ಪುಟ:Kannadigara Karma Kathe.pdf/೧೦೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ಒಳಸಂಚುಗಳು
೮೯
 

ಅಂಥವನ್ನು ಈ ದುಷ್ಟ ತಿರುಮಲನು ಕೆಲವು ತಾಸುಗಳಲ್ಲಿ ನಾಶಮಾಡಿಬಿಟ್ಟನು! ಆಮೇಲೆ ಆತನು ಕಂಬಕ್ಕೆ ಕತ್ತಿಯನ್ನು ಕಟ್ಟಿ, ಅದರ ಮೇಲೆ ಕಸುವಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡನು. ಪ್ರಿಯವಾಚಕರೇ, ಕನ್ನಡಿಗರ ಅಭಿಮಾನಾಸ್ಪದವಾದ ಈ ಪ್ರಬಲ ರಾಜ್ಯದ ಐಶ್ವರ್‍ಯ ನಾಶವನ್ನು ತಿರುಮಲನು ಈ ಮೇರೆಗೆ ಹಲವು ಬಗೆಯಿಂದ ಮಾಡಿದ್ದನ್ನು ನೋಡಿ. ನಿಮಗೆ ಬಹು ವ್ಯಸನವಾಗಿರಬಹುದಲ್ಲವೆ? ಆದರೆ ಉಪಾಯವಿಲ್ಲ. ಈ ಜಗತ್ತಿನ ರೂಪಾಂತರದ ಕಡೆಗೆ ಲಕ್ಷ್ಯಕೊಟ್ಟು, ಈ ಜಗತ್ತಿನಲ್ಲಿ ಯಾವದೂ ಸ್ಥಿರವಲ್ಲೆಂಬುದನ್ನು ಲಕ್ಷಿಸಿ, ಸಮಾಧಾನ ಮಾಡಿಕೊಂಡು ಮುಂದಿನ ಸಂಗತಿಯನ್ನು ನೀವು ಓದಬೇಕು.

ಈ ಮೇರೆಗೆ ತಿರುಮಲನ ಅಂತ್ಯವಾದ ಬಳಿಕ ರಾಜ್ಯದ ಸೂತ್ರಗಳು ಮತ್ತೆ ರಾಮರಾಜನ ಕೈಯಲ್ಲಿ ಬಂದವು, ಆತನು ಮೊದಲು ಬಾಶಹನ ಸಮಾಚಾರವನ್ನು ತೆಗೆದುಕೊಂಡು, ಸಾಧಿಸಿದರೆ, ತಾವು ಕೊಟ್ಟಿದ್ದ ಕಪ್ಪದ ದೊಡ್ಡ ರಕಮ್‌ಅನ್ನು ಕಸಕೊಳ್ಳಬೇಕೆಂದು ಒಮ್ಮೆ ಯೋಚಿಸಿದನು ; ಆದರೆ ಈ ಕೆಲಸವು ಸುಲಭವಲ್ಲ ಎಂಬಮಾತು ಲಕ್ಷ್ಯಕ್ಕೆ ಬಂದದ್ದರಿಂದ, ಆತನು ಮೊದಲು ತನ್ನ ಮನೆಯ ವ್ಯವಸ್ಥೆಯನ್ನು ಸರಿಯಾಗಿ ಮಾಡಿಕೊಂಡ ಬಳಿಕ ಹಿಂದುಗಡೆ ಬಾದಶಹನ ಸಮಾಚಾರ ತಕ್ಕೊಳೋಣವೆಂದು ನಿಶ್ಚಯಿಸಿ ಮೊದಲು ತಿರುಮಲನ ಪಕ್ಷದ ಜನರ ಮೊದಲಿನ ಅಧಿಕಾರಗಳನ್ನು ಅವರ ಕಡೆಗೆ ಬಿಟ್ಟು - "ನಾನು ತಿರುಮಲನಿಗೆ ಕೇಡು ಬಗೆಯುತ್ತಿದ್ದಿಲ್ಲ; ಆತನು ಜೀವದಿಂದಿದ್ದರೆ ಆತನಿಗೇ ಮಂತ್ರಿ ಪದವಿಯನ್ನು ಕೊಟ್ಟು, ಅತನ ಕೈಕೆಳಗೆ ನಾನು ಇರುತ್ತಿದ್ದೆನು. ರಾಜ್ಯದ ಗೌರವವನ್ನು ನಷ್ಟಪಡಿಸಿದ್ದರಿಂದ ನಾನು ತಿರುಮಲನ ಗೊಡವಿಗೆ ಹೋಗಬೇಕಾಯಿತು" ಎಂದು ಹೇಳಿದನು. ಇದರಿಂದ ತಿರುಮಲನ ಪಕ್ಷದವರಿಗೆ ಸಮಾಧಾನವಾಯಿತು. ಮುಸಲ್ಮಾನರ ಕೈಯು ತಮ್ಮ ರಾಜ್ಯದಲ್ಲಿ ಸೇರಿದ್ದಕ್ಕಾಗಿ ರಾಮರಾಜನಿಗೆ ಬಹಳ ಅಸಮಾಧಾನವಾಗಿತ್ತು. ಮೊದಲು ಆತನು ಮುಸಲ್ಮಾನರದೊಂದು ಮಸೀದೆಯು (ದರ್ಗೆಯು) ತನ್ನ ರಾಜ್ಯದಲ್ಲಿದ್ದದ್ದಕ್ಕಾಗಿ ಅಸಮಾಧಾನಪಡುತ್ತಿರಲು, ಈಗ ಆ ದರ್ಗೆಯು ಮುಸಲ್ಮಾನರ ಕೈಸೇರಿದ್ದಲ್ಲದೆ, ತನ್ನ ಕುಂಜವನವು ಸಹ ಬಾದಶಹನ ವಕೀಲನ ವಾಸಸ್ಥಳವಾಯಿತೆಂದು ಆತನು ಬಹಳ ಅಸಮಾಧಾನ ಪಟ್ಟನು. ಆತನು ಬಾದಶಹನಿಗೆ- “ಕುಂಜವನದ ಬದಲು ಬೇರೆ ಸ್ಥಳವನ್ನು ನಿಮ್ಮ ವಕೀಲನಿಗೆ ಇರಲಿಕ್ಕೆ ಕೊಡುತ್ತೇವೆ” ಎಂದು ತಿಳಿಸಲು, ಅದಕ್ಕೆ ಬಾದಶಹನು- “ನಮ್ಮ ವಕೀಲನಿಗೆ ಅದೇ ಸ್ಥಳವು ಯೋಗ್ಯವಾದದ್ದು ಎರಡನೆಯ ಸ್ಥಳವು ನಮಗೆ ಬೇಕಾಗಿಲ್ಲ. ಕುಂಜವನವನ್ನು ನೀವು ಕೊಡದಿದ್ದರೆ, ನಮ್ಮ ವಕೀಲನು