ಪುಟ:Kannadigara Karma Kathe.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜಾಜ್ವಲ್ಯವೃತ್ತಿಯು

೧೦೭

ಕೇಳುವದೇನು ಉಳಿದ ಹಿಂದುಗಳೆಲ್ಲ ರಣಮಸ್ತಖಾನನ ಮೇಲೆ ದುಮುಕಿದರು; ಆದರೆ ರಣಮಸ್ತಖಾನನು ಸರ್ವಸಾಧಾರಣ ಮನುಷ್ಯನಿದ್ದಿಲ್ಲ. ಅವರೆಲ್ಲರಿಗೆ ಸೊಪ್ಪು ಹಾಕದವನಂತೆ ಶೌರ್ಯವನ್ನು ಪ್ರಕಟಿಸಹತ್ತಿದನು. ಅಷ್ಟರಲ್ಲಿ ಜನಸಮೂಹವು ನೆರೆಯಿತು. ಕರ್ಮಧರ್ಮ ಸಂಯೋಗದಿಂದ ವಿಜಯ ನಗರದ ಒಬ್ಬ ದರ್ಬಾರದ ಗೃಹಸ್ಥನು ಅತ್ತಕಡೆಯಿಂದ ಬಂದನು. ಒಬ್ಬನ ಮೇಲೆ ಎಂಟು ಹತ್ತು ಜನರು ಏರಿ ಹೋಗುವದನ್ನು ನೋಡಿ, ಆತನು ಅವಸರದಿಂದ ಅಲ್ಲಿಗೆ ಬಂದು ವಿಜಾಪುರದ ವಕೀಲನನ್ನು ನೋಡಿದನು. ತಾವೂ ವಿಜಾಪುರದ ಬಾದಶಹನೂ ಒಂದಾಗಿ ಉಳಿದ ಮುಸಲ್ಮಾನ ರಾಜ್ಯಗಳನ್ನು ನಷ್ಟಪಡಿಸಬೇಕೆಂದು ಮಾಡಿರುವಾಗ, ತಮ್ಮ ಜನರು, ಒಬ್ಬನೇ ಒಬ್ಬನಾಗಿ ಸಿಕ್ಕಿದ್ದ ವಿಜಾಪುರದ ವಕೀಲನಿಗೆ ಏನಾದರೂ ಅಪಾಯ ಮಾಡಿದರೆ, ಕೆಲಸ ಕೆಟ್ಟಿತೆಂದು ತಿಳಿದು ಆತನು ತಮ್ಮ ಜನರನ್ನು ಕುರಿತು- “ತಡೆಯಿರಿ, ತಡೆಯಿರಿ” ಎಂದು ನಿರ್ಬಂಧಿಸುತ್ತ ರಣಮಸ್ತಖಾನನ ಬಳಿಗೆ ಬಂದನು. ಆತನು ಜಗಳದ ಕಾರಣವನ್ನೇನೂ ಅರಿಯದವನಂತೆ, ರಣಮಸ್ತಖಾನನನ್ನು ಕುರಿತು- “ಖಾನಸಾಹೇಬ, ನೀವು ಇಷ್ಟು ಸಿಟ್ಟಿಗೇಳಲಿಕ್ಕೆ ಕಾರಣವೇನಾಯಿತೆಂಬದನ್ನಾದರೂ ಹೇಳಿರಿ” ಅನ್ನಲು, ಖಾನನು ಯಾವತ್ತು ಸಂಗತಿಯನ್ನು ಹೇಳಿ, ಆ ಗೃಹಸ್ಥನನ್ನು ಕುರಿತು-ನನಗೆ ಎರಡನೆಯದೇನೂ ಬೇಡ. ಈಗ ಹಿಡಿಯಲ್ಪಟ್ಟಿರುವ ಜನರು ಮುಸಲ್ಮಾನ ಬಾದಶಾಹಿಯ ಅಧೀನದವರಿರುವದರಿಂದ, ಅವರನ್ನು ನನಗೆ ಒಪ್ಪಿಸತಕ್ಕದ್ದು. ವಿಜಾಪುರದ ವಕೀಲನು ನಾನು ಇಲ್ಲಿ ಇರುತ್ತಿರುವಾಗ, ಹೀಗೆ ಮುಸಲ್ಮಾನ ಹೆಂಗಸರನ್ನು ವಿಡಂಬನವಾಗಗೊಡಲಿಕ್ಕಿಲ್ಲ. ಈಗ ಆದ ಅಪಮಾನವನ್ನು ಸಹಿಸಲಾರೆನು. ಹಾದಿ ಹಿಡಿದು ಹೋಗುವ ಮುಸಲ್ಮಾನ ಹೆಂಗಸರನ್ನು ನಿಮ್ಮ ಪುಂಡ ಜನರು ಹಿಡಿದು ತಂದು ಉಪಹಾಸ ಮಾಡುವದನ್ನು ನೋಡುತ್ತ ನಾವು ಸುಮ್ಮನೆ ಕುಳಿತುಕೊಳ್ಳಬೇಕೇನು ? ಈ ಮೇಣೆಯನ್ನು ಮೊದಲು ಕುಂಜವನಕ್ಕೆ ತಕ್ಕೊಂಡು ನಡೆಯಿರಿ. ಆಮೇಲೆ ನೀವು ಹೇಳುವದನ್ನು ಕೇಳುವೆನು. ಹುಂ, ಎತ್ತಿರಿ ಮೇಣೆಯನ್ನು, ಮೊದಲು ನಮ್ಮ ಕುಂಜವನಕ್ಕೆ ಇದನ್ನು ತಕ್ಕೊಂಡು ನಡೆಯಿರಿ, ಎಂದು ಅಜ್ಞಾಪಿಸಹತ್ತಿದನು. ಅದಕ್ಕೆ ಆ ದರ್ಬಾರಿ ಮನುಷ್ಯನು-“ಯೋಗ್ಯವು, ನೀವು ಆಡುವ ಮಾತು ಅತ್ಯಂತ ಯೋಗ್ಯವಾಗಿರುತ್ತದೆ” ; ಆದರೆ ರಾಮರಾಜರ ಕಿವಿಯವರೆಗೆ ಈ ಸುದ್ದಿಯು ಮುಟ್ಟಬೇಕಲ್ಲವೆ ? ಅವರ ಅನುಜ್ಞೆಯ ಹೊರತು ತಾವು ಹೇಳುವಂತೆ ನಡುವೆ ಕಾರಭಾರ ಹ್ಯಾಗೆ ಮಾಡಬೇಕು.

ರಣಮಸ್ತಖಾನ-ಅವರ ಕಡೆಗೆ ನಾನು ಪತ್ರವನ್ನು ಕಳಿಸಿದ್ದೇನೆ, ಅದರ