ಪುಟ:Kanakadasa darshana Vol 1 Pages 561-1028.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೦೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಜಾನಪದ ಅಂಶಗಳು ೭೦೫ “ಮುತ್ತು ಬಂದಿದೆ ಕೇರಿಗೆ' ಎಂಬ ಕೀರ್ತನೆಯಲ್ಲಿ ಮುತ್ತು ಮಾರುವ ಶೆಟ್ಟಿ ಊರಿಗೆ ಬಂದ ಚಿತ್ರವಿದೆ, 'ಬಾಯಿನಾರಿದ ಮೇಲೆ ಏಕಾಂತವೆ' ಎಂಬ ಕೀರ್ತನೆಯಲ್ಲಿ 'ತಾಯಿ ತೀರಿದ ಮೇಲೆ ತೇರಾಸೆಯೆ' ಎಂಬ ಸಾಲಿನ ಮೂಲಕ ತೌರಪದಗಳ ಪ್ರಭಾವ ಎದ್ದುಕಾಣುತ್ತದೆ. 'ದಾನಧರ್ಮ ಮಾಡಿ ಸುಖಿಯಾಗು ಮನವೆ' ಎಂಬ ಕೀರ್ತನೆಯಲ್ಲಿ 'ಎಕ್ಕನಾತಿ ಎಲ್ಲಮ್ಮ ಮಾರಿದುರ್ಗಿಯು ಚೌಡಿ' ಮುಂತಾದ ನಾಡದೈವಗಳ ಪ್ರಸ್ತಾಪವನ್ನು ಮಾಡುವುದರ ಜೊತೆಗೆ ಅವುಗಳಿಗೆ ಸಂಬಂಧಿಸಿದ 'ಬಲಿ' 'ತಂಬಿಟ್ಟಿನ ಆರತಿ' 'ಬೇವಿನುಡುಗೆ'ಗಳ ವಿವರಗಳನ್ನೂ ನೀಡುತ್ತಾರೆ. ಸಂಭ್ರಮದಿಂದೊತ್ತು ನೇಮದಲ್ಲಿದ್ದು ತಂಬಿಟ್ಟಿನಾ ದೀಪ ಹೊರಲೇತಕೆ ಕೊಂಬುಹೋತ ಕುರಿಕೋಣನಾ ಬಲಿಗೊಂಬ ಡೊಂಬಿದೈವಗಳ ಭಜಿಸದಿರು ಮನವೆ || ಚಿಗುರೆಲೆ ಬೇವಿನ ಸೊಪ್ಪು ನಾರಸೀರೆ ಬಗೆ ಬಗೆಯ ಶೃಂಗಾರಮಾಡಿ ನೆಗೆನೆಗೆದು ಆಡಲು ಕುಣಿಯಲು ನಿನಗಿನ್ನು ಮಿಗಿಲಾದ ಮುಕುತಿಯುಂಟೇ ಹುಚ್ಚು ಮನವೆ || ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಪ್ರಸ್ತಾಪಿಸಿರುವ ಅನೇಕ ಜಾನಪದ ಅಂಶಗಳ ಸಾಲಿನಲ್ಲಿ ಜನಪದ ಪ್ರದರ್ಶಕ ಕಲೆಯಾದ ಗೊಂಬೆಯಾಟದ ವಿಷಯ ಪ್ರಮುಖವಾದುದು. ಅತ್ಯಂತ ಪ್ರಾಚೀನವಾದ ಈ ಕಲೆಯ ಬಗ್ಗೆ ಸಾಕಷ್ಟು ಪ್ರಾಚೀನ ಉಲ್ಲೇಖಗಳು ಲಭ್ಯವಾಗುತ್ತವೆ. ಸೂತ್ರದ ಗೊಂಬೆಯಾಟದ ಪ್ರಭಾವ ಕನಕದಾಸರ ಮೇಲೆ ಸಾಕಷ್ಟು ಆಗಿದೆ. ಧಾರವಾಡ ಜಿಲ್ಲೆಯ ಅಂತರವಳ್ಳಿ ಮುಂತಾದ ಕಡೆಗಳಲ್ಲಿ ಈಗಲೂ ಈ ಕಲೆ ಜೀವಂತವಾಗಿದ್ದು ಸಾಕಷ್ಟು ಜನಪ್ರಿಯವಾಗಿದೆ. ಈ ಕಲೆಯನ್ನು ತಮ್ಮ ಕೀರ್ತನೆಗಳಲ್ಲಿ ಮೇಲಿಂದ ಮೇಲೆ ಉಲ್ಲೇಖಿಸುವ ಕನಕದಾಸರು ಇದರ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದುದು ಕಂಡುಬರುತ್ತದೆ. ಸೂತ್ರದ ಗೊಂಬೆಯ ಒನಪು ಒಯ್ಯಾರ ಒಡವೆ ವಸ್ತ್ರಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ : ಬೆಳ್ಳಿ ಬಂಗಾರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡು ಅಳ್ಳಾಚಾರಿಗೊಂಬೆಯಂತೆ ಆಡಿ ಹೋಯಿತು || ಈ ಬದುಕು ಎಷ್ಟು ನಶ್ವರವಾದುದು, ಕ್ಷಣಿಕವಾದುದು ಎಂಬುದನ್ನು ವಿಸ್ತರಿಸಿ ಹೇಳಲು ಕನಕದಾಸರು ಎತ್ತಿಕೊಂಡ ಉದಾಹರಣೆ ತುಂಬ ಅರ್ಥಪೂರ್ಣವಾದುದು. ಚೆನ್ನಾಗಿ ಅಲಂಕಾರಮಾಡಿದ ಈ ಗೊಂಬೆ ರಂಗದ ಮೇಲೆ ಕಾಣಿಸಿಕೊಂಡು ತನ್ನ ಪಾತ್ರ ಮುಗಿದಕೂಡಲೇ ಮೂಲೆಯಲ್ಲಿ ಒರಗುತ್ತದೆ. ಆ ಅಲಂಕಾರವನ್ನು, ಆ ವೈಭವವನ್ನು ಅನಂತರ ಯಾರು ಕೇಳಬೇಕು ! ಮಾನವಜೀವನ ಎಂಬುದು ಈ ಸೂತ್ರದ ಗೊಂಬೆಯ ಕಣಕಾಲದ ಬದುಕಿನಂತೆ! ಕನಕದಾಸರು ಸೂತ್ರದ ಗೊಂಬೆಯನ್ನು ಹೆಸರಿಸುವಾಗ 'ಅತ್ಯಾಚಾರಿ ಗೊಂಬೆ' ಎನ್ನುತ್ತಾರೆ. ಸೂತ್ರದಗೊಂಬೆಯನ್ನು ತಯಾರಿಸುವವರು, ಅವುಗಳನ್ನು ಸಂರಕ್ಷಿಸಿ ಇಡುವವರು, ಆ ಕಲೆಗೆ ತಮ್ಮನ್ನು ಅರ್ಪಿಸಿಕೊಂಡವರು “ಆಚಾರಿ'ಗಳೆಂದು ಕರೆಯಲ್ಪಡುವ ವಿಶ್ವಕರ್ಮ ಜನಾಂಗದವರು. ಈ ಕಲೆಯ ಮೂಲಪುರುಷನೇ ಒಬ್ಬ ಆಚಾರಿ, ಒಕ್ಕಲಿಗರ ಹೆಣ್ಣು ಮಗಳನ್ನು ಪ್ರೀತಿಸಿ ಲಗ್ನವಾದ ಇವನು ತಾನು ಪಡೆದ ಏಳು ಜನ ಗಂಡುಮಕ್ಕಳನ್ನು ಗೊಂಬೆ ಆಡಿಸುವ ವೃತ್ತಿಯಲ್ಲಿ ತೊಡಗಿಸಿದ. ಗೊಂಬೆಗಳನ್ನು ತಾನೇ ಮಾಡಿಕೊಟ್ಟ. ಈ ಏಳು ಜನ ಮಕ್ಕಳೂ ಗೊಂಬೆಗಳೊಡನೆ ಒಂದೊಂದು ದಿಕ್ಕಿಗೆ ಹೋಗಿ ಆ ಕಲೆಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ನೆಲೆಯೂರಿಸಿದರು. ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ಮೊದಲಾದ ದಕ್ಷಿಣದ ರಾಜ್ಯಗಳಲ್ಲದೆ ಪೂರ್ವದ ಹೊರದೇಶಗಳಿಗೂ ಈ ಕಲೆ ಹೋಯಿತು. ಈ ಕಲೆಗೂ ಅಳ್ಳಾಚಾರಿಗೂ ಇದ್ದ ಸಂಬಂಧದ ಪ್ರಥಮ ಉಲ್ಲೇಖ ಕನಕದಾಸರಲ್ಲಿ ಬಂದಿರುವುದು ಮಹತ್ವದ ವಿಷಯ. ಈ ಮೇಲಿನ ಸಾಲುಗಳ ಜೊತೆಗೆ ಕನಕದಾಸರು ಈ ಸೂತ್ರದ ಗೊಂಬೆಯ ಬಗ್ಗೆ ಇನ್ನೂ ಅನೇಕ ಕಡೆ ಪ್ರಸ್ತಾಪಿಸುತ್ತಾರೆ. ಡಿಂಬಿನೊಳು ಪ್ರಾಣವಿರಲು ಕಂಬಸೂತ್ರಗೊಂಬೆಯಂತೆ ಎಂದಿದ್ದರೊಂದು ದಿನ ಸಾವು ತಪ್ಪದು ನಾನಾ ಜನ್ಮದಲಿ ಬಂದ ನಾಟಕದ ಗೊಂಬೆಯಿದು ಬೊಂಬೆಯಾಟವನಾಡಿಸಿದ ಮಹಾಭಾರತವ ಅಂಬುಜಭವಾನಿಯರು ರಕ್ಷಿಸಲು ಕುರುಭೂಮಿಯೆಂಬ ಪುರವೀಧಿ ರಂಜಿಸಲು ಮರೆಯ ಮಾಯದ ಐದು ತೆರೆಯ ಹಾಕಿ