ಪುಟ:Kannada-Saahitya.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭರತ-ಬಾಹುಬಲಿ

೧೯

ಯಿಲ್ಲ. ಅಂತ್ಃಪುರದ ಪರಿಚಾರಿಕೆಯರು 'ನಾ ಮುಂದು ತಾ ಮುಂದು' ಎಂದು ಎತ್ತಿ ಆಡಿಸುತ್ತಿದ್ದರು; ಬಾಲಕಮ ಒಬ್ಬರ ತೋಳಿನಿಂದ ಒಬ್ಬರ ತೋಳಿಗೆ ಹರಿದಾಡುತ್ತಿದ್ದನು. ಬಾಲಚಂದ್ರನಂತೆ ಆ ಬಾಲಕನು ದಿನದಿನಕ್ಕೆ ಬೆಳೆಯುತ್ತಿರಲು ದಟ್ಟಡಿ, ತೊದಲುನುಡಿ, ಆರಳಿದ ಮುಖ, ಅದರಲ್ಲಿ ಸದಾ ಸುಳಿದಾಡುತ್ತಿರುವ ಕಿರುನಗೆ-ಇವುಗಳ ಚೆಲುವಿನಿಂದ ಎಲ್ಲರ ಮನಸ್ಸನ್ನೂ ಸೆಳೆಯುತ್ತಿದ್ದನು.

ಹೀಗೆ ಬೆಳೆಯುತ್ತಿರಲು ಆದಿನಾಧನು ಭರತನಿಗೆ ಅನ್ನ ಪ್ರಾಶನ, ಚೌಲ,

ಉಪನಯನ, ಮೊದಲಾದ ಸ್ಂಸ್ಕಾರಗಳನ್ನು ಕಾಲವರಿತು ತಾನೆ ನೆರವೇರಿ ಸಿದನು. ಬಾಲಕನಿಗೆ ಹತ್ತು ಹನ್ನೊಂದರ ವಯಸ್ಸಾಯಿತು. ಆಗ ಅವನು ಅಂತಃಪುರದ ದಾಸನ ಹೆಗಲೇರಿ ತರ್ಜನಿಯನ್ನು ಆಂಕುಶದಂತೆ ನಸುಬಾಗಿಸಿ ಪ್ರಮದವನಕ್ಕೆ ಪ್ರವೇಶಮಾಡುವನು. ಅಲ್ಲಿನ ಕೃತಕ ಗಿರಿಗಳನ್ನು ಮಹೋ ನ್ನತವಾದ ಗಿರಿದುರ್ಗಗಳೆಂದೇ ಭಾವಿಸಿ ಅವನ್ನು ಗೆಲ್ಲಲು ಮುನ್ನುಗ್ಗಿಸುವನು. ದಟ್ಟವಾಗಿ ಬೆಳೆದ ಬಾಳೆಯ ಗುಂಪನ್ನು ವನದುರ್ಗಗಳೆಂದು ತಿಳಿದು ಧ್ವಂಸ ಮಾಡುನನು. ವೊಳಕಾಲವರಿಗೆ ಬರುವ ನೀರ್ಗಾಲುವೆಗಳನ್ನು ಅಸಾಧ್ಯ ಜಲದುರ್ಗಗಳೆಂದುಕೊಂಡು ನುಗ್ಗಿ ಕವಡಿಬಿಡುವನು. ಬಿಳಿಯ ತಾವರೆ ಗಳನ್ನು ಶ್ವೇತಚ್ಛತ್ರಗಳೆಂದು ಹಿಡಿಸಿಕೊಳ್ಳುವನು. ಅಶೋಕದ ಎಳೆ ಚಿಗು ರನ್ನು ವಿಜಯ ಧ್ವಜವೆಂದು ಎತ್ತಿಹಿಡಿಸುವನು. ಒಡನಾಡಿಗಳು 'ಜಯ! ಜಯ! ' ಎಂದು ಆನಂದ ಕೋಲಾಹಲ ಮಾಡುತ್ತಿರಲು ಲತಾಗೃಹಕ್ಕೆ ಬಂದು ರಾಜಠೀವಿಯಿಂದ ಪೀಠದ ಮೇಲೆ ಮಂಡಿಸುವನು. ಬಳಿಕ ತನ್ನ ಸುತ್ತಲೂ ನೆರೆದ ಬಾಲಕವೃಂದಕ್ಕೆ 'ನಿನಗೆ ಈ ದೇಶ, ನಿನಗೆ ಆ ದೇಶ' ಎಂದು ಒಬ್ಬೊಬ್ಬರಿಗೆ ಒಂದೊಂದು ದೇಶವನ್ನು ಮೆಚ್ಚುಕೊಡುವನು.

ಈ ರೀತಿ ಸಾಮ್ರಾಜ್ಯದಾಟದಲ್ಲಿ ಆನಂದಿಸುತ್ತಿದ್ದ ಭರತನಿಗೆ ಕ್ರಮ

ಕ್ರಮವಾಗಿ ಬಾಲ್ಯ ಕಳೆದು ಯೌವನ ತಲೆದೋರಿತು. ಆಗ ಅವನ ಸರ್ವ ಪ್ರಕಾರದಲ್ಲಿಯೂ ತಂದೆಯನ್ನೆ ಹೋಲುತ್ತಿದ್ದನು. ತಂದೆಯ ರೂಪು, ತಂದೆಯ ಚೆಲುವು, ತಂದೆಯ ರೀತಿ, ತಂದೆಯ ಮಾತಿನ ಸೊಗಸು, ಎಲ್ಲವೂ ಅವನಲ್ಲಿ ಪ್ರತಿಬಿಂಬಿಸುತ್ತಿದ್ದವು. ತಂದೆಯ ಅಚ್ಚಿನಲ್ಲಿ ಒತ್ತಿದ ಹಾಗೆ ಭರತ ಕುಮಾರನು ಪ್ರಕಾಶಿಸುತ್ತಿದ್ದನು.