ಪುಟ:Kannada-Saahitya.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಿಕೆ

ಮನಸ್ಸನ್ನು ನಲಿಸಿ ಹೃದಯವನ್ನು ಹಿಗ್ಗಿಸಿ ಬುದ್ಧಿಯನ್ನು ತಿದ್ದಿ ಬಾಳನ್ನು ಬೆಳಗಿಸಲು ಸಾಹಿತ್ಯ ಉತ್ತಮ ಸಾಧನ. ಸಾಹಿತ್ಯ ಪರಿಚಯ ದಿಂದ ದೊರಕುವ ಸಂಸ್ಕಾರ ಮಾನವನನ್ನು “ಧನ್ಯನನ್ನಾಗಿ ಮಾಡುತ್ತದೆ. ಸಾಹಿತ್ಯಕ್ಕೆ ಶಾಶ್ವತವಾದ ಒಂದು ಬೆಲೆಯಿದೆ ; ಶಕ್ತಿಯಿದೆ. ಕಾಲ ದೇಶ ಭೇದದಿಂದ ಅದಕ್ಕೆ ಚ್ಯುತಿಯಿಲ್ಲ. ಅದನ್ನು ಅರಿತು ಗುರುತಿಸಿ ಬಳಸಿಕೊಳ್ಳುವುದು ಸಾಹಿತ್ಯ ವ್ಯಾಸಂಗದ ಗುರಿ. ಜನದ ಕರ್ತವ್ಯ.

ನಾಡಿನ ಪುನರುಜ್ಜಿವನಸಾಧನೆಯಲ್ಲಿ ಸಾಹಿತ್ಯದ ಪಾತ್ರ ಕಿಂದಲ್ಲ, ಬಹು ಹಿರಿದು. ಅದಕ್ಕೇ ಅಗ್ರಸ್ಥಾನವೆಂದರೂ ಸಲ್ಲುತ್ತದೆ. ಹೊಸಕಾಲದ ಸಾಹಿತ್ಯ ಹಲವು ಬಗೆಯಲ್ಲಿ ಹೊರಹೊಮ್ಮಿ ಹರಿಯುತ್ತಿದೆ. ಜನ ಇದನ್ನು ಸುಲಭವಾಗಿ ಅರಿಯಬಲ್ಲರು. ಆದರೆ ಹಳೆಯ ಸಾಹಿತ್ಯ ಬಹು ಜನಕ್ಕೆ ನಿಲುಕದು. ಈಗಿನ ಎಷ್ಟೋ ಮಂದಿಗೆ ಅದರಲ್ಲಿ ಏನಿದೆಯೆಂಬುದೇ ತಿಳಿ ಅಪರಿಚಯದಿಂದಾಗಿ ಹಳೆಯ ಸಾಹಿತ್ಯದಲ್ಲಿ ಹುರುಳಿಲ್ಲ ಎಂಬ ಹಳಿವಿನ ಮಾತು ಅಲ್ಲಲ್ಲಿ, ಆಗಾಗ ಕೇಳಬರುತ್ತಿದೆ.

ಹಳೆಯ ಸಾಹಿತ್ಯ ನೆಲದೊಳಗೆ ಮರೆಯಾಗಿರುವ ಮರದ ಬೇರಿನಂತೆ, ಚಿಗುರು ಹೂವು ಹಣ್ಣುಗಳನ್ನು ಕಂಡುಂಡು ತಣಿಯುವವರು ಬೇರನ್ನು ಮರೆಯುವುದು ಸಹಜ ; ಸರಿಯಲ್ಲ. ಹಳೆಯ ಸಾಹಿತ್ಯದ ಪರಿಚಯ ಅಭ್ಯಾಸಗಳಿಗೆ ಜನರ ಆಸೆಯೂ ಪ್ರಯತ್ನವೂ ಹಚ್ಚ ಬೇಕೆಂಬುದು ನಿಜ, ಅಭ್ಯಾಸಿಗಳಿಗೆ ತಕ್ಕ ಸಹಾಯ ಸಲಕರಣೆಗಳನ್ನು ಒದಗಿಸಿ ಕೊಡ ಬೇಕಾದ್ದು ಅಗತ್ಯವೆಂಬುದೂ ಅಷ್ಟೇ ನಿಜ. ಈಗ ನಾನು ಕೈಕೊಂಡಿರು ವುದು ಅವರಿಗೆ ನೆರವು ಕೊಡುವ ಒಂದು ಪ್ರಯತ್ನ.

ಕನ್ನಡದ ಹಳೆಯ ಸಾಹಿತ್ಯ ರಾಶಿಯಿಂದ ಅದರ ನಾನಾಮುಖಗಳೂ ತೋರಿಬರುವಂತೆ ಸುಮಾರು ನೂರು ಚಿತ್ರಗಳನ್ನು ಆಯ್ದು ಐದಾರು ಸಾಲುಗಳಲ್ಲಿ ಅಳವಡಿಸಿ ಕೊಡಬೇಕೆಂಬುದು ನನ್ನ ಉದ್ದೇಶ.