ಪುಟ:Kanakadasa darshana Vol 1 Pages 561-1028.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೩೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ವಿಡಂಬನೆ ೭೩೫ ಪ್ರತಿಯೊಬ್ಬನ ವ್ಯಕ್ತಿತ್ವ ವಿಕಸನಗೊಳ್ಳುವುದು, ರೂಪಿತಗೊಳ್ಳುವುದು ಅವನ ಸ್ವಭಾವ ಮತ್ತು ನಡುವಳಿಕೆಗಳಿಂದ, ಭಾಷೆ, ಕಲಿಕೆ, ಆಲೋಚನೆಗಳ ಎತ್ತರ ಬಿತ್ತರಗಳಿಂದ ಅವನು ಸಂಸ್ಕಾರಗೊಳ್ಳುತ್ತಾನೆ ; ಸುಸಂಸ್ಕೃತವಾಗುತ್ತಾನೆ. ಆದರೆ ಮೂಲತಃ ಮಹತ್ವಾಕಾಂಕ್ಷಿಯಾದ ಅವನು ಆಸೆಯ ಬೆನ್ನು ಹತ್ತುವನು ಇಲ್ಲವೆ ಬೆಂಬತ್ತಿ ಕಾಡುವ ಆಸೆಗೆ ಬಲಿಯಾಗುವನು. ಆಗವನ ಮನಸ್ಸು ವಿಶ್ವದೆಲ್ಲಾ ಒಳಿತು ತನ್ನದಾಗಬೇಕೆಂಬ ಅಪೇಕ್ಷೆಯನ್ನು ಹೊರುತ್ತದೆ. ಆ ಸುಖವನ್ನು ದೋಚುವ, ಬಲಾತ್ಕಾರದಿಂದಲಾದರೂ ಕೊಳ್ಳೆ ಹೊಡೆಯುವ ಪ್ರಯತ್ನಕ್ಕದು ಮುನ್ನುಗ್ಗುತ್ತದೆ. ತನ್ನ ನೆಲೆಬೆಲೆಯ ಅರಿವಿಲ್ಲದ ಅವನು ಸಂಯಮರಹಿತನಾಗಿ ಹಲವು ಪಾಡುಪಟ್ಟು ನರಳುತ್ತಾನೆ ; ಕೆಲವೊಮ್ಮೆ ಅಧಃಪತನಕ್ಕಿಳಿದು ವ್ಯಕ್ತಿತ್ವನಾಶನದ ಕಡೆಗೂ ಮುಖ ಮಾಡಿ ನಿಲ್ಲುವನು. “ವಿಶ್ವಮಾನವ” ನಾಗಿ ಹುಟ್ಟುವ ಮನುಷ್ಯ ಪರಿಸರದ ಪ್ರಭಾವಕ್ಕೆ ತುತ್ತಾಗಿ ಕೇವಲ ಮಾನವನಾಗಿಬಿಡುವುದು, ಅರಿಷಡ್ವರ್ಗಗಳಿಗೆ ದಾಸಾನುದಾಸನಾಗುವುದು ಬದುಕಿನ ದುರಂತ. ಇದಕ್ಕೆ ಮನಃಶಾಸ್ತ್ರ ಕೊಡುವ ಹಲವು ಕಾರಣಗಳಲ್ಲಿ 'ಸಂಗ' ದೋಷವೂ ಒಂದು “ಸಜ್ಜನರ ಸಂಗವದು ಹೆಜೇನು ಸವಿದಂತೆ” ಎಂಬ ಸರ್ವಜ್ಞನ ನಾಣ್ಣುಡಿಯಾಗಲಿ, “ಸಗಣಿಯವನ ಜೊತೆ ಸರಸವಾಡೋದಕ್ಕಿಂತ ಗಂಧದವನ ಜೊತೆ ಗುದ್ದಾಡೋದು ಲೇಸು” ಎಂಬ ಜನಪದವಾಣಿಯಾಗಲಿ ಈ ಸತ್ಯವನ್ನೇ ಪ್ರತಿಫಲಿಸುತ್ತವೆ. ನಮ್ಮ ಸುತ್ತಮುತ್ತ ಹಲವು ಬಗೆಯ ಊಸರವಳ್ಳಿ ಜನರಿರುತ್ತಾರೆ ; ಹಲವಾರು ಸ್ವಭಾವ ದೌರ್ಬಲ್ಯಗಳನ್ನು ಹೊಂದಿದವರಿರುತ್ತಾರೆ. ಕಡುಲೋಭಿಗಳು, ಮೂಢರು, ಮೂರ್ಖರು, ಅನ್ಯಾಯಿಗಳು, ಗುರುನಿಂದೆ-ಪರನಿಂದಕರು, ಗುರುಪತಿ-ಪರಸತಿ ಮೋಹಕರು, ಕೃತಘ್ನರು, ಚಾಡಿಕೋರರು ಮಾತಾ-ಪಿತದ್ರೋಹಿಗಳು ಮುಂತಾದವರು, ಇವರೆಲ್ಲರಲ್ಲೂ ನೀಚತನ ರಕ್ತಕಣಗಳಷ್ಟೇ ಸಹಜವಾಗಿ ಮೈಗೊಡಿರುತ್ತದೆ. ಆದ್ದರಿಂದಲೆ ಇವರನ್ನು “ಹುಲುಮಾನವರು” “ನೀಚಮಾರ್ಗಿ” ಗಳು ಎಂದು ಕನಕರು ಛೇಡಿಸುವುದರ ಜೊತೆಗೆ ಈ ಕಾಕನ್ನೂ ಬಳಸಿದ್ದಾರೆ: ನ್ಯಾಯವ ಬಿಟ್ಟು ಅನ್ಯಾಯವ ಪೇಳುವ ನಾಯಿಗೆ ನರಕವು ತಪ್ಪಿತೆ || (ಕೀ, ಸಂ. ೨೫) ಡೊಂಕು ಬಾಲದ ನಾಯಕರೆ ನೀವೇನೂಟ ಮಾಡಿದಿರಿ ಕಣಕಕುಟ್ಟೋ ಅಲ್ಲಿಗೆ ಹೋಗಿ ಹಣಕಿ ಇಣಕಿ ನೋಡುವಿರಿ ಕಣಕ ಕುಟ್ಟೋ ಒನಕೆಲಿ ಹೊಡೆದರೆ ಕುಂಯಿ ಕುಂಯಿ ರಾಗವ ಪಾಡುವಿರಿ || (ಕೀ, ಸಂ. ೧೦೮) ಈ ಚಿತ್ರ ಮನುಷ್ಯನ ಚಪಲತೆ ಚಂಚಲತೆ ಆತ್ಮಾಭಿಮಾನರಹಿತ ನಡೆಯನ್ನು ಮನಮುಟ್ಟುವಂತೆ ಸೆರೆ ಹಿಡಿದಿದೆ. ಈ ಬಗೆಯ ಕೀರ್ತನೆಗಳಲ್ಲಿ ಕನಕರು ಮನುಷ್ಯನನ್ನು ನಾಯಿಯೊಂದಿಗೆ ಸಾದೃಶ್ಯಕಲ್ಪಿಸಿರುವುದು ಸ್ವಾರಸ್ಯಪೂರ್ಣ, ನಾಯಿ ಜನಪದರ ದೃಷ್ಟಿಯಲ್ಲಿ ನಾರಾಯಣನೂ ಹೌದು ; ಪ್ರಾಮಾಣಿಕತೆಗೆ ಇನ್ನೊಂದು ಹೆಸರೂ ಹೌದು, ಆದರೆ ಅದೇ ನಾಯಿ ಹೊಲಸು ತಿನ್ನುತ್ತದೆ ; ಸಿಕ್ಕಿದ್ದನ್ನು ಮೂಸುತ್ತದೆ ; ಅಂದಣವನ್ನೇರಿಸಿದರೂ ಹೊಲಸು ಕಂಡಲ್ಲಿ ಧುಮ್ಮಿಕ್ಕುವ ಚಂಚಲತೆ ತೋರುತ್ತದೆ. ಹೀಗೆಯೇ ಮಾನವ ಚೇತನ ಊರ್ಧ್ವಗಾಮಿಯಾದಾಗ ಮಾನವತ್ವದಿಂದ ದೈವತ್ವವನ್ನು ಸಂಪಾದಿಸಬಲ್ಲದು, ಅಧೋಗಾಮಿಯಾದಾಗ ಮಾನವತ್ವದಿಂದಲೂ ದೂರ ಸಿಡಿದು ಕೀಳಾಗಬಲ್ಲದು. ಕನಕದಾಸರು ಹೀಗೆ ಏಕಕಾಲದಲ್ಲಿ ಒಂದೇ ಪದದಲ್ಲಿ ಜೀವದ ಎರಡು ಮುಖವನ್ನು ದರ್ಶಿಸುವ, ಸಾಂಕೇತಿಸುವ ರೀತಿ ಮನೋಜ್ಞವಾಗಿದೆ ; ಧ್ವನಿರಮ್ಯವಾಗಿದೆ. ಹೆರರಲ್ಲಿ ದೋಷವನ್ನು ಕಂಡು ಹಿಡಿಯುವುದು ಸುಲಭ. ತನ್ನ ಬೆನ್ನನ್ನು ತಾನು ಕಾಣುವುದು ಕಷ್ಟ. ಕನಕದಾಸರು ಇದಕ್ಕೆ ಹೊರಗು, ತಮ್ಮ ಅಂತರಂಗವನ್ನು ಶೋಧಿಸಿಕೊಳ್ಳಲು ಇವರು ಎಲ್ಲೂ ಹಿಂದು ಮುಂದು ನೋಡುವುದಿಲ್ಲ, “ಎನಗಿಂತ ಕಿರಿಯರಿಲ್ಲ” ಎಂಬ ಬಸವಣ್ಣನವರ ವಿನಯಕ್ಕೆ ಹತ್ತಿರ ನಿಲ್ಲುವ ಕನಕರು ಅಷ್ಟೇ ನಮ್ರತೆ, ನಿರ್ಲಿಪ್ತತೆಯಿಂದ “ನರಜನ್ಮ ಹುಳು ನಾನು” (ಕೀ, ೨೪) ಎಂದು ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ಹನುಮ ರಾಮನನ್ನು ಮುಟ್ಟಿದ ರೀತಿಯಲ್ಲಿ ಹರಿಯ ನಾಮದ ಬಲದಿಂದಬದುಕಿನ ಗುರಿಯನ್ನು ಮುಟ್ಟಲು ಯತ್ನಿಸುತ್ತಾರೆ. ಸರ್ವಸಂಗ ಪರಿತ್ಯಾಗಿಗಳಾಗ ಬಯಸಿದ ಕನಕರನ್ನು ಸಂಸಾರ ಕಟ್ಟಿಹಾಕುತ್ತದೆ, ಮಡದಿ ಮಕ್ಕಳ ಪಾಶ ಕೊರಳ ಸುತ್ತುತ್ತದೆ. ಅಲ್ಲಿಂದ ತನ್ನನ್ನು ಪಾರುಗೊಳಿಸುವಂತೆ ಇಷ್ಟದೈವಕ್ಕೆ ಮೊರೆಹೋಗುತ್ತಾರೆ. ಪರರ ಚಿತ್ತವೃತ್ತಿಯನ್ನರಿತು ಸೇವಕನಂತೆ ತಿರುಕನಂತೆ ನಿತ್ಯಕರ್ಮದಲ್ಲಿ ತೊಡಗುವ ಬದುಕನ್ನು ಸಾಕುಮಾಡೆಂದು ಬೇಡಿಕೆ ಸಲ್ಲಿಸುತ್ತಾರೆ. “ಆರಿಗಾದರೂ ಪೂರ್ವ ಕರ್ಮ ಬಿಡದು” (ಕೀ, ೪೯), “ಒಲ್ಲೆನೆಂದರಾಗುವುದೆ ಅಲ್ಲಿ ಪಡೆದು ಬಂದುದ (ಕೀ. ೬೪) ಎಂದು ಸಮಾಧಾನ ತಂದುಕೊಂಡಷ್ಟು ಜೀವ ಒದ್ದಾಡುತ್ತದೆ.