ಪುಟ:Kanakadasa darshana Vol 1 Pages 561-1028.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕಾಲದ ರಾಜಕೀಯ-ಸಾಮಾಜಿಕ-ಧಾರ್ಮಿಕ ಹಿನ್ನೆಲೆ ೯೯೫ ನಂಬಿಕೆಯಂತೆ ಸಮಾಜದ ಒಳಿತಿಗಾಗಿ ಯಜನ ಯಾಜನಾದಿ ಕ್ರಿಯೆಗಳನ್ನು ನೆರವೇರಿಸಿಕೊಂಡು ಬರುತ್ತಿದ್ದ ಬ್ರಾಹ್ಮಣರನ್ನೆ ಪ್ರತಿಗ್ರಹಿಗಳನ್ನಾಗಿ, ಆರಿಸುತ್ತಿದ್ದರು. ಆದರೆ ಅಂತಹ ದತ್ತಿಗಳನ್ನು ಆಚಂದ್ರಾರ್ಕಸ್ಥಾಯಿ' ಯಾಗಿ ಪುತ್ರ ಪೌತ್ರ ಪಾರಂಪರ್ಯವಾಗಿ ನೀಡುವಾಗ, ಆ ಪ್ರತಿಗ್ರಹಿಗಳ ವಂಶಜರೂ ಅಷ್ಟೇ ಸುಶಿಕ್ಷಿತರಾಗಿ, ಅಂತಹದೇ ವೈದಿಕ ಕ್ರಿಯೆಗಳನ್ನು ಮುಂದುವರಿಸಿಕೊಂಡು ಹೋಗುವಂತವರಾಗಿ ಇರಬೇಕೆಂಬ ನಿಬಂಧನೆಯನ್ನು ವಿಧಿಸುವ ಜಾಗರೂಕತೆಯನ್ನು ದಾನಿಗಳಾರೂ ವಹಿಸಲಿಲ್ಲ. ಪರಿಣಾಮವಾಗಿ, ಮೂಲ ದಾನಗಳನ್ನು ಪಡೆದವರ ವಂಶಜರಿಗೆ ಬೇಷರತ್ ಭೂಸ್ವತ್ತಿನ ಸೌಲಭ್ಯವು ದೊರೆತು, ಅವರುಗಳು ಹೆಚ್ಚಿನ ಸಂಪಾದನೆಗಾಗಿ ಇತರ ಜಾತಿಯವರ ಕಾರ್ಯಕ್ಷೇತ್ರಗಳಲ್ಲೂ ಕೈಹಾಕುವುದು ಸುಲಭ ಸಾಧ್ಯವಾಯಿತು, ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿಜಯನಗರ ಯುಗದ ಬ್ರಾಹ್ಮಣರು ಸೈನಿಕ , ವರ್ತಕ ವೃತ್ತಿಗಳಲ್ಲಿ ಉನ್ನತ ಸ್ಥಾನಗಳನ್ನು ಗಳಿಸಿಕೊಂಡಿದ್ದರೆಂಬುದು ಶಾಸನಗಳಿಂದ ತಿಳಿದು ಬರುವ ಸಂಗತಿ. ಇದರಿಂದಾಗಿ ಸಾಮಾಜಿಕ ಅಸಮತೆಗಳು ಇನ್ನಷ್ಟು ತೀವ್ರಗೊಂಡು, ಅಸಂತುಷರೂ ವಂಚಿತರೂ ಇಂತಹ ಅನ್ವಯ ಭೋಜ್ಯವಾದ ಅಗ್ರಹಾರಗಳ, ಬ್ರಹ್ಮಸ್ವಗಳ ಭೂಮಿಯನ್ನು ಸೆಳೆದು ತಮ್ಮದಾಗಿಸಿಕೊಳ್ಳುವ ಪ್ರವೃತ್ತಿಯು ಹೆಚ್ಚಿತು. ಇಂತಹ ಪ್ರತಿಕ್ರಿಯೆಯಿಂದ ಬೇಸತ್ತ ವಿಜಯನಗರ ಕಾಲದ ದಾನಿಗಳು ಹೇಳ ಹೇಸುವ ಶಾಪವಚನಗಳನ್ನು ದಾನಶಾಸನಗಳ ಕೊನೆಯಲ್ಲಿ ಬರೆಸಿದರು ; ನೋಡಿ ಹೇಸುವ ಚಿತ್ರಗಳನ್ನು ಕೆತ್ತಿಸಿ ದತ್ತಿಗಳನ್ನು ಅಪಹರಿಸುವವರನ್ನು ಶಪಿಸಿದರು. “ವೇದವಿಪ್ರರು ತಮ್ಮ ವೃತ್ತಿಸ್ವಾಸ್ಥ್ಯವ ಕಳೆದು ಆಧಾರವಿಲ್ಲದೆ ತಿರಿದು ತಿಂಬುವರು' (೧೨.೪) ಎನ್ನುವ ಕನಕದಾಸರೂ ಕೂಡ 'ಭೂಸುರಸ್ಪದ ಪ್ರಾಸ ಮಾಡಿದ ಫಲ ಏಸೇಸು ಜನುಮಕ್ಕೆ ಬಿಟ್ಟಿತೆ' (೪೮-೧) ಎಂದು ತಮ್ಮದೇ ಶಾಪವನ್ನು ಸೇರಿಸಿರುವರು. ಅವರ ಈ ಮೇಲಿನ ಎರಡು ನುಡಿಗಳೂ ಕನಕದಾಸರೂ ಕೂಡ ತಮ್ಮ ಸಹಜೀವಿಗಳಂತೆಯೆ ಆ ಕಾಲದಲ್ಲಿ ಪ್ರಬಲವಾಗಿದ್ದ ಸಂದಿಗ್ಧತೆಗೂ, ನ್ಯಾಯಾನ್ಯಾಯಗಳನ್ನು ನಿಷ್ಕರ್ಷಿಸಲಾರದ ಉಭಯ ಸಂಕಟಕ್ಕೂ ತುಸು ಮಟ್ಟಿಗಾದರೂ ತುತ್ತಾಗಿದ್ದರೆಂಬುದನ್ನು ಸೂಚಿಸುತ್ತವೆ ಎಂಬುದು ನನ್ನ ವೈಯಕ್ತಿಕ ಅನಿಸಿಕೆ. “ವೇದ ಶಾಸ್ತ್ರ ಪಂಚಾಂಗ ಓದಿಕೊಂಡು ಪರರಿಗೆ ಬೋಧನೆಯ ಮಾಡುವುದು ಹೊಟ್ಟೆಗಾಗಿ, ಗೇಣುಬಟ್ಟೆಗಾಗಿ' (೨೭, ೧) ಎಂದು ಅವರು ಇನ್ನೊಂದು ಕೃತಿಯಲ್ಲಿ ಹೇಳಿರುವ ಐತಿಹಾಸಿಕ ಯಾಥಾರ್ಥ್ಯವು ನನ್ನ ಅನಿಸಿಕೆಗೆ ಪುಷ್ಟಿನೀಡುವಂತಹದು. ವರ್ಣ (ಜಾತಿ) ಧರ್ಮಕ್ಕೆ ದೊರೆತ ಅತಿ ಪ್ರೋತ್ಸಾಹ, ವಾಣಿಜ್ಯ ಕ್ಷೇತ್ರದಲ್ಲಿಯ ಅದೃಷ್ಟಪೂರ್ವ ಪ್ರಮಾಣದ ಬೆಳವಣಿಗೆ, ಹಣಕಾಸಿನ ಚಲಾವಣೆಯ ಹೆಚ್ಚಳ, ಅತಿಯಾಗಿ ಬೆಳೆದುನಿಂತ ಅಧಿಕಾರಿ-ಆಡಳಿತವರ್ಗ, ಬಿಡುವಿಲ್ಲದ ಹೋರಾಟಗಳು, ಬೃಹತೈನ್ಯ-ಇವೆಲ್ಲವೂ ತಂದೊಡ್ಡಿದ ಆರ್ಥಿಕ ಒತ್ತಡಗಳಿಂದ ತತ್ತರಿಸಿ ವಿಜಯನಗರ ಯುಗದ ಸಮಾಜವು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯ ಜಾತಿ, ಉಪಜಾತಿಗಳ ಹುಟ್ಟಿನಿಂದ ಭಿನ್ನಭಿನ್ನವಾಗಿ ಹೋಗಿದ್ದನ್ನು ಶಾಸನಗಳು ನಿರೂಪಿಸುತ್ತವೆ. ಅಧಿಕಾರಿ-ಆಡಳಿತ ಸೂಚಕ ಅಂಕಿತಗಳೂ, ವೃತ್ತಿವರ್ತಕ ಸೂಚಕ ಅಂಕಿತಗಳೂ ಜಾತಿವಾಚಕ ಶಬ್ದಗಳಾಗಿ, ಉಪನಾಮಗಳಾಗಿ ಅಂತಿಮ ರೂಪತಾಳಿದ್ದು ಆ ಕಾಲದಲ್ಲಿ. ತಂತಮ್ಮ ಸ್ವಾರ್ಥಗಳನ್ನು ಸಾಧಿಸಿಕೊಳ್ಳುವ ಸಲುವಾಗಿ ಅಂದಿನ ಜನರೆಲ್ಲರೂ "ಕುಲದ ನೆಲೆಯೇನೆಂದು' (೩೬.ಪ) ತಿಳಿದ ವ ರ ಲ್ಲವಾದರ 'ಕುಲಕುಲ ಕುಲವೆ೦ದು' ಹೊಡೆದಾಡುತ್ತಿದ್ದರೆಂಬುದು ಶಾಸನಗಳಿಂದ ನೇರವಾಗಿ ತಿಳಿದುಬಾರದಿದ್ದರೂ ಕನಕದಾಸರಿಂದ ನಮಗೆ ತಿಳಿದುಬಂದಿದೆ. ಹಿಂದೂ ಧರ್ಮವನ್ನು ಸಂರಕ್ಷಿಸುವಲ್ಲಿ ಸಾಮ್ರಾಜ್ಯದ ಎಲ್ಲ ಪ್ರಜೆಗಳ ಸಹಕಾರವೂ ಅಗತ್ಯವಿದ್ದ ಕಾರಣ, ವಿಜಯನಗರದ ಅರಸುಗಳೂ ಅಧಿಕಾರಿಗಳೂ ಪ್ರಜೆಗಳ ಆಸಕ್ತಿಯನ್ನು ತಮ್ಮ ಧರ್ಮದ ಕಡೆಗೆ ಪರಿಣಾಮಕಾರಿಯಾಗಿ ಸೆಳೆಯುವ ಸಲುವಾಗಿ ಹಿಂದೂ ಧರ್ಮಕ್ಕೆ ಬಾಹ್ಯಾಡಂಬರದ ಹೊದಿಕೆಯನ್ನು ಹೊದಿಸುವಲ್ಲಿ ನಿರತರಿದ್ದರು. ಆ ಕಾಲದಲ್ಲಿ ನಿರ್ಮಾಣಗೊಂಡ ಅಸಂಖ್ಯಾತ ಬೃಹದ್ದೇವಾಲಯಗಳೂ, ಸಾವಿರ ಕಂಬದ ಮಂಟಪಗಳೂ, ಬಾನೆತ್ತರದ ರಾಜಗೋಪುರಗಳೂ ಈ ಬಾಹ್ಯಾಡಂಬರದ ದ್ಯೋತಕಗಳೇ ಆಗಿದ್ದವು. ಅದ್ದೂರಿಯ ರಾಜವೈಭವಗಳನ್ನೂ, ರಾಜಧಾನಿಯಲ್ಲೂ ಸಾಮ್ರಾಜ್ಯದ ಎಲ್ಲ ದೇವಾಲಯಗಳಲ್ಲೂ ನಡೆಯುತ್ತಿದ್ದ ಅದ್ದೂರಿಯ ಹಬ್ಬೋತ್ಸವಗಳನ್ನೂ ಆಡಳಿತವರ್ಗದವರು ಸೃಷ್ಟಿಸಿದ್ದೂ ಅದೇ ಉದ್ದೇಶದಿಂದಲೆ. ವಿಜಯನಗರ ಸಾಮ್ರಾಜ್ಯದ ಈ ವಿಸ್ಮಯಕಾರೀ ಬಾಹ್ಯಾಡಂಬರದ ನೈಜ ಚಿತ್ರಣವು ನಮಗೆ ವಿದೇಶೀ ಯಾತ್ರಿಕರ ಬರಹಗಳು, ಶಾಸನಗಳ ಅಧ್ಯಯನದಿಂದ ತಿಳಿದುಬಂದಿದೆ.