ಪುಟ:Kanakadasa darshana Vol 1 Pages 561-1028.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೬೧೫ ನಡೆಸಿಕೊಂಡ ನಮ್ಮ ಹಲವು ಕವಿಗಳಿಗಿಂತ ಇಲ್ಲಿ ಕನಕದಾಸರು ತೀರ ಭಿನ್ನವಾಗಿಯೇ ನಿಲ್ಲುತ್ತಾರೆ. ಪ್ರಾಚೀನ ಕವಿಗಳನ್ನು ಹೊರತು ಪಡಿಸಿ-ಸ್ವಲ್ಪಮಟ್ಟಿಗೆ ಕಾವ್ಯದ ರೂಪ, ರೀತಿ ಹಾಗೂ ಕಾಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಕನಕದಾಸರಿಗೆ ಹತ್ತಿರವಾಗಬಹುದಾದ ರುದ್ರಭಟ್ಟ, ಕುಮಾರವ್ಯಾಸ, ರತ್ನಾಕರವರ್ಣಿ, ನಂಜುಂಡ ಕವಿ, ವಚನಕಾರರು ಹಾಗೂ ಕೀರ್ತನಕಾರರ ಜೊತೆಯಲ್ಲಿ ಕನಕದಾಸರನ್ನು ಇಟ್ಟು ನೋಡುವ ಪ್ರಯತ್ನ ಮಾಡಬಹುದು. ಕನಕದಾಸರೂ ಕೂಡ-ಕುಮಾರವ್ಯಾಸ, ರುದ್ರಭಟ್ಟರಂತೆ, ಷಟ್ಟದಿಯಲ್ಲಿ ಕಾವ್ಯ ರಚಿಸಿದ್ದಾರೆ ; ರತ್ನಾಕರವರ್ಣಿ, ನಂಜುಂಡ ಕವಿಯರಂತೆ ಸಾಂಗತ್ಯದಲ್ಲಿ ಕೃತಿ ರಚನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರೀರ್ವರಂತೆ ಶೃಂಗಾರವನ್ನು ಮೆರೆದಿದ್ದಾರೆ. ರುದ್ರಭಟ್ಟ, ಕುಮಾರವ್ಯಾಸರಂತೆ ಶ್ರೀಕೃಷ್ಣಭಕ್ತಿಯನ್ನು ತೋರಿದ್ದಾರೆ. ವಚನಕಾರರು ಹಾಗೂ ಇತರ ಕೀರ್ತನಕಾರರಂತೆ ಸಾಮಾಜಿಕ ಪ್ರಜ್ಞೆಯನ್ನು, ಬೆಡಗಿನ ವಚನಗಳಂತೆ “ಮುಂಡಿಗೆಗಳನ್ನು ಬರೆದಿದ್ದಾರೆ. ಹಾಗೆಯೇ 'ರಾಮಧಾನ್ಯ ಚರಿತೆ' ಯಂತಹ ವಿಶಿಷ್ಟ ಕಾವ್ಯವಸ್ತುಗಳನ್ನೂ ನೀಡಿದ್ದಾರೆ. ರುದ್ರಭಟ್ಟನ 'ಜಗನ್ನಾಥವಿಜಯ', ಕುಮಾರವ್ಯಾಸನ 'ಭಾರತ ಕಥಾಮಂಜರಿ' ಹಾಗೂ ಕನಕದಾಸರ ಹರಿಭಕ್ತಿಸಾರ' ಇವು ಮೂರೂ ಒಂದರ್ಥದಲ್ಲಿ ಶ್ರೀಕೃಷ್ಣ ಪಾರಮ್ಯವನ್ನು ಸಾರುವ ಕೃತಿಗಳು ಹಾಗೆಯೇ 'ಜಗನ್ನಾಥವಿಜಯ' ಹೊರತಾಗಿ ಉಳಿದೆರಡು ಷಟ್ಟದಿಯಲ್ಲಿ ರಚನೆಗೊಂಡ ಕೃತಿಗಳು. ಕನಕದಾಸ-ಕುಮಾರವ್ಯಾಸರಿಗೆ ಹೋಲಿಸಿದರೆ, ರುದ್ರಭಟ್ಟ ಕವಿಗಿಂತ ಹೆಚ್ಚಾಗಿ ಪಾಂಡಿತ್ಯವುಳ್ಳವರು. ಅವರ ಬಂಧ ಬಿಗಿ 'ವೈಷ್ಣವ ಕಾವ್ಯ ರಸಾವರ್ಣಂ ತುಳುಕಾಡುಗೆ' ಎಂಬ ಆಸೆಯನ್ನು ಹೊತ್ತು ಕೃತಿ ರಚನೆಮಾಡಿದ್ದರೂ, ಅದು ಸಾಮಾನ್ಯನಿಗೆ ನಿಲುಕುವಂತಾದುದು ಕವಿಯ ಪಾಂಡಿತ್ಯ ಪ್ರದರ್ಶನದ ಕಾರಣದಿಂದಾಗಿ, ಶ್ರೀಕೃಷ್ಣನ ಜನನದಿಂದ-ಬಾಣಾಸುರನ ವಧೆಯವರೆಗೆ ಕಥೆ ಹಬ್ಬಿದ್ದರೂ, ಸ್ವಾರಸ್ಯವಾದ ಭಾಗಗಳನ್ನು ಒಳಗೊಂಡಿದ್ದರೂ, 'ನಾರಿಕೇಳ ಪಾಕದ ಭಾಷಾ ಪ್ರೌಢಿಮೆಯಿಂದಾಗಿ ಕಾವ್ಯ ಸ್ವಾದನೆಗೆ ಅಡ್ಡಿಯಾಗುತ್ತದೆ. ವಿಮರ್ಶಕರು ಅಭಿಪ್ರಾಯಿಸುವಂತೆ : 'ಕವಿಯ ಕಾವ್ಯದಲ್ಲಿ ಆನಂದಕ್ಕೆ ವಸ್ತುವಿದೆ, ಅದನ್ನು ಕಷ್ಟಪಟ್ಟು ಪಡೆಯಬೇಕಾಗಿದೆ. ಕವಿಯ ರಚನೆ ದ್ರಾಕ್ಷಾರಸವಲ್ಲ 'ನಾರಿಕೇಳ ಪಾಕ ಎಂಬ ಮಾತು ಸತ್ಯ. ಆದರೆ ಈ ದೃಷ್ಟಿಯಿಂದ ನೋಡುವಾಗ-ಕನಕದಾಸರು ಹಾಗೂ ಕುಮಾರವ್ಯಾಸ ಬೇರೆಯಾಗಿಯೇ ನಿಲ್ಲುತ್ತಾರೆ. ಇವರ ಕಾವ್ಯ ರುದ್ರಭಟ್ಟನ ಕಾವ್ಯದಂತೆ ನಾರಿಕೇಳ ಪಾಕವಲ್ಲ, ದ್ರಾಕ್ಷಾರಸ, ಭಕ್ತಿಮಾರ್ಗಕ್ಕೆ ಭಾಷೆ ಪಾಂಡಿತ್ಯ ಅಡ್ಡಿಯಾಗದಂತೆ ಇವರಿಬ್ಬರೂ ನೋಡಿಕೊಂಡಿದ್ದಾರೆ. ಕುಮಾರವ್ಯಾಸ ಕೃಷ್ಣಭಕ್ತನೇ ಆದರೂ, ಕನಕದಾಸನಂತೆ ಸಂತನಲ್ಲ. ಅನುಭಾವಿಕವಿಯಲ್ಲ. ದೊಡ್ಡ ಕಥಾಸಾಗರದ ಹರಹಿನಲ್ಲಿ ಅವನು ಕೃಷ್ಣಭಕ್ತಿಯನ್ನು ಮೆರೆದವನು : ತಿಳಿಯ ಹೇಳುವೆ ಕೃಷ್ಣಕಥೆಯನು ಇಳೆಯ ಜಾಣರು ಮೆಚ್ಚುವಂತಿರೆ ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣಮೆಚ್ಚಲಿಕೆ ಹಲವು ಜನ್ಮದ ಪಾಪರಾಶಿಯ ತೊಳೆವ ಜಲವಿದು ಶ್ರೀಮದಾಗಮ ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ || ಎಂದು ಹೇಳುವಲ್ಲಿ ತನ್ನ ಕಾಮ್ಮೋದ್ದೇಶವನ್ನೂ, ರೀತಿಯನ್ನು ಸ್ಪಷ್ಟಪಡಿಸುತ್ತಾನೆ, ಕುಮಾರವ್ಯಾಸ ಜನತೆಯ ಕವಿ. ಮಹಾಕಾವ್ಯದ ನಿರ್ವಹಣೆಯನ್ನು ಹೊತ್ತರೂ ಅವನು ಈ ನೆಲಕ್ಕೆ ಜಲಕ್ಕೆ ಬೆಲೆಕೊಟ್ಟ ಕವಿ. ಸರಳತೆಯಲ್ಲಿಯೇ ಸುಭಗತೆಯನ್ನು ಮೆರೆದ ಕವಿ. ಜನಭಾಷೆಯನ್ನು ಕಾವ್ಯಭಾಷೆಯಲ್ಲಿ ಬೆರೆಸಿ ಹೊಸ ರುಚಿಯನ್ನೂ, ಸತ್ವವನ್ನೂ ಮೂಡಿಸಿದ ಮೋಡಿಕಾರ, ಶ್ರೀಕೃಷ್ಣನ ಅದ್ಭುತ ಶಕ್ತಿಯನ್ನು, ಮಹಿಮೆ-ಹಿರಿಮೆಗಳನ್ನು ಕಾವ್ಯದಲ್ಲಿ ಅಂತರ್ಗತವಾದಂತೆ ವೈಶಿಷ್ಟ್ಯಪೂರ್ಣವಾಗಿ ಹೊರಹೊಮ್ಮಿಸಿದ ಜಾದೂಗಾರ. ಮಹತ್ತಿನೊಡನೆ ಜನಪ್ರಿಯತೆಯನ್ನು ಮೆರೆದ ಈ ಕವಿಯ ಕಾವ್ಯ ಮೈಯಲಿ ಮಿಂಚಿನ ಹೊಳೆ ತುಳುಕಾಡುವಂತೆ, ಮಾಡಬಲ್ಲ ಶಕ್ತಿಯುಳ್ಳದ್ದು. ಆದರೆ ಇದರ ವ್ಯಾಪ್ತಿಯೇ ಬೇರೆ. ಕುಮಾರವ್ಯಾಸನ ಭಾರತದೊಂದಿಗೆ ಹೋಲಿಸಿದಾಗ ಕನಕದಾಸರ “ಹರಿಭಕ್ತಿಸಾರ' ಕೇವಲ ೧೧೦ ಷಟ್ಟದಿಗಳುಳ್ಳ ಕಿರು ಕೃತಿ. ಆದರೆ ಕುಮಾರವ್ಯಾಸ ಕೃಷ್ಣ ಮಹಿಮೆಯನ್ನೂ, ಭಕ್ತಿಯನ್ನೂ ಇಡೀ ಕಾವ್ಯದಲ್ಲಿ ಹರಡಿರುವುದನ್ನು ಕನಕದಾಸರು ಈ ೧೧೦ ಪದ್ಯಗಳಲ್ಲಿ ರಸವತ್ತಾಗಿ ಬಣ್ಣಿಸಿದ್ದಾರೆ. ಸೂತ್ರಧಾರಿಯೆನಿಸಿದ ಕೃಷ್ಣನ ಮಹಿಮೆಯನ್ನು ಮೈಮರೆತು ಕೊಂಡಾಡಿದ್ದಾರೆ. ಕನಕದಾಸರು ಕವಿಯಾದರೂ ಸಂತ. ಆದರೆ ಕುಮಾರವ್ಯಾಸ ಸಂತನಲ್ಲಕೃಷ್ಣಭಕ್ತ, ಕೃಷ್ಣಭಕ್ತಿಯನ್ನು ಮೆರೆಯುವುದಷ್ಟೇ ಅವನ ಉದ್ದೇಶವಲ್ಲ. ಅವನು