಲು ಇದೊಂದೇ ಉದಾಹರಣೆ ಸಾಕೆನಿಸುತ್ತದೆ. ಶೃಂಗಾರದ ಕಾವ್ಯವೊಂದನ್ನು ರಸವತ್ತಾಗಿ ಬರೆಯುವ ಅವರ ಕವಿ ಹೃದಯಕ್ಕೆ ಭಕ್ತಿ ಭಾವ ಎಲ್ಲಿಯೂ ಅಡ್ಡಬಂದಿಲ್ಲ, ಅಡ್ಡಿಯಾಗಿಲ್ಲ. ಬಹಳ ತೆಳುವಾಗಿ ಬರುವ ಭಕ್ತಿಭಾವವನ್ನು ಮರೆಮಾಚಿ ಇಲ್ಲಿಯ ಶೃಂಗಾರ ಭಾವ ಮೆರೆದಿದೆ. ಇಲ್ಲಿ ಬರುವ ಕೃಷ್ಣ-ರುಕ್ಕಿಣಿ, ರತಿ-ಮನ್ಮಥ, ಉಷಾ-ಅನಿರುದ್ಧರ ಪ್ರೇಮಕಥೆಯ ಮೂಲಕ ಕವಿ ಕನಕದಾಸರು ಸಂತ-ಕೀರ್ತನಕಾರರೆಂಬುದನ್ನು ಸಂಪೂರ್ಣವಾಗಿ