ಪುಟ:Kanakadasa darshana Vol 1 Pages 561-1028.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೬೦೭ ಕನಕದಾಸರ ಕೃತಿಗಳ ಸ್ಕೂಲವಾದ ಸಮೀಕ್ಷೆಯ ನಂತರ ಕನ್ನಡ ಕವಿಗಳ ಸಾಲಿನಲ್ಲಿ ಅವರ ಸ್ಥಾನವೇನು ? ಎಂಬುದರ ಒಂದು ವಿವೇಚನೆಯೂ ಅಗತ್ಯವೆನಿಸುತ್ತದೆ. ಇದುವರೆಗೆ ಗಮನಿಸಿದಂತೆ ಕನಕದಾಸರು ವಿಶಿಷ್ಟ ವ್ಯಕ್ತಿತ್ವದ, ಅದ್ಭುತ ಪ್ರತಿಭೆಯ ಕವಿ ಹಾಗೂ ಕೀರ್ತನಕಾರ ; ಅಷ್ಟೇ ಅಲ್ಲ ಸಂಸಾರಿಯಾಗಿದ್ದು, ಸಂತನಾಗಿ, ಜ್ಞಾನಿಯಾಗಿ ಮೆರೆದವನು. ಆ ಹಿನ್ನೆಲೆಯಲ್ಲಿ ಅವನ ಬಗ್ಗೆ ಹುಟ್ಟಿಕೊಂಡಿರುವ ಹಲವು ದಂತಕಥೆಗಳು ಕನಕದಾಸನೊಬ್ಬ ಭಕ್ತಶ್ರೇಷ್ಠ, ಕುಶಲಮತಿಯಾದ ಜ್ಞಾನಿ ಎಂಬುದರ ನಿದರ್ಶನಗಳಾಗಿವೆ. ವಿದ್ವದ್ಯೋಷ್ಠಿಯಲ್ಲಿ ಅವರು ಉತ್ತರಿಸಿದ 'ನಾನು ಹೋದರೆ ಹೋದೇನು? ಪ್ರಸಂಗವಾಗಲಿ, ಬಾಳೇ ಹಣ್ಣಿನ ಪ್ರಸಂಗವಾಗಲಿ, ಅಥವಾ ಶ್ರೀಕೃಷ್ಣದರ್ಶನಕ್ಕೆ ಅರ್ಚಕರಿಂದ ಅಡ್ಡಿಯಾದಾಗ ಅವನಿದ್ದೆಡೆಗೆ ಕಿಂಡಿಯ ಮೂಲಕ ಕೃಷ್ಣನೇ ದರ್ಶನ ಕೊಟ್ಟ ಪ್ರಸಂಗವಾಗಲಿ ಕನಕದಾಸರ ಅಪಾರ ಶಕ್ತಿಯ ಹಾಗೂ ಜ್ಞಾನ ಪ್ರತಿಭೆಗಳ ದ್ಯೋತಕವಾಗಿವೆ. ಬಹುಶಃ ಮಹಾಭಾರತ ಕಥೆಯನ್ನು ಬರೆಯುವಾಗ ಕುಮಾರವ್ಯಾಸ ಒದ್ದೆಯ ವಸ್ತವನ್ನು ಹೊದೆದು ಗದುಗಿನ ವೀರನಾರಾಯಣನ ಗುಡಿಯಲ್ಲಿ ಕುಳಿತು ಬರೆಯುತ್ತಿದ್ದು, ಆ ವಸ್ತ ಒಣಗಿದಂತೆ ಅವನ ಕಾವ್ಯ ಪ್ರತಿಭೆಯೂ ಕುಗ್ಗುತ್ತಿತ್ತು ಎಂಬಂಥ ದಂತಕಥೆಯನ್ನು ಬಿಟ್ಟರೆ ಇನ್ನೊಂದು ಪ್ರಮಾಣದ ದಂತಕಥೆಗಳು ಒಬ್ಬನೇ ಕವಿಯ ಬಗೆಗೆ ಇದ್ದಂತೆ ಕಾಣುವುದಿಲ್ಲ. ಕನಕದಾಸರು ಒಬ್ಬ ಶೂದ್ರ ಸಂತಕವಿಯಾಗಿ ಮೇಲೆ ಬಂದುದರಿಂದ, ಅವರು ಹೊಕ್ಕ ಹೊಸ ಕ್ಷೇತ್ರದಲ್ಲಿ ಹೋರಾಟ ನಡೆಸಬೇಕಾಗಿ ಬಂದುದರಿಂದ ಈ ಬಗೆಯ ದಂತಕಥೆಗಳಿಗೆ ಅವಕಾಶವಾಗಿರಬೇಕು. ಅಲ್ಲದೆ ಕನಕದಾಸರ ನೈಜ ಭಕ್ತಿ, ಜ್ಞಾನ ಹಾಗೂ ಕುಶಲ-ಮತಿತ್ವಕ್ಕೆ ಹಲವರು ಅಸೂಯೆ ಪಟ್ಟದ್ದು ಇದಕ್ಕೆ ಕಾರಣವಿರಬೇಕು, ಆದರೆ ಕನಕದಾಸರು ಇವೆಲ್ಲಕ್ಕೂ ಕಿವಿಗೊಟ್ಟರೂ, ಮನಗೊಡದೆ ತಮ್ಮ ಕೀರ್ತನೆಗಳ ಮೂಲಕವೇ ಸರಿಯಾಗಿ ಉತ್ತರಿಸಿ ಅವರನ್ನೆಲ್ಲ ತಣ್ಣಗಾಗಿಸಿದ್ದು ಅವರ ಅದ್ಭುತ ಪ್ರತಿಭೆಗೆ ಸಾಕ್ಷಿ. ಕನಕದಾಸರ ಕೀರ್ತನೆಗಳಲ್ಲಿ ಕಂಡುಬರುವ ತೀಕ್ಷವಾದ ಅಭಿವ್ಯಕ್ತಿಗೆ ಅವರು ಎದುರಿಸಿದ ಘಟನೆಗಳೇ ಕಾರಣವೆನ್ನಬಹುದು. ಆದರೆ ಉಳಿದ ಕೀರ್ತನಕಾರರಿಗಾಗಲಿ, ಕವಿಗಳಿಗಾಗಲಿ ಇಂತಹ ಸಂದಿಗ್ಧ ಪರಿಸ್ಥಿತಿ ಇದ್ದುದು ಕಂಡುಬರುವುದಿಲ್ಲ. ದಾಸಪಂಥದಲ್ಲಿಯ ಹಲವು ಹರಿದಾಸರಲ್ಲಿ ಎಲ್ಲರನ್ನು ಒಂದಾಗಿಸುವ ಅಥವಾ ಒಂದಾಗಿ ಭಾವಿಸುವ ಮಾತುಗಳು ಕೇಳಿ ಬರುತ್ತದೆಯಾದರೂ, ಅದು ಕಾರ್ಯರೂಪದಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ. ಜಾತಿ ಮತಗಳ ಅಂತರವನ್ನು ತೊಡೆದು ಹಾಕುವ ಅಥವಾ ಕಡಿಮೆ ಮಾಡುವ ಪ್ರಯತ್ನ ಕೇವಲ ಪ್ರಯತ್ನವಾಗಿಯೇ ಕಂಡುಬರುತ್ತದೆ. ಅದು ಕನಕದಾಸರನ್ನೂ ಕಾಡಿತು ಎಂದಾಗ ಅದರ ಕರಾಳ ಸ್ವರೂಪದ ಬಗೆಗೆ ಯಾರಾದರೂ ಸುಲಭವಾಗಿ ಆಲೋಚಿಸಬಹುದು. ವ್ಯಾಸರಾಯರು ಅಥವಾ ಪುರಂದರ ದಾಸ ರಂತಹವರೊಬ್ಬಿಬ್ಬರು ಅವರನ್ನು ಅರ್ಥಮಾಡಿಕೊಂಡು- “ಕನಕದಾಸರ ಮೇಲೆ ದಯಮಾಡಲು ವ್ಯಾಸಮುನಿ ಮಠದ ಜನರೆಲ್ಲ ದೂರಿಕೊಂಬುವರು” ಎಂಬಂತಹ ಸಂದರ್ಭವನ್ನು ಬಿಟ್ಟರೆ ಮಿಕ್ಕವರೆಲ್ಲ ಅವರನ್ನು ಕಾಡಿದ್ದೇ ಹೆಚ್ಚು. ಹಾಗಾಗಿಯೇ ಅವರ ರಚನೆಗಳು ಹೆಚ್ಚು ಮೊನಚಾಗಿ, ಪರಿಣಾಮಕಾರಿಯಾಗಿ ಉಳಿದವರಿಗಿಂತ ಭಿನ್ನವಾಗಿ ಹೊರಹೊಮ್ಮಲು ಸಾಧ್ಯವಾಯಿತು. ಆದರೆ ವೀರಶೈವ ಧರ್ಮದ ಹಿನ್ನೆಲೆಯಲ್ಲಾಗಲಿ ಅಥವಾ ವಚನ ಸಾಹಿತ್ಯದ ಸಂದರ್ಭದಲ್ಲಿಯಾಗಲಿ ಇಂತಹ ಪರಿಸ್ಥಿತಿ ಕಂಡುಬರುವುದಿಲ್ಲ. ಅವರು ಒಟ್ಟಾರೆ ಸಮಾಜ ಸುಧಾರಣೆಯತ್ತ ನಡೆದವರು. ಮೇಲು-ಕೀಳನ್ನು ನಿರ್ಮೂಲ ಮಾಡಲು ದೃಢ ಹೆಜ್ಜೆಯನ್ನಿಟ್ಟವರು. ಹಾಗಾಗಿ ಧಾರ್ಮಿಕ ವಿಚಾರಗಳಲ್ಲಿಯಾಗಲಿ. ಸಾಮಾಜಿಕ ವಿಚಾರಗಳಲ್ಲಿಯಾಗಲೀ ಅಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಲು ಸಾಧ್ಯವೇ ಆಗಲಿಲ್ಲ. ಎಲ್ಲರಿಗೂ ಸಮಾನಾವಕಾಶವನ್ನು ಕಲ್ಪಿಸುವ ಹಿನ್ನೆಲೆಯಲ್ಲಿ ಸಮಾನ ಚಿಂತನೆ-ಸಮಾನ ಅವಕಾಶಗಳು ಪ್ರಾಪ್ತವಾದುವು. ಇದರಿಂದಾಗಿ ಸಮಾಜದ ಯಾವುದೇ ವರ್ಗದಿಂದ, ಯಾವುದೇ ಸ್ಥಿತಿಯಿಂದ ಬಂದ ವ್ಯಕ್ತಿಯಾದರೂ ಅವನ ಮಾತಿಗೆ ಬೆಲೆ ಕೊಡುವ ಹಾಗೂ ಪರಸ್ಪರ ಗೌರವಿಸುವ ವಾತಾವರಣ ವೀರಶೈವ ಧರ್ಮದ ಹಿನ್ನೆಲೆಯಲ್ಲಿ ಉಂಟಾಗಿತ್ತು. ವೈದಿಕ ಧರ್ಮದ ಹಿನ್ನೆಲೆಯಲ್ಲಿ ದಾಸ ಸಾಹಿತ್ಯದ ಸಂದರ್ಭದಲ್ಲಿ ಕನಕದಾಸರು ಎದುರಿಸಿದ ಸಮಸ್ಯೆಗಳು, ಇಲ್ಲಿ ಕಂಡುಬರುವುದಿಲ್ಲ. ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿದ್ದ ಕೆಲವೊಂದು ಕಂದಾಚಾರಗಳನ್ನು, ಅಸಮತೆಯನ್ನು, ಮೂಢನಂಬಿಕೆಗಳನ್ನು ಕಿತ್ತೊಗೆಯಲು ಧರ್ಮದ ಮುಖಂಡರಾಗಿ ಬಸವಣ್ಣನವರು ಮತ್ತೆ ಅಂತಹ ಕೆಲವರು ಆಡಿದ ಮಾತುಗಳನ್ನು ಬಿಟ್ಟರೆ, ಉಳಿದವರಲ್ಲಿ ಅಂತಹ ಮಾತುಗಳು ಕೇಳಿ ಬರುವುದಿಲ್ಲ. ಕನಕದಾಸರಂತೆ ಅಲ್ಲಿ ಯಾವೊಬ್ಬ ಶರಣನೂ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಾದ ಸನ್ನಿವೇಶವೇ ಬರುವುದಿಲ್ಲ. ಕನಕದಾಸರ ಸಾಹಿತ್ಯದ ಕೊಡುಗೆಯಲ್ಲಿ ಕಂಡುಬರುವ ವೈಶಿಷ್ಟ್ಯಕ್ಕೆ ಇದೂ ಒಂದು ಕಾರಣವಾಗಿದೆ.