ಪುಟ:Kanakadasa darshana Vol 1 Pages 561-1028.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಪದಗಳಲ್ಲಿ ಸಂಗೀತ ೬೭೯ ಓದಿದಾಗ ಭಾವ ಒದಗುವುದೇ ಇಲ್ಲ. ಆ ಮಾತುಗಳನ್ನು ಹಾಡಿದಾಗಲೇ ಭಾವ ಹೊರಹೊಮ್ಮುವುದು. ಆದರೆ ದಾಸರ ಪದಗಳನ್ನು ಹಾಡುವಾಗ ಪದಬಂಧದಲ್ಲೇ ಒಂದು ಭಾವ ಇದೆ ಎಂಬುದನ್ನು ಮರೆಯಬಾರದು. ಆ ಭಾವಕ್ಕೆ ಅನುಗುಣವಾಗಿಯೇ ರಾಗ ಇರಬೇಕು ಮತ್ತು ಭಾವವನ್ನು ಮರೆಮಾಚುವಂತೆ ರಾಗನಿರೂಪಣೆ ಇರಬಾರದು. ಇಲ್ಲೊಂದು ತೊಡಕು. ರಾಗಕ್ಕೂ ಭಾವಕ್ಕೂ ಇರಬಹುದಾದ ನಂಟನ್ನು ಕುರಿತು ಎರಡು ಅಭಿಪ್ರಾಯಗಳಿವೆ. ಪ್ರತಿಯೊಂದು ರಾಗಕ್ಕೂ ಅದಕ್ಕೆ ವಿಶಿಷ್ಟವಾದ ಭಾವವೊಂದು ಇರುತ್ತದೆ ಎನ್ನುವುದೊಂದು ಅಭಿಪ್ರಾಯ. ಯಾವ ರಾಗದಿಂದ ಯಾವ ಭಾವವನ್ನಾದರೂ ಹೊರಡಿಸಬಹುದು ಎಂದು ಇನ್ನೊಂದು ಅಭಿಪ್ರಾಯ. ಎರಡೂ ಅಭಿಪ್ರಾಯಗಳು ಕೊಂಚ ಮಟ್ಟಿಗೆ ಸರಿಯೆ. ರಾಗಕ್ಕೊಂದು ಭಾವ ಎಂದಿರದಿದ್ದರೆ ಹೇಗೆ ? ಆದರೆ ಈ ರಾಗಕ್ಕೆ ಇದೇ ಭಾವ, ಈ ಭಾವದ ಅಭಿವ್ಯಕ್ತಿಗೆ ಇದೇ ರಾಗ ಎಂಬ ನಿರ್ಣಯವಿರಲು ಸಾಧ್ಯವಿಲ್ಲ. ಶ್ರುತಿಭೇದ, ಸ್ವರಸಂಚಾರ ವೈವಿಧ್ಯ ಮೊದಲಾದ ಸಾಧನಗಳಿಂದ ಯಾವೊಂದು ರಾಗದಿಂದ ಹಲವು ಭಾವಗಳನ್ನು ಹೊರಹೊಮ್ಮಿಸುವುದು ಸಾಧ್ಯ. ಆದರೆ ಹಾಗೆ ಹೊರಹೊಮ್ಮುವ ಭಾವಗಳೆಲ್ಲ ಸಂವಾದಿಭಾವಗಳಷ್ಟೆ ತೋಡರಾಗ ಶೋಕಕ್ಕೂ ಆಗಬಹುದು, ಶೃಂಗಾರಕ್ಕೂ ಆಗಬಹುದು, ಆದರೆ ಶೃಂಗಾರದಲ್ಲಿ ವಿಪ್ರಲಂಭವಾದೀತು ಅಷ್ಟೆ, ಶೋಕ ಅದರಲ್ಲಿ ಹೇಗೂ ನುಸುಳಿಕೊಂಡು ಬರಬಹುದಲ್ಲ ? ರಾಗದ ಭಾವವನ್ನು ನಿರೂಪಿಸುವಲ್ಲಿ ಪಡೆದ ಸಾಹಿತ್ಯದಲ್ಲಿ ಅಡಗಿರುವ ಭಾವ ನೆರವಾಗುತ್ತದೆ. ಮಾತಿಗಿರುವ ಭಾವ ಸೌಕರ್ಯ ಬರಿಯ ಸ್ವರಗಳಿಗಾಗಲಿ, ಸ್ವರಗಳಿಂದ ಆದ ರಾಗಕ್ಕಾಗಲಿ ಹೇಗೆ ಬಂದೀತು ? ಮಾತಿನ ಹಂದರದ ಮೇಲೆ ಸ್ವರಸಂಚಾರಗಳು ಹರಡಿಕೊಂಡಾಗಲೇ ಭಾವ ಗರಿಕೆದರಿ ಮೂಡುವುದು, ಮಾತಿಗೊಂದು ಅರ್ಥ ಎನ್ನುವುದು ಹೇಗೆ ಸಹಜವೋ, ಅರ್ಥಕ್ಕೊಂದು ಭಾವ ಎನ್ನುವುದೂ ಹಾಗೆಯೇ ಸಹಜ. ಅಷ್ಟೇ ಸಹಜವಾಗಿ ಭಾವಕ್ಕೆ ರಾಗ ಹೊಂದಿಕೊಳ್ಳಬೇಕು. ರಾಗದ ಸ್ವರಸಂಚಾರಕ್ರಮ ಸಾಹಿತ್ಯದ ಭಾವಪೋಷಣೆ ಮಾಡುವಂತಿರಬೇಕು, ಈ ಸ್ವಾರಸ್ಯವನ್ನು ಅರಿಯದವರು ದಾಸರ ಪದಗಳನ್ನು ಪರಿಣಾಮಕಾರಿಯಾಗಿ ಹಾಡಲಾರರು. ಇನ್ನೊಂದು ವಿಚಾರವನ್ನೂ ಮನಸ್ಸಿಗೆ ತಂದುಕೊಳ್ಳಬೇಕು. ಒಬ್ಬ ದಾಸರ ಎಲ್ಲ ಪದಗಳನ್ನೂ ಒಂದೇ ಬಗೆಯಾಗಿ ಹಾಡುವುದು ಹೇಗೆ ಸಾಧ್ಯವಿಲ್ಲವೋ, ಎಲ್ಲ ದಾಸರ ಪದಗಳನ್ನೂ ಒಂದೇ ಬಗೆಯಾಗಿ ಹಾಡುವುದೂ ಸಾಧ್ಯವಿಲ್ಲ. ಪುರಂದರದಾಸರ ಪದಗಳಲ್ಲಿರುವ ರಾಗದ ಬಿಗಿ ಕನಕದಾಸರ ಪದಗಳಲ್ಲಿ ಇರುವುದಿಲ್ಲ ; ಕನಕದಾಸರ ಪದಗಳಲ್ಲಿ ಭಾವಬಂಧುರತೆ ಹೆಚ್ಚಿನದು. ವ್ಯಾಸತೀರ್ಥರ ಪದಗಳಲ್ಲಿರುವ ಅರ್ಥಗೌರವ, ಭಾವಗಾಂಭೀರ್ಯ ಪುರಂದರ ದಾಸರ ಪದಗಳಲ್ಲಾಗಲಿ ಕನಕದಾಸರ ಪದಗಳಲ್ಲಾಗಲಿ ಕಾಣಸಿಗುವುದಿಲ್ಲ. ಮುಂದೆ ಬಂದು ದಾಸರು ರಾಗಕ್ಕಾಗಲಿ ಭಾವಕ್ಕಾಗಲಿ ಅಷ್ಟಾಗಿ ಗಮನ ಕೊಡದೆ ಪಾಂಡಿತ್ಯಕ್ಕೆ, ಉಪದೇಶಕ್ಕೆ, ಮತಪ್ರಕ್ರಿಯೆಗೆ ಒಲಿದವರು. ಅವರ ಪದಗಳು ಗೇಯಪದ್ಧತಿಯನ್ನು ಬಿಟ್ಟು ವಾಚನಪದ್ಧತಿಗೆ ಜಾರುವಂಥವು. ಈ ಮೊದಲೇ ಹೇಳಿದಂತೆ ಪುರಂದರದಾಸರು ಕನಕದಾಸರಂತೆ ಕಾವ್ಯದ ಪದ್ಧತಿಯಲ್ಲಿ ರಚನೆಗಳನ್ನೇನು ಮಾಡಲಿಲ್ಲ. ಅವರು ರಚಿಸಿದ ಪದಗಳಲ್ಲಿ ಕೆಲವೊಮ್ಮೆ ಕಾವ್ಯದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಅನ್ನುವುದು ದಿಟ. ಆದರೆ ಕಾವ್ಯದ ಉದ್ದೇಶವಿಲ್ಲ. ಮತ್ತೆ ಅವರ ಪದಗಳೆಲ್ಲವೂ ರಾಗಬದ್ಧವಾಗಿ, ರಾಗಶುದ್ಧವಾಗಿ ಹಾಡುವುದಕ್ಕೆಂದೇ ಸಿದ್ಧವಾದವೂ ಅಲ್ಲ. ಹಲವು ಪದಗಳಲ್ಲಿ ರಾಗವಿರದೇ ಬರಿಯ ಧಾಟಿಯನ್ನೇ ಹಿಡಿದು ಹಾಡಬೇಕಾಗುತ್ತದೆ. ನಿದರ್ಶನಕ್ಕೆ 'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎನ್ನುವುದರ ಹಳೆಯ ನಿರ್ದೇಶನ 'ಲಾವಣಿಚಾಲ್' ಎಂದರೆ ಲಾವಣಿಯಂತೆ ಹಾಡಬೇಕು. ಆದರೆ ಕನಕದಾಸರು ಛಂದೋರೂಪದ ಕೃತಿಗಳನ್ನೇ ಬೇರೆಯಾಗಿ ರಚಿಸಿದರು. ಅವರು ಬಿಡಿಯಾಗಿ ಪ್ರಾಸಂಗಿಕವಾಗಿ, ಸಮಯಸ್ಫೂರ್ತಿಯಿಂದ ರಚಿಸಿದ ಪದಗಳು ಹಾಡುವುದಕ್ಕೆಂದೇ, ಸಿದ್ಧವಾದುವು, ಆ ಪದಗಳ ಸ್ವಾರಸ್ಯ ಮನದಟ್ಟಾಗುವುದು ಅವನ್ನು ಹಾಡಿದಾಗಲೇ. ಕನಕದಾಸರಾಗಲಿ ಪುರಂದರದಾಸರಾಗಲಿ ಇದ್ದ ಕಾಲದಲ್ಲಿ ಸಂಗೀತವೆಂಬ ಮಾತಿಗೆ ಈಗಿರುವಂತೆ ಸಂಕುಚಿತವಾದ ಅರ್ಥ ಇರಲಿಲ್ಲ. ಈಗ ಸಂಗೀತವೆಂದರೆ ಗಾಯನ, ಹಾಡಿಕೆ ; ಒಂದು ಹೆಜ್ಜೆ ಮುಂದೆ ಹೋಗಿ ಹಾಡಿಕೆಯೊಂದಿಗೆ ಸೇರಿಕೊಂಡು ಬರುವ ವಾದ್ಯವನ್ನೂ ಸಂಗೀತದ ವ್ಯಾಪ್ತಿಯಲ್ಲೇ ಸೇರಿಸುತ್ತಾರೆ. ಆದರೆ ಹಳೆಯ ಶಾಸ್ತ್ರಗ್ರಂಥಗಳಲ್ಲಿ 'ಗೀತಂ ವಾದ್ಯಂತಥಾ ನೃತ್ಯತ್ರಯಂ ಸಂಗೀತಮುಚ್ಯತೇ' ಎನ್ನುವ ನಿರ್ದೇಶನವಿದೆಯಷ್ಟೇ? ಹಾಡಿಕೆ, ವಾದ್ಯ, ಕುಣಿತ ಮೂರೂ ಕೂಡಿ ಸಂಗೀತವೆನಿಸಿಕೊಂಡ ಕಾಲವೊಂದು ಇದ್ದಿತು. ಈಗ ಕುಣಿತ ಸಂಗೀತಕ್ಕೆ ಹೊರತಾದುದು. ಕುಣಿತದಲ್ಲೇನೋ ಸಂಗೀತ