ಪುಟ:Kannadigara Karma Kathe.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೪

ಕನ್ನಡಿಗರ ಕರ್ಮಕಥೆ

ಗೊತ್ತಿತ್ತು ; ಆದ್ದರಿಂದ ಹ್ಯಾಗಾದರೂ ಮಾಡಿ ಈ ಸುದ್ದಿಯನ್ನು ವಕೀಲ ಸಾಹೇಬರ ಕಿವಿಗೆ ಮುಟ್ಟಿಸಿದರೆ, ಹೆಂಗಸರ ಮಾನವುಳಿದೀತೆಂದು ತಿಳಿದು. ನಾನು ಕಾವಲುಗಾರರ ಕಣ್ಣು ತಪ್ಪಿಸಿ ನಿಮ್ಮ ಕಡೆಗೆ ಬಂದೆನು. ರಾಜದರ್ಬಾರಕ್ಕೆ ಹೋದಬಳಿಕ ಹೆಣ್ಣುಮಕ್ಕಳ ಮೇಲೆ ಎಂಥ ಪ್ರಸಂಗ ಬರುವದೋ ಏನೋ......”

ರಣಮಸ್ತಖಾನನು ಆ ಮನುಷ್ಯನ ಮಾತುಗಳನ್ನೆಲ್ಲ ಲಕ್ಷ್ಯಪೂರ್ವಕವಾಗಿ ಕೇಳಿಕೊಂಡನು ಆ ಮಾತುಗಳ ತಾತ್ಪರ್ಯವು ಆತನ ಮನಸ್ಸಿಗೆ ನಟ್ಟು, ಆತನು ಸೂರ್ತಿಗೊಂಡಿದ್ದನು. ಆತನು ಇದಕ್ಕೇನು ಮಾಡಬೇಕೆಂದು ತನ್ನೊಳಗೆ ಆಲೋಚಿಸಹತ್ತಿದನು. ರಾಮರಾಜನು ಮಸಲ್ಮಾನರ ಉಪಮರ್ದನ ಮಾಡುವಲ್ಲಿ ಬದ್ದ ಕಂಕಣನೆಂದು ರಣಮಸ್ತಖಾನನು ಕೇಳಿದ್ದನು ; ಅದರಂತೆ ಮುಸಲ್ಮಾನ ಸ್ತ್ರೀಯರ ಸಂಗಡ ರಾಮರಾಜನ ನಡತೆಯು, ಶೂರರಿಗೆ ಒಪ್ಪುವ ಹಾಗೆ ಇರುವದಿಲ್ಲೆಂಬ ಅಪಕೀರ್ತಿಯೂ ಎಲ್ಲ ಕಡೆಗೆ ಹಬ್ಬಿತು. ಇದನ್ನೆಲ್ಲ ಮನಸ್ಸಿನಲ್ಲಿ ತಂದು ರಣಮಸ್ತಖಾನನು, ಸದ್ಯದ ಪ್ರಸಂಗದಲ್ಲಿಯಾದರೂ ಆ ಮುಸಲ್ಮಾನ ಸ್ತ್ರೀಯರ ಅಪಮಾನವನ್ನು ಮಾಡಗೊಡದೆ, ಅವರನ್ನು ತನ್ನ ಸಂಗಡ ಕುಂಜವನಕ್ಕೆ ಕರಕ್ಕೊಂಡು ಬರಬೇಕೆಂದು ನಿಶ್ಚಯಿಸಿದನು. ಆತನು ಆ ಮನುಷ್ಯನಿಗೆ- “ಇಷ್ಟು ಹೊತ್ತಿಗೆ ನಿಮ್ಮ ಸಂಗಡಿಗರು ವಿಜಯನಗರವನ್ನು ಮುಟ್ಟಿರಬಹುದೇನು, ಎಂದು ಕೇಳಲು, ಆ ಮನುಷ್ಯನು-ಇನ್ನೂ ಮುಟ್ಟಿರಲಿಕ್ಕಿಲ್ಲ. ಇಂದು ಒಂಭತ್ತು ತಾಸಿನ ಸುಮಾರಕ್ಕೆ ಅವರು ವಿಜಯನಗರಕ್ಕೆ ಮುಟ್ಟಬಹುದು. ಅವರು ರಾತ್ರಿಯಲ್ಲಿ ಹಾದಿಯನ್ನು ನಡೆದಿರುವದಿಲ್ಲ. ರಾತ್ರಿಯಾದ್ದರಿಂದಲೇ ನನಗೆ ತಪ್ಪಿಸಿಕೊಂಡು ಬರಲಿಕ್ಕೆ ಅನುವು ದೊರೆಯಿತು, ಎಂದು ಹೇಳಿದರು. ಅದಕ್ಕೆ ರಣಮಸ್ತಖಾನನು “ಏನೂ ಚಿಂತೆಯಿಲ್ಲ, ನೀವು ಸ್ವಸ್ಥವಾಗಿ ಇರಿ, ಆ ಜನರು ಸುರಕ್ಷಿತವಾಗಿ ನಮ್ಮ ಮಹಾಸೇಬರ ಬಳಿಗೆ ಬರುವವರೆಗೆ ನಾನು ಅನ್ನಗ್ರಹಣ ಮಾಡುವದಿಲ್ಲ.” ಎಂದು ಪ್ರತಿಜ್ಞೆ ಮಾಡಿ, ತನ್ನ ತಾಯಿಯ ಕಡೆಗೆ ಬಹು ವಿನಯದಿಂದ ಭಕ್ತಿಪೂರ್ವಕವಾಗಿ ಒಮ್ಮೆ ನೋಡಿ ಅಲ್ಲಿಂದ ತಟ್ಟನೆ ಹೊರಟುಹೋದನು. ಆತನ ಪ್ರತಿಜ್ಞೆಯನ್ನು ಕೇಳಿ ಮಾಹಾಸೇಬರಿಗೆ ಬಹಳ ಸಂತೋಷವಾಯಿತು. ರಣಮಸ್ತಖಾನನಿಗೆ ಆತನ ತಾಯಿಯು ಬಹು ವಂದ್ಯಳಾಗಿದ್ದಳು. ಆತನು ದೇವರ ಮೇಲಿಟ್ಟಷ್ಟು ಭಕ್ತಿಯನ್ನು ತನ್ನ ತಾಯಿಯ ಮೇಲೆ ಇಟ್ಟಿದ್ದನು. ತಾಯಿಯ ಮಾತನ್ನು ಆತನು ಸರ್ವಥಾ ಮೀರುತ್ತಿದ್ದಿಲ್ಲ.

ರಣಮಸ್ತಖಾನನು ತಾಯಿಯ ಬಳಿಯಲ್ಲಿ ಪ್ರತಿಜ್ಞೆ ಮಾಡಿ ಹೊರಟವನು