ಪುಟ:Kannadigara Karma Kathe.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೪

ಕನ್ನಡಿಗರ ಕರ್ಮಕಥೆ

ನಮ್ಮಲ್ಲಿ ಅವರ ವಿಷಯವಾಗಿ ಹೆಚ್ಚು ಹೆಚ್ಚು ಸಂಶಯವು ಉತ್ಪನ್ನವಾಗುವದು; ಆದ್ದರಿಂದ ಇನ್ನು ನಮ್ಮ ನಿಶ್ಚಯದಲ್ಲಿ ಎಂದಿಗೂ ಅಂತರವಾಗಲಿಕ್ಕಿಲ್ಲ.

ಈ ಮಾತುಗಳನ್ನು ಕೇಳಿ ರಣಮಸ್ತಖಾನನ ಮೈಮೇಲೆ ಎಚ್ಚರವು ತಪ್ಪಿದಂತಾಯಿತು. ಆತನಿಗೆ ಏನು ಮಾತಾಡಬೇಕು, ಏನು ಮಾಡಬೇಕು ಎಂಬದು ತಿಳಿಯದೆ ಹೋಯಿತು. ಆತನು ಕ್ರೋಧಾತಿರೇಕದಿಂದ ಥರ ಥರ ನಡುಗಹತ್ತಿದನು. ಆಗಿನ ಕಾಲದ ಆತನ ಮುದ್ರೆಯನ್ನು ನೋಡಿ, ಸ್ವತಃ ರಾಮರಾಜನು ಕೂಡ ಸ್ವಲ್ಪ ಬೆದರಿದನು. ಇನ್ನು ಇದಕ್ಕೂ ಹೆಚ್ಚಿಗೆ ಮುಂದಕ್ಕೆ ಹೋಗದೆ, ಇಲ್ಲಿಂದ ಹಿಂದಕ್ಕೆ ಸರಿಯಬೇಕೆನ್ನುವ ಹಾಗೆ ಆತನಿಗೆ ಒಮ್ಮೆ ಅನಿಸಿತು: ಆದರೆ ಆತನು ತನ್ನ ಮನಸ್ಸನ್ನು ತಿರುಗಿಸಿ, “ತನ್ನ ಮುಖದಿಂದ ಒಮ್ಮೆ ಉಚ್ಚರಿಸಿಹೋದ ಮಾತನ್ನು ಇನ್ನು ನಡಿಸದಿದ್ದರೆ, ಜನರ ಮನಸ್ಸಿನ ಮೇಲೆ ತನ್ನ ದರ್‍ಪದ ವಿಷಯವಾಗಿ ದುಷ್ಪರಿಣಾಮವಾದೀತು ಆದ್ದರಿಂದ ತಾನು ನುಡಿದಂತೆ ನಡೆಯಲೇ ಬೇಕು” ಎಂದು ವಿಚಾರ ಮಾಡಿ, ಆತನು ಪುನಃ ಆ ಹೆಂಗಸರನ್ನುದ್ದೇಶಿಸಿ- ಯಾಕೆ, ಸುಮ್ಮನೆ ನಿಂತಿರಿ ? ನೀವು ಬುರುಕಿಗಳನ್ನು ತೆಗೆಯಲೇಬೇಕು. ಎಲ್ಲರ ಬುರುಕಿಗಳನ್ನು ತೆಗೆಸಿ, ನಿಮ್ಮ ಮುಖಮುದ್ರೆಯನ್ನು ನೋಡಿದ ಹೊರತು ನಾನು ಬಿಡುವವನಲ್ಲ, ಎಂದು ನುಡಿದು ರಣಮಸ್ತಖಾನನ ಕಡೆಗೆ ತಿರುಗಿ- ನೀವು ನಿಮ್ಮ ಪದವಿಗೆ ಯೋಗ್ಯವಾಗಿ ಆಚರಿಸಿರಿ. ನೀವು ಏನು ತಿಳಿಸಬೇಕಾದದ್ದನ್ನು ನಿಮ್ಮ ಬಾದಶಹರಿಗೆ ತಿಳಿಸಿರಿ. ಇಲ್ಲಿ ಅಮಲು ನಮ್ಮದಿರುತ್ತದೆ. ನಮ್ಮ ರಾಜ್ಯದ ಸುರಕ್ಷಿತೆಯ ಬಗ್ಗೆ ನಾವು ಎಚ್ಚರ ಪಡಲಿಕ್ಕೆಬೇಕು. ನೀವು ಸಾಹಸದಿಂದ ಮುಂದುವರಿದದ್ದರಿಂದ ಏನಾದರೂ ಅನರ್ಥವಾದರೆ, ಅದರ ಜವಾಬುದಾರಿಯು ನಮ್ಮ ಮೇಲೆ ಇರುವದಿಲ್ಲ. ಹಿಂದೂ ಜನರು ಸ್ತ್ರೀಯರ ವಿಡಂಬನೆಯನ್ನು ಎಂದೂ ಮಾಡುವದಿಲ್ಲ; ಒಂದು ಪಕ್ಷದಲ್ಲಿ ಅಪ್ಪಿ ತಪ್ಪಿ ಆಂಥ ಅಪರಾಧವು ಅವರಿಂದ ಘಟಿಸಿದರೆ, ಅದನ್ನು ಕೇಳುವ ಅಧಿಕಾರವು ನಿಮಗೆ ಇರುವದಿಲ್ಲ. ನೀವು ಹಿಂದಕ್ಕೆ ಸರಿದು, ನಿಮ್ಮ ಸ್ಥಳಕ್ಕೆ ಹೋಗಿರಿ. ನೀವು ಇಲ್ಲಿ ಒಬ್ಬರೇ ಇರುತ್ತೀರಿ. ಎಷ್ಟು ಹಾರಾಡಿದರೂ ನಿಮ್ಮ ಮಾತು ನಡೆಯಗೊಡಲಿಕ್ಕಿಲ್ಲ.

ತನ್ನ ನಿರ್ಧಾರದ ಮಾತುಗಳನ್ನು ಕೇಳಿದಕೂಡಲೆ ರಣಮಸ್ತಖಾನನು ಅಂಜಿ ಹಿಂದಕ್ಕೆ ಸರಿದಾನೆಂದು ರಾಮರಾಜನು ತಿಳಿದಿದ್ದನು ; ಆದರೆ ಆ ತರುಣ ವಕೀಲನು ಹಾಗೇನು ಮಾಡದೆ, ಮತ್ತೆ ಎರಡು ಹೆಜ್ಜೆ ಮುಂದಕ್ಕೆ ಬಂದು ಆ ಸ್ತ್ರೀಯರನ್ನು ಕುರಿತು- “ನೀವು ಬರುಕಿಯನ್ನು ತೆಗೆದುಗಿಗಿದೀರಿ. ಯಾರು ನಿಮ್ಮ ಮೈಮುಟ್ಟುತ್ತಾರೋ ನಾನು ನೋಡುತ್ತೇನೆ” ಎಂದು ನುಡಿದು