ಪುಟ:Kanakadasa darshana Vol 1 Pages 561-1028.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೬೬ ಕನಕ ಸಾಹಿತ್ಯ ದರ್ಶನ-೧ ಕನಕ ಮತ್ತು ಪುರಂದರರ ಕೀರ್ತನೆಗಳು علم ಪ್ರಮೇಯವನ್ನು ಪ್ರತಿಪಾದಿಸಿದ್ದಾರೆ. ಹಾಗಾಗಿಯೇ ಪುರಂದರದಾಸರು ಬೇರೆ ಬೇರೆ ಕ್ಷೇತ್ರಗಳಲ್ಲಿರುವ ಪರಮಾತ್ಮನ ಅವತಾರ ರೂಪಗಳೊಂದಿಗೆ ಮದುವೆಯಾದೆಯ ಎಂದು ಲಕ್ಷ್ಮಿಯನ್ನು ಪ್ರಶ್ನಿಸಿರುವುದು. ಎಲ್ಲ ಕಡೆಯೂ ಪರಮಾತ್ಮನನ್ನು ಕಂಡ ದಾಸರು-ಎಲ್ಲಿರುವನೋ ರಂಗನೆಂಬ ಸಂಶಯಬೇಡ ಎಲ್ಲಿ ಭಕುತರು ಕರೆಯೆ ಅಲ್ಲಿ ಬಂದೊದಗುವನು (ಕ. ಕೀ. ೧೫೬ ಮತ್ತು ಆರ್ತ ೯೩) ಎಂದು ಹಾಡಿದ್ದಾರೆ. ಈ ಕೀರ್ತನೆ ಪುರಂದರದಾಸರು ಮತ್ತು ಕನಕದಾಸರು ಇಬ್ಬರ ಹೆಸರಿನಲ್ಲಿಯೂ ಇರುವುದು ಕಾಕತಾಳೀಯವಾದರೂ, ಪಾಠ ಕರ್ತೃನಿರ್ಣಯದ ತೊಡಕೆನಿಸಿದರೂ ಈ ಇಬ್ಬರು ದಾಸರ ಸಾಧನೆಯ ಬೆಳವಣಿಗೆಯ ದೃಷ್ಟಿಯಿಂದ ಸಮುಚಿತವಾಗಿಯೆನ್ನಬಹುದು. ಆದುದರಿಂದಲೇ ಪುರಂದರದಾಸರು ಒಂದೇ ಕೂಗಳತೆ ಭೂ ವೈಕುಂಠ ಸಂದೇಹವಿಲ್ಲವು ಸಾಧುಸಜ್ಜನರಿಗೆ (ಆರ್ತ. ೧೨೪) ಎಂದು ಹೇಳಿದುದಲ್ಲದೆ ಮುಂದುವರೆದು-ಇಲ್ಲೇ ವೈಕುಂಠ ಕಾಣಿರೊ | ಸಿರಿವಲ್ಲಭನಂಫಿಯ ನೆರೆನಂಬಿದವರಿಗೆ (ಮಾಹಾ, ೨) ಎಂದು ಸಾರಿದ್ದೂ ಉಂಟು. ಕನಕದಾಸರು-ಇಷ್ಟು ದಿನ ಈ ವೈಕುಂಠ ಎಷ್ಟು ದೂರವೆನ್ನುತ್ತಿದ್ದೆ-ದೃಷ್ಟಿಯಿಂದ ನೋಡಿದೆ ನಾ ಸೃಷ್ಟಿಗೀಶ ಶ್ರೀರಂಗಶಾಯಿ (ಕ. ಕೀ, ೪೮) ಎನ್ನುವ ಕೀರ್ತನೆಯಲ್ಲಿ ವನ ಉಪವನಗಳಿಂದ, ಘನಸರೋವರಗಳಿಂದ, ಕನಕಗೋಪುರಗಳಿಂದ ಕೂಡಿದ ವೈಕುಂಠದ ವರ್ಣನೆಯಿದೆ. ವಜ್ರವೈಡೂರ್ಯ ತೊಲೆಗಳನ್ನು, ಮಹಾದ್ವಾರವನ್ನು, ನಿರ್ಜರದ ಋಷಿಗಳನ್ನು ಕನಕದಾಸರು ಕಂಡಿದ್ದಾರೆ. ರಂಭೆ ಊರ್ವಶಿಯರ ಮೇಳವನ್ನು ತುಂಬುರು ನಾರದರನ್ನು ಕೂಡ ದಾಸರು ಕಂಡದ್ದುಂಟು. ಅಷ್ಟೇ ಅಲ್ಲದೆ ನಾಗಶಯನ ಮೂರುತಿಯನ್ನು, ಭೋಗಿಭೂಷಣಸಖನನ್ನು, ಭಾಗವತರ ಸಮ್ಮೇಳನವನ್ನು ಆ ವೈಕುಂಠದಲ್ಲಿ-ಅಚ್ಯುತ ಸುಳಿದ ಎನ್ನ ಕಣ್ಣಮುಂದೆ ಅವ್ವ (ಮಾಹಾ. ೧೨೫) ಎನ್ನುವ ಕೀರ್ತನೆಯಲ್ಲಿ ಸಾರಿದ್ದಾರೆ. ನಿಗಮ ಆಗಮ ಪುರಾಣಗಳ ಸಾರ ಸರ್ವಸ್ವವನ್ನೆಲ್ಲ ಬಲ್ಲ ಪುರಂದರ-ಕನಕದಾಸರು ಪರಮಾತ್ಮನನ್ನು ಅಣೋರಣೀಯಾನ್ ಮಹತೋ ಮಹೀಯಾನ್ (ಭಗವದ್ಗೀತೆ ೮-೯) ಎನ್ನುವ ಸ್ವರೂಪದಲ್ಲಿ ಕಂಡಿದ್ದಾರೆ. ಪುರಂದರರು ಅಣುವಿಂಗಣುವಿಂಗಣುವಿಂಗೆ ಅಣುವಿಂಗಣುವಿಂಗಣುವು ಗಡಾ ಮಹತ್ತು ಮಹತ್ತು ಮಹತ್ತು ಮಹತ್ತಿಗೆ ಮಹತ್ತು ಮಹತ್ತು ಮಹತ್ತು ಗಡಾ ಮಹತ್ತಾದ ಅಪರಿಮಿತ ಗಡಾ || ಅಣೋರಣೀಯಾನ್ ಮಹತೋ ಮಹೀಯಾನ್ ಗುಣಗಣಭರಿತ ಪುರಂದರವಿಠಲ (ಮಾಹಾ. ೧೩೦-೨) ಎಂದು ಹೇಳಿದುದಲ್ಲದೆ-ಅಘಟಿತಘಟಿತ ಅಚಿಂತ್ಯಾದ್ಭುತ ಮಹಿಮ ಸ್ವಗತಭೇದ ವಿವರ್ಜಿತ ಪುರಂದರ ವಿಠಲನ (ಮಾಹಾ, ೧೪೦) ದರ್ಶನವನ್ನು ಮಾಡಿದ್ದಾರೆ. ಇದೇ ರೀತಿ ಕನಕದಾಸರು ತಮ್ಮ ದರ್ಶನದಲ್ಲಿ-ಅಣುಮಹತ್ತಾದಿ ದೇವ-ಅಣೋರಣೀಯಾನ್ಮಹಿತೋ ಮಹಿಯಾನ ಖಿಳ ಗುಣಭರಿತ ಪರಮಪಾವನ ಚರಿತನನ್ನು ಕಂಡಿದ್ದಾರೆ. ಹೀಗೆ ಪುರಂದರದಾಸರು ಮತ್ತು ಕನಕದಾಸರು ಸಾಧಿಸಿದ ಲೌಕಿಕ ಮತ್ತು ಪಾರಮಾರ್ಥಿಕ ಸಿದ್ದಿಗಳು ಒಂದೇ ದಾರಿಯಲ್ಲಿ ಸಾಗಿ ಪರಮಾತ್ಮನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿರುವುದನ್ನು ಕಾಣಬಹುದಾಗಿದೆ. ತಮ್ಮ ವೈಯಕ್ತಿಕ ಉದ್ದಾರ ಮಾತ್ರವಲ್ಲದೆ ತಮ್ಮ ಸುತ್ತಮುತ್ತಣ ಸಮಾಜವನ್ನು ಮಹತ್ತಿನ ಕಡೆಗೆ ತಿರುಗಿಸಿದುದಲ್ಲದೆ ಅವರು ಕೂಡ ಮೋಕ್ಷಗಾಮಿಗಳಾಗುವಂತೆ ಮಾಡಿದುದು ಇವರಿಬ್ಬರ ವೈಶಿಷ್ಟ್ಯವಾಗಿದ್ದು ಕನ್ನಡ ಸಾಹಿತ್ಯದ ಮಹತ್ತ್ವದ ಸಂದರ್ಭವೂ ಆಗಿದೆ.