ಪುಟ:Kanakadasa darshana Vol 1 Pages 561-1028.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೮೪ ಕನಕ ಸಾಹಿತ್ಯ ದರ್ಶನ-೧ ಸಂಗೀತ ಮತ್ತು ಕನಕದಾಸರು ೬೮೫ ನ್ಯಾಯಿಗೆ ಮುಕುತಿಯು ದೊರಕೀತೆ ಹೀಗೆ ಇನ್ನೂ ಅನೇಕ ಸಾಲುಗಳು ಆಗಾಗ ನೆನಪಿಗೆ ಬರುತ್ತವೆ. ಇದರಂತೆ ನಮ್ಮ ಎದುರು ಮನೆಯಲ್ಲಿದ್ದ ವಯಸ್ಸಾದ ಹೆಂಗಸರು ಬೆಳಗಿನ ಜಾವದಲ್ಲಿಯೇ ಮನೆಯ ಮುಂದೆ ಸಾರಿಸಿ ಗುಡಿಸಿ ರಂಗೋಲೆ ಹಾಕುತ್ತಾ ಹಾಡುತ್ತಿದ್ದ ಗಜೇಂದ್ರ ಮೋಕ್ಷ, ಶ್ರಾವಣ ಶನಿವಾರಗಳಲ್ಲಿ ಊರಿನ ನಾನಾ ಭಾಗಗಳಿಂದ ಬಂದು ಊರು ಪ್ರದಕ್ಷಿಣೆ ಮಾಡುತ್ತಿದ್ದ ಭಜನೆ ತಂಡಗಳು ಹಾಡಿಕೊಂಡು ಹೋಗುತ್ತಿದ್ದ- 'ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ, ಅಥವಾ 'ತನು ನಿನ್ನದು ಜೀವನ ನಿನ್ನದು' ಮುಂತಾದ ಹಾಡುಗಳು, ಅವುಗಳನ್ನು ಹಾಡುತ್ತಿದ್ದ ವೈಖರಿ ಮುಂತಾದುವು ಇಂದಿಗೂ ಮನಸ್ಸಿನಿಂದ ಮಾಸಿಹೋಗಿಲ್ಲ. ಈ ಹಾಡುಗಳನ್ನು ಯಾರು ರಚಿಸಿದರು ಎಂಬ ಸಂಗತಿ ಗೊತ್ತಿರಲಿಲ್ಲ. ಅವುಗಳ ರಾಗ ತಾಳಗಳೂ ಯಾವುವು ಎಂಬುದೂ ಅಂದು ತಿಳಿದಿರಲಿಲ್ಲ. ಅವುಗಳ ಮಟ್ಟುಗಳು ಕಿವಿಗೆ ಇಂಪಾಗಿದ್ದವು. ಹಿಡಿದು ಹಾಡಲು ಸುಲಭವಾಗಿದ್ದುವು. ಹಾಡಿನಲ್ಲಿದ್ದ ವಿಷಯಗಳೂ ಮತ್ತು ಹಾಡುವ ವಿಧಾನ ಎರಡೂ ಸ್ಪುರಿಸುವಂತಿದ್ದುವು. ಜೊತೆಗೆ ಅಂದಿನ ವಾತಾವರಣಕ್ಕೆ ಅನುಸಾರವಾಗಿ ಈ ಹಾಡುಗಳನ್ನು ಭಕ್ತಿಯಿಂದ ಹಾಡಿನಲ್ಲಿ ಭಗವಂತನ ದಯೆ ನಮಗೆ ಲಭಿಸುತ್ತದೆ, ಒಳ್ಳೆಯದಾಗುತ್ತದೆ ಮತ್ತು ನಮ್ಮ ಆಸೆಗಳೆಲ್ಲ ಕೈಗೂಡುತ್ತವೆ ಎಂಬ ದೃಢವಾದ ನಂಬಿಕೆ. ಆದುದರಿಂದ ಮನಸ್ಸಿಟ್ಟು ಹಾಡುತ್ತಿದ್ದುದರ ಫಲವಾಗಿ ಹಾಡುಗಳೂ ಮನಸ್ಸಿನಲ್ಲಿ ನೆಲೆಸಿದುದು ಸಹಜ. ಈ ಹಾಡುಗಳನ್ನು ರಚಿಸಿದವರು ಕನಕದಾಸರು ಎಂದು ಹಿರಿಯರು ಹೇಳುತ್ತಿದ್ದುದನ್ನು ಕೇಳಿದ್ದೆವು. ಆದರೆ ಕನಕದಾಸರು ಯಾರು ಏನು ಎಂಬ ವಿವರಗಳನ್ನು ತಿಳಿಯುವ ಕುತೂಹಲ ಉಂಟಾದುದೂ, ತಿಳಿದುಕೊಂಡು ಬಹಳ ವರುಷಗಳ ಅನಂತರ. ಅಲ್ಲಿಯವರೆಗೂ ಅವರೂ ಪುರಂದರದಾಸರಂತೆ ಒಬ್ಬ ಭಕ್ತಶ್ರೇಷ್ಠರು ಎಂಬ ಸಂಗತಿ ಮಾತ್ರ ತಿಳಿದಿದ್ದಿತು. ಏಕೆಂದರೆ ಈ ಭಜನಗೋಷ್ಠಿಗಳಲ್ಲಿ ಕೇಳಿ ಬರುತ್ತಿದ್ದುದು ಪುರಂದರದಾಸ ಮತ್ತು ಕನಕದಾಸರ ಕೀರ್ತನೆಗಳೇ. ಇತರ ಅನೇಕ ಹರಿದಾಸರು ಆಗಿಹೋಗಿದಾರೆ ನಿಜ. ಅವರಲ್ಲಿ ಕೆಲವರು ರಚಿಸಿದ ಕೀರ್ತನೆಗಳು ಈ ಗೋಷ್ಠಿಗಳಲ್ಲಿ ಹಾಡಲಾಗುತ್ತಿರಬಹುದು. ಆದರೆ ಹಾಡುತ್ತಿದ್ದ ಈ ಭಜನೆ ಕೂಟದವರಿಗೆ ಗೊತ್ತಿದ್ದುದು ಈ ಎರಡು ಹೆಸರುಗಳೇ-ಪುರಂದರದಾಸ, ಕನಕದಾಸ ಇದರಿಂದ ಈ ಇಬ್ಬರು ಜನತೆಗೆ ಎಷ್ಟು ಹತ್ತಿರವಾದವರು, ಪ್ರಿಯವಾದವರು ಎಂಬ ಅಂಶ ಸ್ಪಷ್ಟಪಡುತ್ತದೆ. ಕನಕದಾಸರ ಸಂಗೀತ ಕೈಂಕರ್ಯವನ್ನು ಈ ಹಿನ್ನೆಲೆಯಿಂದ ಪರಿಶೀಲಿಸಬೇಕಾಗಿದೆ. ನಮ್ಮಲ್ಲಿ ಸಂಗೀತ ಎಂದರೆ ಕಛೇರಿ ವೇದಿಕೆಯ ಮೇಲೆ ಕೇಳಿಬರುವುದೇ ಸಂಗೀತ ಎಂಬ ತಪ್ಪು ಅಭಿಪ್ರಾಯವಿದೆ. ಸಂಗೀತ ಕಲೆ ಮನುಷ್ಯನ ಜೀವನದಲ್ಲಿ ಹೇಗೆ ವ್ಯಾಪಕವಾಗಿದೆ. ಪದರ ಪದರವಾಗಿ ಹೇಗೆ ಹರಡಿದೆ, ವಿವಿಧ ವರ್ಗಗಳಿಗೆ ಯಾವ ಯಾವ ರೀತಿ ಸಂತೋಷ ಉಂಟು ಮಾಡುತ್ತಿದೆ, ಮನಸ್ಸಿಗೆ ನೆಮ್ಮದಿ ಕೊಡುತ್ತಿದೆ ಎಂಬ ಅಂಶಗಳನ್ನು ಗಮನಿಸುವುದಿಲ್ಲ. ಆತನಿಗೆ ಸಂಗೀತ ಹೇಗೆ ಗೊತ್ತು, ಗುರುಗಳಾರು. ಸಂಪ್ರದಾಯವಾವುದು, ಬಿರುದು ಪ್ರಶಸ್ತಿಗಳೇನು ಬಂದಿವೆ, ಈ ರೀತಿ ಆಲೋಚನೆಗಳು ಬರುತ್ತವೆ. ಇವುಗಳ ಮಧ್ಯೆ ಸಂಗೀತ ಅಥವಾ ಹಾಡುಗಾರಿಕೆ ಮನುಷ್ಯರಿಗೆ ಸ್ವಭಾವ ಸಿದ್ಧವಾದುದು ಭಾವೋತ್ಕರ್ಷತೆಯ ಫಲವಾಗಿ ಹೃದಯದಿಂದ ಉಕ್ಕಿ ಬರುವಂತಹುದು ಎಂಬ ಅಂಶ ಮರೆತು ಹೋಗುವುದು. ಕನಕದಾಸರಿಗೆ ಸಂಬಂಧಿಸಿದಂಥೆ ಈ ಪ್ರಶ್ನೆಗಳನ್ನು ಪರಿಶೀಲಿಸುವ ಯತ್ನಮಾಡಬೇಕಾಗಿದೆ. ಕನಕದಾಸರಿಗೆ ಸಂಗೀತ ತಿಳಿದಿತ್ತೇ ಎಂಬ ಪ್ರಶ್ನೆಯನ್ನೇ ಪರಿಶೀಲಿಸುವ. ಈ ಪ್ರಶ್ನೆ ಪುರಂದರದಾಸರ ಜಯಂತಿಯ ನಾಲ್ಕನೆಯ ಶತಮಾನೋತ್ಸವ ಸಂದರ್ಭದಲ್ಲಿಯೂ ಮೂಡಿ ಬಂದಿತು. ಈ ಪ್ರಶ್ನೆಗೆ ಉತ್ತರ ಕೊಡುವ ಮುನ್ನ ಒಂದು ಸಂಗತಿಯನ್ನು ನೆನೆಸಿಕೊಳ್ಳಬೇಕಾಗಿದೆ. ಪುರಂದರದಾಸರಂತೆಯೇ ಕನಕದಾಸರೂ ಹರಿದಾಸ ಪಂಥಕ್ಕೆ ಸೇರಿದವರು. ಈ ಪಂಥದಲ್ಲಿ ಭಜನೆಗೆ ಮುಖ್ಯ ಸ್ಥಾನವಿದೆ. ಭಗವದರ್ಚನೆಯಲ್ಲಿ ನವವಿಧ ಭಕ್ತಿಯೂ ಪ್ರದರ್ಶಿತವಾಗುತ್ತದೆ. ಈ ಒಂಬತ್ತು ರೀತಿಯ ಭಕ್ತಿಪ್ರದರ್ಶನದಲ್ಲಿ ಕೀರ್ತನ, ಸ್ಕರಣ ಮತ್ತು ಅರ್ಚನಗಳಿಗೆ ಸಂಗೀತ ಸಂಬಂಧವಿದೆ. ನಾಮಸ್ಮರಣ ಹಾಗೂ ಕೀರ್ತನೆಗಳು ಕೇವಲ ಮಂತ್ರ ಜಪಿಸುವ ರೀತಿಯಲ್ಲಿ ಮಾಡುವಂತಹವಲ್ಲ. ರಾಗಬದ್ಧವಾಗಿ ನಿಬದ್ಧ ಮತ್ತು ಅನಿಬದ್ಧ ಎರಡೂ ರೂಪದಲ್ಲಿಯೂ ಮಾಡಲಾಗುವುದು. ನಿಬದ್ಧ ರೂಪದಲ್ಲಿದ್ದಾಗ ಹಾಡು. ಅರ್ಚನೆ ಮಾಡುವಾಗಲೂ ಹಾಡಿಗೆ ಸ್ಥಾನವಿದೆ. ಕೆಲವು ಸಂದರ್ಭದಲ್ಲಿ ಭಕ್ತನು ಕಾಲಿಗೆ ಗೆಜ್ಜೆ ಕಟ್ಟಿ ತನ್ಮಯನಾಗಿ ಹಾಡುತ್ತಾ ಕುಣಿಯುತ್ತಾ ಭಗವತ್ ಸ್ಮರಣೆ ಮಾಡುವ ಸಂದರ್ಭಗಳೂ ಇವೆ. ಆದಕಾರಣ ಈ ಭಕ್ತಿಪಂಥದಲ್ಲಿ ಹಾಡಿಗೆ ಅರ್ಥಾತ್ ಸಂಗೀತಕ್ಕೆ ಒಂದು ಮುಖ್ಯ ಸ್ಥಾನವಿದೆ ಎನ್ನಬಹುದು.