ಪುಟ:Kannadigara Karma Kathe.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೦

ಕನ್ನಡಿಗರ ಕರ್ಮಕಥೆ

ಕಟಿಯಹತ್ತಿತು. ಆತನು ಅಂದಿನ ಪ್ರಸಂಗವನ್ನು ಮೊದಲಿನಿಂದ ಕಡೆಯವರೆಗೆ ಮತ್ತೊಮ್ಮೆ ನೆನಪು ಮಾಡಿಕೊಂಡನು. ಅಂದು ಅವನ ಮನಸ್ಸು ಪಶ್ಚಾತ್ತಾಪದಿಂದ ಶುದ್ದವಾದಂತೆ ಆಗಿತ್ತು. ಈ ಸ್ಥಿತಿಯಲ್ಲಿ, ಆತನು ಬಹು ದಿವಸದಿಂದ ಮರೆತುಬಿಟ್ಟಂತೆ ಆಗಿದ್ದ ಮೆಹೆರ್ಜಾನಳ ಸುಂದರ ಪ್ರತಿಮೆಯು ಆತನ ಮನಃಪಟಲದ ಮೇಲೆ ಮೂಡಿತು. ಕೂಡಲೆ ಆಕೆಯ ಅತ್ಯಂತ ಸುಂದರರೂಪದ ಹಾಗು ಅತ್ಯಂತ ಪ್ರೇಮ ಸ್ವಭಾವದ ಸ್ಮರಣವಾಗಿ ರಾಮರಾಜನು ಬಹು ದುಃಖಿತನಾದನು. ಆತನು ಹಾಸಿಗೆಯ ಮೇಲೆ ಮಲಗಿಕೊಳ್ಳಲಾರದೆ, ಚಿಟ್ಟನೆ ಮೇಲಕ್ಕೆದ್ದು ಹುಚ್ಚನ ಹಾಗೆ ಅತ್ತಿತ್ತ ನೋಡಹತ್ತಿದನು. ಆತನಿಗೆ ಮೆಹೆರ್ಜಾನಳ ವೃತ್ತಾಂತವೆಲ್ಲ ನೆನಪಾಯಿತು. ಇದು ಆತನ ತಾರುಣ್ಯದೊಳಗಿನ ಅತ್ಯಂತ ರಮಣೀಯವಾದ್ದೊಂದು ಪ್ರಸಂಗವಾಗಿತ್ತು. “ತಾನು ಆಡಿದಂತೆ ಆಕೆಯನ್ನು ಪಟ್ಟರಾಣಿಯಾಗಿ ಮಾಡಿಕೊಳ್ಳುವದರೊಳಗೇ ಆ ಮೆಹೆರ್ಜಾನಳು ತನ್ನ ಮೇಲೆ ತಪ್ಪು ಹೊರಿಸಿ. ಅವಸರದಿಂದ ಹೊರಟುಹೋದಳು” ಎಂದು ಆತನು ಸಮಾಧಾನ ಮಾಡಿಕೊಳ್ಳಹತ್ತಿದನು. ಆದರೆ ಅದರಿಂದ ಪ್ರಯೋಜನವೇನೂ ಆಗದೆ, ಈಗಲೇ ಕುಂಜವನಕ್ಕೆ ಹೋಗಿ ಬರಬೇಕೆಂಬ ಇಚ್ಛೆಯು ಮಾತ್ರ ಆತನಿಗೆ ಉತ್ಪನ್ನವಾಯಿತು. ಆಗ ಮಧ್ಯರಾತ್ರಿಯಾಗುತ್ತ ಬಂದಿತ್ತು. ಅಂಥ ಹೊತ್ತಿನಲ್ಲಿ ಒಬ್ಬನೇ ಕುಂಜವನಕ್ಕೆ ಹೋಗುವದು ಸರಿಯಲ್ಲೆಂಬದು ಆತನ ಮನಸ್ಸಿನಲ್ಲಿ ಬರಲಿಲ್ಲ. ಇದಲ್ಲದೆ ಕುಂಜವನವು ಈಗ ವಿಜಾಪುರದ ವಕೀಲ ಕೈಯೊಳಗಿರುತ್ತದೆಂಬದನ್ನು ಆತನು ಮರೆತಿದ್ದನೋ ಏನೋ ಯಾರಿಗೆ ಗೊತ್ತು ! ಆತನು ಒಮ್ಮೆಲೆ ತನ್ನ ಸೇವಕನನ್ನು ಕರೆದು, ತನ್ನ ಕುದುರೆಗೆ ಜೀನುಹಾಕಿಕೊಂಡು ಬಾರೆಂದು ಆಜ್ಞಾಪಿಸಿದನು. ಈ ಅಪ್ಪಣೆಯನ್ನು ಕೇಳಿ ಸೇವಕನಿಗೆ ಬಹಳ ಆಶ್ಚರ್ಯವಾಯಿತು. ಇಷ್ಟು ರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿರಬಹುದೆಂದು ಆ ಸೇವಕನು ಅಲೋಚಿಸತೊಡಗಿದನು; ಆದರೆ ಬಾಯಿಬಿಟ್ಟು ಹಾಗೆ ರಾಮರಾಜನನ್ನು ಕೇಳುವ ಧೈರ್‍ಯವು ಆತನಿಗಾಗಲಿಲ್ಲ. ಆದರೂ ಆತನು ತನ್ನ ಒಡೆಯನಿಗೆ- “ಸಂಗಡ ಯಾರು ಬರುವರು ?” ಎಂದು ಕೇಳಲು, ರಾಮರಾಜನು ಒಮ್ಮೆಲೆ ಅವನ ಮೈಮೇಲೆ ಕವಕ್ಕನೆ ಹೋಗಿ ಯಾರೆಂದರೆ ? ಧನಮಲ್ಲನು ! ಎಲ್ಲಿ ಹೋದನವನು ?” ಒಂದು ಪ್ರಶ್ನೆ ಮಾಡಿದನು. ಈ ಪ್ರಶ್ನೆಯನ್ನು ಕೇಳಿಯಂತು ಆ ಸೇವಕನು ಬೆರಗಾದನು. ಬಹಳ ದಿನಗಳ ಹಿಂದೆ ಧನಮಲ್ಲನೆಂಬ ಒಬ್ಬ ಸೇವಕನು ಇದ್ದನೆಂಬದು ಆ ಹೊಸ ಸೇವಕನಿಗೆ ಕೇಳಿ ಮಾತ್ರ ಗೊತ್ತಿತ್ತು. ಧನಮಲ್ಲನು ಒಮ್ಮಿಂದೊಮ್ಮೆ ಇಲ್ಲದ ಹಾಗೆ ಆದನೆಂಬದನ್ನೂ ಜನರ ಮುಖದಿಂದ ಆ ಸೇವಕನು ಕೇಳಿದ್ದನು.