ಪುಟ:Kanakadasa darshana Vol 1 Pages 561-1028.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦೪ ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೬೦೫ ಗಿಡುರೂಪಿನ ಹರುಕು ಗಡ್ಡದ | ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ | “ಮಾರನಾಕಾರದ ನೃಪಾಲಕ ಕೂರರೂಪಾದನು.' ಕನಕದಾಸರು ಚಿತ್ರಿಸಿರುವ ಇಂತಹ ಒಂದೊಂದು ಚಿತ್ರವೂ ಭವ್ಯಾದ್ಭುತವಾದುದು. ಕ್ಲಿಷ್ಟತೆಯ ಸೋಂಕಿಲ್ಲದೆ ಸರಳತೆಯಲ್ಲಿಯೇ ಸಾರ್ಥಕತೆಯನ್ನು ತಂದುಕೊಡುವ ಕವಿಯ ಕೈ ಚಳಕ ಬೆರಗುಗೊಳಿಸುವಂತಹುದು. ಕನಕದಾಸರ ಕಾವ್ಯದ ಹಾಗೂ ಜನಪ್ರಿಯತೆಯ ಗುಟ್ಟು ಅದೇ ಆಗಿದೆ. ಕನ್ನಡ ಕಾವ್ಯಗಳ ಸಾಲಿನಲ್ಲಿ 'ನಳಚರಿತ್ರೆಗೆ ಒಂದು ವಿಶಿಷ್ಟ ಸ್ಥಾನವಿದೆ. ಜನಪ್ರಿಯತೆಯ ದೃಷ್ಟಿಯಿಂದ ಇಂತಹ ಕೃತಿಗಳ ಸಂಖ್ಯೆ ತೀರ ವಿರಳ, ಕನಕದಾಸರ ಕಾವ್ಯ ಶಕ್ತಿ-ಪ್ರತಿಭೆ ಇಲ್ಲಿ ಮಯೂರ ನರ್ತನದಂತೆ ಗರಿಗೆದರಿ ಸಹಜವಾಗಿ ಮೈದೆರೆದುಕೊಂಡಿದೆ, ಅದರಂತೆಯೇ ಮೋಹಕವಾಗಿ ಮನ ಸೆಳೆಯುವ ಮೋಹಕಾಸ್ತವಾಗಿಯೂ ಹೊರಚಿಮ್ಮಿದೆ. ಕನಕದಾಸರು 'ರಾಮಧಾನ್ಯಚರಿತೆ'ಯ ಮೂಲಕ ತೋರಿರುವ ವೈಶಿಷ್ಟ ಅವರನ್ನು ಮತ್ತಷ್ಟು ಮೇಲಕ್ಕೆತ್ತಿದೆ. ಇದು ಒಂದು ಚಮತ್ಕಾರದ ಕಾಲ್ಪನಿಕ ವಸ್ತುವನ್ನೊಳಗೊಂಡ ಕೃತಿಯಾದರೂ, ಕನಕದಾಸರು ಮುಖ್ಯವಾಗಿ ಆ ಮೂಲಕ ಹೇಳ ಹೊರಟಿರುವ ಸಂದೇಶ ಮತ್ತು ಉದ್ದೇಶ ಸ್ಪಷ್ಟವಾದುದು. ರಾಗಿ ಮತ್ತು ಭತ್ತಗಳ ನಡುವೆ ಉಂಟಾಗುವ ಜಗಳ, ವಾಸ್ತವವಾಗಿ ಮೇಲು-ಕೀಳು ಎಂಬ ಭಾವನೆಯ ಹಿನ್ನೆಲೆಯನ್ನು ಪ್ರತಿನಿಧಿಸುವಂತಹುದೇ ಆಗಿದೆ. ರಾಘವನಿಗೂ, ರಾಗಿಗೂ ಸಂಬಂಧವನ್ನು ಕಲ್ಪಿಸುವುದರ ಮೂಲಕ ರಾಗಿಯ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಪ್ರಯತ್ನವಾಗಲಿ ಮಹಾಭಾರತ ಪುರಾಣಗಳ ಹಿನ್ನೆಲೆಯನ್ನೊದಗಿಸುವುದರ ಮೂಲಕ ಅದರ ಗಾಂಭೀರ್ಯವನ್ನು ಹೆಚ್ಚಿಸುವ ಪ್ರಯತ್ನವಾಗಲಿ ಅಷ್ಟೊಂದು ಪರಿಣಾಮವೆನಿಸದಿದ್ದರೂ, ಕನಕದಾಸರ ಮೂಲೋದ್ದೇಶ ಅಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಿಗೊಂಡಿದೆ. ಇಲ್ಲಿ ಬರುವ ಪಾತ್ರಗಳುಕಾಡುಪ್ರಾಣಿಗಳಾಗಲಿ, ಊರು ಪ್ರಾಣಿಗಳಾಗಲಿ ಅಥವಾ ಮಾನವ ಪ್ರಾಣಿಗಳಾಗಲಿ ಆಗಿರದೆ ಧಾನ್ಯಗಳಾಗಿರುವುದು ಗಮನಾರ್ಹ. ಬಹುಶಃ ಇದೊಂದು ಅಪರೂಪದ ಅಪೂರ್ವ ಸಂಗತಿ ಎನ್ನಬಹುದು. ಕನಕದಾಸರ ಅಸಾಧಾರಣ ಕಲ್ಪನಾ ಪ್ರತಿಭೆಯ ಫಲವೇ 'ಶ್ರೀರಾಮಧಾನ್ಯಚರಿತೆ.' ಅಂದೂ (ಇಂದೂ) ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೇಲು-ಕೀಳೆಂಬ ಭಾವನೆಯಿಂದ ಹದಗೆಟ್ಟ ಸಮಾಜವನ್ನು ಕಂಡು ನೊಂದ ಕನಕದಾಸರ ಅಂತರಂಗ ಮಿಡಿದ ನಾದವೇ ಈ ಕೃತಿ. ನರದೆಲಗ (ರಾಗಿ) ಮತ್ತು ವೀಹಿ (ಭತ್ತ) ಇವುಗಳ ನಡುವೆ ನಡೆಯುವ ಜಗಳದಲ್ಲಿ ಅದು ವ್ಯಕ್ತವಾಗಿರುವುದನ್ನು ಕಾಣಬಹುದು. ಭತ್ತ : ಕೃತಿಯಮರರುಪನಯನದಲಿ ಸು ವತ ಸುಭೋಜನ ಪರಮ ಮಂತ್ರಾ ಕತೆಗಳಲಿ ಶುಭಶೋಭನದಲಾರತಿಗೆ ಹಿರಿಯರಲ್ಲಿ ಕ್ರತುಗಳೆಡೆಯೊಳಗರಮನೆಯಲಿ ಪ್ರತಿದಿನವು ರಂಜಿಸುವ ದೇವರಿ ಗತಿಶಯದ ನೈವೇದ್ಯ ತಾನೆಂದನಾ ವಿಹಿಗ || ರಾಗಿ : ಸತ್ಯಹೀನನು ಬಡವರನು ಕ | ಣ್ಣೆತ್ತಿ ನೋಡೆ ಧನಾಡ್ಯರನು ಬೆಂ ಬತ್ತಿ ನಡೆವವುಪೇಕ್ಷೆ ನಿನ್ನದು ಹೇಳಲೇನದನು ಹೆತ್ತ ಬಾಣಂತಿಯರು ರೋಗಿಗ ಪತ್ಯ ನೀನಹೆ ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವೆಂದ || ಅತ್ಯಂತ ಸ್ವಾರಸ್ಯವಾಗಿ ಹೀಗೆ ಮುಂದುವರಿಯುವ ಈ ಜಗಳ ಕೊನೆಗೆ “ದೇವರಿಗೆ ಪರಮಾನ್ನ ನೀ, ಮನುಜಾವಳಿಗೆ ಪಕ್ವಾನ್ನಮೀತನು” ಎಂಬ ತೀರ್ಮಾನದೊಂದಿಗೆ ಮುಕ್ತಾಯವಾಗುವ ಕಾವ್ಯ ಕನಕದಾಸರ ಹೊಸ ಬಗೆಯ ಸೃಷ್ಟಿ, ವಸ್ತು ಬೇರೆಯಾದರು ಅದರ ನಿರ್ವಹಣೆ ಗಂಭೀರ ಕಾವ್ಯದ ನಿರ್ವಹಣೆಯಂತೆಯೇ ಇದೆ. ಇದೊಂದು ಅಣಕು ಮಹಾಕಾವ್ಯವಾಗಿ, ವಿನೋದ ವಿಡಂಬನೆಗಳ ಮೂಲಕ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ದೊಡ್ಡ ಪಿಡುಗೊಂದನ್ನು ಬುಡಮೇಲು ಮಾಡುವ ಕಾರ್ಯದಲ್ಲಿ ಪಾಲ್ಗೊಂಡಿದೆ. ಇಂತಹ ವಿಷಯವನ್ನು ಕುರಿತು ಕೀರ್ತನೆಗಳಲ್ಲಿ ಸಾಕಷ್ಟು ಸ್ಪಷ್ಟವಾಗಿಯೇ ಮನದಟ್ಟಾಗಿಸಿದ್ದರೂ, ಕನಕದಾಸರು ಇಲ್ಲಿ ಅದನ್ನು ಮತ್ತೊಂದು ರೀತಿಯಲ್ಲಿ ಪರಿಣಾಮಕಾರಿಯಾಗಿಸುವ ಪ್ರಯತ್ನವೆಸಗಿದ್ದಾರೆ. ವಚನಸಾಹಿತ್ಯದಲ್ಲಿ ಕಂಡುಬರುವ 'ಬೆಡಗಿನವಚನ'ಗಳಂತೆ ಕನಕದಾಸರು ಕೀರ್ತನೆಗಳ ಸಾಲಿನಲ್ಲಿ ರಚಿಸಿರುವ 'ಮುಂಡಿಗೆಗಳು 'ಕನಕನ ಮುಂಡಿಗೆ' ಗಳೆಂದೇ ಪ್ರಖ್ಯಾತವಾಗಿವೆ. ಅವು ಕನಕದಾಸರ ಮತ್ತೊಂದು ಮುಖವನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿವೆ. “ಕನಕದಾಸರ ಮುಂಡಿಗೆಗಳಲ್ಲಿ ಚಮತ್ಕಾರದ ಜೊತೆಜೊತೆಯಲ್ಲಿಯೇ ಪಾಂಡಿತ್ಯ, ತತ್ವಜ್ಞಾನ, ಆತ್ಮಾನುಭವ ಮುಂತಾದವುಗಳು ಆಕರ್ಷಕವಾದ ರೀತಿಯಲ್ಲಿ ವ್ಯಕ್ತಗೊಂಡಿವೆ. ಉಳಿದವರ ಜಾಣ್ನೆಯನ್ನು ಪರೀಕ್ಷಿಸುವ ಸವಾಲಾಗಿ ಇವು ಕಂಡು ಬರುತ್ತವೆ.