ಪುಟ:Kannadigara Karma Kathe.pdf/೧೪೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೨೮
ಕನ್ನಡಿಗರ ಕರ್ಮಕಥೆ
 

ಕಟ್ಟಿದ್ದ ನೌಕೆಯ ಕಡೆಗೆ ಆತನ ದೃಷ್ಟಿಯು ಹೋಯಿತು. ನೌಕೆಯನ್ನು ನೋಡಿದ ಕೂಡಲೇ ರಾಮರಾಜನ ವೃತ್ತಿಯು ಅತ್ಯಂತ ವ್ಯಾಕುಲವಾಯಿತು. ಕೂಡಲೆ ಆತನ ಕಣ್ಣೊಳಗಿಂದ ನೀರುಗಳು ಬಂದವು. ಆತನು ತನ್ನ ಮೋರೆಯನ್ನು ಒತ್ತಟ್ಟಿಗೆ ತಿರುಗಿಸಿ ಕಣ್ಣುಮುಚ್ಚಲು, ಕಣ್ಣೀರ ಹನಿಗಳು ಆತನ ಗಲ್ಲಗಳ ಮೇಲೆ ಪಟಪಟ ಬಿದ್ದವು. ಅವನ್ನು ರಾಮರಾಜನು ಮೆಲ್ಲನೆ ಒರೆಸಿಕೊಂಡು ಎರಡು ಕ್ಷಣ ಹಾಗೆ ಕಣ್ಣುಗಳನ್ನು ಮುಚ್ಚಿಕೊಂಡಿದ್ದನು. ಆಮೇಲೆ ಕಣ್ಣು ತೆರೆಯಲು ಎದುರಿಗಿನ ಲತಾ ಮಂಟಪದಲ್ಲಿ ಒಬ್ಬ ಸ್ತ್ರೀಯು ನಿಂತು ಕೊಂಡಿದ್ದು, ಆಕೆಯು ತನ್ನನ್ನು ಎವೆಯಿಕ್ಕದೆ ನೋಡುತ್ತಿರುವಂತೆ ರಾಮರಾಜನಿಗೆ ತೋರಿತು. ಆಗ ಆತನಿಗೆ ತಾನು ಎಲ್ಲಿ ಇರುತ್ತೇನೆ, ಏನು ಮಾಡುತ್ತೇನೆ ಎಂಬುದರ ಎಚ್ಚರ ಉಳಿಯದೆ, ಆತನು ಬಾಯಿಂದ- 'ಮೆಹೆರ್ಜಾನ ! ಮೆಹೆರ್ಜಾನ !” ಎಂದು ಒಟಗುಟುತ್ತ ಆ ಕುಂಜವನದ ಕಡೆಗೆ ಓಡಿದನು. ಕರ್ಮಧರ್ಮ ಸಂಯೋಗದಿಂದ ರಾಮರಾಜನು ಒಟಗುಟ್ಟಿದ್ದು ರಣಮಸ್ತಖಾನನಿಗೆ ಕೇಳಲಿಲ್ಲ. ಕೇಳಿದ್ದರೂ ಅವರ ಅರ್ಥವು ಆತನಿಗೆ ನೆಟ್ಟಗೆ ತಿಳಿಯಲಿಲ್ಲ. ಏನಾದರೂ ನೆನಪಾದ್ದರಿಂದ ಈತನು ಒಟಗುಟ್ಟುತ್ತ ಹೀಗೆ ಓಡಿ ಹೋಗಿರಬಹುದು; ಆದರೆ ನಾನು ಆತನ ಬೆನ್ನಹತ್ತಿ ಹೋಗುವರು ಸರಿಯಲ್ಲ ಎಂದು ರಣಮಸ್ತಖಾನನು ಅಲ್ಲಿಯೇ ನಿಂತುಕೊಂಡು. ಇನ್ನೊಂದು ಮಾತಿನಲ್ಲಿ ದೇವರು ಕಾದನು; ಯಾಕೆಂದರೆ, ರಾಮರಾಜನ ಕಣ್ಣಿಗೆ ಬಿದ್ದ ಸ್ತ್ರೀಯು ರಣಮಸ್ತಖಾನನ ಕಣ್ಣಿಗೆ ಬೀಳಲಿಲ್ಲ.

ರಾಮರಾಜನು ಓಡಿದವನು ಆ ಲತಾಮಂಟಪವನ್ನು ಪ್ರವೇಶಿಸಿ ನೋಡಿದನು; ಆದರೆ ಅಲ್ಲಿ ಸ್ತ್ರೀಯು ಇದ್ದಿಲ್ಲ. ಆಕೆಯು ಇಲ್ಲಿಯೇ ಎಲ್ಲಿಯಾದರೂ ಗಿಡಗಳ ಮರೆಯಲ್ಲಿ ಅಡಗಿರಬಹುದೆಂದು ತಿಳಿದು ಆತನು- “ಮೆಹೆರ್ಜಾನ ! ಮೆಹೆರ್ಜಾನ !” ಎಂದು ಗಟ್ಟಿಯಾಗಿ ಕೂಗುತ್ತ ಅತ್ತ ಇತ್ತ ಓಡಾಡಿ ಹುಡಕಹತ್ತಿದನು. ಆದರೆ ಯಾರೂ ಕಣ್ಣಿಗೆ ಬೀಳಲಿಲ್ಲ. ತಾನೂ ಕುಂಜವನದಲ್ಲೆಲ್ಲ ಹುಡುಕಿದರೂ ಮೆಹೆರ್ಜಾನಳು ಸಿಗದಿರಲು, ರಾಮರಾಜನು ಒಂದು ಕಡೆಗೆ ಸುಮ್ಮನೆ ನಿಂತು ಕೊಂಡನು. ನಿಂತನಿಂತಿರುವಾಗ ಆತನು ಮನಸ್ಸಿನಲ್ಲಿ - “ಇದು ಕೇವಲ ನನ್ನ ಭ್ರಾಂತಿಯಾಗಿರಬಹುದು. ಇಲ್ಲದಿದ್ದರೆ ಇಷ್ಟು ವರ್ಷಗಳ ಮೇಲೆ ಮೆಹೆರ್ಜಾನಳು ಇಲ್ಲಿ ನನ್ನ ಕಣ್ಣಿಗೆ ಹ್ಯಾಗ ಬಿದ್ದಾಳು ? ಭ್ರಾಂತಿಯು, ನಿಶ್ಚಯವಾಗಿ ಭ್ರಾಂತಿಯು” ಎಂದು ತನ್ನ ಮನಸ್ಸಿನಲ್ಲಿ ಅಂದುಕೊಂಡು, ಇನ್ನು ಹಿಂದಕ್ಕೆ ತಿರುಗಬೇಕೆನ್ನುತ್ತಿರಲು, ಮತ್ತೆ ಆತನ ಮನಸ್ಸಿನಲ್ಲಿ- “ಭ್ರಾಂತಿಯೆಂದು ಹ್ಯಾಗೆ ಅನ್ನಬೇಕು? ಮೆಹೆರ್ಜಾನಳನ್ನು ನಾನು ಈಗ ಪ್ರತ್ಯಕ್ಷ ನೋಡಿದ್ದೇನೆ. ಮೇಲಾಗಿ ರಣಮಸ್ತಖಾನನ ರೂಪವು