ಪುಟ:Kanakadasa darshana Vol 1 Pages 561-1028.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ ೫೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ರಾಮಧಾನ್ಯ ಚರಿತೆ ೬೫೩ ವಿಪುಲವಾದ ಉದಾಹರಣೆಗಳು ದೊರೆಯುತ್ತವೆ. ಅವುಗಳಲ್ಲಿ ರಾಮಧಾನ್ಯ ಚರಿತೆ ಈ ಸಂಘರ್ಷಕ್ಕೊಂದು ಜ್ವಲಂತ ಸಾಕ್ಷಿಯಾಗಿ ನಿಲ್ಲುತ್ತದೆ. ಯಾವನೇ ವ್ಯಕ್ತಿ ತಾನೆಲ್ಲಿಯೇ ಜೀವನ ನಿರ್ವಹಣೆಗಾಗಿ ಕೆಲಸ ಮಾಡುತ್ತಿರ ಬಹುದು. ಯಾವುದೋ ಕಾರಣದಿಂದ ಬೇರೆಡೆಗೆ ವಲಸೆ ಹೋಗಿರಬಹುದು. ಆದರೆ ಯಾರೂ ತಾವು ಹುಟ್ಟಿದ ಪರಿಸರ, ಅಲ್ಲಿನ ರೀತಿ ನೀತಿ, ಆಹಾರ, ಪಾನೀಯಗಳು, ಪ್ರಕೃತಿ, ದೇವರುದಿಂಡರುಗಳನ್ನು ಮರೆಯುವಂತಿಲ್ಲ. ಬೇರೆ ಬೇರಲ್ಲಿಗೆ ವಲಸೆ ಹೋದ ಜನಾಂಗಗಳಲ್ಲಿ ಕೂಡ ಈ ರೀತಿಯಲ್ಲಿ ತಾವು ಬಿಟ್ಟು ಬಂದ ನೆಲದ ನೆನಪುಗಳ ಬಗೆಗಿನ ಕಥೆಗಳು ಹೇರಳವಾಗಿಯೇ ದೊರೆಯುತ್ತವೆ. ಕವಿ, ಕಲಾವಿದರಾದವರು ತಮ್ಮ ಸುತ್ತಲಿನ ಪರಿಸರವನ್ನು, ಜನಜೀವನವನ್ನು, ಆಹಾರ ಪಾನೀಯಗಳನ್ನು ತಮ್ಮ ಕೃತಿಗಳಲ್ಲಿ, ರಚನೆಗಳಲ್ಲಿ ಮೂಡಿಸಿಬಿಡುತ್ತಾರೆ. ಈ ದೃಷ್ಟಿಯಿಂದ ಕೂಡ ರಾಮಧಾನ್ಯಚರಿತೆಯ ಅಧ್ಯಯನ ಕುತೂಹಲಕಾರಿಯಾದುದಾಗಿರುತ್ತದೆ. ಕನಕದಾಸರ ರಾಮಧಾನ್ಯ ಚರಿತೆ ೧೫೬ ಪದ್ಯಗಳ ಒಂದು ಚಿಕ್ಕ ಕೃತಿ. ಇದು ಭಾಮಿನಿ ಷಟ್ಟದಿಯಲ್ಲಿ ರಚಿತವಾಗಿದೆ. ಕನಕದಾಸರು ನಾಲ್ಕು ಕಾವ್ಯಗಳನ್ನು ರಚಿಸಿದ್ದಾರೆ. ಅವುಗಳೆಂದರೆ ನಳಚರಿತ್ರೆ, ರಾಮಧಾನ್ಯಚರಿತೆ, ಹರಿಭಕ್ತಿಸಾರ ಮತ್ತು ಮೋಹನ ತರಂಗಿಣಿ, ಕನಕದಾಸರ ಮೊದಲ ಕೃತಿ ಯಾವುದು ಎಂಬ ಬಗ್ಗೆ ಕೂಡ ವಿದ್ವಾಂಸರು ನಾನಾ ರೀತಿಯ ಅಭಿಪ್ರಾಯಗಳನ್ನು ನೀಡಿದ್ದಾರೆ. ಕೆಲವರು ಮೋಹನ ತರಂಗಿಣಿ ಕನಕದಾಸರ ಮೊದಲಕಾವ್ಯವೆಂದೂ, ಕೆಲವರು ನಳಚರಿತ್ರೆ ಮೊದಲ ಕಾವ್ಯವೆಂದೂ ಹೇಳಿದ್ದಾರೆ. ಮೋಹನ ತರಂಗಿಣಿಯಲ್ಲಿರುವ ಶೃಂಗಾರವನ್ನು ಗಮನದಲ್ಲಿಟ್ಟುಕೊಂಡು ಅನೇಕರು ಕವಿ ತನ್ನ ಯುವವಯಸ್ಸಿನಲ್ಲಿ ಈ ಕಾವ್ಯ ರಚಿಸಿರಬೇಕೆಂದು ಊಹಿಸಿದ್ದಾರೆನ್ನಿಸುತ್ತದೆ. ವಾಸ್ತವವಾಗಿ ಕವಿ ಮತ್ತು ಅವನ ಅನುಭವಗಳು ಪಕ್ವವಾದಾಗಲೇ ಕಾವ್ಯ ಮತ್ತು ಅದರಲ್ಲಿ ಬರುವ ವಿಷಯಗಳು ಉತ್ತಮವೆನಿಸುವುದು. ಆದುದರಿಂದ ಶೃಂಗಾರವಿಷಯಗಳನ್ನು ಆಧಾರವಾಗಿಟ್ಟುಕೊಂಡು ಕನಕದಾಸರು ಮೋಹನತರಂಗಿಣಿಯನ್ನು ಮೊದಲು ಬರೆದರೆನ್ನುವುದು ಸರಿಯಲ್ಲವೆನಿಸುತ್ತದೆ, ಈ ಕವಿಯ ಸಮಗ್ರ ರಚನೆಗಳನ್ನು ಕೀರ್ತನೆಗಳೂ ಸೇರಿದಂತೆ ಪರಿಶೀಲಿಸಿದಾಗ ಮೊದಮೊದಲು ಹಾಡುಗಳನ್ನು ರಚಿಸಿ, ಚಿಕ್ಕಚಿಕ್ಕ ಕಾವ್ಯ ರಚನೆಗೆ ಕೈಹಾಕಿ ಮಹಾಕಾವ್ಯದತ್ತ ತಿರುಗುವ ಕವಿಸಂಪ್ರದಾಯವೇ ಇಲ್ಲಿ ನಮಗೆ ಹೆಚ್ಚಾಗಿ ದೊರೆಯುತ್ತದೆ. ಅಲ್ಲದೆ ನಳಚರಿತ್ರೆಯನ್ನು ಬರೆದಾಗ ಕನಕದಾಸರಿಗೆ ಬಾಡವಾಗಲಿ, ಕಾಗಿನೆಲೆಯಾಗಲಿ ತಿಳಿದಿರಲಿಲ್ಲವೆಂಬುದೂ ಇವುಗಳಿಂದ ವ್ಯಕ್ತವಾಗುತ್ತದೆ. ಆದುದರಿಂದ ನಳಚರಿತ್ರೆಯೇ ಕನಕದಾಸರ ಮೊದಲ ಕಾವ್ಯ ಎಂಬುದು ಖಚಿತವಾಗುತ್ತದೆ. ವರ್ಗ ವರ್ಣಗಳ ಆಗಿನ ಕಾಲದ ಸಾಮಾಜಿಕ ಪರಿಸ್ಥಿತಿಯಲ್ಲಿ ಕನಕದಾಸರ ಈ ರಚನೆ ಮೇಲುವರ್ಗದವರ, ತಾವೇ ಬರೆಯಲು ಹಕ್ಕಿನವರೆಂದು ತಿಳಿದ ಜನರ ಕಟಕಿಗೆ, ನಿಂದನೆಗೆ ಗುರಿಯಾಗಿರಬೇಕು, ಈ ರೀತಿಯ ಮನೋಭಾವದ ಜನರಿಗೆ ಉತ್ತರ ರೂಪದಲ್ಲಿ ರಾಮಧಾನ್ಯ ಚರಿತೆ ರೂಪುಗೊಂಡು ರಚನೆಯಾಗಿರುವ ಸಾಧ್ಯತೆಯೇ ಹೆಚ್ಚು. ಇಲ್ಲವಾದಲ್ಲಿ ಎಲ್ಲವನ್ನು ತ್ಯಜಿಸಿ ಸಂತನಾದ ಕನಕರಿಂದ ಈ ವಸ್ತುವಿನ ಕಾವ್ಯ ರಚನೆ ಸಾಧ್ಯವಿಲ್ಲ ಅನ್ನಿಸುತ್ತದೆ. ಈ ಎಲ್ಲ ದೃಷ್ಟಿಗಳಿಂದ ನಳಚರಿತ್ರೆ ಕನಕದಾಸರ ಮೊದಲ ಕಾವ್ಯ ಅದಕ್ಕೆ ಬಂದ ಪ್ರತಿಕ್ರಿಯೆಗಳಿಗೆ ರಾಮಧಾನ್ಯಚರಿತೆ ಉತ್ತರ ಎಂದು ಹೇಳುವುದೇ ಉಚಿತ. ಕವಿ ಈ ಕಾವ್ಯದ ವಸ್ತುವನ್ನು ಕುರಿತಂತೆ ಇದು ಮಹಾಕಥೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಅಲ್ಲದೆ ಇದನ್ನು ಇಡೀ ಜನಸ್ತೋಮ ಅರಿಯಬೇಕೆಂಬುದು ಕವಿಯ ಆಶಯ. ರಾಮಧಾನ್ಯದ ಕೃತಿಯನೀ ಜನ ಸ್ತೋಮವೆಲ್ಲಾದರಿಸುವಂದದಿ ಭೂಮಿಗಚ್ಚರಿಯಾಗಿ ಪೇಳುವೆನೀ ಮಹಾಕಥೆಯ ಈ ಕೃತಿ ಹಲವಾರು ದೃಷ್ಟಿಗಳಿಂದ ಪರಿಶೀಲನೆಗೆ ಅರ್ಹವಾಗಿದೆ. ಕನಕದಾಸರ ಕಾಲದ ಸಾಮಾಜಿಕ ಪರಿಸ್ಥಿತಿ, ಪರಿಸರ, ಜನಜೀವನ, ಯುದ್ದಗಳು ಹೀಗೆ ಆಗಿನ ಕಾಲದ ಒಂದು ಒಟ್ಟು ಚಿತ್ರವನ್ನು ಇಲ್ಲಿ ಕಾಣಬಹುದಾಗಿದೆ. ಈ ಎಲ್ಲಕ್ಕಿಂತ ಮಿಗಿಲಾಗಿ ಶೋಷಿತ ವರ್ಗಕ್ಕೆ ಸೇರಿದ ಮಹಾಚೇತನವೊಂದು ತನ್ನ ವಿಕಸನದ ಹಾದಿಯಲ್ಲಿ ಅನುಭವಿಸಿದ ನೋವಿನ ಕಥೆಯೂ ಇಲ್ಲಿದೆ. ಇಲ್ಲಿನ ರಾಗಿಯ ಒಂದೊಂದು ಮಾತೂ ಈ ದೇಶದ ಪಟ್ಟಭದ್ರ ವ್ಯವಸ್ಥೆಯ ಕೋಟೆಗೆ ಇಟ್ಟ ಕೈಬಾಂಬುಗಳೆನ್ನಿಸುತ್ತದೆ. ಇದಕ್ಕೂ ಮಿಗಿಲಾಗಿ ಈ ಹೊತ್ತಿಗೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಈ ಮಾತುಗಳು ಆತ್ಮಸ್ಥೆರ್ಯ ನೀಡುತ್ತವೆ. ವಿದ್ವತ್ತು, ಪ್ರತಿಭೆ, ಅರ್ಹತೆಗಳೆಲ್ಲ ತಮ್ಮ ಸ್ವತ್ತು ಎಂದು ತಿಳಿದ ಜನರ ಕುತಂತ್ರದ ಬಿಸಿ ಕವಿಗೆ ಹೆಜ್ಜೆ ಹೆಜ್ಜೆಗೂ ಚುಚ್ಚಿ ನೋಯಿಸಿರಬೇಕು. ಇದರಿಂದ ಮನನೊಂದ ಕನಕದಾಸರು ಈ ಜನರೊಂದಿಗೆ ಬೀದಿ ಜಗಳಕ್ಕಿಳಿಯಬೇಕಾದ ಪರಿಸ್ಥಿತಿಯಲ್ಲಿಯೂ ಕಾವ್ಯ ಮಾಧ್ಯಮದ ಮೂಲಕ ಉತ್ತರಿಸಿರುವುದು ಅವರ ಹೃದಯದಲ್ಲಿ ಎಳವೆಯಿಂದಲೂ ಬೀಜರೂಪದಲ್ಲಿದ್ದ