ಪುಟ:Kanakadasa darshana Vol 1 Prelim Pages.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಿಕೆ ಈ ಕೃತಿ ಇಷ್ಟು ಬೇಗ ಖಂಡಿತವಾಗಿಯೂ ಹೊರಗೆ ಬರುತ್ತಿರಲಿಲ್ಲವೆಂದು ವಿನಯಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಕನಕದಾಸರು ನನ್ನ ಮೆಚ್ಚುಗೆಯ ಸಂತ ಕವಿಗಳಲ್ಲೊಬ್ಬರು. ಅವರಿಗೆ ಕೈಂಕಯ್ಯ ಸಲ್ಲಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಕ್ಕಾಗಿ ಕರ್ನಾಟಕ ಸರ್ಕಾರದ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಸಂಪಾದಕಮಂಡಲಿಯ ಸದಸ್ಯ ಮಿತ್ರರು ತುಂಬ ಪ್ರೀತಿಯಿಂದ ಸೌಜನ್ಯದಿಂದ ನನ್ನೊಡನೆ ಸಹಕರಿಸಿದ್ದಾರೆ. ಅವರೆಲ್ಲರೂ ಕನ್ನಡನಾಡಿನ ಖ್ಯಾತ ವಿದ್ವಾಂಸರು, ಕನ್ನಡ ಮತ್ತು ಸಂಸ್ಕತಿ ನಿರ್ದೆಶನಾಲಯದ ನಿರ್ದೆಶಕರಾದ ಶ್ರೀ ಐ. ಎಂ. ವಿಠಲಮೂರ್ತಿಯವರು ತರುಣರು, ಉತ್ತಾಹಶೀಲರು, ದಕ್ಷರು, ಸುಸಂಸ್ಕೃತರು ; ಈ ಇಲಾಖೆಗೆ ಹೇಳಿ ಮಾಡಿಸಿದಂಥವರು. ಈ ಗ್ರಂಥ ಆದಷ್ಟು ಬೇಗ ಬರಬೇಕೆನ್ನುವ ದೃಷ್ಟಿಯಿಂದ ಮಂಡಲಿಗೆ ಎಲ್ಲ ಸಹಕಾರ ನೀಡಿದರು. ಸಹಾಯಕ ನಿರ್ದೆಶಕರೂ ಸ್ವಯಂ ಸಾಹಿತಿಗಳೂ ವಿವೇಕಿಗಳೂ ಆದ ಶ್ರೀ ಕಾ. ತ. ಚಿಕ್ಕಣ್ಣನವರ ಸಹಾಯ ಸಹಕಾರಗಳಿಂದ ಮಂಡಲಿಯ ಕೆಲಸ ಸುಸೂತ್ರವಾಗಿ ನಡೆಯಿತು. ಜಂಟಿ ನಿರ್ದೆಶಕರಾದ ಶ್ರೀ ದೇವರಸಯ್ಯನವರ, ಉಪನಿರ್ದೆಶಕರಾದ ಶ್ರೀ ಎಸ್. ವಿಶ್ವನಾಥ್ ಅವರ ಸೌಜನ್ಯ ಕಾರ್ಯೊತ್ಸಾಹ ಯಾವಾಗಲೂ ನೆನಪಿನಲ್ಲುಳಿಯು ವಂಥವು, ನಿರ್ದೆಶಕರ ಆಪ್ತ ಸಹಾಯಕಿ ಮೊದಲುಗೊಂಡು, ನಿರ್ದೇಶನಾಲಯದ ಸಿಬ್ಬಂದಿವರ್ಗದ ಜನರ ಮನಃಪೂರ್ವಕವಾದ ಸಹಾಯವನ್ನು ನಾನೆಂದೂ ಮರೆಯಲಾರೆ. ಇಂಥ ಬೃಹದ್ಯ೦ಥ ವನ್ನು ಒಂದು ತಿಂಗಳಲ್ಲಿ ಅಚ್ಚುಕಟ್ಟಾಗಿ ಮುದ್ರಿಸುವುದೊಂದು ಸಾಹಸವೇ ಸರಿ. ಶ್ರೀ ಮೀರಾ ಪ್ರಿಂಟರ್‌ನ ಮಾಲೀಕರಾದ ಶ್ರೀ ಕೆ.ಪಿ. ಪುಟ್ಟಸ್ವಾಮಿಯವರು ಹಗಲಿರುಳು ದುಡಿದು ಈ ಅದ್ಭುತವನ್ನು ಸಾಧಿಸಿದ್ದಾರೆ. ಕನ್ನಡ ಅಧ್ಯಯನ ಸಂಸ್ಥೆಯ ಶ್ರೀ ಶಾರದಾಪ್ರಸಾದರು ಕರಡು ತಿದ್ದುವಲ್ಲಿ ತುಂಬ ಶ್ರಮ ವಹಿಸಿದ್ದಾರೆ. ಮಂಡಲಿಯ ಸದಸ್ಯರಲ್ಲದಿದ್ದರೂ, ನನ್ನ ಮೇಲಣ ಪ್ರೀತಿಯಿಂದ ಪ್ರಸಿದ್ದ ಸಂಶೋಧಕರಾದ ಶ್ರೀ ಹ. ಕ. ರಾಜೇಗೌಡರು ನಾನಾ ರೀತಿಯಲ್ಲಿ ನನಗೆ ಸಹಾಯ ಮಾಡಿದ್ದಾರೆ. ಶ್ರೀ ಮೈ.ನಾ. ಶರ್ಮಾ ಅವರು ಸುಂದರವಾದ ಮುಖಪುಟವನ್ನು ರಚಿಸಿಕೊಟ್ಟಿದ್ದಾರೆ. ಈ ಎಲ್ಲ ಮಹನೀಯರಿಗೂ, ನಾನು ಹೃತೂರ್ವಕ ಧನ್ಯವಾದಗಳನ್ನರ್ಪಿಸುತ್ತೇನೆ. ಕನಕದಾಸರು ಕನ್ನಡ ನಾಡು ನುಡಿ ಸಂಸ್ಕೃತಿಯಲ್ಲಿ ಬೆರೆತುಹೋಗಿರುವ ಒಬ್ಬ ಧೀಮಂತ ವ್ಯಕ್ತಿ, ದಾಸ ಸಾಹಿತ್ಯದಲ್ಲಿ ಅವರದು ವೈಶಿಷ್ಟ್ಯಪೂರ್ಣವಾದ ವರ್ಚಸ್ಸು, ಸಾಮಾನ್ಯ ಬದುಕಿನಿಂದ ಒಡಮೂಡಿ, ಕೀರ್ತನಕಾರರಾಗಿ, ಸಂತರಾಗಿ, ಸಮಾಜ ಸುಧಾರಕರಾಗಿ ಅವರು ಕನ್ನಡ ಸಾಂಸ್ಕೃತಿಕ ಜಗತ್ತಿಗೆ ನೀಡಿರುವ ಕೊಡುಗೆ ಅನನ್ಯವಾದದ್ದು. ಅವರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಮಾನವತೆಯನ್ನು ಮೆರೆದ ಕ್ರಾಂತಿಕಾರಿ ಕವಿ. ಅವರು ತಮ್ಮ ಬದುಕು ಮತ್ತು ಕೃತಿಗಳ ಮೂಲಕ ಪ್ರತಿಪಾದಿಸಿರುವ ಜೀವನದರ್ಶನ ಸಾರ್ವಕಾಲಿಕ ; ವಿಚಾರಪೂರ್ಣ. ತಮ್ಮ ಕೀರ್ತನೆ ಹಾಗೂ ಕಾವ್ಯಗಳಲ್ಲಿ ಕಾವ್ಯಗುಣದ ಜೊತೆಗೆ ಸಾಮಾಜಿಕ ಕಳಕಳಿಯನ್ನು, ದೇಸೀ ಸತ್ಯವನ್ನು ಮೆರೆದಿದ್ದಾರೆ. ಈ ಸಂತ ಶ್ರೇಷ್ಠ ಕವಿಯ ೫೦೦ನೆಯ ಜಯಂತ್ಯುತ್ಸವವನ್ನು ರಚನಾತ್ಮಕವಾಗಿ ಹಾಗೂ ಅರ್ಥವತ್ತಾಗಿ ಆಚರಿಸಲು ಸರ್ಕಾರವು ತೀರ್ಮಾನಿಸಿತು. ೧೯೮೮ರಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಲಹಾ ಸಮಿತಿಯನ್ನು ರಚಿಸಲಾಯಿತು. ವರ್ಷಾದ್ಯಂತ ನಾಡಿನ ಎಲ್ಲೆಡೆ ಕನಕದಾಸರ ಜಯಂತ್ಯುತ್ಸವವನ್ನು ಆಚರಿಸುವುದರ ಜೊತೆಗೆ ಕನಕದಾಸರ ಸಮಗ್ರ ಕೃತಿಗಳು ಕನ್ನಡಿಗರಿಗೆ ಲಭ್ಯವಾಗುವಂತೆ ಮಾಡುವ ದಿಸೆಯಲ್ಲಿ ಪ್ರಕಟನಾ ಯೋಜನೆಯೊಂದನ್ನು ಕೈಗೊಳ್ಳಲಾಯಿತು, ಸರ್ಕಾರವು ಡಾ. ದೇ. ಜವರೇಗೌಡ, ಪೊ. ಎಲ್.ಎಸ್. ಶೇಷಗಿರಿರಾವ್. ಪೊ, ಹೆಚ್.ಜೆ. ಲಕ್ಕಪ್ಪಗೌಡ ಹಾಗೂ ಡಾ. ದೇವೇಂದ್ರ ಕುಮಾರ್ ಹಕಾರಿ ಇವರನ್ನೊಳಗೊಂಡಂತೆ ಒಂದು ಸಂಪಾದಕ ಮಂಡಳಿಯನ್ನು ರಚಿಸಿತು. ಇವರು ಮೊದಲಿಗೆ ಸಂಪಾದಿಸಿಕೊಟ್ಟ “ಜನಪ್ರಿಯ ಕನಕ ಸಂಪುಟ'ವನ್ನು ಸುಲಭ ಬೆಲೆಯಲ್ಲಿ ಪ್ರಕಟಿಸಲಾಯಿತು, ಅದಕ್ಕೆ ದೊರೆತ ಅಪಾರ ಜನಪ್ರಿಯತೆಯನ್ನು ಪರಿಗಣಿಸಿ, ಅದರ ಎರಡನೆಯ ಮುದ್ರಣವನ್ನು ಹೊರತರಲಾಯಿತು. ಪ್ರಸಕ್ತ, ಸಂಪಾದಕ ಮಂಡಳಿಯು ಸಂಪಾದಿಸಿ ಕೊಟ್ಟಿರುವ “ಕನಕ ಸಾಹಿತ್ಯ ದರ್ಶನ-ಸಂಪುಟ-೧” ಗ್ರಂಥ ಪ್ರಕಟವಾಗುತ್ತಿದೆ. ಇದು ಕನಕದಾಸರ ಸಮಗ್ರ ಸಾಹಿತ್ಯವನ್ನು ಕುರಿತು ಎಲ್ಲ ನಿಟ್ಟಿನಿಂದ ವಿವೇಚಿಸಿ, ಮೌಲ್ಯಮಾಪನ ಮಾಡಿರುವ ಲೇಖನಗಳ ಸಂಕಲನ. ನಾಡಿನ ಪ್ರತಿಭಾನ್ವಿತ ವಿದ್ವಾಂಸರು ತಮ್ಮ ಅಮೂಲ್ಯ ಲೇಖನಗಳಿಂದ ಈ ಗ್ರಂಥದ ಗೌರವವನ್ನು ಹೆಚ್ಚಿಸಿದ್ದಾರೆ. ಈ ಬೃಹತ್ ಕೃತಿ ಕನ್ನಡಿಗರಿಗೆ ಕನಕದಾಸರ ಜೀವನ ದರ್ಶನ ಹಾಗೂ ಸಾಹಿತ್ಯಕ ಕೊಡುಗೆಗಳ ಸಮಗ್ರ ಪರಿಚಯವನ್ನು ಮಾಡಿಕೊಡುತ್ತದೆಂಬುದರಲ್ಲಿ ಸಂಶಯವಿಲ್ಲ. ೨-೨-೧೯೯೦ ಮೈಸೂರು ದೇ. ಜವರೇಗೌಡ