ಪುಟ:Kannadigara Karma Kathe.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೦

ಕನ್ನಡಿಗರ ಕರ್ಮಕಥೆ

ಕುಂಜವನದ ಮೇಲೆ ತಮ್ಮದಿಷ್ಟು ಪ್ರೇಮವಿರುತ್ತದೆಂಬದು ನನಗೆ ಮೊದಲಿಗೆ ಗೊತ್ತಾಗಿದ್ದರೆ, ನಾನು ಇಲ್ಲಿ ಇರುತ್ತಿದ್ದಿಲ್ಲ, ಬೇರೆ ಕಡೆಗೆ ಇರುತ್ತಿದ್ದನು. ಸ್ಥಳವು ನಿಮ್ಮದು ನಾನೇನು ನಾಲ್ಕು ದಿವಸ ಇದ್ದು ಹೋಗುವವನು, ತಾವು ಬೇಕಾದಾಗ ಬರ್‍ರಿ, ಬೇಕಾದ ಹಾಗೆ ತಿರುಗಾಡಿರಿ, ನಿಮಗೆ ಬೇಡೆನ್ನುವವರು ಯಾರು ? ಈಗ ನಾನು ವಿನಯದಿಂದ ತಮ್ಮನ್ನು ಬೇಡಿಕೊಳ್ಳುವದೇನಂದರೆ, ಹೊತ್ತು ಬಹಳವಾಗಿದೆ. ಸ್ನಾನ-ಸಂಧ್ಯೆ ತೀರಿಸಿಕೊಂಡು ಊಟಮಾಡಿ ಹೋಗಬೇಕು, ಇಲ್ಲಿ ಬಂದು ತಾವು ಉಪವಾಸ ಹೋಗುವದೂ, ತಮ್ಮನ್ನು ನಾವು ಹಾಗೆ ಹೋಗಗೊಡುವದೂ ಸರಿಯಲ್ಲ ; ಎಲ್ಲ ಪದಾರ್ಥಗಳನ್ನು ಸಿದ್ಧಮಾಡಿಸಿ ಕೊಡುವೆನು. ತಮಗೆ ಅಡಿಗೆಮಾಡಿ ಹಾಕಲಿಕ್ಕೆ ಜನರು ಇಲ್ಲಿ ಇರುತ್ತಾರೆ, ಅನ್ನುತ್ತಿರಲು, ರಾಮರಾಜನು ಆದನ್ನು ಪೂರಾ ಕಿವಿಯ ಮೇಲೆ ಸಹ ಹಾಕಿಕೊಳ್ಳದೆ, ಬಗೆಬಗೆಯಿಂದ ಆತನನ್ನು ಕುರಿತು-ಬೇಡ ಬೇಡ, ಅದರ ಸಲುವಾಗಿ ನೀವು ನನಗೆ ಆಗ್ರಹ ಮಾಡಬೇಡಿರಿ. ಉಂಡದ್ದಕ್ಕಿಂತಲೂ ಹೆಚ್ಚೆಂದು ತಿಳಿಯಿರಿ. ನಾನು ಇನ್ನು ಇಲ್ಲಿ ಒಂದು ಕಣವಾದರೂ ನಿಂತುಕೊಳ್ಳಲಿಚ್ಚಿಸುವದಿಲ್ಲ. ಎಂದು ನುಡಿದವನೇ ತಟ್ಟನೆ ಹೊರಟನು, ರಣಮಸ್ತಖಾನನೂ ಆತನ ಬೆನ್ನುಹತ್ತಿನಡೆದನು. ರಾಮರಾಜನು ತನ್ನ ಕುದುರೆಯನ್ನು ಬಿಟ್ಟಿದ್ದ ಸ್ಥಳಕ್ಕೆ ಬಂದು ಅದನ್ನು ಹತ್ತಿದನು; ಇಲ್ಲಿಯವರೆಗೆ ತನ್ನ ಸಂಗಡ ಬಂದಿದ್ದ ಸೇವಕನ ನೆನಪು ಸಹ ಆತನಿಗೆ ಆಗಿದ್ದಿಲ್ಲ; ಆದರೆ ಸೇವಕನು ತನ್ ಬಳಿಯಲ್ಲಿ ನಿಂತದ್ದನ್ನು ನೋಡಿ ರಾಮರಾಜನು ಆತನಿಗೆ “ನಡೆ” ಎಂದು ನುಡಿದು, ರಣಮಸ್ತಖಾನನ ಕಡೆಗೆ ಹೊರಳಿ ಆತನ ಆನುಜ್ಞೆಯನ್ನು ಪಡೆದಂತೆ ಸಂಜ್ಞೆಮಾಡಿ ಕುದುರೆಯನ್ನು ಮುಂದಕ್ಕೆ ಬಿಟ್ಟನು. ಇತ್ತ ರಣಮಸ್ತಕಾನನು ಇಂದಿನ ರಾಮರಾಜನ ವಿಲಕ್ಷಣ ಸ್ಥಿತಿಯ ಬಗ್ಗೆ ಆಲೋಚಿಸುತ್ತ ತನ್ನ ತಾಯಿಯ ಕೋಣೆಯ ಕಡೆಗೆ ಹೊರಟನು. ನಿನ್ನೆತನ್ನ ಬಳಿಗೆ ಬಂದಿದ್ದ ಸುಂದರಿಯ ಯೋಗಕ್ಷೇಮವನ್ನು ತಕ್ಕೊಳ್ಳುವದಕ್ಕೆ ಆತನ ಮನಸ್ಸು ಹರಿಯಹತ್ತಿತು. ಆತನು ತನ್ನ ತಾಯಿಯ ವೃದ್ದ ದಾಸಿಯಾದ ಲೈಲಿಯೆಂಬವಳನ್ನು ಕಂಡು ಆಕೆಯನ್ನು ಕುರಿತು-

ರಣಮಸ್ತಖಾನ-ನಿನ್ನೆ ಬಂದಿರುವ ತರುಣಿಯ ಯೋಗಕ್ಷೇಮವು ಸರಿಯಾಗಿ ನಡೆದಿರುವದಷ್ಟೇ ?

ದಾಸಿ-ಆ ತರುಣಿಯ ವ್ಯವಸ್ಥೆಯು ಬಹಳ ನೆಟ್ಟಗಿರುತ್ತದೆ. ಮಾಸಾಹೇಬರು ಆಕೆಗೆ ತಮ್ಮ ಹತ್ತರ ಇರ ಹೇಳಿದ್ದಾರೆ. ರಾತ್ರಿ ಆಕೆಯ ಹಾಸಿಗೆಯನ್ನು ಸಹ ತಮ್ಮ ಬಳಿಯಲ್ಲಿ ಹಾಸಬೇಕೆಂದು ಹೇಳಿದರು. ಏನು ಚಮತ್ಕಾರವೋ ತಿಳಿಯದು, ಆ ತರುಣಿಯು ಕೇವಲ ಹೊಟ್ಟೆಯ ಮಗಳಂತೆ ಮಾಸಾಹೇಬರ ಸೇವೆಯನ್ನು