ಪುಟ:Kanakadasa darshana Vol 1 Pages 561-1028.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರ ರಾಮಧಾನ್ಯ ಚರಿತೆ ೬೫೧ ಕನಕದಾಸರ ರಾಮಧಾನ್ಯ ಚರಿತೆ ಹ, ಕ, ರಾಜೇಗೌಡ ಕನ್ನಡನಾಡಿನ ಚರಿತ್ರೆಯಲ್ಲಿ ವಿಜಯನಗರದ ಸಾಮ್ರಾಜ್ಯ ಒಂದು ಸುವರ್ಣಯುಗ, ಉತ್ತರದಿಂದ ಒತ್ತಿಬಂದ ಮುಸಲರ ದಾಳಿಯಿಂದ ತತ್ತರಿಸಿದ ಹಿಂದೂರಾಜರು ಪುಡಿ ಪುಡಿಯಾಗಿ ಹೋಗಿದ್ದರು. ಒಂದು ಅತ್ಯಂತ ಪ್ರಾಚೀನ ರಾಜಪರಂಪರೆ, ಆ ಶಕ್ತಿಯನ್ನೇ ನಂಬಿದ್ದ ಭಾಷೆ, ಸಂಸ್ಕೃತಿಗಳು ಸರ್ವನಾಶವಾಗುವ ಸ್ಥಿತಿ ಒದಗಿತ್ತು. ಅಂತಹ ಸಮಯದಲ್ಲಿ ಹಕ್ಕ-ಬುಕ್ಕರೆಂಬ ಇಬ್ಬರು ಗ್ರಾಮೀಣ ಕುರುಬ ಸೋದರರು ಈ ಪ್ರಾಚೀನ ಪರಂಪರೆಯ ರಕ್ಷಕರಾಗಿ ಮೂಡಿಬಂದರು. ಛಿದ್ರ ಚಲ್ಲಾಪಿಲ್ಲಿಯಾಗಿದ್ದ ಹಿಂದೂ ರಾಜರಿಗೆ ಮತ್ತೆ ಚೇತನ ನೀಡಿ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದರು. ಹದಿನೈದನೆಯ ಶತಮಾನದ ಹೊತ್ತಿಗೆ ಈ ವಿಜಯನಗರ ಸಾಮ್ರಾಜ್ಯ ದೇಶವಿದೇಶಗಳಲ್ಲಿ ಪ್ರಖ್ಯಾತವಾಗಿತ್ತು. ದೇಶವಿದೇಶಗಳಿಂದ ಈ ವೈಭವವನ್ನು ಕಾಣಲು ಪ್ರವಾಸಿಗರು ಬಂದರು. ವಜ್ರವೈಡೂರ್ಯಗಳನ್ನು ಪೇಟೆಯಲ್ಲಿ ರಾಶಿಹಾಕಿ ಮಾರುವ, ಮನೆಗಳಿಗೆ ಬೀಗವೇ ಇಲ್ಲದ, ಧಾರ್ಮಿಕವಾಗಿ ಪ್ರಬುದ್ಧವಾದ ಸುಭಿಕ್ಷವಾದ ಸಾಮ್ರಾಜ್ಯವೊಂದರ ಸುಂದರ ಚಿತ್ರವನ್ನು ತಮ್ಮ ತಮ್ಮ ಪ್ರವಾಸ ಕಥನಗಳಲ್ಲಿ ಇಂಥ ಪ್ರವಾಸಿಗಳು ಹಿಡಿದಿಟ್ಟರು. ಈ ಮಹಾಸಾಮ್ರಾಜ್ಯಕ್ಕೆ ಕಿರೀಟ ಪ್ರಾಯವಾಗಿ ಬಂದವನು ಕೃಷ್ಣದೇವರಾಯ. ಹನ್ನೆರಡನೆಯ ಶತಮಾನ ಕನ್ನಡ ನಾಡಿನ ಧಾರ್ಮಿಕ ಮತ್ತು ಸಾಹಿತ್ಯಕ್ಷೇತ್ರ ದಲ್ಲೊಂದು ಪರ್ವಕಾಲ. ಆವರೆಗೆ ಕೆಲವರೇ ಉತ್ತಮ ವರ್ಗದವರಿಗೆ ಮೀಸಲಾಗಿದ್ದ ಧರ್ಮ, ಸಂಸ್ಕೃತಿ, ಭಾಷೆಗಳ ಅಭಿವ್ಯಕ್ತಿಗೆ ಈ ಶತಮಾನದಲ್ಲಿ ಒಂದು ಮಹಾಮಾರ್ಗ ನಿರ್ಮಾಣವಾಯಿತು. ಎಲ್ಲ ಸ್ತರದ ಜನರ ಒಳಗಿರುವ ಶಕ್ತಿಯ ಅಭಿವ್ಯಕ್ತಿಗೆ ಇದು ಅನುವು ಮಾಡಿಕೊಟ್ಟಿತು. ಸಮಾಜದ ತಿರಸ್ಕೃತ ಕೆಳವರ್ಗ ಒಮ್ಮೆಲೇ ತನ್ನ ಶತಶತಮಾನಗಳ ಜಡತೆಯನ್ನು ಕೊಡವಿ ಎದ್ದು ನಿಂತಿತು. ಆವರೆಗೆ ಅರಮನೆಯ ಅಂದಣ ಬಿಟ್ಟಿಳಿಯದಿದ್ದ ಭಾಷೆ ಮನೆ ಮನೆಯ ಮುಂದೆ ಬಂದು ನಿಂತಿತು. ಕೇವಲ ಯಕ್ಷ ಕಿನ್ನರ, ಮೇನಕೆ ತಿಲೋತ್ತಮೆ, ರಾಜ ರಾಣಿಯರ ಬೆನ್ನು ಬಿಡದಿದ್ದ ಕಲೆ ಸಾಹಿತ್ಯಗಳು ಧರೆಗಿಳಿದು ಹಳ್ಳಿ ಹಳ್ಳಿಯ ಓಣಿಯಲ್ಲಿ ಮೆರೆದವು. ಮಣ್ಣು, ಗೊಬ್ಬರ ಕಾವ್ಯದ ವಸ್ತುವಾದವು. ಇದು ನಿಜವಾಗಿಯೂ ಒಂದು ಮಹಾಕ್ರಾಂತಿ, ಸಾಮಾಜಿಕ ಹೊಸ ತಿರುವಿಗೆ ಕಾರಣವಾಯಿತು. ವಿಜಯನಗರದ ಕಾಲದಲ್ಲಿ ವಿಶೇಷವಾಗಿ ಕೃಷ್ಣದೇವರಾಯನ ಕಾಲದಲ್ಲಿ ಮತ್ತೆ ಈ ಪ್ರವಾಹವನ್ನು ಕಾಣಬಹುದಾಗಿದೆ. ಆ ಕಾಲದಲ್ಲಿ ಕನ್ನಡನಾಡಿನ ಉದ್ದಗಲಕ್ಕೂ ಭಕ್ತಿ ಸಾಹಿತ್ಯದ ಮಹಾಪೂರ ಉಕ್ಕಿ ಹರಿಯಿತು. ನಮ್ಮ ನೆಲ, ಜಲ, ಕುರಿ, ಕೋಳಿ ರಾಗಿ ಬತ್ತಗಳು ಕಾವ್ಯದ, ಭಕ್ತಿಯ ವಸ್ತುಗಳಾದವು. ಹನ್ನೆರಡನೆಯ ಶತಮಾನದ ಶರಣರು ಶ್ರೀಸಾಮಾನ್ಯರ ಹತ್ತಿರಕ್ಕೆ ಧರ್ಮವನ್ನು ತಂದಂತೆ ಹದಿನೈದನೆಯ ಶತಮಾನದ ದಾಸರೂ ಶ್ರೀಸಾಮಾನ್ಯರ ಹತ್ತಿರಕ್ಕೆ ಭಕ್ತಿಯನ್ನು ತಂದರು. ಈ ಹಿನ್ನೆಲೆಯಲ್ಲಿ ಈ ಪರಂಪರೆಯಲ್ಲಿ ಬಂದವರು ಕನಕದಾಸರು, ಜನಸಾಮಾನ್ಯರ ಮಧ್ಯದಿಂದ ಬಂದ ಈ ವ್ಯಕ್ತಿಯ ಸಾಧನೆ ಸಿದ್ದಿ ಅಪೂರ್ವವಾದವು, ವಿನೂತನವಾದವು. ತನ್ನ ಸುತ್ತಲಿನ ಬದುಕಿನ ಸಂಗತಿಗಳನ್ನೇ ಕಾವ್ಯದ, ಕೀರ್ತನೆಯ ವಿಷಯ ಮಾಡಿಕೊಂಡ ಜನತೆಯ, ಜನಪದಕವಿ ಕನಕದಾಸರು ಎಂದು ಹೇಳಿದರೆ ಅತಿಶಯೋಕ್ತಿಯಾಗುವುದಿಲ್ಲ. ಈ ದೇಶದಲ್ಲಿ ಆರ್ಯಧರ್ಮ ಆರ್ಯಸಂಸ್ಕೃತಿಗಳು ಪ್ರಬಲವಾಗಿ, ಆಮೇಲೆ ಅವು ವೈದಿಕಧರ್ಮ ಸಂಸ್ಕೃತಿಗಳಾಗಿ ಬೆಳೆಯುತ್ತ ಡೇರೆಯಲ್ಲಿ ತಲೆತೂರಿಸಿದ ಒಂಟೆಯಂತೆ ಭಾರತೀಯ ಮೂಲಧರ್ಮ ಸಂಸ್ಕೃತಿಗಳನ್ನು ಮೂಲೆಗುಂಪಾಗಿಸಿದವು. ಹೀಗಾಗಿ ಒಂದು ಕಾಲದಲ್ಲಿ ಅತ್ಯುನ್ನತ ಸ್ಥಿತಿಯಲ್ಲಿದ್ದ ಈ ನಾಡಿನ ಜನಾಂಗಗಳು ಮತ್ತು ಅವರ ಸಂಸ್ಕೃತಿ, ಭಾಷೆ ಅನಾಗರಿಕ ಅನ್ನಿಸಿಕೊಂಡು ಅವಜ್ಞೆಗೆ ಒಳಗಾದವು. ಮುಂದೆ ಇಂತಹ ಜನಾಂಗಗಳಿಂದ ಬಂದ ಪ್ರತಿಭೆಗಳು ಬೆಳೆಯದಂತೆ ಈ ಜನ ನೋಡಿಕೊಂಡರು ಆಕಸ್ಮಿಕವಾಗಿ ಅಲ್ಲಿ ಇಲ್ಲಿ ಕಣ್ಣು ತಪ್ಪಿ ಮೇಲೆ ಬಂದ ಈ ವರ್ಗದ ಪ್ರತಿಭೆಗಳಿಗೆ ತಮ್ಮ ವರ್ಗದ ಗುರುವನ್ನೊ ಮಾರ್ಗದರ್ಶಕನನ್ನೂ ಸೃಷ್ಟಿಸಿ ಅಂಥ ನಿಜಪ್ರತಿಭೆಯನ್ನು ಶಕ್ತಿಯನ್ನು ಮರೆಮಾಡಿರುವುದೂ ಉಂಟು. ತಮ್ಮ ಪ್ರತಿರೋಧವನ್ನೂ ಮೀರಿ ನಡೆಯುವ ಶ್ರೀಸಾಮಾನ್ಯ ಪ್ರತಿಭೆಯನ್ನು ಹಲವು ಹತ್ತು ರೀತಿಯಲ್ಲಿ ಹಂಗಿಸಿ ಹಿಂಸಿಸಿರುವುದೂ ಉಂಟು. ಕನಕದಾಸರೂ ಕೂಡ ಈ ವರ್ಗ ಸಂಘರ್ಷದ ಬೇಲಿಯನ್ನು ಕಿತ್ತು ಬೆಳೆದು ಬಂದವರೆಂಬುದಕ್ಕೆ ಅವರ ಸಾಹಿತ್ಯದಲ್ಲಿ