ಪುಟ:Kannadigara Karma Kathe.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೦

ಕನ್ನಡಿಗರ ಕರ್ಮಕಥೆ

ನಿಮ್ಮಲ್ಲಿರುವದಕ್ಕೆ ನಿಮ್ಮ ಒಪ್ಪಿಗೆಯಿರುವದಿಲ್ಲೆಂದು ತಿಳಿದು, ನಾವು ಯೋಗ್ಯವ್ಯವಸ್ಥೆ ಮಾಡುವೆವು” ಎಂದು ಸ್ವಲ್ಪ ಕಠೋರತನದಿಂದ ಉತ್ತರವನ್ನು ಬರೆದು ಕಳಿಸಿದನು. ಅದನ್ನು ಓದಿ ರಾಮರಾಜನು ಸಿಟ್ಟು ಬೆಂಕಿಯಾದನು. “ನೀವು ಮಾಡತಕ್ಕದ್ದನ್ನು ಅವಶ್ಯವಾಗಿ ಮಾಡಿರಿ, ನಾನಂತು ಕುಂಜವನವನ್ನು ನಿಮಗೆ ಕೊಡುವದಿಲ್ಲ” ಎಂದು ಸ್ಪಷ್ಟವಾಗಿ ಬರೆಯಬೇಕೆಂದು ಆತನು ಯೋಚಿಸಿದನು; ಆದರೆ ಮತ್ತೆ ವಿಚಾರ ಮಾಡಿ, ಇದು ಹೀಗೆ ಏರಿಹೋಗಲಿಕ್ಕೆ ಸಮಯವಲ್ಲ, ಈಗ ಸಮಾಧಾನ ಮಾಡಿಕೊಳ್ಳುವದೇ ಯೋಗ್ಯವು, ಎಂದು ತಿಳಿದು, ಬಾದಶಹನ ವಕೀಲನಿಗೆ ಕುಂಜವನವನ್ನು ತೆರವು ಮಾಡಿಕೊಟ್ಟನು. ಇತ್ತ ಬಾದಶಹನು ರಾಮರಾಜನಿಗೆ-“ನಿಮ್ಮ ರಾಜ್ಯದಲ್ಲಿ ಸ್ವಸ್ಥತೆಯಾದ ಬಳಿಕ ನೀವು ಸೇರಿಸುವ ಮೊದಲನೆಯ ದರ್ಬಾರಕ್ಕೆ ನಮ್ಮ ವಕೀಲನು ಬರುವನು; ಆದ್ದರಿಂದ ದರ್ಬಾರು ನೆರವೇರಿಸಲಿಕ್ಕೆ ಎಂಟು ದಿವಸಗಳಿರುತ್ತಲೆ ನಮಗೆ ದರ್ಬಾರದ ದಿವಸವನ್ನು ತಿಳಿಸಬೇಕು;" ಎಂದು ಪತ್ರವನ್ನು ಬರೆದನು. ಆ ಪತ್ರವನ್ನು ವಿಶೇಷವಾಗಿ ಆ ಪತ್ರದೊಳಗಿನ ಔದ್ಧತ್ಯದ ಬರಹವನ್ನು ನೋಡಿ ರಾಮರಾಜನ ಸರ್ವಾಂಗವು ತಪ್ತವಾಯಿತು; ಆದರೆ ಇದು ತಡಕೊಂಡು ಹೋಗತಕ್ಕ ಕಾಲವು; ಮುಂದುವರಿದು ಹೋಗತಕ್ಕ ಕಾಲವಲ್ಲೆಂಬ ಮಾತು ಲಕ್ಷ್ಯದಲ್ಲಿ ಬಂದದ್ದರಿಂದ, ಆತನಿಗೆ ಬಹಳ ವ್ಯಸನವಾಯಿತು. ಆತನು ಹೆಚ್ಚಿನ ಉಸಾಬರಿಗೆ ಹೋಗದೆ, ದರ್ಬಾರದ ದಿನವನ್ನು ಗೊತ್ತು ಮಾಡಿ ಅದನ್ನು ಮುಂಗಡವಾಗಿ ಬಾದಶಹನಿಗೆ ಆತನ ಇಚ್ಛೆಯಂತೆ ತಿಳಿಸಿದನು.

****