ಪುಟ:Kanakadasa darshana Vol 1 Pages 561-1028.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ ೩೨ ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೬೩೩ ಗಾಢವಾದ ಪಾಂಡಿತ್ಯವನ್ನೂ ಮೆರೆದಿದ್ದಾರೆ. ಹಲವು ಟೀಕಾಕಾರರ ಬಾಯಿ ಮುಚ್ಚಿಸುವುದಕ್ಕೂ ಇವು ಸಹಾಯಕವಾಗಿರಬೇಕು. ಆ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನು ಕನಕದಾಸರು ತೋರಿದ್ದಾರೆ. ಕೀರ್ತನೆ, ಷಟ್ಟದಿ, ಸಾಂಗತ್ಯಗಳಂತಹ ಛಂದಸ್ಸಿನಲ್ಲಿ ಸರಳ ರಚನೆಯನ್ನು ಮಾಡಿ ಜನಪ್ರಿಯ ಕವಿ ಯಾದಂತೆಯೇ, “ಮುಂಡಿಗೆ'ಗಳಂತಹ ರಚನೆಗಳ ಮೂಲಕ ಪಂಡಿತ ಕವಿಗಳ ಸಾಲಿನಲ್ಲಿಯೂ ಸ್ಥಾನ ಪಡೆದಿದ್ದಾರೆ.

  • * * ಕನಕದಾಸರ ವ್ಯಕ್ತಿತ್ವ ಮತ್ತು ಪ್ರತಿಭೆ ವಿಶಿಷ್ಟ ಬಗೆಯದು. ಅವರು ನಡೆದು ಬಂದ ಹಾದಿಯ ಹಿನ್ನೆಲೆಯಲ್ಲಿ ಅದಕ್ಕೊಂದು ವಿಶಿಷ್ಟ ಮಹತ್ವವಿದೆ-ಸತ್ವವಿದೆ ಹಾಗೂ ತತ್ವವೂ ಇದೆ. ಕನ್ನಡ ಸಾಹಿತ್ಯದ ಚಂಪೂ ಕವಿಗಳ ಸಾಲಿನಲ್ಲಾಗಲಿ; ಷಟದಿ, ಸಾಂಗತ್ಯ ಅಥವಾ ಕೀರ್ತನಕಾರರ ಸಾಲಿನಲ್ಲಾಗಲಲಿ ಕನಕದಾಸರ ತಮ್ಮದೇ ಆದ ಸ್ಥಾನವನ್ನು ಕಾಯ್ದುಕೊಂಡು ಬಂದಿದ್ದಾರೆ. ಕೀರ್ತನಕಾರ, ಸಂತ, ಕವಿ ಹಾಗೂ ಕಲಿ ಎನಿಸಿದ ಕನಕದಾಸರ ಅನುಭವ ವ್ಯಾಪಕವಾದುದು, ವಿಶಿಷ್ಟ ರೀತಿಯದು. ಚಂಪೂ ಕವಿಗಳ ಸಾಲಿನಲ್ಲಿ ಪ್ರತಿಭೆಯಲ್ಲಿ ಕನಕದಾಸರಿಗಿಂತ ದೊಡ್ಡವರಿರಬಹುದು ; ಆದರೆ ಅವರಾರೂ ಇವರಂತೆ ಕೀರ್ತನೆಗಳನ್ನಾಗಲಿ, ಮುಂಡಿಗೆಗಳನ್ನಾಗಲಿ ರಚಿಸಿದವರಲ್ಲ ; ಸಂತರೆನಿಸಿಕೊಂಡವರೂ ಅಲ್ಲ. ಷಟ್ಟದಿ ಕವಿಗಳ ಗುಂಪಿನಲ್ಲಾಗಲಿ ಅಥವಾ ಸಾಂಗತ್ಯ ಕವಿಗಳ ಗುಂಪಿನಲ್ಲಾಗಲೀ ಇದೇ ಪರಿಸ್ಥಿತಿ. ವಚನಕಾರರ ಸಾಲಿನಲ್ಲಿ ಹಲವಂಶಗಳಲ್ಲಿ ಅವರಿಗೆ ಹೆಗಲೆಣೆಯಾಗಿ ನಿಲ್ಲಬಲ್ಲವರಾದರೂ, ಅವರಲ್ಲಿಯ ಬಹುತೇಕ ಮಂದಿಯಂತೆ ಕೇವಲ ವಚನಕ್ಕಷ್ಟೇ ಸೀಮಿತಗೊಳ್ಳದೆ ಕಾವ್ಯರಚನೆಗೂ ಕೈಹಾಕಿದ್ದು ಕನಕದಾಸರ ವಿಶಿಷ್ಟ ಪ್ರತಿಭೆಗೆ ಮತ್ತೊಂದು ನಿದರ್ಶನ. ದಾಸಪರಂಪರೆಯಲ್ಲಿ ಉಳಿದೆಲ್ಲ ಅಂಶಗಳ ಜೊತೆಗೆ ಕನಕದಾಸರು ತೋರಿದ ಕ್ರಾಂತಿಕಾರಕ ಮನೋಭಾವ ಅವರ ದಿಟ್ಟತನಕ್ಕೆ ಸಾಕ್ಷಿ. ಅವರ ಕೀರ್ತನೆಗಳಲ್ಲಿ ಕಂಡುಬರುವ ನಿರ್ಭಯ ಅಭಿವ್ಯಕ್ತಿ ಕನಕದಾಸರ ಸಾಹಿತ್ಯಕ್ಕೆ ಒಂದು ಅಪೂರ್ವತೆಯನ್ನು ತಂದುಕೊಟ್ಟಿದೆ : “ತೀರ್ಥವನು ಪಿಡಿದವರೆಲ್ಲ ತಿರುನಾಮ ಧಾರಿಗಳೆ, ಜನ್ಮ ಸಾರ್ಥಕವಿಲ್ಲದವರೆಲ್ಲ ಭಾಗವತರೆ” ಎಂಬಂತಹ ನುಡಿಗಳು ಆ ಕಾಲಕ್ಕೆ ಸಾಮಾನ್ಯವಾದುವುಗಳೇನೂ ಅಲ್ಲ.

ಭಾಷೆಯ ಬಳಕೆಯ ದೃಷ್ಟಿಯಿಂದ ಕನಕದಾಸರು ಕುಮಾರವ್ಯಾಸನಿಗೆ ಹತ್ತಿರವಾಗುವಂತೆಯೇ, ಸಾಂಗತ್ಯ ಕವಿಗಳ ಸಾಲಿನಲ್ಲಿ ಎದ್ದು ಕಾಣುವ ಸಿದ್ದಿಯನ್ನು ಪಡೆದವರು. ಕೀರ್ತನಕಾರರ ಗುಂಪಿನಲ್ಲಿಯಂತೂ ಅವರದ್ದು ವಿಶಿಷ್ಟ ಶೈಲಿ. ಹಲವೆಡೆ ಅವರು ಬಳಸಿರುವ ದಟ್ಟವಾದ ಗ್ರಾಮ್ಯ ಶೈಲಿಯಿಂದಾಗಿ ಅವರ ರಚನೆಗಳು ವಿಶೇಷ ಆಕರ್ಷಣೆಯನ್ನು ಹೊಂದಿರುವುದಷ್ಟೇ ಅಲ್ಲದೆ, ಪರಿಣಾಮ ಬೀರುವ ಶಕ್ತಿಯನ್ನೂ ಅಪೂರ್ವ ರೀತಿಯಲ್ಲಿ ಪಡೆದುಕೊಂಡಿವೆ. ಸಮಕಾಲೀನ ವಾಸ್ತವಿಕ ಚಿತ್ರಣವನ್ನು ಕೊಡುವಲ್ಲಿಯಾಗಲಿ, ಅಗತ್ಯವಾದೆಡೆಗಳಲ್ಲಿ ಸುಂದರವಾದ ವಿಸ್ತಾರ ವರ್ಣನೆಗಳನ್ನು ತರುವಲ್ಲಿಯಾಗಲಿ ಕನಕದಾಸರ ವಿಶಿಷ್ಟ ಪ್ರತಿಭೆ ಗರಿಗೆದರಿದುವುದನ್ನು ಕಾಣಬಹುದು. ಅಧ್ಯಾತ್ಮ-ಶೃಂಗಾರಗಳೆರಡನ್ನೂ ಏಕಕಾಲದಲ್ಲಿ ಮೆರೆಯುವಲ್ಲಿ ರತ್ನಾಕರವರ್ಣಿಗೆ ಸಮನಾದ ಪ್ರತಿಭೆಯನ್ನು ಕನಕದಾಸರು ತೋರಿದ್ದಾರೆ ; ಎಲ್ಲಿಯೂ 'ಸೊಬಗಿನ ಸೋನೆ'ಯ ದೇಪರಾಜನಂತೆ ಅನೌಚಿತ್ಯಕ್ಕೆ ಮಣೆ ಹಾಕಿಲ್ಲ. - ಕನಕದಾಸರ ಸಮಗ್ರ ಕೃತಿಗಳನ್ನು ಒಟ್ಟಾರೆ ಪರಿಶೀಲಿಸುವಾಗ ; ಕೀರ್ತನಕಾರ ಕನಕದಾಸರೇ ಬೇರೆ, ಕಾವ್ಯಗಳ ಕನಕದಾಸರೇ ಬೇರೆ ಎಂಬಂತೆ ಭ್ರಮೆ ಹುಟ್ಟಿಸುವ ವಿಶಿಷ್ಟ ಕಾವ್ಯ ಪ್ರತಿಭೆ ಅವರದ್ದು. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಕನಕದಾಸರ ಸ್ಥಾನ ವಿಶಿಷ್ಟವಾದುದು ; ಕೀರ್ತನಕಾರರ ಸಾಲಿನಲ್ಲಿ ಅಪೂರ್ವತೆಯನ್ನು ತೋರಿದಂತೆಯೇ ಕನ್ನಡ ಕವಿಗಳ ಸಾಲಿನಲ್ಲಿ ಸಮಾನವಾಗಿ ಸ್ಪರ್ಧಿಸಬಲ್ಲ ಸಾಮರ್ಥ್ಯದ ಕನಕದಾಸರು ; ಸಂತರ ಸಾಲಿನಲ್ಲಿ ತಮ್ಮ ಸಮತೋಲನ ಹಾಗೂ ಪ೦ಥಾತೀತ ಗುಣಗಳನ್ನು ಮೆರೆದು ಅದ್ವೀತಿಯರೆನಿಸಿದವರು. ಇಷ್ಟಾದರೂ, ಕನಕದಾಸರ ಕಾವ್ಯ ಪ್ರತಿಭೆಗೆ ದೊರೆಯಬೇಕಾದ ಮನ್ನಣೆ ದೊರೆತಿಲ್ಲ. ಅವರ ಬಹುಮುಖ ಪ್ರತಿಭೆಗೆ ಸಲ್ಲಬೇಕಾದ ಗೌರವ ಸಂದಿಲ್ಲ. ಕಾವ್ಯ ಮೌಲ್ಯ, ಜೀವನ ಮೌಲ್ಯಗಳೆರಡನ್ನೂ ಸಂಗಮಗೊಳಿಸಿ ನೀಡಿದ ಈ ಕವಿಯ ಪ್ರತಿಭೆಗೆ ತಕ್ಕ ಗೌರವ ಸಲ್ಲುವ ಕಾಲ ಹತ್ತಿರವಾಗಲೆಂಬ ಅನಿಸಿಕೆ ಸಹಜವಾದದ್ದು.