ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಂಭಾಷಣ
೧೧೯

ಬಹಳ ಚಡಪಡಿಕೆಯಾಗಿತ್ತು. ಆತನು ಈವರೆಗೆ ಎಷ್ಟೋ ನ್ಯಾಯಾ ನ್ಯಾಯದ ಕೆಲಸಗಳನ್ನು ಮಾಡಿದ್ದನು ಆದರೆ ಅವುಗಳಲ್ಲಿ ಒಂದಾದರೂ ಇಂದಿನ ಪ್ರಸಂಗದಷ್ಟು ಆತನ ಮನಸ್ಸಿಗೆ ಹತ್ತಿದ್ದಿಲ್ಲ. “ನಾನು ಒಂದು ಒಬ್ಬ ಕುಲಸ್ತ್ರೀಯ ಅಪಮಾನವನ್ನಷ್ಟೇ ಅಲ್ಲ, ಲಜ್ಜಾಹರಣವನ್ನೂ ಮಾಡಿದೆನಲ್ಲ ! ಹೀಗೆ ಮಾಡಲಿಕ್ಕೆ ಕಾರಣವೇನೂ ಇದ್ದಿಲ್ಲ. ಗಂಡಸರು ಬುರುಕಿಯ ನೆವದಿಂದ ಹೆಂಗಸರಂತೆ ನಟಿಸುತ್ತಾರೆಂಬ ಸಂಶಯ ಬಂದಿದ್ದರೆ, ಅವರ ಪರೀಕ್ಷೆಯನ್ನು ನಮ್ಮ ಸ್ತ್ರೀಯರ ಮುಖಾಂತರ ಮಾಡಬಹುದಾಗಿತ್ತು. ಕೂಡಿದ ದರ್ಬಾರದಲ್ಲಿ ಹೆಂಗಸರ ಬುರುಕೆಯನ್ನು ತೆಗೆಸಿದ್ದು ಅನ್ಯಾಯವಾಯಿತು” ಎಂಬ ವಿಚಾರದಿಂದ ಆತನ ಮನಸ್ಸು ಅಸಮಾಧಾನಪಡುತ್ತಿರುವಾಗ, ದುಷ್ಪರಿಣಾಮವಾದದ್ದು ನೆನಪಾಗಿ, ಆತನ ಮನಸ್ಸು ಮತ್ತಿಷ್ಟು ಉದ್ವಿಗ್ನವಾಯಿತು. “ಇಂದಿನ ಈ ನಿನ್ನ ಕೃತ್ಯದ ಪರಿಣಾಮವು ಘೋರವಾಗುವದು ಬಹು ಘೋರವಾಗುವದು” ಎಂದು ಆ ಸ್ತ್ರೀಯು ಸಂತಾಪದಿಂದ ನುಡಿದದ್ದು ಅತನ ಕಿವಿಯಲ್ಲಿ ಬಾಧಿಸಹತ್ತಿತು. ತನಗೆ ಆ ಶಬ್ದದ ಸ್ಮರಣವಾಗಬಾರದೆಂದು ಆತನು ಬಹಳ ಪ್ರಯತ್ನ ಮಾಡಿದನು; ಆದರೆ ಅದೆಲ್ಲ ವ್ಯರ್ಥವಾಯಿತು. ತನ್ನ ಕೆಲಸಗಳನ್ನೆಲ್ಲ ತೀರಿಸಿಕೊಂಡು ಆತನು ಶಯ್ಯಾಗೃಹದಲ್ಲಿ ಹೋಗಿ ಮಲಗಿಕೊಂಡನು. ಆದರೆ ಆ ತರುಣಿಯು ಉಚ್ಚರಿಸಿದ ಶಬ್ದಗಳು ಆತನಿಗೆ ಕೇಳಿಸದೆಯಿರಲೊಲ್ಲವು ; ಮತ್ತು ಆ ತರುಣ ಸ್ತ್ರೀಯ ಉಗ್ರಮೂರ್‍ತಿಯು ಆತನ ಕಣ್ಣಿಗೆ ಕಟ್ಟಿದ್ದು ಮರೆಯಾಗಲೊಲ್ಲದು. ಇಂಥ ಸಣ್ಣಮಾತಿಗಾಗಿ ಇಷ್ಟು ಅಸಮಾಧಾನವಾದ ಬಳಿಕ ಮುಂದಿನ ದೊಡ್ಡ ಕಾರ್ಯಗಳು ನನ್ನಿಂದ ಹ್ಯಾಗಾದಾವು! ನಾನು ಯೋಗ್ಯವಾದುದನ್ನೇ ಮಾಡಿದ್ದೇನೆ, ಹೆಂಗಸರ ಕೆಲಸ, ಕೂಡಿದ ದರ್ಬಾರದಲ್ಲಿ ಬುರುಕೆ ತೆಗೆದದ್ದರಿಂದ ಸಂತಾಪವಾಗಿ ನಾಲ್ಕು ಬಿರಿನುಡಿಗಳನ್ನು ಆಡಿರಬಹುದು. ಇದರಲ್ಲಿ ಶಾಪ ಕೊಟ್ಟಹಾಗೇನಾಯಿತು ! ಮುಸಲ್ಮಾನರೆಲ್ಲರು ಒಕ್ಕಟ್ಟಾಗುವಂತೆ ಈಗ ಒಳಸಂಚು ನಡೆದಿರುವದರಿಂದ, ನಾನು ಹೀಗೆ ಶೋಧಿಸಿದ್ದರಲ್ಲಿ ಅನ್ಯಾಯವಾದರೂ ಏನಿರುತ್ತದೆ ? ನಾನೇನು ಅವರ ರೂಪವನ್ನು ನೋಡಬೇಕೆಂದು ಅವರ ಬುರುಕೆಗಳನ್ನು ತೆಗೆಸಿರುವದಿಲ್ಲ. ಇನ್ನೂ ತೆಗೆಸುತ್ತಿದ್ದಿಲ್ಲ; ಆದರೆ ನಾನಾಗಿ ನನ್ನ ರಾಜ್ಯದಲ್ಲಿ ಇಟ್ಟುಕೊಂಡಿದ್ದ ಆ ತರುಣ ವಕೀಲನು ಸೊಕ್ಕಿನಿಂದ ನಡೆದನು. ಅವನ ಸೊಕ್ಕಿನ ನಡತೆಯನ್ನು ನಡೆಯಗೊಡುವದು ನನಗೆ ಅಪಮಾನಕರವಲ್ಲವೇ ? ಎಂಬಿವೇ ಮೊದಲಾದ ವಿಚಾರಗಳಿಂದ ಅವನು ತನ್ನ ಮನಸ್ಸಿನ ಸಮಾಧಾನ ಮಾಡಿಕೊಳ್ಳ ಹೋದನು; ಆದರೆ- “ನೀನು ದುರ್ಬುದ್ಧಿಯಿಂದಲೇ ಈ ಕಾರ್ಯ ಮಾಡಿದೆಯೆಂದು” ಆತನ ಮನಸ್ಸು