ಪುಟ:Kannadigara Karma Kathe.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಂಭಾಷಣ

೧೨೩

ಧನಮಲ್ಲನನ್ನು ರಾಮರಾಜನ ಗುಪ್ತಚಾರನೆಂದು ಭಾವಿಸಿದನು. ತನ್ನ ಗುಪ್ತಚಾರನು ವೈರಿಗಳ ಕೈಯಲ್ಲಿ ಸಿಕ್ಕಿದ್ದರಿಂದ ತನ್ನ ಗುಟ್ಟು ಹೊರಬೀಳುವದೆಂದು ತಿಳಿದು ರಾಮರಾಜನು ಹೀಗೆ ಆಶ್ಚರ್ಯದಿಂದ ನೋಡುವನೆಂದು ಅವರು ತಿಳಿದರು. ಹೀಗೆ ತಾನು ನಿಲ್ಲುವದು ಸಂಶಯಕ್ಕೆ ಕಾರಣವೆಂದು ತಿಳಿದು ಏನೋ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿ, ರಾಮರಾಜನು ತನ್ನ ಕುದುರೆಯನ್ನು ಮುಂದಕ್ಕೆ ನೂಕಿದನು. ಇತ್ತ ರಣಮಸ್ತಖಾನನ ಸೇವಕರು ಧನಮಲ್ಲನನ್ನು ಕರಕೊಂಡು ಎರಡನೆಯ ಕಡೆಗೆ ನಡೆದರು. ಧನಮಲ್ಲನು ಎಲ್ಲಿಂದಲೋ ಕುಂಜವನಕ್ಕೆ ಅದೇ ಬಂದಿದ್ದನು.

ರಾಮರಾಜನು ಮಂದಿರದ ಸನಿಹಕ್ಕೆ ಬರುತ್ತಿರಲು, ರಣಮಸ್ತಖಾನನು ತನ್ನ ಕೆಲ ಜನರೊಡನೆ ಆತನ ಎದುರಿಗೆ ಹೋದನು. ಆಗ ರಾಮರಾಜನು ಕುದುರೆಯಿಂದ ಇಳಿದು ರಣಮಸ್ತಖಾನನ ಕೈಯನ್ನು ಹಿಡಕೊಂಡು ಮಂದಿರದ ಕಡೆಗೆ ನಡೆದನು. ಕುಂಜವನವು ಈ ಮೊದಲೆ ರಾಮರಾಜನು ಮಹೆರ್ಜಾನಳೊಡನೆ ರಮಿಸಿದ ಸ್ಥಳವಾದ್ದರಿಂದ ಆತನಿಗೆ ಅಲ್ಲಿಯ ಯಾವ ಪ್ರದೇಶವೂ ಅಪರಿಚಿತವಾದದ್ದಿದ್ದಿಲ್ಲ. ಕುಶಲ ಪ್ರಶ್ನೆಗಳನ್ನು ಕೇಳುತ್ತ, ಸಮಯೋಚಿತ ಮಾತುಗಳನ್ನಾಡುತ ಅವರೆಲ್ಲರು ಬಂಗಲೆಯ ಕಡೆಗೆ ನಡೆದರು. ಬಂಗಲೆಯೊಳಗಿನ ದರ್ಬಾರಖಾನೆಯಲ್ಲಿ ಹೋದಕೂಡಲೆ ರಣಮಸ್ತಖಾನನು ರಾಮರಾಜನನ್ನು ಮಧ್ಯಸ್ಥಾನದ ಉಚ್ಚಾಸನದಲ್ಲಿ ಕುಳ್ಳಿರಿಸಿ- “ಇಷ್ಟು ಅಕಸ್ಮಿಕವಾಗಿ, ಅದರಲ್ಲಿಯೂ ಮೊದಲು ಸುದ್ದಿಯನ್ನು ಹೇಳಿಕಳಿಸದೆ ಬರಲಿಕ್ಕೆ ಕಾರಣವೇನೆಂದು” ರಾಮರಾಜನ್ನು ಕೇಳಿದನು. ಅದಕ್ಕೆ ರಾಮರಾಜನು- “ಏನೂ ಇಲ್ಲ, ಸಹಜವಾಗಿ ಬಂದೆನು. ಈ ಕುಂಜವನದಲ್ಲಿ ನಾನು ಎಷ್ಟೋ ಸುಖದ ದಿವಸಗಳನ್ನು ಕಳೆದಿದ್ದೆನು ; ಆದ್ದರಿಂದ ಯಾವಾಗಾದರೊಮ್ಮೆ ಇದನ್ನು ನೋಡಬೇಕೆಂಬ ಉತ್ಕಟೇಚ್ಛೆಯು ನನಗೆ ಆಗುತ್ತದೆ. ಅದರಂತೆ ನಿನ್ನೆ ರಾತ್ರಿ ಇಚ್ಛೆಯಾಗಲು, ಕೂಡಲೆ ಹೊರಟು ಬಂದೆನು” ಎಂದು ಹೇಳಿದನು. ಆದನ್ನು ಕೇಳಿ ರಣಮಸ್ತಖಾನನಾದರೂ ಅತ್ಯಂತ ಆದರದಿಂದ ರಾಮರಾಜನಿಗೆ- “ಕುಂಜವನವು ತಮ್ಮದೇ ಇರುವದರಿಂದ ತಾವು ಯಾವಾಗ ಬಂದರೂ ನಾವು ತಮ್ಮ ಆದರ ಸತ್ಕಾರವನ್ನು ಮಾಡಲಿಕ್ಕೆ ಸಿದ್ಧರೇ ಇರುತ್ತೇವೆ; ಆದರೆ ಮೊದಲು ಸೂಚನೆಯಾದರೆ ಮಾನಮರ್ಯಾದೆಗೆ ತಕ್ಕಂತೆ ಎಲ್ಲ ವ್ಯವಸ್ಥೆ ಮಾಡಲಿಕ್ಕೆ ಅನುಕೂಲವಾಗುವದು. ಆಕಸ್ಮಿಕವಾಗಿ ಬರುವದರಿಂದ ನಮ್ಮಿಂದಲ್ಲದಿದ್ದರೂ, ನಮ್ಮ ಸೇವಕರಿಂದ ತಪ್ಪುಗಳಾಗುವ ಸಂಭವವಿರುತ್ತದೆ; ಇದಕ್ಕಾಗಿಯೇ ಸೂಚಿಸಿದೆನಲ್ಲದೆ ಬೇರೆ ಏನೂ ಇಲ್ಲ. ನಾವು ಬೇಕಾದಾಗ ಬರಬಹುದು. ನಿನ್ನಿನ ಪ್ರಸಂಗವನ್ನೆಲ್ಲ ಮರೆತು ಇಂದು ತಾವು ಬಂದದ್ದಕ್ಕಾಗಿ