ಪುಟ:Kanakadasa darshana Vol 1 Pages 561-1028.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೦೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಜಾನಪದ ಅಂಶಗಳು ೭೦೧ ಕನಕದಾಸರ ಕೀರ್ತನೆಯೊಂದು ಮೌಖಿಕ ಮೂಲದ ಜನಪದ ಸಾಹಿತ್ಯದಿಂದ ಬಂದು ಹೆಚ್ಚು ಜನಪ್ರಿಯತೆಯನ್ನು ಸಾಧಿಸಿಕೊಳ್ಳಲು ಮುಖ್ಯವಾದ ಕಾರಣ ಅದರಲ್ಲಿ ಅಡಕವಾಗಿರುವ ಜನಪದ ಸಂಗೀತದ ಮೂಲಲಯ ಹಾಗೂ ಅಲ್ಲಿ ಮೂಡಿನಿಲ್ಲುವ ಗಣಪತಿಯ ವೈಶಿಷ್ಟ್ಯಪೂರ್ಣವಾದ ಚಿತ್ರ, ಉಟ್ಟದಟ್ಟಿ, ಬಿಗಿದುಟ್ಟ ಚಲ್ಲಣ, ಹೊಟ್ಟೆಯ ಗಣನಾಥ, ಮೋರೆ ಕಪ್ಪಿನಭಾವದ, ಮೊರದಗಲ ಕಿವಿಯ, ಕೋರೆದಾಡೆಯ ಗಣನಾಥ ಅವನು ಈ ವರ್ಣನೆ ಜನಪದರ ಮನಸ್ಸಿನ ಮೇಲೆ ಚಿರಮುದ್ರೆಯನ್ನೊತ್ತುವಷ್ಟು ಸ್ವಾರಸ್ಯಕರವಾದುದು. ಅಲ್ಲದೆ ಜನಪದ ಭಾಷೆಯ ಬೆಡಗೂ ಇಲ್ಲಿನ ಆಕರ್ಷಣೆಗೆ ಪೂರಕವೆನಿಸುತ್ತದೆ. ಕನ್ನಡ ಜನಪದ ಗೀತಸಾಹಿತ್ಯದಲ್ಲಿ ಡೊಳ್ಳಿನ ಹಾಡುಗಳಿಗೆ ಒಂದು ಪ್ರಮುಖ ಸ್ಥಾನ ವಿದೆ. ಡೊಳ್ಳನ್ನು ತಾಳ ಬದ್ದವಾಗಿ ಬಡಿಯುತ್ತ ವೈವಿಧ್ಯಮಯವಾದ ಗೀತೆಗಳನ್ನು ಡೊಳ್ಳುಮೇಳದಲ್ಲಿ ಹಾಡಲಾಗುತ್ತದೆ. ಇದನ್ನು ಡೊಳ್ಳಿನ ಕೈಪಟ್ಟು ಎಂದು ಕರೆಯುತ್ತಾರೆ. ಸ್ವಾರಸ್ಯಕರವಾದ ಕಥನಗೀತೆಗಳೂ, ಬಿಡಿಹಾಡುಗಳೂ ಈ ಮೇಳದಲ್ಲಿ ಉಳಿದುಬಂದಿವೆ. ಡೊಳ್ಳಿನ ಸಮೇತ ಊರಾಡಲು ಹೋಗುವ ಕಲಾವಿದರು ಬೇರೆ ಬೇರೆ ಊರುಗಳಲ್ಲಿ ಹಂಚಿಹೋದ ತಮ್ಮ ಹೆಣ್ಣುಮಕ್ಕಳಿಗೆ ವರ್ಷಕ್ಕೊಮ್ಮೆ ತಮ್ಮ ಕುಲದೈವದ ದರ್ಶನ ಮಾಡಿಸುವ ವೈಖರಿಯ ಒಂದು ಪ್ರಸಿದ್ದ ಪಲ್ಲವಿಯನ್ನು ಜಾನಪದ ಮೂಲದಿಂದ ಕನಕದಾಸರು ಸ್ವೀಕರಿಸಿದ್ದಾರೆ. ದೇವಿ ನಮ್ಮ ದ್ಯಾವರು ಬಂದರು ಬನ್ನಿರೇ ನೋಡ ಬನ್ನಿರೇ ಎಂಬ ಸಾಲುಗಳಲ್ಲಿ ದೇವರನ್ನು ಊರಾಡಲು ತಂದು ತಮ್ಮ ತಮ್ಮ ಹೆಣ್ಣುಮಕ್ಕಳನ್ನು ಆತ್ಮೀಯತೆಯಿಂದ ಊರ ಮುಂದಕ್ಕೆ ಕರೆದು ದರ್ಶನ ಮಾಡಿಸುತ್ತಾರೆ. ಹೆಣ್ಣುಮಕ್ಕಳು ಆರತಿಯನ್ನು ತಂದು ತಮ್ಮ ಮನೆದೇವರ ಉತ್ಸವಮೂರ್ತಿಗೆ ವಂದಿಸಿ ಮೊರದಲ್ಲಿ ದವಸಧಾನ್ಯವನ್ನು ನೀಡಬೇಕು. ಮೇಲಿನ ಚರಣಗಳು ಡೊಳ್ಳುಮೇಳದವರಲ್ಲಿ ಮಾತ್ರ ಪ್ರಚಲಿತವಿರದೆ, ನಾಗಮಂಗಲ, ಕುಣಿಗಲು, ಚನ್ನಪಟ್ಟಣ, ಚನ್ನರಾಯಪಟ್ಟಣ ಸುತ್ತಿನಲ್ಲಿ ಕಾಣಬರುವ ಭಾಗವಂತಿಕೆ ಮೇಳದಲ್ಲಿಯೂ ಜನಪ್ರಿಯವಾಗಿದೆ. ಇಲ್ಲಿಯೂ ದೀವಳಿಗೆಯಲ್ಲಿ ದೇವರೊಡನೆ ಊರಾಡಲುಹೋಗುವ ಸಂಪ್ರದಾಯವಿದೆ. ಆಯಾ ದೈವಗಳಿಗೆ ಹೊಂದಿಸಿಕೊಂಡು ಮುಂದೆ ಅನುಕೂಲಕ್ಕೆ ತಕ್ಕಂತೆ ಹಾಡನ್ನು ಬೆಳೆಸಿಕೊಂಡು ಹೋಗುತ್ತಾರೆ. ಕುರುಬರು ಬೀರಪ್ಪನನ್ನು ಕುರಿತಂತೆ ಹಾಡಿದರೆ ವೈಷ್ಣವ ಮೂಲದ ಭಾಗವಂತಿಕೆ ಮೇಳದವರು ರಂಗನಾಥ, ಗರುಡಾಳ, ಬೇಟೆರಾಯ, ಹನುಮಂತ ಮೊದಲಾದ ದೈವಗಳ ಮಹಿಮೆಯನ್ನು ಕೊಂಡಾಡುತ್ತಾರೆ. ಕನಕದಾಸರು ತಮ್ಮ ಈ ಕೀರ್ತನೆಯಲ್ಲಿ ವಿಷ್ಣುವಿನ ಹತ್ತು ಅವತಾರಗಳ ಚಿತ್ರವನ್ನು ನೀಡುತ್ತಾರೆ. ಕೊನೆಯ ಪದ್ಯದಲ್ಲಿ ಇದೊಂದು ಡೊಳ್ಳುಪದ ಎಂಬಂತೆ “ಡೊಳ್ಳು' 'ತಾಳಿ ಮತ್ತು ಹಾಡುಗಾರರನ್ನೂ ಪ್ರಸ್ತಾಪಿಸುತ್ತಾರೆ : ಡೋಳಿನ ಮೇಲೆ ಕೈಯ ಬರಮಪ್ಪ ಹಾಕ್ಯಾನು ತಾಳವ ಶಿವನಪ್ಪ ತಟ್ಟಾನ್ಮಾ ಒಳ್ಕೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು ಚೆಲುವ ಕನಕಪ್ಪ ಕುಣಿದಾನ್ಮಾ || ಬರಮಪ್ಪ, ಶಿವನಪ್ಪ, ಹನುಮಪ್ಪ, ಕನಕಪ್ಪ ಎಂಬ ಹೆಸರುಗಳು ಡೊಳ್ಳುಮೇಳದ ಗ್ರಾಮೀಣ ಕಲಾವಿದರನ್ನೇ ನಿರ್ದೆಶಿಸಿ ಹೇಳಿದಂತಿದೆ. ಬ್ರಹ್ಮ ಶಿವ, ಭಾಗವತೋತ್ತಮನಾದ ಆಂಜನೇಯ, ದಾಸಶ್ರೇಷ್ಠನಾದ ಕನಕದಾಸರನ್ನು ಹಿನ್ನೆಲೆಯಾಗಿಟ್ಟುಕೊಂಡು ಮಹಾವಿಷ್ಣುವಿನ ಅವತಾರಗಳ ಮಹಿಮೆಯನ್ನು ಬಣ್ಣಿಸಿರುವ ರೀತಿ ಜಾನಪದೀಯವಾದುದು. ಇಲ್ಲಿನ ಭಾಷಾಪ್ರಯೋಗವೂ ಹಾಡಿನ ಮಟ್ಟಿಗೆ, ಹಾಡಿನ ವಿಷಯಕ್ಕೆ ಹೊಂದಿಕೊಂಡು ಒಂದು ಜನಪದಗೀತೆ ಎಂಬಂತೆಯೇ ಮೂಡಿಬಂದಿದೆ. 'ಮೋಹನ ತರಂಗಿಣಿ', 'ಹರಿಭಕ್ತಿಸಾರ', 'ನಳಚರಿತ್ರೆ'ಗಳಂಥ ಶ್ರೇಷ್ಠ ಕೃತಿಗಳ ಈ ಪ್ರೌಢಕವಿ ಜನಪದ ಮೂಲದ ಗೀತೆಗಳನ್ನು ಅಭ್ಯಾಸಮಾಡಿ ಅವುಗಳಿಂದ ಪ್ರಭಾವಿತನಾಗಿ ಕೀರ್ತನೆಗಳ ಮೈಗೆ ಜಾನಪದ ಸೊಗಡಿನ ಲೇಪನಮಾಡಿ ಹಾಡಿರುವ ರೀತಿ ಮೆಚ್ಚುವಂತಿದೆ. ಕನಕದಾಸರ ಮೇಲೆ “ಡೊಳ್ಳಿನ ಪದಗಳ ಪ್ರಭಾವ ಆದಂತೆಯೇ, ಕುರುಬ ಜನಾಂಗದ ಪ್ರಭಾವವೂ ಆಗಿರುವುದು ಅವರ ಕೀರ್ತನೆಗಳಿಂದ ಸ್ಪಷ್ಟವಾಗುತ್ತದೆ: ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿಯ ಹಿಂಡುಗಳ || - ಎಂಬ ಪಲ್ಲವಿಯೊಡನೆ ಆರಂಭವಾಗುವ ಕೀರ್ತನೆ ಸ್ಪಷ್ಟವಾಗಿ ಕುರಿಸಾಕುವ ವೃತ್ತಿಯ ನೇರ ಅನುಭವವನ್ನು ತಂದುಕೊಡುತ್ತದೆ. ಕುರಿಕಾಯುವ ಕುರುಬ ತನ್ನ ಕುರಿಗಳ ಜೊತೆ ಮೇಕೆಗಳನ್ನೂ ಹೊಂದಿರುತ್ತಾನೆ. ಟಗರುಗಳೂ ಇರುತ್ತವೆ. ಕುರಿಯ ಹಿಂಡಿನ ಜೊತೆ ನಾಯಿಗಳೂ ಇರುತ್ತವೆ. ತೋಳ ಚಿರತೆಗಳು ಬಂದು ಹಿಂಡಿನ ಮೇಲೆ ಎರಗುವ ಸಾಧ್ಯತೆಯಿರುತ್ತದೆ. ಕಾಗಿನೆಲೆ ಆದಿಕೇಶವನೆಂಬ ಅಜ್ಜ ನರಕುರಿಗಳನ್ನು ಕಾಯುವ ವೈಖರಿ ಇದು :