ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಒಳಸಂಚುಗಳು
೮೫

ಆತನು ತಿರುಗಿ ಬಹಳ ಮಾತಾಡಲಿಲ್ಲ; ಆದರೆ ಆತನಿಗೆ ತಿರುಮಲನ ಒಂದು ಮಾತೂ ನಿಜವೆಂದು ತೋರಲಿಲ್ಲ. ತನ್ನ ಸ್ನೇಹಿತರು ತಿರುಮಲನ ಮಾತಿನಿಂದ ಮೋಸ ಹೋಗಿದ್ದರೆ, ಅವರನ್ನು ಎಚ್ಚರಗೊಳಿಸಬೇಕೆಂದು ಆತನು ನಿಶ್ಚಯಿಸಿದನು. ಆತನು ತಿರುಮಲನ ಮಾತಿಗೆ ಹೆದರಿ, ಅಥವಾ ಮರುಳಾಗಿ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಿರುಮಲನ ಕಿವಿಗೆ, ಆತನ ಎದೆಯೊಡೆದು ನೀರಾಗುವಂಥ ಸುದ್ದಿಗಳೂ ಮುಟ್ಟುವಂತೆ ಏನು ವ್ಯವಸ್ಥೆ ಮಾಡಬೇಕೆಂದು ಆತನು ಯೋಚಿಸುತ್ತಲಿದ್ದನು. ಮುಂದೆ ಬಾದಶಹನ ಒಳಸಂಚಿನ ಭಯಂಕರವಾದ ಸುದ್ದಿಗಳು ತಿರುಮಲನ ಕಿವಿಗೆ ಮುಟ್ಟುವಂತೆ ರಾಮರಾಜನು ಮಾಡಿದನು. ಒಂದು ದಿನ, ಬಾದಶಹನು ವಿಜಯನಗರದಲ್ಲಿಯೇ ಕಾಲು ಊರಿ ನಿಲ್ಲುವ ಹವಣಿಕೆಯಲ್ಲಿರುತ್ತಾನೆಂಬ ಸುದ್ದಿಯು ತಿರುಮಲನಿಗೆ ಹತ್ತಿತು, ಅದನ್ನು ಕೇಳಿ ತಿರುಮಲನು-ಇನ್ನು ಮೇಲೆ ಬಾದಶಹನು ಪಟ್ಟಣ ಬಿಟ್ಟು ಹೋಗದಿದ್ದರೆ ಪರಿಣಾಮವಾಗಲಿಕ್ಕಿಲ್ಲ. ತಾನು ಒಪ್ಪಿಕೊಂಡಂತೆ ರಾಯರು ಬಾದಶಹನ ಮಾಂಡಲಿಕರಾಗುವದೊತ್ತಟ್ಟಿಗುಳಿದು, ನಮ್ಮ ಇಡಿಯ ರಾಜ್ಯವೇ ನಷ್ಟವಾದೀತೆಂಬ ಭಯವು ಆತನನ್ನು ಬಾಧಿಸಹತ್ತಿತು. ಅಷ್ಟರಲ್ಲಿ ಬಾದಶಹನು ತಿರುಮಲರಾನನ್ನು ಸೆರೆಹಿಡಿದು ತೋಫಿನಬಾಯಿಗೆ ಕೊಡಬೇಕೆಂದು ಮಾಡಿರುತ್ತಾನೆಂಬ ಸುದ್ದಿಯು ಹತ್ತಿತು. ಮತ್ತೊಂದು ದಿನ, ಬಾದಶಹನು ವಿಜಾಪುರದಿಂದ ಹೊಸ ದಂಡು ತರಿಸಿ ವಿಜಯನಗರವನ್ನು ಒಮ್ಮೆಲೆ ಸುಲಿದು ಸುಟ್ಟು ಸೂರೆ ಮಾಡಿ. ಹೆಂಗಸರನ್ನು ಸೆರೆ ಹಿಡಕೊಂಡು ಹೋಗಬೇಕೆಂತಲೂ, ದೇವಾಲಯಗಳನ್ನು ನಾಶಮಾಡ ಬೇಕೆಂತಲೂ, ಮಾಡಿರುತ್ತಾನೆಂಬ ಸುದ್ದಿಯನ್ನು ತಿರುಮಲನು ಕೇಳಿದನು. ಈ ಸುದ್ದಿಗಳೆಲ್ಲ ಹುಟ್ಟಲಿಕ್ಕೆ ರಾಮರಾಜನೇ ಕಾರಣನೆಂದು ವಾಚಕರು ಅರಿತಿರಬಹುದು. ಒಂದರ ಹಿಂದೊಂದರಂತೆ ಇಂಥ ಸುದ್ದಿಗಳನ್ನು ಕೇಳಿದ ತಿರುಮಲನ ಎದೆಯೊಡೆದು ನೀರಾಯಿತು. ಹಾ ಹಾ ಅನ್ನುವದರೊಳಗೆ ಬಾದಶಹನನ್ನು ಕಳಿಸುವೆನೆಂದು ಡೌಲು ಬಡೆದಿದ್ದ ಆತನಿಗೆ, ತಿರುಗಿ ಹೋಗೆಂದು ಬಾದಶಹನಿಗೆ ಹ್ಯಾಗೆ ಹೇಳಬೇಕೆಂಬುದೇ ಈಗ ತಿಳಿಯದಾಯಿತು.

ಇತ್ತ ಆದಿಲಶಹನು ವಿಜಯನಗರದ ಐಶ್ವರ್ಯವನ್ನೂ, ರಾಯರಿಂದ ತನಗಾದ ಸತ್ಕಾರವನ್ನೂ ನೋಡಿ, ಆಸೆಬುರುಕತನದಿಂದ ವಿಜಯನಗರವನ್ನು ಬಿಟ್ಟು ಹೋಗದಾದನು. ತಾನು ಹೇಳಿದಂತೆ ತಿರುಮಲರಾಯನು ಕೇಳಿದ್ದನ್ನು ನೋಡಿ, ಬಾದಶಹನ ಬಾಯಲ್ಲಿ ನಿಜವಾದ ನೀರು ಒಡೆದವು. ಕೆಲವು ದಿನಗಳವರೆಗಾದರೂ ವಿಜಯನಗರದಲ್ಲಿ ಇರಬೇಕೆಂದು ಆತನು ನಿಶ್ಚಯಿಸಿದನು ;